ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಿತ-ಮಿತವಾದ ಸ್ವಾತಂತ್ರ್ಯ

Last Updated 4 ಜನವರಿ 2022, 19:30 IST
ಅಕ್ಷರ ಗಾತ್ರ

ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್|

ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ||

ನರನ ಸ್ವತಂತ್ರಗತಿಯಂತು ಹಿತ-ಮಿತವಿರಲು |

ಅರಸೊ ಮಿತಿಯಾಯತಿಯ – ಮಂಕುತಿಮ್ಮ

⇒|| 534 ||

ಪದ-ಅರ್ಥ: ಸಾಜ-ಸಹಜ, ಸೈಸದದು-ಸಹಿಸದದು, ತಡೆಯನ್=ತಡೆಗಳನ್ನು, ಅಡ್ಡಿಗಳನ್ನು, ಉರುಳಿಪುದದೆಲ್ಲವನು=ಉರುಳಿಪುದು(ಉರುಳಿಸುವುದು)+ಅದು+ಎಲ್ಲವನು, ಮಿತಿಯಾಯತಿಯ=
ಮಿತಿಯ+ಆಯತಿಯ(ಹರಡಿಕೆ, ವಿಸ್ತಾರ).

ವಾಚ್ಯಾರ್ಥ: ಗಾಳಿಗೆ ಹರಡುವುದು ಸಹಜ. ಅದು ತಡೆಗಳನ್ನು ಸಹಿಸುವುದಿಲ್ಲ. ತಡೆಗಳನ್ನು ಕಟ್ಟದಿದ್ದರೆ ಅದು ಎಲ್ಲವನ್ನು ಉರುಳಿಸಿಬಿಡುತ್ತದೆ. ಮನುಷ್ಯನ ಸ್ವಾತಂತ್ರ್ಯದ ಗತಿಯೂ ಅದೇ. ಅದು ಹಿತ-ಮಿತವಾಗಿರಬೇಕು. ನಿನ್ನ ಮಿತಿಗಳ ವಿಸ್ತಾರವನ್ನು ಅರಸು.

ವಿವರಣೆ: ಭಾರತೀಯ ಶಾಸ್ತ್ರಗಳಲ್ಲಿ ವಾಯು ಒಬ್ಬ ದೇವತೆ. ದ್ವೈತ ಪರಂಪರೆಯಲ್ಲಿ ಮಹಾವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಯದು. ಅನಂತರ ಬರುವ ಮುಖ್ಯ ದೇವತೆ ವಾಯು. ಅದಕ್ಕೆ ಕಾರಣ ವಾಯುವಿನ ಮಹತ್ವ. ವಾಯುವಿಲ್ಲದೆ ಪ್ರಪಂಚದಲ್ಲಿ ಚೇತನವಿಲ್ಲ. ದೇಹದಲ್ಲಿ ವಾಯುಸಂಚಾರ ನಿಂತೊಡನೆ ಅದು ಮೃತ ಶರೀರವಾಗುತ್ತದೆ. ಅದಕ್ಕೇ ಅದನ್ನು ಪ್ರಾಣವಾಯು ಎಂದು ಕರೆಯುತ್ತಾರೆ. ವಾಯುವಿನ ಗುಣವೇ ಎಲ್ಲೆಡೆಗೆ ಹರಡಿರುವುದು. ಅದು ಇಲ್ಲದ ಪ್ರವೇಶವೇ ಇಲ್ಲ. ಅದು ಒಮ್ಮೆ ವೇಗವನ್ನು ಪಡೆಯಿತೋ, ಅದರ ಆರ್ಭಟ ಹೇಳತೀರದು. ಅದರ ಚಲನೆಗೆ ಯಾವ ಅಡೆ-ತಡೆ ಬಂದರೂ ಅದನ್ನು ಕಿತ್ತೆಸೆಯುತ್ತದೆ. ನಾವು ಆಗಾಗ ಪ್ರಪಂಚದಲ್ಲಿ ಬರುವ ಚಂಡಮಾರುತಗಳ ಬಗ್ಗೆ ಕೇಳಿದ್ದೇವೆ. ಅವು ಮಾಡಿರುವ ಅನಾಹುತಗಳ ಅರಿವು ನಮಗಿದೆ. ಅದಕ್ಕೇ ಚಂಡಮಾರುತದ ಸುಳಿವು ತಿಳಿದೊಡನೆ, ಅದರಿಂದ ಪಾರಾಗಲು ಭದ್ರ ತಡೆಗಳನ್ನು ನಿರ್ಮಿಸಿ, ಜನರನ್ನು ಸ್ಥಳಾಂತರಗೊಳಿಸಿ ಪ್ರಾಣಹಾನಿಯನ್ನು ತಗ್ಗಿಸುತ್ತಾರೆ.

ಇದೆಂಥ ವಿಚಿತ್ರ! ವಾಯುವಿಲ್ಲದಿದ್ದರೆ ಪ್ರಾಣಹಾನಿ. ವಾಯುವಿನ ವೇಗ ಅತಿಯಾದರೆಯೂ ಪ್ರಾಣಹಾನಿ. ಹಾಗಾದರೆ ಮನುಷ್ಯನ ಬದುಕಿಗೆ ಈ ವಾಯು ಯಾವಾಗಲೂ ಹಿತ-ಮಿತವಾಗಿರಬೇಕು. ಕಡಿಮೆಯಾದರೆ ಉಸಿರುಗಟ್ಟಿಸುತ್ತದೆ, ಹೆಚ್ಚಾದರೆ ಉಡಾಯಿಸಿಬಿಡುತ್ತದೆ. ಕಗ್ಗ ಹೇಳುತ್ತದೆ, ಮನುಷ್ಯನ ಸ್ವತಂತ್ರತೆಯೂ ಹಾಗೆಯೇ ಹಿತ-ಮಿತವಾಗಿರಬೇಕು. ಅತಿಯಾದ ಸ್ವಾತಂತ್ರ್ಯ ಸ್ವೇಚ್ಛೆಯಾಗುತ್ತದೆ. ಅದು ಅನಾಹುತಕ್ಕೆ ಕಾರಣವಾಗುತ್ತದೆ. ಅದು ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಮಾರಕವಾಗಬಹುದು. ನಾನು ಎಷ್ಟು ಬೇಕಾದರೂ ಕುಡಿಯುತ್ತೇನೆ, ನನ್ನ ಆರೋಗ್ಯದ ಜವಾಬ್ದಾರಿ ನನ್ನದೇ ಎನ್ನುವ ವ್ಯಕ್ತಿ ಕುಡಿದು ವಾಹನ ಚಲಾಯಿಸಿದರೆ ಯಾವ ಅನಾಹುತ ಮಾಡಬಹುದೆಂಬುದನ್ನು ಊಹಿಸಬಹುದು. ಯಾವ ನಿಯಮಕ್ಕೂ ಬದ್ಧರಾಗದ ವ್ಯಕ್ತಿಗಳು ಸಮಾಜಕ್ಕೆ ಕಂಟಕರಾಗುವ ಸಾಧ್ಯತೆ ಹೆಚ್ಚು. ಅಪರಿಮಿತ ಸ್ವಾತಂತ್ರ್ಯವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ಹಿಟ್ಲರ್, ಮುಸೋಲಿನಿ, ಗಝನಿ ಮಹಮ್ಮದ್‌ ಇವರುಗಳು ಮಾಡಿದ್ದೇನು?

ಅದಕ್ಕೇ ಕಗ್ಗ ಎಚ್ಚರಿಕೆಯನ್ನು ನೀಡುತ್ತದೆ. ನಿನ್ನ ಮಿತಿಯ ಸೀಮೆಗಳನ್ನು ಅರಿತಿಕೊ. ಆ ಮಿತಿಯಲ್ಲೇ ಕಾರ್ಯ ಮಾಡಿದರೆ ಕ್ಷೇಮ. ಕಾಡಿನಲ್ಲಿ ಹಸುವನ್ನು ಒಂದು ಉದ್ದವಾದ ಹಗ್ಗದಿಂದ ಗೂಟಕ್ಕೆ ಕಟ್ಟಿ ಬಿಡುತ್ತಾನೆ ಗೋಪಾಲಕ. ಹಸುವಿಗೆ ಸ್ವಾತಂತ್ರ್ಯವಿದೆ. ಆದರೆ ಅದಕ್ಕೆ ಮಿತಿ ಇದೆ. ಹಗ್ಗದ ಉದ್ದವೇ ಅದರ ಮಿತಿ. ಹಗ್ಗ ಕಿತ್ತುಕೊಂಡು ಕಾಡಿನೊಳಗೆ ಹೋದರೆ ಹಸುವಿಗೇ ಅಪಾಯ. ಮಿತಿಯನರಿತು ಬದುಕು ನಡೆಸಿದಾಗ ಅದು ಭದ್ರತೆಯನ್ನು, ಸಂತೋಷವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT