ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನಸ್ಸಿಗೆ ಶಿಕ್ಷಣ

Last Updated 8 ಜೂನ್ 2022, 19:30 IST
ಅಕ್ಷರ ಗಾತ್ರ

ಶೀತವಾತಗಳಾಗೆ ದೇಹಕೌಷಧ ಪಥ್ಯ |
ಚೇತ ಕೆರಳಿರೆ ಕಣ್ಣು ಕಿವಿಗಳಾತುರದಿಂ ||
ಪ್ರೀತಿಯಿಂದದನೊಲಿಸಿ ನೀತೆಯಲಿ ಶಿಕ್ಷಿಸುವು - |
ದಾತುಮದ ನೆಮ್ಮದಿಗೆ – ಮಂಕುತಿಮ್ಮ || 646 ||

ಪದ-ಅರ್ಥ: ಶೀತವಾತಗಳಾಗೆ=ಶೀತ(ಚಳಿ)+ವಾತಗಳು(ವಾಯು)+ಆಗೆ, ದೇಹಕೌಷಧ=ದೇಹಕೆ+ಔಷಧ, ಚೇತ=ಮನಸ್ಸು, ಚೇತನ, ಕೆರಳಿಕೆ=ಕೆರಳಿದರೆ, ಕಿವಿಗಳಾತುರದಿಂ=ಕಿವಿಗಳು+ಆತುರದಿಂ(ಆತುರದಿಂದ), ಪ್ರೀತಿಯಿಂದದನೊಲಿಸಿ=ಪ್ರೀತಿಯಿಂದ+ಅದನು+ಒಲಿಸಿ, ನೀತೆಯಲಿ =ನೀತಿಯಿಂದ, ಶಿಕ್ಷಿಸುವುದಾತುಮದ ಶಿಕ್ಷಿಸುವುದು+ಆತುಮದ(ಆತ್ಮದ).

ವಾಚ್ಯಾರ್ಥ: ದೇಹಕ್ಕೆ ಶೀತ, ವಾತಗಳಾದರೆ ಅದಕ್ಕೆ ಔಷಧಿ, ಪಥ್ಯ ಬೇಕು. ಆದರೆ ಕಣ್ಣು, ಕಿವಿಗಳ ಆತುರದಿಂದ ಚೇತನ ಕೆರಳಿದರೆ, ಪ್ರೀತಿಯಿಂದ ಅವುಗಳನ್ನು ಒಲಿಸಿ, ನೀತಿಯಿಂದ ಶಿಕ್ಷಿಸುವುದು ಆತ್ಮಕ್ಕೆ ನೆಮ್ಮದಿಯನ್ನು ನೀಡುತ್ತದೆ.

ವಿವರಣೆ: ದೇಹಕ್ಕೆ ಶೀತ, ವಾತ ಅಥವಾ ಯಾವುದಾದರೂ ಸಮಸ್ಯೆಯಾದರೆ ಅದಕ್ಕೆ ಔಷಧಿಗಳುಂಟು. ನಾವು ವೈದ್ಯರ ಬಳಿ ಹೋಗುತ್ತೇವೆ. ಅವರು ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ. ಅವುಗಳನ್ನು Diagnosis ಅಥವಾ ರೋಗಲಕ್ಷಣ ಪರೀಕ್ಷೆ ಎನ್ನುತ್ತೇವೆ. ಆ ಪರೀಕ್ಷೆಗಳ ಫಲಿತಾಂಶಗಳಿಂದ ದೇಹಕ್ಕೆ ಯಾವ ತೊಂದರೆ ಎಂಬುದನ್ನು ತಿಳಿದು, ಅದಕ್ಕೆ ಸರಿಯಾದ ಔಷಧಿಯನ್ನು ಕೊಡುತ್ತಾರೆ. ಅವುಗಳಿಂದ ರೋಗದಿಂದ ದೇಹ ಮುಕ್ತವಾಗುತ್ತದೆ. ನಮಗೆ ಇನ್ನೊಂದು ತರಹದ ರೋಗವೂ ಅಮರಿಕೊಳ್ಳುತ್ತದೆ. ಆದರೆ ಅವು ನಮ್ಮೊಳಗೆ ಸೇರಿಕೊಂಡಿದ್ದು ಇಂದ್ರಿಯಗಳ ಮೂಲಕ. ಅನಾರೋಗ್ಯವಾಗಿರುವುದು ಮನಸ್ಸಿಗೆ, ಕಣ್ಣು ಏನೋ ನೋಡುತ್ತದೆ, ಮನಸ್ಸು ಅದರಲ್ಲಿ ತೊಡಗಿಸಿಕೊಳ್ಳುತ್ತದೆ. ಸೀತೆ ಮಾಯಾಮೃಗವನ್ನು ಕಂಡಳು, ಬಯಕೆ ಮೂಡಿತು. ರಾವಣ ಸೀತೆಯನ್ನು ನೋಡಿದ, ಮನಸ್ಸು ಸೆಳೆಯಿತು, ಕೊನೆಗೆ ಅವನ ಪ್ರಾಣಹರಣವಾಯಿತು. ಶಂತನು ಮಹಾರಾಜ ಮತ್ಸ್ಯಗಂಧಿಯನ್ನು ಕಂಡ, ಮಹಾಭಾರತದ ದಿಶೆಯೇ ಬದಲಾಯಿತು. ಮಾರ್ಕ ಆ್ಯಂಟನಿ ಕ್ಷಿಯೋಪಾತ್ರಾಳನ್ನು ಕಂಡ ಗಳಿಗೆಯೇ ರೋಮನ್ ಇತಿಹಾಸ ಪುಟ ತಿರುಗಿಸಿತು. ಇವುಗಳು ಕಣ್ಣು ಮಾಡಿದ ಅನಾಹುತಗಳು. ಅಂತೆಯೇ ಆತುರದ ಕಿವಿ ಕೂಡ ಮನಸ್ಸನ್ನು ಕೆರಳಿಸುತ್ತದೆ. ರಾಮನನ್ನು ಅಷ್ಟು ಆತ್ಯಂತಿಕವಾಗಿ ಪ್ರೀತಿ ಮಾಡುತ್ತಿದ್ದ ಕೈಕೇಯಿ ಮನಮುರಿದುಕೊಂಡದ್ದು ಮಂಥರೆಗೆ ಕಿವಿಗೊಟ್ಟಿದ್ದರಿಂದ. ಅಗಸನ ಮಾತಿಗೆ ಕಿವಿಗೊಟ್ಟದ್ದು ಜಾನಕಿನ ವನಯಾತ್ರೆಗೆ ನೆಪವಾಯಿತು. ಕ್ರಾಕ್ಲಿನ್ ರೂಸವೆಲ್ಟ್ ಹೇಳುತ್ತಾನೆ. ‘Men are prisoners of their own minds’ ಮನುಷ್ಯ ತನ್ನದೇ ಮನಸ್ಸಿನ ಸೆರೆಯಾಳು. ಈ ಮನಸ್ಸನ್ನು ಒಲಿಸುವುದು ಒಂದು ಸಾಹಸ. ಅದನ್ನು ಎಷ್ಟು ಒತ್ತಿ ನಿಗ್ರಹಿಸಿ ಹೋಗುತ್ತೇವೋ ಅಷ್ಟೇ ವೇಗದಲ್ಲಿ ಪುಟಿದೆದ್ದು ನಿಲ್ಲುತ್ತದೆ. ಯಾವುದನ್ನು ಮರೆಯಬೇಕೆಂದು ಪ್ರಯತ್ನ ಮಾಡುತ್ತೀರೋ ಅದೇ ಧುತ್ತೆಂದು ಬಂದು ಕಾಡುತ್ತದೆ. ರಸ್ತೆಯ ಮಧ್ಯದಲ್ಲಿ ಹರಿದುಹೋದ ಚೀಲದಿಂದ ಸುರಿದ ಸಾಸುವೆಗಳನ್ನು, ಮತ್ತೆ ತಂದು ಕೂಡಿಸುವ ಸಾಹಸ ಮನಸ್ಸಿನ ಹಿಡಿತ. ಅದಕ್ಕೇ ಒಂದು ಸುಭಾಷಿತ ‘ಜಿತಂ ಜಗತ್ತೇನ ಮನೋ ಹಿ ಯೇನ’ ಎಂದರೆ ‘ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ’ ಎನ್ನುತ್ತದೆ.

ಇಂಥ ಮನಸ್ಸನ್ನು ಒಂದು ಹದಕ್ಕೆ ತರುವ ವಿಧಾನವನ್ನು ಕಗ್ಗ ಹೇಳುತ್ತದೆ. ಮನಸ್ಸಿಗೆ ಪೆಟ್ಟು, ಒತ್ತಡ ಬೇಡ. ಅದನ್ನು ಪ್ರೀತಿಯಿಂದ ನೋಡಿ, ಮೃದುವಾಗಿ ತಟ್ಟಿ ಒಲಿಸಿಕೊಳ್ಳಬೇಕು. ಸತ್ಕರ್ಮಗಳಲ್ಲಿ ಅದನ್ನು ತೊಡಗಿಸಬೇಕು. ನೀತಿಯ ಮಾತುಗಳಿಂದ ಅದಕ್ಕೆ ಬೋಧನೆಯಾಗಬೇಕು. ಅದೇ ಮನಸ್ಸಿಗೆ ಶಿಕ್ಷೆ, ಶಿಕ್ಷಣ. ಅದರಿಂದ ಮನಸ್ಸಿಗೆ, ಜೀವಕ್ಕೆ ನೆಮ್ಮದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT