ಗುರುವಾರ , ಅಕ್ಟೋಬರ್ 1, 2020
27 °C

ಬೆರಗಿನ ಬೆಳಕು | ಕಾರ್ಯಕ್ಷೇತ್ರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹಿಮಾಲಯದಲ್ಲಿ ಕಿನ್ನರನಾಗಿ ಹುಟ್ಟಿದ್ದ. ಅವನ ಹೆಂಡತಿಯ ಹೆಸರು ಚಂದಾ. ಅವರಿಬ್ಬರೂ ಹಿಮಾಲಯದ ರಜತಪರ್ವತದಲ್ಲಿ ಸಂತೋಷವಾಗಿ ಬದುಕಿದ್ದರು. ಆಗ ವಾರಾಣಸಿಯ ರಾಜ, ದೇಶದ ಜವಾಬ್ದಾರಿಯನ್ನು ಮಗನಿಗೊಪ್ಪಿಸಿ, ಸನ್ಯಾಸಿಯ ವೇಷ ತೊಟ್ಟು, ತನ್ನ ಆಯುಧಗಳನ್ನು ತೆಗೆದುಕೊಂಡು ಹಿಮಾಲಯಕ್ಕೆ ಬಂದ. ಆತ ನದಿಯ ಮಾರ್ಗವಾಗಿ ಪರ್ವತದ ಮೇಲೇರುತ್ತ ರಜತಪರ್ವತಕ್ಕೆ ಬಂದ. ಅಲ್ಲಿ ಅವನಿಗೆ ಈ ಕಿನ್ನರ ದಂಪತಿಗಳನ್ನು ಕಂಡು ತುಂಬ ಆಶ್ಚರ್ಯ ಮತ್ತು ಸಂತೋಷಗಳಾದವು. ಅವರು ಎಷ್ಟು ಅನ್ಯೋನ್ಯವಾಗಿ, ಸಂತೋಷವಾಗಿದ್ದರು! ಅರಮನೆಯ ಶ್ರೀಮಂತಿಕೆಯಲ್ಲಿ ಕಾಣದ ಪ್ರೀತಿ, ಅಂತಃಕರಣ, ಸಂತೋಷ ಅಲ್ಲಿತ್ತು. ಅವರಿಬ್ಬರೂ ಹೂವುಗಳ ಪರಾಗವನ್ನು ಚೆಲ್ಲುತ್ತ, ಬಳ್ಳಿಗಳಲ್ಲಿ ಉಯ್ಯಾಲೆಯಾಡುತ್ತ ಹಾಡುತ್ತ ನದಿತೀರಕ್ಕೆ ಬಂದರು. ಕಿನ್ನರ ಅದ್ಭುತವಾಗಿ ಕೊಳಲು ನುಡಿಸಿದರೆ, ಕಿನ್ನರಿ ಹೂವಿನ ಬಟ್ಟೆಯನ್ನುಟ್ಟು ಮನಮೋಹಕವಾದ ನೃತ್ಯವನ್ನು ಮಾಡಿದಳು.

ಎಲ್ಲವನ್ನೂ ತೊರೆದು, ಸನ್ಯಾಸಿ ವೇಷದಲ್ಲಿ ಬಂದ ರಾಜ ಕಿನ್ನರಿಯಲ್ಲಿ ಮೋಹಿತನಾದ. ಈ ಕಿನ್ನರನನ್ನು ಕೊಂದು ಕಿನ್ನರಿಯನ್ನು ಒಲಿಸಿಕೊಳ್ಳುತ್ತೇನೆ ಎಂದುಕೊಂಡು ತುಂಬ ಹರಿತವಾದ ಬಾಣದಿಂದ ಕಿನ್ನರನನ್ನು ಸೀಳಿಬಿಟ್ಟ. ಕಿನ್ನರ ನೋವಿನಿಂದ ಕೆಳಗೆ ಬೀಳುತ್ತ ಜೋರಾಗಿ ಕೂಗಿ ಹೆಂಡತಿಗೆ ಹೇಳಿದ, ‘ನನ್ನ ದೇಹವನ್ನು ಯಾವುದೋ ಆಯುಧ ಸೀಳುತ್ತಿದೆ, ನನ್ನ ರಕ್ತ ಹರಿದು ಹೋಗಿ, ಪ್ರಜ್ಞಾಹೀನನಾಗುತ್ತಿದ್ದೇನೆ. ಹೇ ಚಂದಾ, ನನಗೆ ಸಾವಿನ ಭಯವಿಲ್ಲ, ನಿನ್ನ ಬಗ್ಗೆ ಚಿಂತೆಯಾಗುತ್ತಿದೆ. ನನಗೆ ತೊಂದರೆ ಕೊಟ್ಟಿದ್ದು ನಿನಗೂ ಕೊಡದಿರಲಿ. ಭಗವಂತ ನಿಮ್ಮನ್ನು ಕಾಪಾಡಲಿ’, ಹೀಗೆ ಹೇಳುತ್ತ ಕೆಳಗೆ ಬಿದ್ದು ಪ್ರಜ್ಞಾಹೀನನಾದ.

ತನ್ನ ಗಂಡ ಹೀಗೆ ಎಚ್ಚರ ತಪ್ಪಿ ಬೀಳುತ್ತಿರುವುದನ್ನು ಕಂಡ ಕಿನ್ನರಿ ಗಾಬರಿಯಾಗಿ ಓಡಿಬಂದಳು. ತನ್ನ ಸ್ವಾಮಿಗೆ ಯಾವ ಆಪತ್ತು ಬಂದೊದಗಿತು ಎಂಬುದನ್ನು ತಿಳಿಯದೆ, ಅವನ ಮೈಯಿಂದ ರಕ್ತ ಹರಿಯುವುದನ್ನು ಕಂಡು ಎದೆಯೊಡೆದುಕೊಂಡು, ಅವನನ್ನು ಅಪ್ಪಿ ಅಳತೊಡಗಿದಳು. ಆಗ ರಾಜ ಎದುರಿಗೆ ಬಂದು, ‘ಆ ಕಿನ್ನರನನ್ನು ಏನೆಂದು ಮದುವೆಯಾದೆ ನೀನು? ನಾನು ಒಂದು ದೊಡ್ಡ ದೇಶದ ರಾಜ. ನನ್ನ ಜೊತೆ ಬಾ. ನೀನು ರಾಣಿಯಾಗಿ ಸುಖವಾಗಿರುತ್ತೀ’ ಎಂದು ನಾಚಿಕೆಯಿಲ್ಲದೆ ಕರೆದ. ಆಕೆಗೆ ಮೈ ಉರಿಯಿತು.

ಈತನೇ ತನ್ನ ಗಂಡನ ಸ್ಥಿತಿಗೆ ಕಾರಣ ಎಂದು ತಿಳಿದು, ‘ಹೇ ಪಾಪಿ, ಸಂತೋಷವಾಗಿದ್ದ ನಮ್ಮ ಬದುಕನ್ನು ಹಾಳು ಮಾಡಿದೆ. ನಿನ್ನ ಬದುಕೂ ಹಾಗೆಯೇ ಹಾಳಾಗಿ ಹೋಗಲಿ’ ಎಂದು ಶಪಿಸಿದಳು. ನಂತರ ತನಗೆ ತಿಳಿದ ದೋಷಾರೋಪಣ ಕರ್ಮವನ್ನು ಮಾಡಿ ದೇವತೆಗಳನ್ನು ಆವಾಹಿಸಿದಳು. ಇಂದ್ರ ಇದನ್ನು ಕಂಡು ಭೂಮಿಗೆ ಬಂದ. ತನ್ನ ಜೊತೆಗೆ ತಂದಿದ್ದ ಮಂತ್ರದ ನೀರನ್ನು ಕಿನ್ನರನ ಮೇಲೆ ಸಿಂಪಡಿಸಿದ. ತಕ್ಷಣ ಬಾಣದ ವಿಷ ಮಾಯವಾಗುವುದರೊಂದಿಗೆ ಬಾಣ ನೆಟ್ಟ ಗುರುತೂ ಉಳಿಯಲಿಲ್ಲ. ಇಂದ್ರ ಹೇಳಿದ, ‘ನೀವು ಸುಂದರ ಬದುಕಿನ ಕಿನ್ನರರು, ಈ ಪಾಪಿಗಳಿರುವ ಪ್ರದೇಶಕ್ಕೆ ಬರಬೇಡಿ, ನಿಮ್ಮ ಪವಿತ್ರ ಚಂದ್ರಪರ್ವತಕ್ಕೇ ಹೋಗಿಬಿಡಿ’. ಅವರು ಅಲ್ಲಿಗೇ ಮರಳಿ ಹೋಗಿ ತುಂಬ ಸಂತಸದಲ್ಲಿ ಬದುಕಿದರು.

ನಾವೆಷ್ಟೇ ಒಳ್ಳೆಯವರಾದರೂ, ನಮ್ಮ ಕ್ಷೇತ್ರಗಳಲ್ಲೇ ಇರಬೇಕು. ಅದರಿಂದ ಹೊರಗೆ ಬಂದರೆ ಯಾರಿಂದಲಾದರೂ, ಅನಪೇಕ್ಷಿತವಾದ ವ್ಯಕ್ತಿಗಳಿಂದ, ಅನಿರೀಕ್ಷಿತವಾದ ಕಾರಣಗಳಿಗಾಗಿ ತೊಂದರೆಪಡುವ ಪರಿಸ್ಥಿತಿ ಬರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.