ಸೋಮವಾರ, ಜುಲೈ 4, 2022
22 °C

ಬೆರಗಿನ ಬೆಳಕು: ಅನಿಲ, ಭೂಗುಣಗಳ ಪರಿಣಾಮ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ |
ತನುಗುಣಗಳನ್ನದಿಂ, ಮನದ ಗುಣ ತನುವಿಮ್ ||
ಜನಪದವಿದಂಗಳಿಂತಾಗಿಹುವು ಸೃಷ್ಟಿಯನೆ |
ಮನುವೊಬ್ಬ, ಜನತೆ ಶತ – ಮಂಕುತಿಮ್ಮ || 337 ||

ಪದ-ಅರ್ಥ: ಅನಿಲಗುಣ=ವಾಯುಗುಣ, ಭೂಗುಣ=ಮಣ್ಣಿನ ಗುಣ, ತನುಗುಣಗಳನ್ನದಿಂ=ತನುಗುಣಗಳು(ದೇಹದ ಗುಣಗಳು)+ಅನ್ನದಿಂ
(ಅನ್ನದಿಂದ), ತನುವಿಮ್(ತನುವಿನಿಂದ), ಜನಪದವಿಧಂಗಳಿಂತಾಗಿಹುವು=ಜನಪದ+ ವಿಧಂಗಳು(ವಿವಿಧತೆಗಳು)+ಇಂತಿ+ಆಗಿಹುವು.

ವಾಚ್ಯಾರ್ಥ: ಸಸ್ಯ ಮತ್ತು ಧಾನ್ಯಗಳ ಗುಣ ಬಂದದ್ದು ವಾತಾವರಣದ ಮತ್ತು ನೆಲದ ಗುಣಗಳಿಂದ. ಅವುಗಳ ಅನ್ನದಿಂದ ದೇಹಗುಣ. ದೇಹಗುಣದಿಂದ ಮನಸ್ಸಿನ ಗುಣ. ಹೀಗೆ ವಿವಿಧ ಜನಪದಗಳು ಸೃಷ್ಟಿಯಲ್ಲಿ ಉಂಟಾಗಿವೆ. ಮನುಷ್ಯನೆಂಬ ಜಾತಿ ಒಂದಾದರೂ ವಿವಿಧತೆಯಲ್ಲಿ ಜನತೆ ನೂರು ಬಗೆ.

ವಿವರಣೆ: ನಾನೊಮ್ಮೆ ಹಿಮಾಚಲ ಪ್ರದೇಶಕ್ಕೆ ಹೋದಾಗ ಅಲ್ಲಿಯ ಕೆಲವು ಸ್ನೇಹಿತರು ಅಲ್ಲಿಯ ವಿಶೇಷತೆಗಳನ್ನು ತೋರಿಸುತ್ತಿದ್ದರು. ಅದರಲ್ಲಿ ಕೀಟಾಹಾರಿ ಸಸ್ಯವೂ ಒಂದು. ಆ ಸಸ್ಯಕ್ಕೆ ಒಂದು ಬಟ್ಟಲಿನಂತಹ ಪಾತ್ರೆಯಿದೆ. ಅದರ ಮುಚ್ಚಳ ತೆರೆದೇ ಇರುತ್ತದೆ. ಬಟ್ಟಲಿನಲ್ಲಿ ಹಸಿಯಾದ ಆದರೆ ಸಿಹಿಯಾದ, ಅಂಟಾದ ರಸವಿದೆ. ಅದಕ್ಕೆ ಆಕರ್ಷಿತವಾಗಿ ಕೀಟಗಳು ಹಾರಿ ಬಟ್ಟಲನ್ನು ಸೇರುತ್ತವೆ. ಕೀಟ ಒಳ ಸೇರಿದೊಡನೆ ಬಟ್ಟಲಿನ ಮೇಲಿನ ಮುಚ್ಚಳ ತಕ್ಷಣ ಮುಚ್ಚಿಕೊಳ್ಳುತ್ತದೆ. ಕೀಟವನ್ನು ಕೊಂದು ಅದರ ಸಾರದಿಂದ ಬದುಕು ಸಾಗಿಸುತ್ತದೆ. ನಮ್ಮ ಶಾಲೆಯ ಮಕ್ಕಳು ಅದನ್ನು ನೋಡಲಿ ಎಂದು ಐದಾರು ಸಸಿಗಳನ್ನು ತಂದು ಆವರಣದಲ್ಲಿ ನೆಡಿಸಿದೆ. ಒಂದು ತಿಂಗಳಿನಲ್ಲಿ ಒಂದೂ ಬದುಕಲಿಲ್ಲ. ತೋಟಗಾರ ಹೇಳಿದ, ‘ಈ ವಾತಾವರಣದಲ್ಲಿ ಅದು ಬೆಳೆಯುವುದಿಲ್ಲ’. ಹೌದು, ಪ್ರತಿಯೊಂದು ಸಸ್ಯಕ್ಕೂ ಬೆಳೆಯಲು ಸರಿಯಾದ ಹವೆ, ಮಣ್ಣಿನ ಗುಣ ಬೇಕು. ಮಂಗಳೂರಿನ ಮಲ್ಲಿಗೆ ಬೆಂಗಳೂರಿನಲ್ಲಿ ಬೆಳೆಯಲಾರದು. ತಿಪಟೂರಿನ ತೆಂಗಿನ ಸಸಿ ಕಲಬುರಗಿಯಲ್ಲಿ ಸಮೃದ್ಧಿಯಾಗಲಾರದು. ಹೀಗೆ ವಿಶೇಷ ವಾತಾವರಣಗಳಲ್ಲಿ ಬೆಳೆದ ಸಸ್ಯಧಾನ್ಯಗಳನ್ನು ಅನ್ನವಾಗಿ ಮನುಷ್ಯ ತಿನ್ನುತ್ತಾನೆ. ಅದರಿಂದ ಅವನ ದೇಹ ಗುಣ ನಾವು ಉಣ್ಣುವ ಅನ್ನದಿಂದ, ದೇಹ ಮಾತ್ರ ಬೆಳೆಯುವುದಿಲ್ಲ, ಅದು ಮನಸ್ಸನ್ನು ನಿರ್ಮಿಸುತ್ತದೆ. ಅದಕ್ಕೇ ಆಹಾರಗಳಲ್ಲಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಗುರುತಿಸುತ್ತಾರೆ. ಸಾತ್ವಿಕ ಆಹಾರದ ಸೇವನೆ ಮನಸ್ಸನ್ನು ಬಹುಮಟ್ಟಿಗೆ ಸಾತ್ವಿಕವಾಗಿ ಇಡುತ್ತದೆ.

ಹೀಗೆ ಸೃಷ್ಟಿಯಲ್ಲಿ ಅನೇಕ ವಿಧದ ಜನಪದಗಳು ನಿರ್ಮಾಣವಾಗಿವೆ. ಅದೆಷ್ಟು ತರಹದ ಮನುಷ್ಯ ಜೀವಗಳು! ಆಫ್ರಿಕಾ ದೇಶದ ಜನರ ರೂಪಲಕ್ಷಣಗಳು, ಯುರೋಪ್‌ ದೇಶಗಳ ಜನರ ಲಕ್ಷಣಗಳು, ಚೀನಾ, ಕೊರಿಯಾ, ನೇಪಾಳ, ಮಣಿಪುರ ಪ್ರದೇಶಗಳ ಮಂಗೋಲಿಯನ್ ಜಾತಿಯ ಜನರ ಗುಣಲಕ್ಷಣಗಳು, ಏಷ್ಯಾ ದೇಶದ ಜನರ ಲಕ್ಷಣಗಳು ಎಷ್ಟೆಲ್ಲ ಬೇರೆ ಬೇರೆಯಾಗಿವೆ! ಹೀಗೆ ಗುಣಲಕ್ಷಣಗಳಿಂದ ಬೇರೆಯಾದರೂ ಅವರನ್ನೂ ಮಾನವರೆಂದೇ ಕರೆಯುತ್ತೇವೆ. ಅದನ್ನು ಕಗ್ಗ ಹೇಳುತ್ತದೆ, ಮಾನವ ಜಾತಿ ಒಂದೇ ಆದರೂ ಜನಪದದಲ್ಲಿ ನೂರು ಬಗೆಗಳು. ಅವು ಹಾಗೆ ಸೃಷ್ಟಿಯಾದದ್ದು ಅನಿಲ ಹಾಗೂ ಭೂಗುಣಗಳಿಂದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು