ಶನಿವಾರ, ಜುಲೈ 31, 2021
26 °C

ಬೆರಗಿನ ಬೆಳಕು | ಅನ್ಯಾಯದ ಪೆಟ್ಟು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ, ಊರ ಹೊರಗೆ ಒಂದು ಬಡಗಿಗಳ ಗ್ರಾಮವಿತ್ತು. ಅಲ್ಲಿಯ ಒಬ್ಬ ಬ್ರಾಹ್ಮಣ ಕಾಡಿನಿಂದ ಮರಗಳನ್ನು ಕಡಿದು ತಂದು ರಥಗಳನ್ನು ಮಾಡಿ ಮಾರುತ್ತಿದ್ದ.

ಅದೇ ಸಮಯದಲ್ಲಿ ಕಾಳ ಸಿಂಹವೊಂದು ಹಿಮಾಲಯದಲ್ಲಿ ಸುತ್ತಾಡಿಕೊಂಡಿತ್ತು. ಒಂದು ದಿನ ಅದು ಸ್ಪಂದನ ಎಂಬ ಮರದ ಕೆಳಗೆ ಮಲಗಿದಾಗ ಮರದ ಒಣ ಕೊಂಬೆಯೊಂದು ಮುರಿದು ಅದರ ಕತ್ತಿನ ಮೇಲೆ ಬಿದ್ದಿತು. ಆಕಸ್ಮಿಕವಾದ ಈ ಘಟನೆಯಿಂದ ಸಿಂಹ ಗಾಬರಿಯಾಗಿ ಎದ್ದು ಓಡಿತು. ಸ್ವಲ್ಪ ದೂರ ಹೋಗಿ ನಿಂತು, ಯಾರೂ ಇಲ್ಲದ್ದನ್ನು ಕಂಡು ನಿರಾಳವಾಯಿತು. ನಂತರ ಮರಳಿ ಮರದ ಬಳಿಗೆ ಹೋಗಿ ಕುಳಿತು, ‘ನಾನು ನಿನ್ನ ಎಲೆಗಳನ್ನು ತಿನ್ನುವುದಿಲ್ಲ, ಕೊಂಬೆಗಳನ್ನು ಮುರಿಯುವುದಿಲ್ಲ. ಆದರೂ ನನಗೆ ತೊಂದರೆ ಕೊಟ್ಟಿದ್ದೀಯಾ. ನಾನು ನಿನ್ನನ್ನು ಬಿಡುವುದಿಲ್ಲ. ಬೇರು ಸಹಿತ ಕಿತ್ತಿಸಿ ಬಿಡುತ್ತೇನೆ’ ಎಂದಿತು.

ಆ ಹೊತ್ತಿನಲ್ಲಿ ಆ ಬ್ರಾಹ್ಮಣ ಬಡಗಿ ರಥಕ್ಕಾಗಿ ಒಳ್ಳೆಯ ಮರವನ್ನು ಹುಡುಕಿಕೊಂಡು ಅಲ್ಲಿಗೆ ಬಂದ. ಆತ ಕೊಡಲಿ ಹಿಡಿದುಕೊಂಡು ಅಡ್ಡಾಡುವುದನ್ನು ಕಂಡ ಸಿಂಹ ನಿಧಾನವಾಗಿ ಅವನ ಹತ್ತಿರ ಬಂದು ಕೇಳಿತು, ‘ನೀನು ಯಾರು? ನಿನಗೆ ಏನು ಬೇಕಿತ್ತು?’. ಮನುಷ್ಯರ ಭಾಷೆಯಲ್ಲಿ ಮಾತನಾಡಿದ ಸಿಂಹವನ್ನು ಕಂಡು ಆಶ್ಚರ್ಯಪಟ್ಟ ಬಡಗಿ ಕೇಳಿದ, ‘ನಾನೊಬ್ಬ ಬಡಗಿ. ಒಂದು ಒಳ್ಳೆಯ ರಥವನ್ನು ಮಾಡಲು ಸುಂದರವಾದ, ಗಟ್ಟಿಯಾದ ಮರವನ್ನು ನೋಡುತ್ತಿದ್ದೇನೆ. ನಿನಗೆ ಅಂಥ ಮರ ಗೊತ್ತೇ?’. ಸಿಂಹ ತಕ್ಷಣ ಹೇಳಿತು, ‘ಓಹೋ ಖಂಡಿತವಾಗಿಯೂ ಗೊತ್ತು. ಶ್ರೇಷ್ಠವಾದ ರಥವನ್ನು ನಿರ್ಮಿಸಲು ಸ್ಪಂದನ ಮರವೇ ಅತ್ಯಂತ ಪ್ರಶಸ್ತವಾದದ್ದು. ರಥದ ಎಲ್ಲ ಭಾಗಗಳಿಗೂ ಆ ಮರ ಹೇಳಿ ಮಾಡಿಸಿದಂತಿರುತ್ತದೆ. ಅಂಥದ್ದೊಂದು ಮರ ಹತ್ತಿರವೇ ಇದೆ, ತೋರಿಸುತ್ತೇನೆ ಬಾ’ ಎಂದು ಬಡಗಿಯನ್ನು ಕರೆದುಕೊಂಡು ಮರದ ಬಳಿ ಬಂದಿತು. ಆ ದೊಡ್ಡ ಮರವನ್ನು ನೋಡಿ ಬಡಗಿಗೂ ಬಹಳ ಸಂತೋಷವಾಯಿತು. ತಕ್ಷಣವೇ ಮರಕ್ಕೆ ಪೂಜೆ ಮಾಡಿದ. ಮರುದಿನವೇ ಕತ್ತರಿಸುವುದೆಂದು ತೀರ್ಮಾನ ಮಾಡಿದ.

ಮರದಲ್ಲಿದ್ದ ವೃಕ್ಷದೇವತೆ ಇದನ್ನೆಲ್ಲ ತಿಳಿದು ನಿಧಾನವಾಗಿ ಕೆಳಗಿಳಿದು ಬಂತು. ಬಡಗಿಗೆ ಹೇಳಿದ, ‘ಈ ಮರವನ್ನು ರಥಕ್ಕಾಗಿ ಕತ್ತರಿಸುತ್ತಿದ್ದೀಯಾ? ಇದರಿಂದ ರಥವೇನೋ ಚೆನ್ನಾಗಿರುತ್ತದೆ. ಅದರೆ ಕಾಳಸಿಂಹದ ಕತ್ತಿನ ಚರ್ಮವನ್ನು ಸುಲಿದು ಚಕ್ರದ ಸುತ್ತ ಸುತ್ತಿಬಿಟ್ಟರೆ ಅದು ಭದ್ರವಾಗಿ, ಲಕ್ಷಣವಾಗಿರುತ್ತದೆ. ಅದಕ್ಕೆ ಹಣವೂ ತುಂಬ ಹೆಚ್ಚಾಗಿ ಸಿಗುತ್ತದೆ’. ‘ಆದರೆ ಕಾಳಸಿಂಹದ ಚರ್ಮ ದೊರೆಯುವುದು ಹೇಗೆ?’ ಬಡಗಿ ಕೇಳಿದ. ‘ಕಾಳಸಿಂಹವೇ ನಿನ್ನನ್ನು ಇಲ್ಲಿಗೆ ಕರೆತಂದಿತಲ್ಲ, ಅದನ್ನು ಕರೆದು ತಾ. ಯಾವ ಸ್ಥಳದಿಂದ ಮರ ಕಡಿಯಲಿ ಎಂದು ಕೇಳು. ಅದು ಹೇಳುತ್ತಿರುವಾಗ ಹರಿತವಾದ ಕೊಡಲಿಯಿಂದ ತಲೆ ಕತ್ತರಿಸಿಬಿಡು’ ಎಂದ ದೇವತೆ. ಅದರಂತೆಯೇ ಬಡಗಿ ಸಿಂಹವನ್ನು ಕರೆತಂದು ಅದನ್ನು ಕೊಂದು, ಚರ್ಮವನ್ನು ಸುಲಿದ. ನಂತರ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋದ.

ಮತ್ತೊಬ್ಬರಿಗೆ ಅನ್ಯಾಯ ಮಾಡುವಾಗ, ಮುಂದೆ ಬರುವ ಪೆಟ್ಟಿಗೆ ನಮ್ಮ ತಲೆಯೂ ಸಿಕ್ಕಿಕೊಳ್ಳುತ್ತದೆ ಎಂಬ ತಿಳಿವು ಇರುವುದಿಲ್ಲ. ದ್ವೇಷ ಒಂದು ಬೆಂಕಿ. ಅದು ಮಾಡುವವನನ್ನು, ಮಾಡಿದ್ದನ್ನು ಸುಟ್ಟುಹಾಕುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು