ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಮರಣದ ನಂತರ ಏನು?

Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮರಣದಿಂ ಮುಂದೇನು? ಪ್ರೇತವೋ? ಭೂತವೋ? |
ಪರಲೋಕವೋ? ಪುನರ್ಜನ್ಮವೋ? ಅದೇನೋ! ||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |
ಧರೆಯ ಬಾಳ್ಗದರಿನೇಂ? – ಮಂಕುತಿಮ್ಮ || 846 ||

ಪದ-ಅರ್ಥ: ಮರಣದಿಂ=ಮರಣದಿಂದ, ಬಾಳ್ಗದರಿನೇಂ=ಬಾಳ್ಗೆ(ಬಾಳಿಗೆ)+ಅದರಿನ್(ಅದರಿಂದ)+ಏಂ(ಏನು).
ವಾಚ್ಯಾರ್ಥ: ಮರಣದ ನಂತರ ಮುಂದೇನು?
ಪ್ರೇತವಾಗುತ್ತೇವೋ, ಭೂತವಾಗುತ್ತೇವೋ? ನಮಗೆಪರಲೋಕ ಸಿಕ್ಕೀತೇ? ಪುನರ್ಜನ್ಮವಿದೆಯೆ? ಅದೇನಿದೆಯೋ?ಅಲ್ಲಿಗೆ ಹೋಗಿ ತಿರುಗಿ ಬಂದವರಿಲ್ಲ, ಅಲ್ಲಿಯ ವರದಿ ಒಪ್ಪಿಸಿದವರಿಲ್ಲ. ಈಜಗತ್ತಿನಲ್ಲಿ ಇರುವ ಬಾಳಿಗೆ ಅವೆಲ್ಲದರಿಂದ ಏನು ಬಾಧಕ?
ವಿವರಣೆ: ಭಗವದ್ಗೀತೆ ಸ್ಪಷ್ಟವಾಗಿ ಹೇಳುತ್ತದೆ,‘ಜಾತಸ್ಯ ಹಿ ಧ್ರುವೋ ಮೃತ್ಯು: ಧ್ರುವಂ ಜನ್ಮ ಮೃತಸ್ಯ ಚ”|| “ಹುಟ್ಟಿದವನಿಗೆ ಸಾವು ಖಚಿತ, ಸತ್ತವನಿಗೆ ಮರುಹುಟ್ಟೂ ಖಚಿತ” ಹೀಗೆಂದರೆ, ಪ್ರತಿಯೊಂದು ಸಾವುಮತ್ತೊಂದು ಬದುಕಿನ ಬಾಗಿಲು. ಹಾಗಾದರೆ ಪುನರ್ಜನ್ಮ ಎಲ್ಲರಿಗೂನಿಶ್ಚಿತವೇ? ಆದರೆ ಕೆಲವರು ಜನನ-ಮರಣಗಳ ಚಕ್ರದಿಂದ ಪಾರಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂದೂ ಉಪನಿಷತ್ತು ಹೇಳುತ್ತದೆ. ಗರುಡಪುರಾಣವಂತೂ ದೇಹದಿಂದ ಬಿಡುಗಡೆ ಹೊಂದಿದ ಆತ್ಮ ಹೇಗೆ, ಎಲ್ಲೆಲ್ಲಿ ಹೋಗುತ್ತದೆ, ಏನೇನನ್ನು ಅನುಭವಿಸುತ್ತದೆ ಎನ್ನುವುದನ್ನು ವಿವರವಾಗಿ ವರ್ಣಿಸುತ್ತದೆ. ಅತೃಪ್ತ ಆತ್ಮಗಳು ಪ್ರೇತಗಳಾಗಿ ಅಲೆಯುತ್ತಾ ಭೂಮಿಗೂ ಬರದೆ, ಪರಲೋಕವನ್ನು ಸೇರದೆ ನರಳುತ್ತವಂತೆ. ಇನ್ನೂ ಕೆಲವು ಭೂತಗಳಾಗುವವಂತೆ ಪ್ರೇತ, ಭೂತಗಳ ವ್ಯತ್ಯಾಸಗಳನ್ನು ಕೆಲವು ಗ್ರಂಥಗಳು ವಿವರಿಸುತ್ತವೆ.

ಕಗ್ಗ ಅದರ ಬಗ್ಗೆ ಪ್ರಶ್ನಿಸುತ್ತದೆ. ಮರಣದ ನಂತರ ನಾವು ಏನಾಗುತ್ತೇವೆ? ಪ್ರೇತವೋ, ಭೂತವೋ? ನಮ್ಮ ಪರಲೋಕ ದೊರಕಿ ಶಾಶ್ವತವಾಗಿ ಅಲ್ಲಿಯೇ ಇದ್ದುಬಿಡುತ್ತೇವೆಯೋ? ಅಥವಾ ಮರಳಿ ಮತ್ತೆ ಇಲ್ಲಿಗೇ ಬಂದು ಪುನರ್ಜನ್ಮ ಪಡೆಯುತ್ತೇವೆಯೋ? ಅದೇನಾಗುತ್ತೇವೋ? ಇವೆಲ್ಲ ತಡಕಾಟಗಳು, ತರ್ಕಗಳು. ಯಾಕೆಂದರೆ ಒಮ್ಮೆ ಸತ್ತು ಹೋಗಿ ಮರಳಿ ಬಂದು ಆತ್ಮಕ್ಕೆ ಆದದ್ದನ್ನು ಯಾರೂ ಹೇಳಿಲ್ಲ. ಅದನ್ನೇ ಮಾರ್ಮಿಕವಾಗಿ ಕಗ್ಗ, “ತಿರುಗಿ ಬಂದವರಿಲ್ಲ, ವರದಿತಂದವರಿಲ್ಲ” ಎನ್ನುತ್ತದೆ. ಅಮರತ್ವದ ಆಸೆ ಮತ್ತು ಸಾವಿನ ಭಯ ಮನುಷ್ಯನಲ್ಲಿ ಏನೇನೋ ಚಿಂತನೆಗಳನ್ನುಹುಟ್ಟುಹಾಕಿ, ಕಲ್ಪನೆಯ ಹಂದರದ ಮೇಲೆ ಕೆಲವು ಚಿತ್ರಣಗಳನ್ನು ನೀಡಿದೆ. ಅವೆಲ್ಲ ಸತ್ಯವೋ, ಅಸತ್ಯವೋ ಎಂಬ ಜಿಜ್ಞಾಸೆ ಏಕೆ? ಸಾವು ಒಂದು ಸತ್ಯ. ಅದು ಎಂದಿಗೂ ತಪ್ಪದ ಮುಖಾಮುಖಿ. ಯಾವುದನ್ನು ತಪ್ಪಿಸಲು ಸಾಧ್ಯವಿಲ್ಲವೋ ಅದನ್ನು ಚಿಂತಿಸಿ ಫಲವೇನು? ಬದುಕಿಗೆ ಸಾವಿನಿಂದೇನು? ಕಗ್ಗದ ಕೊನೆಯ ಸಾಲು ಅದ್ಭುತ. ಧರೆಯ ಬಾಳಿಗೆ ಸಾವಿನಿಂದೇನು? ಸಾವು ಬಂದಾಗ ಬರಲಿ, ಅದರ ಚಿಂತೆಯಲ್ಲಿ ಬದುಕಿನ ಸೊಗಸು ಹದಗೆಡಬಾರದು. ಬದುಕೊಂಡು ಸಂಭ್ರಮ. ಅದರ ಮೇಲೆ ಸಾವಿನ ಕರೆನೆರಳು ಬೀಳದಿರಲಿ. ಬದುಕು ತುಂಬಿದ ಸಂಭ್ರಮವಾದರೆ ಮಾತ್ರ ಸಾವು ಕೂಡ ಅತ್ಮೀಯ ಗೆಳೆಯನ ಹಾಗೆ ಬರುತ್ತದೆ. ಸಾವಿನ ಭಯದಿಂದ, ಸಾವಿನ ನಂತರ ದೊರೆಯಬಹುದಾದ ಕಲ್ಪನೆಯಸ್ಥಿತಿಗಳ ಅಳುಕಿನಿಂದ ಧರೆಯ ಬಾಳು ಸೊರಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT