ಭಾನುವಾರ, ಮೇ 29, 2022
30 °C

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಜ್ಞಾನ ದೀವಿಗೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜೀವಕಾರಣ ಮೂಲ ಗೂಢವಾಗಿರ್ದೊಡಂ |

ಧೀವಿಕಾಸದ ಬೆಳಕನಾದನಿತು ಗಳಿಸಿ ||

ಕೈವಲ್ಯಪಥವನರಸುತ ಯಾತ್ರಿಸಲೆಬೇಕು |

ದೀವಿಗೆಯು ಮತಿಯೊಂದೆ – ಮಂಕುತಿಮ್ಮ

|| 527||

ಪದ-ಅರ್ಥ: ಗೂಢವಾಗಿರ್ದೊಡಂ= ಗೂಢವಾಗಿ+ಇರ್ದೊಡಂ(ಇದ್ದರೂ), ಧೀವಿ
ಕಾಸದ=ಧೀ(ಬುದ್ಧಿಯ)+ವಿಕಾಸದ, ಬೆಳಕನಾದನಿತು=ಬೆಳಕನು+ಆದ+ಅನಿತು(ತುಸು),

ಕೈವಲ್ಯಪಥ=ಪರಮಾರ್ಥದ ದಾರಿ.

ವಾಚ್ಯಾರ್ಥ: ಪ್ರಪಂಚದ ಮೂಲಕಾರಣವಾದ ತತ್ವ ಗೂಢವಾಗಿದ್ದರೂ, ಬುದ್ಧಿಯ ಬೆಳವಣಿಗೆಗಾಗಿ ಸಾಧ್ಯವಾದಷ್ಟು ಬೆಳಕನ್ನು ಗಳಿಸಿಕೊಂಡು, ಮುಕ್ತಿಯ ಮಾರ್ಗವನ್ನು ಅರಸುತ್ತ ಪ್ರಯಾಣ ಮಾಡಲೇಬೇಕು. ಆಗ ನಮ್ಮ ಬುದ್ಧಿಯೊಂದೇ ನಮಗೆ ದಾರಿತೋರುವ ದೀಪ.

ವಿವರಣೆ: ಆಚಾರ್ಯ ಶಂಕರರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಅದರ ಆಘಾತ ಅವರ ಮೇಲೆ ಅಪಾರವಾಗಿತ್ತು. ತಂದೆಗೆ ಏನಾಯಿತು ಎಂದು ತಾಯಿಯನ್ನು ಕೇಳಿದರು. ‘ನಿನ್ನ ತಂದೆ ಮರಣಹೊಂದಿ ಸ್ವರ್ಗ ಸೇರಿದರು’ ಎಂದರು ತಾಯಿ. ‘ಏಕೆ ಹಾಗೆ ಮರಣ ಬಂತು?’ ಮರುಪ್ರಶ್ನೆ ಮಾಡಿದ ಬಾಲಕ. ‘ಹೌದಪ್ಪ, ಇದು ಯಾರನ್ನೂ ಬಿಟ್ಟದ್ದಲ್ಲ. ನಾನು, ನೀನು ಎಲ್ಲರೂ ಒಂದು ದಿನ ಮರಣವನ್ನು ಹೊಂದಲೇಬೇಕು’ ಎಂದು ತಿಳಿಸಿದರು ಅಮ್ಮ. ಅತ್ಯಂತ ಬುದ್ಧಿವಂತ ಮಗ ಕೇಳಿದ, ‘ಅಮ್ಮ, ಸಾಯುವುದು ಖಚಿತವಾಗಿದ್ದರೆ ನಾವು ಇಲ್ಲಿಗೆ ಬಂದದ್ದೇಕೆ? ಕೋ ಹಂ? ಕುತ ಆಯಾತ:, ನಾನು ಯಾರು? ಯಾಕೆ ಇಲ್ಲಿಗೆ ಬಂದಿದ್ದೇನೆ?’ ಈ ಪ್ರಶ್ನೆಯನ್ನು ಸಹಸ್ರಾರು ಜನ, ಸಹಸ್ರಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಏನು ಈ ಪ್ರಪಂಚ? ಯಾರು ಇದನ್ನು ಸೃಷ್ಟಿ ಮಾಡಿದರು? ಯಾವ ಕಾರಣಕ್ಕೆ ಇದು ಸಿದ್ಧವಾಯಿತು? ಬರೀ ಪ್ರಶ್ನೆಗಳು! ಸರಿಯಾದ ಉತ್ತರವೇ ದೊರೆಯಲಿಲ್ಲ. ಏನೇನೋ ಸಮಾಧಾನಗಳನ್ನು ಕೊಟ್ಟರು. ಇದು ಭಗವಂತ ತನ್ನ ಲೀಲೆಯನ್ನು ತೋರಲು ಮಾಡಿದ ಕೃತಿ ಎಂದರು. ಅವೆಲ್ಲ ಸಮಾಧಾನಗಳು. ಆದರೆ ಅದು ತುಂಬ ಗೂಢ ಎನ್ನಿಸಿತು.

ನಾನು ಈ ಪ್ರಪಂಚಕ್ಕೆ ಬಂದ ಮೇಲೆ ಇರುವಷ್ಟು ಕಾಲ ಬದುಕಲೇ ಬೇಕು. ಆಗ ನನಗೆ ದೊರೆಯುವ ಅನೇಕ ಬಗೆಯ ಜ್ಞಾನದ ಬೆಳಕುಗಳನ್ನು ಸಾಧ್ಯವಾದಷ್ಟು ಗಳಿಸಿಕೊಳ್ಳುತ್ತ, ಬುದ್ಧಿಯನ್ನು ವಿಕಾಸಗೊಳಿಸಿಕೊಳ್ಳಬೇಕು.

ನನ್ನ ಬದುಕನ್ನು ನಾನು ನಡೆಸಲೇಬೇಕು. ಅದು ಅನಿವಾರ್ಯ. ಹೀಗೆ ಅನಿವಾರ್ಯವಾದದ್ದನ್ನು ಅಪರೂಪವನ್ನಾಗಿಸಲು ಜ್ಞಾನದ ಬೆಳಕು ಬೇಕು. ನನಗೆ, ಪ್ರಪಂಚದ, ಪ್ರಪಂಚದ ಹಿಂದಿರುವ ಶಕ್ತಿಯ ಬಗೆಗೆ ತಿಳಿಯಲು ಈ ಜ್ಞಾನ ಬೇಕು. ಈ ಜ್ಞಾನರತ್ನವನ್ನು ಪಡೆದರೆ ಅದಕ್ಕಿಂತ ಹೆಚ್ಚಿನ ಸಾರ್ಥಕ್ಯವಿಲ್ಲ ಎನ್ನುತ್ತಾನೆ ಅಲ್ಲಮಪ್ರಭು.

ನಿನ್ನ ಒಡವೆ ಎಂಬುದು ಜ್ಞಾನರತ್ನ

ಅಂತಪ್ಪ ದಿವ್ಯರತ್ನವ ಕೆಡಗುಡದೆ

ಆ ರತ್ನವ ನೀನು ಅಲಂಕರಿಸಿದೆಯಾದಡೆ

ನಮ್ಮ ಗುಹೇಶ್ವರ ಲಿಂಗದಲ್ಲಿ

ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ, ಎಲೆ ಮನವೆ

ಈ ಬದುಕಿನ ಯಾತ್ರೆಯಲ್ಲಿ ದಾರಿ ತೋರುವ ದೀವಿಗೆ, ಈ ಜ್ಞಾನತುಂಬಿದ ಬುದ್ಧಿ ಮಾತ್ರ. ⇒v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.