ಶುಕ್ರವಾರ, ಜುಲೈ 1, 2022
24 °C

ಬೆರಗಿನ ಬೆಳಕು | ರಹಸ್ಯವಾದ ಸ್ವಾರಸ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸಾರಸುಖರಸನಿಧಿ ಪರಬ್ರಹ್ಮನಿರುತಿರಲ್ |
ಸ್ವಾರಸ್ಯಹೀನವೆನ್ನುವರೆ ಜೀವಿತವ? ||
ಪೌರುಷ ಪ್ರೇಮ ಸೌಂದರ್ಯಗಳುಮಂತೆಯೇ |
ಸ್ವಾರಸ್ಯವೊ ರಹಸ್ಯ – ಮಂಕುತಿಮ್ಮ || 323 ||

ಪದ-ಅರ್ಥ: ಸಾರಸುಖರಸನಿಧಿ=ಸಾರ(ಭಟ್ಟಿ ಇಳಿಸಿದ)+ಸುಖರಸ(ಸುಖ, ಸಂತೋಷದ ರಸ)+ನಿದಿ(ತವರುಮನೆ), ಸ್ವಾರಸ್ಯಹೀನವೆನ್ನುವರೆ=ಸ್ವಾರಸ್ಯಹೀನ+ಎನ್ನುವರೆ, ಸೌಂದರ್ಯಗಳುಮಂತೆಯೇ=ಸೌಂದರ್ಯಗಳು+ಅಂತೆಯೇ.

ವಾಚ್ಯಾರ್ಥ: ಸುಖರಸದ ಭಟ್ಟಿ ಇಳಿಸಿದ ನಿಧಿಯಂತೆ ಪರಬ್ರಹ್ಮನಿದ್ದಾಗ ಜೀವನವನ್ನು ಸ್ವಾರಸ್ಯಹೀನ ಎನ್ನಬಹುದೆ? ಪೌರುಷ, ಪ್ರೇಮ, ಸೌಂದರ್ಯಗಳು ಹಾಗೆಯೇ ಸ್ವಾರಸ್ಯವಾಗಿಹುದು ರಹಸ್ಯ.

ವಿವರಣೆ: ಪರಬ್ರಹ್ಮ ಎಂಬ ಪದವನ್ನು ವಿವರಿಸುವುದು ಅಸಾಧ್ಯ. ಅದೊಂದು ಸತ್ವ. ಯಾವುದು ಯಾವ ಕಾಲದಲ್ಲೂ, ಯಾವ ಸ್ಥಿತಿಯಲ್ಲೂ ವಿಕಾರವಾಗದೆ, ಏಕರೂಪದಿಂದ ಇರುತ್ತದೋ ಅದು ‘ಸದ್ಪಸ್ತು’. ಈ ಸದ್ಪಸ್ತು ಬಹಳ ದೊಡ್ಡದು. ನಾವು ಅತ್ಯಂತ ದೊಡ್ಡದಾದದ್ದನ್ನು ಯಾವ ಮಟ್ಟಕ್ಕೆ ಊಹಿಸಬಹುದೋ ಅದಕ್ಕಿಂತ ದೊಡ್ಡದು. ತತ್ವಜ್ಞರು ಅದನ್ನು ಅನಂತ, ಅಪಾರ, ಸರ್ವವ್ಯಾಪಿ ಎನ್ನುತ್ತಾರೆ. ಅದನ್ನು ‘ಬ್ರಹ್ಮ’ ಎಂದೂ ಕರೆದರು. ಬೃಹಿ ಎಂದರೆ ದೊಡ್ಡದು ಎಂಬ ಅರ್ಥ. ಈ ಬ್ರಹ್ಮ ಒಂದು ಚೈತನ್ಯಸ್ವರೂಪದ್ದು. ಅದು ಎರಡು ರೂಪಗಳಲ್ಲಿ ಇರುವಂಥದ್ದು. ಒಂದು ವ್ಯಕ್ತ ಅಥವಾ ದೃಶ್ಯ, ಮತ್ತೊಂದು ಅವ್ಯಕ್ತ ಅಥವಾ ಅದೃಶ್ಯ ರೂಪ.

ಹೀಗೆಂದರೇನರ್ಥ? ಸದ್ಪಸ್ತು ಎನ್ನಿಸಿಕೊಂಡ ಪರಬ್ರಹ್ಮ ಶಕ್ತಿ ಕಣ್ಣಿಗೆ ಕಾಣುವ ಪ್ರಪಂಚವಾಗುವುದರೊಂದಿಗೆ ತಾನೇ ಕಣ್ಣಿಗೆ ಕಾಣದ ಕಾರಣ ಶಕ್ತಿಯೂ, ನಿಯಂತ್ರಕ ಶಕ್ತಿಯೂ ಅಗಿದೆ. ಅಂದರೆ ಕಣ್ಣಿಗೆ ಕಾಣುವ ಪ್ರಪಂಚ ಮತ್ತು ಕಣ್ಣಿಗೆ ಕಾಣದ ನಿಯಂತ್ರಣ ಮಾಡುವ ಎರಡೂ ಬ್ರಹ್ಮವೇ. ಕಾಣಿಸುವ ವಸ್ತು ಮತ್ತು ಕಾಣುವ ಕಣ್ಣು ಎರಡೂ ಒಂದೇ. ಈ ದೃಷ್ಟಿಯಿಂದ ಕಗ್ಗವನ್ನು ಗಮನಿಸಿದರೆ ಜೀವಿತದ ಬಗ್ಗೆ ಬೇರೆಯೇ ಭಾವನೆ ಬಂದೀತು. ಜಗತ್ತಿನ ಸರ್ವಸುಖಗಳ ರಸದ ಭಟ್ಟಿ ಇಳಿಸಿದ ರೂಪವೇ ಪರಬ್ರಹ್ಮ. ಪ್ರತಿಯೊಂದು ವಸ್ತುವಿನಲ್ಲಿ, ಚಿಂತನೆಯಲ್ಲಿ ಪರಬ್ರಹ್ಮನೇ ಇರುವುದರಿಂದ ನಮ್ಮ ಬದುಕು ರಸಹೀನ ಹೇಗಾದೀತು? ಎಲ್ಲ ರಸಗಳೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅವಸ್ಥೆಗಳಲ್ಲಿ, ಕ್ಷಣಗಳಲ್ಲಿ ತೋರಿಬರುತ್ತವೆ. ಅವೆಲ್ಲವೂ ಅವನ ದರ್ಶನಗಳೇ.

ಮನುಷ್ಯರಲ್ಲಿ ಆಗಾಗ್ಗೆ ಕಾಣುವ ಅತ್ಯಂತ ಸುಂದರ ಗುಣಗಳು, ಪ್ರಕೃತಿಯಲ್ಲಿ ಕಾಣುವ ಮನೋಹರವಾದ ದೃಶ್ಯಗಳು ಕೂಡ ಪರಬ್ರಹ್ಮನ ಅವತರಣದ ಪದಚಿಹ್ನೆಗಳು. ನಾವು ಘಟನೆಗಳಲ್ಲಿ ಭಾಗಿಯಾದಾಗ ಸಂತೋಷವೋ, ದುಃಖವೋ, ವಿರಹವೋ, ಮಿಲನದ ಸುಖವೋ ನಮ್ಮನ್ನು ತಟ್ಟುತ್ತವೆ. ಆದರೆ ಪ್ರಯತ್ನ ಮಾಡಿ ಸಾಕ್ಷೀಭಾವದಲ್ಲಿ ನಿಲ್ಲುವುದಾದರೆ ಪ್ರತಿಯೊಂದರಲ್ಲೂ ಭಗವಂತನೇ ಕಾಣುತ್ತಾನೆಂದು ಅಧ್ಯಾತ್ಮ ಹೇಳುತ್ತದೆ. ಇದೇ ರಹಸ್ಯವಾದ ಸ್ವಾರಸ್ಯ. ಸ್ವಾರಸ್ಯವೇನೆಂದರೆ ನಮ್ಮಲ್ಲಿ ಭಾವನೆಗಳನ್ನು ಉಕ್ಕಿಸುವವನೂ ಅವನೇ, ಅನುಭವಿಸುವವನೂ ಅವನೇ. ಆದರೆ ತೊಂದರೆಪಟ್ಟಂತೆ ಒದ್ದಾಡುವವರು ನಾವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು