ಗುರುವಾರ , ನವೆಂಬರ್ 14, 2019
18 °C

ಮನುಷ್ಯನ ಸಾಧ್ಯತೆಗಳು

Published:
Updated:

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳಕುವನು |
ಮುಳ್ಳಾಗಿ ಚುಚ್ಚುವನು, ಫುಲ್ಲಸುಮವಹನು ||
ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು |
ಕ್ಷುಲ್ಲ ಮಾನಿಸನಿವನು – ಮಂಕುತಿಮ್ಮ || 205 ||

ಪದ-ಅರ್ಥ: ಫುಲ್ಲಸುಮವಹನು=ಫುಲ್ಲಸುಮವಹನು=ಅರಳಿದ ಹೂವು ಆಗುವನು, ಕಲ್ಲೋಲವಾರಿಧಿವೊಲುರವಣಿಸಿ=ಕಲ್ಲೋಲವಾರಿಧಿ=ಉಕ್ಕೇರುವ ಅಲೆಗಳ ಸಮುದ್ರ+ಉರವಣಿಸಿ(ಅಬ್ಬರಿಸಿ, ಮೇಲೆ ಬಿದ್ದು), ಕ್ಷುಲ್ಲಮಾನಿಸನಿವನು=ಕ್ಷುಲ್ಲಮಾನಿಸನು(ಸಣ್ಣ ಬುದ್ಧಿಯ ಮನುಷ್ಯ)+ಇವನು.
ವಾಚ್ಯಾರ್ಥ: ಈತ ಕಲ್ಲಾಗಿ ನಿಲ್ಲುತ್ತಾನೆ, ಬಳ್ಳಿಯ ಹಾಗೆ ಬಳುಕುತ್ತಾನೆ, ಮುಳ್ಳಾಗಿ ಚುಚ್ಚುತ್ತಾನೆ, ಅರಳಿದ ಹೂವಿನಂತೆ ಆನಂದ ನೀಡುತ್ತಾನೆ, ಉಕ್ಕೇರುವ ಅಲೆಗಳಿಂದ ಅಲ್ಲೋಲ ಕಲ್ಲೋಲವಾದ ಸಮುದ್ರದಂತೆ ಅಬ್ಬರಿಸಿ ಮೇಲೆ ಬೀಳುತ್ತಾನೆ, ಇವನು ಅತ್ಯಂತ ಕ್ಷುಲ್ಲ ಮನುಷ್ಯನೂ ಹೌದು.

ವಿವರಣೆ: ಸ್ವಾಮಿ ವಿವೇಕಾನಂದರು ಒಂದೆಡೆಗೆ ಹೇಳುತ್ತಾರೆ, “ಈ ಅಪರಂಪಾರವಾದ, ಅನಂತವಾದ ವಿಶ್ವದಲ್ಲಿ ಮನುಷ್ಯ ಒಂದು ದೂಳೀಕಣಕ್ಕಿಂತಲೂ ಕಡೆ. ಆದರೆ ಅವನಿಗಿರುವ ತರ್ಕ ಹಾಗೂ
ವಿಚಾರಶಕ್ತಿಯಿಂದ ಇಡೀ ವಿಶ್ವವನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಬಲ್ಲ ಶಕ್ತಿ ಅವನಿಗಿದೆ”. ಅಂದರೆ ಗಾತ್ರದಲ್ಲಿ ತುಂಬ ಚಿಕ್ಕವನಾದರೂ ಶಕ್ತಿಯಿಂದ ತ್ರಿವಿಕ್ರಮ. ಹಾಗೆಂದರೆ ಮನುಷ್ಯ ತಾನು ಎದುರಿಸುವ ಪರಿಸ್ಥಿತಿಯಂತೆ ಬದಲಾಗಬಲ್ಲ. ಕಷ್ಟ ಎದುರಾದಾಗ, ತಲ್ಲಣಿಸಿ ಹೋದಾಗ ಅಹಲ್ಯೆಯಂತೆ ಕಲ್ಲಾಗಿ ಉಳಿಯಬಲ್ಲ, ಸಮಸ್ಯೆಯನ್ನು ಎದುರಿಸಿ ನಿಲ್ಲಬಲ್ಲ. ದ್ರವಿಸುವ ಹೃದಯಗಳನ್ನು ಕಂಡಾಗ, ತಾನೂ ಭಾವಪ್ರಪಂಚದಲ್ಲಿ ಕಳೆದುಹೋಗಿ, ಗಾಳಿಯಲ್ಲಿ ತೊನೆಯುವ ಬಳ್ಳಿಯಂತೆ ಅವುಗಳಿಗೆ ಸ್ಪಂದಿಸಬಲ್ಲ.
ಅಂತಃಕರುಣಿಗಳಾದ ಪಾಂಡವರು ಮತ್ತು ದ್ರೌಪದಿ ನೆನೆದಾಗಲೆಲ್ಲ, ತಾಯಿ ಕರೆದಾಗ ಓಡಿ ಬರುವ ಮಗುವಂತೆ ಕೃಷ್ಣ ಮಾಡಿದ್ದು ಇದೇ ತೊನೆಯುವ ಕೆಲಸ. ಈ ಮನುಷ್ಯ ತನ್ನ ಪೂರ್ವಗ್ರಹಗಳಿಂದ, ಮೊಂಡುತನದಿಂದ, ಛಲದಿಂದ ಹಿಟ್ಲರ್‌ನಂತೆ, ಉಗ್ರಗಾಮಿಯಂತೆ, ಇಡೀ ಪ್ರಪಂಚಕ್ಕೆ ಮುಳ್ಳಾಗಿ ಚುಚ್ಚಬಲ್ಲ.
ಇದೇ ಮನುಷ್ಯ ಹೃದಯದಲ್ಲಿ ಶಾಂತಿಯನ್ನು, ಆನಂದವನ್ನು ತುಂಬಿಕೊಂಡಾಗ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಪಡೆದ ಬುದ್ಧನ ಹಾಗೆ, ಪರಮಜ್ಞಾನಿಯಾದ ಮಹಾವೀರನ ಹಾಗೆ, ಜಗತ್ತಿಗೆ, ಅರಳಿನಿಂತ ಹೂವು ತನ್ನ ಸುಗಂಧವನ್ನು ಸುತ್ತಲೆಲ್ಲ ಪಸರಿಸುತ್ತ ಆನಂದವನ್ನು ನೀಡುವಂತೆ, ಸಂತೋಷದಾಯಕನೂ ಆಗಬಲ್ಲ. ಕೆಲವೊಮ್ಮೆ ಹೃದಯದಲ್ಲಿ ಅಶಾಂತಿಯನ್ನು, ಸ್ವಾರ್ಥವನ್ನು, ಕ್ರೌರ್ಯವನ್ನು ತುಂಬಿಕೊಂಡ ಮನುಷ್ಯ ಉಕ್ಕೇರುವ ತೆರೆಗಳಿಂದ ಅಲ್ಲೋಲಕಲ್ಲೋಲವಾದ ಸಮುದ್ರದಂತೆ ಭೋರ್ಗರೆದು ಮೊರೆಯುತ್ತಾನೆ, ಇಡೀ ಪ್ರಪಂಚವನ್ನು ಆತಂಕದ ಪ್ರಪಾತಕ್ಕೆ ತಳ್ಳುತ್ತಾನೆ. ಅಂಥವರ ಸಾಲುಸಾಲೇ ನಮ್ಮ ಕಣ್ಣ ಮುಂದಿದೆ. ಒಬ್ಬ ಹಿರಣ್ಯಕಶಿಪು, ಒಬ್ಬ ರಾವಣ, ಒಬ್ಬ ದುರ್ಯೋಧನ, ಒಬ್ಬ ಒಸಾಮಾ-ಬಿನ್-ಲಾಡೆನ್ ಸಾಲದೆ ಭೂಮಿಯನ್ನು ನರಕ ಮಾಡಲು?
ಅಂದರೆ ಈ ಮನುಷ್ಯನ ಸಾಧ್ಯತೆಗಳು ಅಪರಿಮಿತ. ಆತ ಏನೂ ಆಗಬಲ್ಲ. ದೈಹಿಕವಾಗಿ ಅತ್ಯಂತ ಚಿಕ್ಕವನಾದ ಮನುಷ್ಯ ಎನ್ನುವ ಜೀವಿ, ಸಂದರ್ಭಕ್ಕೆತಕ್ಕ ಹಾಗೆ, ತನ್ನ ಶಕ್ತಿಯನ್ನು ಬೆಳೆಸಿಕೊಳ್ಳಬಲ್ಲ. ಆತ ದೈವವೂ ಆಗಬಲ್ಲ, ರಾಕ್ಷಸನೂ ಆಗಬಲ್ಲ. 

 

ಪ್ರತಿಕ್ರಿಯಿಸಿ (+)