ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಾನವನ ಅನೂಹ್ಯ ಚೈತನ್ಯ ಶಕ್ತಿ

Last Updated 25 ಏಪ್ರಿಲ್ 2021, 22:00 IST
ಅಕ್ಷರ ಗಾತ್ರ

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |
ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||
ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |
ಮಾನವತೆ ನಿಂತಿಹುದು – ಮಂಕುತಿಮ್ಮ || 410 ||

ಪದ-ಅರ್ಥ: ಜಾನಪದ= ಜನಪದದ ಸಾಹಿತ್ಯ, ಸಂಗೀತ, ನೃತ್ಯ, ಆಟ ಎಲ್ಲವನ್ನು ಒಳಗೊಂಡದ್ದು, ಗುರುಸ್ಥಾನಗಳು= ಗುರುಪೀಠಗಳು.

ವಾಚ್ಯಾರ್ಥ: ಕಾಲಪ್ರವಾಹದಲ್ಲಿ ಜಾನಪದಗಳು, ರಾಜ್ಯಗಳು ಸಾಮ್ರಾಜ್ಯಗಳು, ಗುರುಪೀಠಗಳು, ಧರ್ಮಗಳು, ಭಾಷೆಗಳು, ವಿದ್ಯೆಗಳು ಎಲ್ಲವೂ ಮರೆಯಾಗಿ ಹೋಗಿವೆ. ಆದರೆ ಮಾನವತೆ ಮಾತ್ರ ನಿಂತಿದೆ.

ವಿವರಣೆ: ಪೂಜ್ಯ ಡಿವಿಜಿಯವರನ್ನು ಆತ್ಮೀಯರಾರೋ ಕೇಳಿದರಂತೆ, ‘ಸ್ವಾಮೀ, ತಮಗೆ ಒಬ್ಬನೇ ಮಗ. ಅವನಿಗೂ ಗಂಡುಮಕ್ಕಳಿಲ್ಲ. ಮುಂದೆ ವಂಶ ಹೇಗೆ?’ ಡಿವಿಜಿ ಮರಳಿ ಕೇಳಿದರು, ‘ರಾಮನ ವಂಶದವರು, ಕೃಷ್ಣನ ವಂಶದವರು ಯಾರಾದರೂ ಇದ್ದಾರೆಯೇ? ಅವರ ವಂಶವೇ ಕಾಲಗರ್ಭದಲ್ಲಿ ಕಳೆದು ಹೋಗಿರುವಾಗ ಗುಂಡಪ್ಪನ ವಂಶದ ಬಗ್ಗೆ ಯಾಕೆ ಚಿಂತೆ?’ ಇದು ಸತ್ಯವಲ್ಲವೆ? ಯಾವ ವಂಶವೂ ಉಳಿದಿಲ್ಲ, ಉಳಿಯಲಾರದು. ಕರಗಿ ಹೋಗುವುದೇ ಪ್ರಕೃತಿ ನಿಯಮ. ಯಾವುದೂ ಶಾಶ್ವತವಾಗಿ ಉಳಿಯದೆ ಕಾಲಗರ್ಭದಲ್ಲಿ ಮರೆಯಾಗುತ್ತದೆ. ಎರಡು ಕಾಲುಗಳ ಮೇಲೆ ನೆಟ್ಟಗೆ ನಿಂತು ನಡೆಯುವ ಮನುಷ್ಯನಂತಹ ಪ್ರಾಣಿ ಭೂಮಿಯ ಮೇಲೆ ಕಾಣಿಸಿದ್ದು ಒಂದು ಲಕ್ಷ ಎಂಭತ್ತೊಂದು ಸಾವಿರ ವರ್ಷಗಳ ಹಿಂದೆ ಎಂದು ಜೀವವಿಕಾಸವನ್ನು ವಿವರಿಸುವ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಮನುಷ್ಯನ ದೇಹ, ಮನಸ್ಸು, ಬುದ್ಧಿಗಳ ವಿಕಾಸವಾಗುತ್ತ ಬಂದಿದೆ.

ವಿಕಾಸವಾಗುತ್ತ ಬಂದಂತೆ ಮನುಷ್ಯ ಸಂಘಜೀವಿಯಾದ. ಆಗ ಅವರು ಹಂಚಿಕೊಂಡ ಆಟಗಳು, ಹಾಡುಗಳು, ಸಾಹಿತ್ಯ, ಸಂಗೀತ ಮುಂತಾದವುಗಳೆಲ್ಲ ಜಾನಪದಗಳಾದವು. ಮನುಷ್ಯ ಭದ್ರತೆಗಾಗಿ ರಾಜ್ಯ, ಸಾಮ್ರಾಜ್ಯಗಳನ್ನು ನಿರ್ಮಿಸಿಕೊಂಡ. ಇದರಲ್ಲಿ ಶೌರ್ಯ, ಪರಾಕ್ರಮದ, ಅಧಿಕಾರದ ಆಸೆಯ ನೆರಳೂ ಇದೆ. ರಾಜರಿಗೆ ಮಾರ್ಗದರ್ಶನ ಮಾಡುವ ಗುರುಪೀಠಗಳು ಬಂದವು. ಇವುಗಳ ನಿರ್ವಹಣೆಗೆ, ವ್ಯವಸ್ಥಿತವಾದ ಬೆಳವಣಿಗೆಗೆ, ಧರ್ಮದ ಕಲ್ಪನೆ ಮೂಡಿತು. ಮನುಷ್ಯ ಬೆಳೆದಂತೆ ಸಂವಹನ ಕಲೆ ಬೆಳೆದು ಬೇರೆ ಭಾಷಾ ಪ್ರಕಾರಗಳಾದವು. ಜನ ತಮ್ಮ ವಸತಿಗಳನ್ನು ಬದಲಿಸುತ್ತ, ಹೊಸತಾದ, ನವೀನ ರೀತಿಯ ವಾಸಗಳನ್ನು ನಿರ್ಮಿಸಿಕೊಂಡರು. ಆದರೆ ಯಾವುದೂ ಶಾಶ್ವತವಾಗಿ ಉಳಿಯಲಿಲ್ಲ. ಹೊಸದು ಬಂದಂತೆ ಹಳೆಯದು ಮರೆಯಾಯಿತು. ಒಂದು ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ರೋಮ್ ನಗರ, ಅಲೆಕ್ಸಾಂಡ್ರಿಯಾದ ಪ್ರಸಿದ್ಧ ಗ್ರಂಥಾಲಯ, ಹರಪ್ಪಾ ಮತ್ತು ಮೊಹೆಂಜೋದಾರೋದ ನಗರಗಳು ಇಂದು ಕೇವಲ ಪಳೆಯುಳಿಕೆಗಳಾಗಿವೆ. ಕೇವಲ ಅರವತ್ತು ವರ್ಷಗಳ ಹಿಂದೆ ತೀರ್ಥಕ್ಷೇತ್ರವಾಗಿದ್ದ ಧನುಷ್ಕೋಟಿ ಇದು ಜಲಸಮಾಧಿಯಾಗಿದೆ. ಕೃಷ್ಣ ಬದುಕಿದ್ದ ದ್ವಾರಕೆ ಸಮುದ್ರದ ತಳ ಕಂಡಿದೆ. ಅಂದರೆ, ಅತ್ಯಂತ ಶ್ರೇಷ್ಠವೆನ್ನಿಸಿದ, ಉದಾತ್ತವೆನ್ನಿಸಿದ, ಅದ್ಭುತವೆನ್ನಿಸಿದ ಯಾವುದೂ ಈಗ ಉಳಿದಿಲ್ಲ. ಇದೇ ಕಾಲಪ್ರವಾಹ. ಈ ಮಹಾಪ್ರವಾಹದಲ್ಲಿ ಯಾವುದೂ ನಿಲ್ಲಲಾರದು. ಇಂದಿನ ವೈಭವ, ಮೆರಗು ಕೂಡ ಭವಿಷ್ಯದಲ್ಲಿ ಶೂನ್ಯವಾಗುತ್ತದೆ. ಆದರೆ ಮತ್ತೊಂದು ಹೊಸ ವ್ಯವಸ್ಥೆ, ಹೊಸವಿಧಾನ, ಹೊಸ ಚೈತನ್ಯ ಮೈದೋರುತ್ತದೆ. ಯಾಕೆಂದರೆ, ಪ್ರತಿಯೊಂದು ಕಾಲದಲ್ಲಿ ಈ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದು ಮಾನವನ ಅನೂಹ್ಯವಾದ ಚೈತನ್ಯ ಶಕ್ತಿ. ಆ ಮಾನವತೆ ಎಂದಿಗೂ ಅಳಿಯದೆ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT