ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಭಗವಂತನ ವ್ಯಾಖ್ಯಾನ

Last Updated 27 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸ್ವರರಾಗ ಗೀತಿಗಳು ನಾಟ್ಯಾಭಿನೀತಿಗಳು |
ಕರೆದೇಳಿಸುವುವು ಮನಸಿನಲಿ ನಿದ್ರಿಸುವಾ ||
ಪರಿಪರಿಯ ಭಾವಗಳ ಗೂಢಸ್ವಭಾವಗಳ |
ಪರಮೇಷ್ಠಿ ಟೀಕು ಕಲೆ – ಮಂಕುತಿಮ್ಮ || 465 ||

ಪದ-ಆರ್ಥ: ಗೀತಿ= ಗೀತೆ, ನಾಟ್ಯಾಭಿನೀತಿ= ನಾಟ್ಯ+ ಅಭಿನೀತಿ (ಪ್ರದರ್ಶನ), ಕರೆದೇಳಿಸುವುವು= ಕರೆದು+ ಏಳಿಸುವುವು (ಎಚ್ಚರಿಸುವುವು), ಟೀಕು= ಟಿಪ್ಪಣಿ, ವ್ಯಾಖ್ಯಾನ.

ವಾಚ್ಯಾರ್ಥ: ಸ್ವರಗಳು, ರಾಗಗಳು, ಗೀತೆಗಳು, ನಾಟ್ಯಪ್ರದರ್ಶನಗಳು, ನಮ್ಮ ಮನಸ್ಸಿನಲ್ಲಿ ನಿದ್ರಿಸುತ್ತಿರುವ ವಿವಿಧ ಭಾವಗಳನ್ನು, ಗೂಢಸ್ವಭಾವಗಳನ್ನು
ಬಡಿದೇಳಿಸುತ್ತವೆ. ಈ ಕಲೆಗಳು ಸೃಷ್ಟಿಕರ್ತನ ಕಾರ್ಯದ ಟಿಪ್ಪಣಿಗಳು, ವ್ಯಾಖ್ಯಾನಗಳು.

ವಿವರಣೆ: ಪ್ರತಿಯೊಬ್ಬ ವ್ಯಕ್ತಿ, ತನ್ನ ಸುತ್ತಮುತ್ತಲೂ ನಡೆಯುವ ಘಟನೆಗಳು, ಜನರು ಅವುಗಳಿಗೆ ಪ್ರತಿಕ್ರಿಯಿಸುವ ವಿಧಾನಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಈ ಪ್ರಕ್ರಿಯೆಯಲ್ಲಿ ಕಲೆ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಪ್ರಸಿದ್ಧ ಫ್ರೆಂಚ್ ಬರಹಗಾರ ಕ್ಲೌಡ್ ಹೆಲ್ಪೆಟಿಯಸ್ ಹೇಳಿದರು, ‘ಕಲೆಯ ಕಾರ್ಯ ಹೃದಯಗಳನ್ನು ಪ್ರಚೋದಿಸುವುದು’. ನಾವೊಂದು ಸುಂದರವಾದ ಚಿತ್ರವನ್ನು ನೋಡಿದಾಗ, ಅತ್ಯಂತ ಮಧುರವಾದ ಸಂಗೀತವನ್ನು ಕೇಳಿದಾಗ, ಅತ್ಯದ್ಭುತವಾದ ನೃತ್ಯವನ್ನೋ, ನಾಟಕವನ್ನೋ ರಂಗದ ಮೇಲೆ ನೋಡಿದಾಗ ಏನಾಗುತ್ತದೆ? ನಮಗರಿಯದಂತೆ ಮುಖದ ಮೇಲೆ ನಗು ಮೂಡುತ್ತದೆ, ದುಃಖದ ಸನ್ನಿವೇಶಗಳನ್ನು ಕಂಡಾಗ ಕಣ್ಣಲ್ಲಿ ನೀರು ಸುರಿಯುತ್ತದೆ, ಮಧುರಸಂಗೀತಕ್ಕೆ ತಲೆ ತೊನೆಯುತ್ತದೆ.

ಕಲೆಯ ಕಾರ್ಯ ದೇಹದ ಹೊರಗೆ ಆದರೆ ಅದರ ಪರಿಣಾಮವಾಗುವುದು ಆಂತರ್ಯದಲ್ಲಿ. ಇದೆಷ್ಟು ಅದ್ಭುತವಲ್ಲವೇ? ಈ ಕಲೆ ಏನು ಮಾಡುತ್ತದೆ? ಅದು ಬದುಕಿನ ಕಷ್ಟಗಳಿಂದ ನಮ್ಮನ್ನು ಮೇಲೆತ್ತಿ ಬದುಕಿಗೊಂದು ಅರ್ಥವನ್ನು, ಘನತೆಯನ್ನು ಕೊಡುತ್ತದೆ. ಅವು ಮನಸ್ಸಿನಲ್ಲಿ ಅವಿತುಕೊಂಡಿರುವ ಉನ್ನತ ಭಾವನೆಗಳನ್ನು ಬಡಿದೆಬ್ಬಿಸುವುದರೊಂದಿಗೆ, ಕೀಳು ಭಾವನೆಗಳನ್ನು, ನಿರಾಸೆಗಳನ್ನು, ವೈಫಲ್ಯಗಳನ್ನು ಮರೆಸಿ ಬದುಕಿಗೊಂದು ನೆಲೆ ಕಲ್ಪಿಸುತ್ತವೆ. ಜಗತ್ಪ್ರಸಿದ್ಧ ಕಲಾವಿದರಾದ ವಿನ್ಸೆಂಟ್ ವಾನ್ ಗೊಗ್ ಮತ್ತು ಲಿಯೋನಾರ್ಡೊ ಡಾ ವಿನ್ಸಿ ಅವರಿಬ್ಬರೂ ಬಡತನದ ಮೂಸೆಯಲ್ಲಿ ಬೆಂದು ಬಂದವರು, ದಿಕ್ಕುಗಾಣದೆ ಅಲೆದವರು. ಗಾಗ್‍ನಂತೂ ಆತ್ಮಹತ್ಯೆ ಮಾಡಿಕೊಳ್ಳಲು ಎದೆಗೆ ಗುಂಡು ಹೊಡೆದುಕೊಂಡಿದ್ದ. ಆದರೆ ಅವರಲ್ಲಿದ್ದ ಕಲೆ ಅವರನ್ನು ಈ ಕಷ್ಟದ ಕೊರಗಿನಿಂದ ಕೆಲಕ್ಷಣಗಳಾದರೂ ಹೊರತಂದು ಅವರನ್ನು ಪ್ರಪಂಚಕ್ಕೆ ಪರಿಚಯಿಸಿತು. ಅತ್ಯಂತ ವಿಭಿನ್ನ ಪಾತ್ರಗಳಲ್ಲಿ, ಇಡೀ ಪಾತ್ರದ ಚೈತನ್ಯವನ್ನೇ ತನ್ನ ಕಂಗಳಲ್ಲಿ ಹೊಮ್ಮಿಸುವ ಅಪರೂಪದ ರಂಗಕಲಾವಿದೆ ಶ್ರೀಮತಿ ಉಮಾಶ್ರೀ. ಅವರೇ ಒಂದು ಸಂದರ್ಶನದಲ್ಲಿ ತಮ್ಮ ಬಡತನದ ಬಗ್ಗೆ ಹೇಳುತ್ತ, ‘ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆಂದು’ ಎಂದಿದ್ದರು. ಆದರೆ ಅವರಲ್ಲಿ ರಕ್ತಗತವಾದ ಕಲೆ ಬಡತನವನ್ನು ಮೆಟ್ಟಿ ನಿಂತಿತು, ಅವರನ್ನು ಎತ್ತರಕ್ಕೆ ಕರೆದೊಯ್ದಿತು. ಹೀಗೆ ವಿಭಿನ್ನ ಕಲೆಯ ಪ್ರಕಾರಗಳು ನಮ್ಮ ಮನಸ್ಸಿನಲ್ಲಿ ಅಡಗಿ ನಿದ್ರಿಸುವ ಭಾವಗಳನ್ನು ಬಡಿದೆಬ್ಬಿಸುತ್ತವೆ. ಸೃಷ್ಟಿಯಲ್ಲಿ ಕಾಣುವ, ಕೇಳುವ, ಅನುಭವಿಸುವ ಕಲೆ ಕೂಡ ಸೃಷ್ಟಿಕರ್ತನ ಕಾರ್ಯವೇ. ಅದಕ್ಕೇ ನಮ್ಮ ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಕಲಾಪ್ರದರ್ಶನಕ್ಕೆ ಮೊದಲು ದೇವಪೂಜೆ, ರಂಗಪೂಜೆ ಮಾಡುವುದು ವಾಡಿಕೆ. ಅದನ್ನು ಈ ಕಗ್ಗ ಧ್ವನಿಪೂರ್ಣವಾಗಿ ಹೇಳುತ್ತದೆ. ಈ ಕಲೆಯ ಪ್ರಕಾರಗಳೆಲ್ಲ ಸೃಷ್ಟಿಕರ್ತನ ಟಿಪ್ಪಣಿಗಳು, ಪ್ರತಿಯೊಂದು ಕಲೆ ಆ ಭಗವಂತನ ಶಕ್ತಿಯ ವ್ಯಾಖ್ಯಾನ.v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT