ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಯತ್ನ-ದೈವಗಳ ಅನ್ಯೋನ್ಯತೆ

Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ |
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ||
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ |
ಗೊತ್ತಿಲ್ಲ ಫಲದ ಬಗೆ- ಮಂಕುತಿಮ್ಮ || 597 ||

ಪದ-ಅರ್ಥ: ಬಿತ್ತ=ಬಿತ್ತನೆ, ಮಳೆಗಳವೋಲು=ಮಳೆಗಳಂತೆ, ಯತ್ನ=ಪ್ರಯತ್ನ, ದೈವಿಕ=ದೈವ, ಯುಕ್ತದೊಳಗೆರಡುಮನುವಾಗೆ=ಯುಕ್ತದೊಳಗೆ (ಸರಿಯಾದ ರೀತಿಯಲ್ಲಿ)+ಎರಡುಮ್(ಎರಡೂ)+ಅನುವಾಗೆ(ಹೊಂದಿದರೆ), ಲೋಪ=ದೋಷ

ವಾಚ್ಯಾರ್ಥ: ಸರಿಯಾದ ಬೀಜಗಳನ್ನು ಬಿತ್ತಿದಾಗ, ಸರಿಯಾದ ಪ್ರಮಾಣದಲ್ಲಿ ಮಳೆಯಾದರೆ ಹೇಗೆ ಬೆಳೆ ಹುಲಸಾಗಿ ಬರುತ್ತದೋ ಹಾಗೆ ನಮಗೆ ಪ್ರಯತ್ನ ಮತ್ತು ದೈವಗಳು ಸರಿಯಾಗಿ ಕೂಡಿ ಬರಬೇಕು. ಪ್ರಯತ್ನ ಮಾಡುವುದನ್ನು ಬಿಟ್ಟರೆ ದೋಷ. ದೈವ ಅನುಕೂಲಿಸದೆ ಹೋದರೆ ದುಃಖ. ಫಲದ ರೀತಿ ಹೀಗೇ ಎಂದು ಹೇಳಲಾಗದು.

ವಿವರಣೆ: ಬೆಳೆ ಬರುವುದು ಸುಲಭದ ಕಾರ್ಯವಲ್ಲ. ಮೊದಲು ಉತ್ತಮವಾದ ಬೀಜಗಳನ್ನು ಆರಿಸಬೇಕು. ನೆಲ ಹದವಾಗಬೇಕು. ಅದಕ್ಕೆ ತಕ್ಕಷ್ಟು ಗೊಬ್ಬರ ಹಾಕಿರಬೇಕು. ನೆಲದಲ್ಲಿ ಬೀಜಗಳನ್ನು ಬಿತ್ತುವುದು ಪುರುಷ ಪ್ರಯತ್ನ. ಅದರಲ್ಲಿ ಸ್ವಲ್ಪವೂ ಕೊರತೆಯಾಗಬಾರದು. ಮುಂದೆ ಸಕಾಲದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಮಳೆ ಬರುವುದು ದೈವಕೃಪೆ. ಕೆಲವೊಮ್ಮೆ ಮಳೆ ಸರಿಯಾಗಿ ಆಗದೆ, ಹಾಕಿದ ಬೀಜ ಕೂಡ ಸುಟ್ಟು ಹೋಗುತ್ತದೆ. ಮತ್ತೆ ಕೆಲವು ಬಾರಿ ವಿಪರೀತ ಮಳೆಯಾಗಿ ಬೀಜ ನೆಲದಲ್ಲೇ ಕೊಳೆತು ಹೋಗುತ್ತದೆ. ಅದು ನಮ್ಮ ಕೈಯಲ್ಲಿಲ್ಲ. ಹೀಗೆ ಮನುಷ್ಯ ಪ್ರಯತ್ನ ಮತ್ತು ದೈವಕೃಪೆ ಒಂದಕ್ಕೊಂದು ಅನುಕೂಲವಾಗಿ ಬಂದರೆ ಹುಲುಸಾದ ಬೆಳೆ ಬರುತ್ತದೆ, ರೈತನ ಹೊಟ್ಟೆ ತುಂಬುತ್ತದೆ.

ನಮ್ಮ ಬದುಕಿನಲ್ಲೂ ಹಾಗೆಯೇ ದೈವ ಮತ್ತು ಪ್ರಯತ್ನಗಳು ಅನ್ಯೋನ್ಯವಾಗಿ ಬಂದರೆ ಜೀವನವೊಂದು ಯಶಸ್ಸಿನ ಗಾಥೆಯಾಗುತ್ತದೆ. ಯಾವುದಾದರೂ ಒಂದರ ಕೊರತೆಯಾದರೂ ಸಫಲತೆ ಮರೀಚಿಕೆಯೇ. ಒಂದು ಮನೆಯಲ್ಲಿ ಯಜಮಾನರಿಗೋ ಪುಟ್ಟ ಮಗುವಿಗೋ ಪ್ರಬಲವಾದ ಕಾಯಿಲೆಯಾಗಿದೆ ಎಂದಿಟ್ಟುಕೊಳ್ಳಿ. ಮನೆಯಾಕೆಗೆ ದೈವದ ಮೇಲೆ ಅತೀವ ನಂಬಿಕೆ. ಅದಕ್ಕೆ ಸರಿಯಾಗಿ ಯಾರೋ ಒಬ್ಬರು ಇಂಥ ತೀರ್ಥಕ್ಷೇತ್ರಕ್ಕೆ ಹೋಗಿ, ಹರಕೆ ಹೊತ್ತರೆ ಗುಣವಾಗುತ್ತದೆ ಎಂದು ಹೇಳುತ್ತಾರೆ. ಆಗ ಆಕೆ ರೋಗಿಯ ಬಳಿ ಇರದೆ ಪೂಜೆ, ಹರಕೆ ಮಾಡಿದರೆ ಅದು ಸರಿಯಾದ ಕರ್ತವ್ಯವಾಗುತ್ತದೆಯೇ?. ‘ಅವರು ಹೇಳಿದರೆಂದು ಹೀಗೆ ಮಾಡಿದೆ’, ‘ಭಗವಂತನ ಮೇಲೆ ಭಾರ ಹಾಕಿ ಹೋಗಿಬಿಟ್ಟೆ’ ಎಂದು ವಾದಿಸಿ ತನ್ನ ಸ್ವಂತದ ಉತ್ತರದಾಯಿತ್ವವನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ.

ದೇವರು ಫಲ ಕೊಟ್ಟಾನು ಆದರೆ ಪ್ರಯತ್ನ ಮಾಡುವವನು ಮನುಷ್ಯ. ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಎಲ್ಲವನ್ನೂ ದೈವದ ಮೇಲೆ ಹಾಕುವುದು ಸಾಧುವಲ್ಲ. ಅಂತೆಯೇ ತಾನು ಪರಿಪೂರ್ಣ, ದೈವದ ಸಹಾಯ ನನಗೇಕೆ ಎಂದು ಅಹಂಕಾರದಿಂದ ಮೆರೆಯುವುದೂ ಸರಿಯಾದ ದಾರಿಯಲ್ಲ. ಅದಕ್ಕೇ ಭಗವದ್ಗೀತೆಯಲ್ಲಿ ಕೃಷ್ಣ, ‘ಎಲ್ಲ ಧರ್ಮಗಳನ್ನು ತೊರೆದುಬಿಟ್ಟು ನನ್ನಲ್ಲೇ ಶರಣಾಗಿ ಬಿಡು’ ಎಂದು ಹೇಳುತ್ತಲೇ ‘ತಸ್ಮಾತ್ ಯುದ್ಧಸ್ವ’ ಯುದ್ಧಕ್ಕೆ ಸಿದ್ಧನಾಗು ಎನ್ನುತ್ತಾನೆ. ಯುದ್ಧ ಮಾಡುವುದು ಪ್ರಯತ್ನ, ಅದಕ್ಕೆ ದೈವ ಸಮ್ಮತಿ ನೀಡಿದರೆ ಯಶ. ಪ್ರಯತ್ನ ಮಾಡದಿದ್ದರೆ ದೋಷ. ದೈವ ಬೆಂಬಲವಾಗಿ ನಿಲ್ಲದಿದ್ದರೆ ತಾಪ. ಅದನ್ನೇ ಕಗ್ಗ ‘ಫಲದ ಬಗೆ ತಿಳಿದಿಲ್ಲ’ ಎನ್ನುತ್ತದೆ. ಹಾಗೆಂದರೆ ಯತ್ನ ಮತ್ತು ದೈವಗಳ ಅನುಕೂಲವೇ ಫಲಕ್ಕೆ ಕಾರಣ. ಎರಡೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT