ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬದುಕು ನರಳಾಟವೇ?

Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ|
ಕೊರತೆಯೊಂದನು ನೀನು ನೆನೆನೆನೆದು ಕೆರಳಿ||
ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ|
ನರಳುವುದು ಬದುಕೇನೊ ? – ಮಂಕುತಿಮ್ಮ||644||

ಪದ-ಅರ್ಥ: ಹುಣ್ಣನಾಗಿಪುದು= ಹುಣ್ಣನು+ ಆಗಿಪುದು (ಮಾಡಿಕೊಳ್ಳುವುದು), ಕೊರತೆಯೊಂದನು= ಕೊರತೆ+ ಒಂದನು, ಧರೆಯೆಲ್ಲವನು= ಧರೆಯ+ ಎಲ್ಲವನು

ವಾಚ್ಯಾರ್ಥ: ಸಣ್ಣ ತರಚುಗಾಯವನ್ನು ಕೋತಿ ಕೆರೆದು ಹುಣ್ಣನಾಗಿಸಿಕೊಳ್ಳುತ್ತದೆ. ಅಂತೆಯೇ ಯಾವುದೊ ಚಿಕ್ಕ ಕೊರತೆಯನ್ನು ನೆನೆನೆನೆದು, ಅದಕ್ಕೆ ಪ್ರಪಂಚವನ್ನೆಲ್ಲ ಶಪಿಸಿ, ಮನವನ್ನು ನರಕವನ್ನಾಗಿಸಿಕೊಂಡು ನರಳುವುದು ಬದುಕೇನು?

ವಿವರಣೆ: ನನಗೊಬ್ಬ ಶಿಕ್ಷಕರೊಂದಿಗೆ ಆತ್ಮೀಯತೆ ಇತ್ತು. ಅವರು ಬದುಕಿನಲ್ಲಿ ಎಲ್ಲವನ್ನು ಕಂಡಿದ್ದವರು. ಏನೇ ಆಗಲಿ, ‘ಆಯ್ತು, ಅದು ಭಗವಂತನ ಇಚ್ಛೆ’ ಎನ್ನುವವರು. ಅವರಿಗೆ ಇಬ್ಬರು ಮಕ್ಕಳು. ದೊಡ್ಡಮಗ ಬುದ್ಧಿವಂತ. ಶಿಕ್ಷಕರು ನಿವೃತ್ತರಾಗುವ ಹೊತ್ತಿಗೆ ಮಗ ಕೈಗೆ ಬರುತ್ತಾನೆ ಎಂದುಕೊಂಡಿದ್ದರು. ಅವನಿಗೆ ಕೆಲಸ ಸಿಕ್ಕ ಮರುತಿಂಗಳೇ ಅಪಘಾತಕ್ಕೀಡಾಡಿ ಸತ್ತು ಹೋದ. ಹೆಂಡತಿ ಹಾಸಿಗೆ ಹಿಡಿದರು. ಆಸ್ಪತ್ರೆಗೆ ಸೇರಿಸಿದಾಗ ವಿಪರೀತ ಖರ್ಚು. ಆಸ್ಪತ್ರೆಗೆ ನಡೆದುಕೊಂಡು ಹೋಗುವಾಗ ಎರಡನೆಯ ಮಗ ಕೇಳಿದ ‘ಅಪ್ಪಾ, ಸ್ಕೂಟರ್ ಯಾಕೆ ಮಾರಿಬಿಟ್ಟಿರಿ? ಈಗ ತುಂಬ ಅನುಕೂಲವಾಗುತ್ತಿತ್ತಲ್ಲ?’ ಅಪ್ಪ ಹೇಳಿದರು, ‘ಮಗೂ, ಸ್ಕೂಟರ್‌ಗಿಂತ ನಿಮ್ಮ ಅಮ್ಮ ನನಗೆ ಮುಖ್ಯ’, ಹೆಂಡತಿ ತೀರಿಹೋದರು. ಮುಂದೆ ಶಿಕ್ಷಕರಿಗೆ ತಮ್ಮ ಸಾವು ಹತ್ತಿರ ಬಂತೆಂದು ತಿಳಿದಿರಬೇಕು. ಸಾವಿನಲ್ಲೂ ಅದೇ ಶಾಂತತೆ, ಸಮತ್ವ, ಅದೇ ಶುದ್ಧತೆ! ಕಿರಿಯ ಮಗನನ್ನು ಕರೆದು ಹೇಳಿದರು, ‘ಮಗೂ, ಅಲ್ಲಿ ಮೇಜಿನ ಮೇಲೆ ಭಗವಗ್ಗೀತೆ ಪುಸ್ತಕ ಇಟ್ಟಿದ್ದೇನೆ. ನಾನು ತೀರಿದ ಮೇಲೆ ಯಾವ ಯಾವ ಶ್ಲೋಕ ಹೇಳಬೇಕು ಎಂದು ಗುರುತುಮಾಡಿ ಇಟ್ಟಿದ್ದೇನೆ. ಆದರೆ ಜೋಪಾನ. ಅವಸರದಿಂದ, ದುಃಖದಿಂದ ಪದಗಳನ್ನು ತಪ್ಪಾಗಿ ಉಚ್ಚರಿಸಬೇಡ. ನಿನ್ನ ಉಚ್ಛರಣೆ ಸರಿಯಾಗಿರಲಿ’. ಹೀಗೆ ಹೇಳಿ ಅವನ ತಲೆಯ ಮೇಲೆ ಪ್ರೀತಿಯಿಂದ ಕೈಯಾಡಿಸಿದರು. ಮರುದಿನವೇ ಸಾವನ್ನು ಬಹುದಿನಗಳಿಂದ ಕಾಣದೇ ಇದ್ದ ಅತ್ಯಂತ ಪ್ರೀತಿಯ ಸ್ನೇಹಿತನಂತೆ ಅಪ್ಪಿಕೊಂಡು ನಡೆದೇ ಬಿಟ್ಟರು, ಗೊಣಗದೆ.

ಅವರಿಗೆ ಕಷ್ಟ ಇರಲಿಲ್ಲವೆ? ನೋವು ಇರಲಿಲ್ಲವೆ? ಎಲ್ಲವೂ ಇತ್ತು. ಆದರೆ ಅದನ್ನು ನೆನೆನೆನೆದು ಬದುಕನ್ನು ಹಾಳು ಮಾಡಿಕೊಳ್ಳಲಿಲ್ಲ. ತಮ್ಮ ಕಷ್ಟಗಳನ್ನು ಮತ್ತೊಬ್ಬರ ಬದುಕಿನಲ್ಲಿ ಸುರುವಿ ಗೋಳಾಡಲಿಲ್ಲ. ತಮ್ಮ ಕಷ್ಟಗಳಿಗೆ ಕಾರಣರಾದವರನ್ನು ಶಪಿಸುತ್ತ, ಕೋಪದಿಂದ ತಮ್ಮ ಶಾಂತಿ, ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಳ್ಳಲಿಲ್ಲ.

ಕಗ್ಗ, ಕೋತಿಯ ಉದಾಹರಣೆಯೊಂದಿಗೆ ನಮ್ಮ ಮನಃಸ್ಥಿತಿಯನ್ನು ವರ್ಣಿಸುತ್ತದೆ. ಕೋತಿಗೆ ಒಮ್ಮೆ ಎಲ್ಲಿಯೋ ತರಚಿ ಸಣ್ಣ ಗಾಯವಾಯಿತು. ಸುಮ್ಮನೆ ಬಿಟ್ಟಿದ್ದರೆ ಗಾಯ ಒಣಗಿಹೋಗುತ್ತದೆ. ಮೊದಲೇ ಕೋತಿ, ಸುಮ್ಮನಿದ್ದೀತೇ? ಗಾಯವನ್ನು ಕೆರೆದು ಕೆರೆದು ದೊಡ್ಡ ವೃಣವನ್ನಾಗಿ ಮಾಡಿತು. ಅಂದರೆ ದೊಡ್ಡ ವೃಣವಾಗುವುದಕ್ಕೆ ಕಾರಣ ಗಾಯವಲ್ಲ, ಕೋತಿಬುದ್ಧಿ ಕಾರಣ. ನಾವೂ ಹಾಗೆಯೇ ಅಲ್ಲವೆ? ಎಂದೋ ಆಗಿ ಹೋದ ಘಟನೆಯನ್ನು ನೆನಪಿಸಿಕೊಂಡು, ಮನಸ್ಸನ್ನು ವ್ಯಗ್ರಮಾಡಿಕೊಂಡು ನರಳುತ್ತೇವೆ. ನಮ್ಮ ಧಾರಾವಾಹಿ, ಸಿನಿಮಾಗಳಲ್ಲಿ ನೋಡಿಲ್ಲವೇ? ‘ಇಪ್ಪತ್ತು ವರ್ಷಗಳಿಂದ ಈ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದೆ’ ಎನ್ನುತ್ತಾನೆ ನಾಯಕ! ಹಾಗೆಂದರೆ ತನ್ನ ಜೀವನದ ಇಪ್ಪತ್ತು ವರ್ಷಗಳನ್ನು ಕುದಿಯುತ್ತಲೇ ಹಾಳು ಮಾಡಿಕೊಂಡಿದ್ದಾನೆ. ಕಗ್ಗ ಕೇಳುತ್ತದೆ, ‘ಹೀಗೆ ನರಳುವುದು ಬದುಕೇ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT