ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಭರತಾದರ್ಶ

Last Updated 8 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಧರೆಯೇ ಕೋಸಲ, ಪರಬ್ರಹ್ಮನೇ ರಘುವರನು |

ಭರತನವೊಲನುಪಾಲನಕ್ರಿಯರು ನಾವು ||
ಅರಸನೂಳಿಗ ನಮ್ಮ ಸಂಸಾರದಾಡಳಿತ |
ಹರುಷದಿಂ ಸೇವಿಸೆಲೊ – ಮಂಕುತಿಮ್ಮ || 711 ||

ಪದ-ಅರ್ಥ: ಭರತನವೊಲನುಪಾಲನಕ್ರಿಯರು=ಭರತನವೊಲ್ (ಭರತನಂತೆ)+ಅನುಪಾಲನಕ್ರಿಯರು(ಆಜ್ಞಾಪಾಲಕರು), ಅರಸನೂಳಿಗ=ಅರಸನ+ಊಳಿಗ(ಸೇವೆ), ಸಂಸಾರದಾಡಳಿತ=ಸಂಸಾರದ+ಆಡಳಿತ.

ವಾಚ್ಯಾರ್ಥ: ಜಗತ್ತೇ ಕೋಸಲ ದೇಶ. ರಾಮಚಂದ್ರನೇ ಪರಬ್ರಹ್ಮ. ಭರತನಂತೆ ಭಗವಂತನ ಆಜ್ಞೆಯನ್ನು ಪಾಲಿಸುವ ಸೇವಕರು ನಾವು. ಅರಸನ ಸೇವೆಯೇ ನಮ್ಮ ಸಂಸಾರದ ವ್ಯವಹಾರ. ಅದನ್ನು ಹರ್ಷದಿಂದ ಅನುಭವಿಸಬೇಕು.

ವಿವರಣೆ: ಭರತನ ಬಗ್ಗೆ ಐದಾರು ಮುಕ್ತಕಗಳನ್ನು ರಚಿಸಿದ ಡಿ.ವಿ.ಜಿ, ಈ ಕಗ್ಗದಲ್ಲಿ ಅವನ ಉದಾತ್ತ ಜೀವನವನ್ನು ನಮ್ಮ ಬದುಕುಗಳಿಗೆ ಸಮನ್ವಯಿಸುತ್ತಾರೆ. ಶ್ರೀರಾಮ ಕೋಸಲದೇಶದ ರಾಜ. ತಮ್ಮ ಭರತ, ಅವನ ಪರಮ ಬಂಧು

ಮಾತ್ರವಲ್ಲ ಪರಮದಾಸ. ಅಣ್ಣನಾದ ಶ್ರೀರಾಮನ
ಮಾತುಗಳನ್ನು ಕೊಂಚವೂ ತೆಗೆದುಹಾಕದೆ
ಸೇವೆಮಾಡಿದವನು ಭರತ. ನಮ್ಮ ಬದುಕೂ ಭರತನ
ಬದುಕಂತೆ ಆಗಬೇಕು. ನಮಗೆ ಇಡೀ ಪ್ರಪಂಚವೇ ಕೋಸಲ ದೇಶ. ಅದಕ್ಕೆ ರಾಜ ರಾಮನಿದ್ದಂತೆ, ಜಗತ್ತಿಗೆ ಒಡೆಯ ಭಗವಂತ, ಪರಬ್ರಹ್ಮ. ನಾವೂ ಭರತನಂತೆ ಭಗವಂತನ ಆಜ್ಞೆಗಳ ಅನುಪಾಲನಕ್ರಿಯರು. ನಮ್ಮ ಸಂಸಾರದ ನಡವಳಿಕೆಯೆಂದರೆ ಅದು ಕೇವಲ ಪರಬ್ರಹ್ಮದ ಸೇವೆ. ಸಂಸಾರದ ಪ್ರತಿಯೊಂದು ಕೆಲಸವೂ ಭಗವಂತನ ಸೇವೆಯೆಂದೇ ನಡೆಯಬೇಕು. ನಿಜವಾದ ಭಕ್ತ ಯಾವ ಲೋಕೋಪಕಾರದ ಕೆಲಸ ಮಾಡಿದರೂ ಶಿವತತ್ವವನ್ನೇ ಮೆರೆಯುತ್ತಾನೆಂದು ಬಸವೋತ್ತರ ಯುಗದ ಮಹತ್ವದ ವಚನಕಾರ ಷಣ್ಮುಖಸ್ವಾಮಿ ಹೇಳುತ್ತಾನೆ.

ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು

ಆ ಜಗದ ಸ್ವರೂಪನೆ? ಅಲ್ಲಲ್ಲ.
ಅದೇನು ಕಾರಣವೆಂದೊಡೆ:
ಕೋಗಿಲೆಯ ತತ್ತಿಯನೊಡೆದು
ಕಾಗೆ ಮರಿಯ ಮಾಡಿ ಸಲಹಿದಡೇನು
ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ
ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ?
ಲೋಕದ ಮಧ್ಯದಲ್ಲಿ ಅನಾದಿ ಶರಣನು
ಲೋಕೋಪಕಾರಕ್ಕಾಗಿ ಜನಿಸಿದಡೇನು
ತನ್ನ ಮುನ್ನಿನ ಶಿವತತ್ವವ ಬೆರೆವನಲ್ಲದೆ
ಮರಳಿ ಲೋಕವ ಬೆರೆಯನು ನೋಡಾ
ನಿಮ್ಮನರಿದ ಶಿವಜ್ಞಾನಿ ಶರಣನು ಅಖಂಡೇಶ್ವರಾ.

ರಾಮಾಣಯದ ಕೊನೆಯಲ್ಲಿ ಲಕ್ಷ್ಮಣ ಇಂದ್ರಸಭೆಯನ್ನು ಪ್ರವೇಶಿಸಿದಾಗ ಇಂದ್ರನ ಪಕ್ಕದಲ್ಲಿ ಕೈಕೇಯಿ ಕುಳಿತದ್ದನ್ನು ಕಾಣುತ್ತಾನೆ. ಅವನಿಗೆ ಕೋಪ. ರಾಮಾಯಣದ ಎಲ್ಲ ಅನಾಹುತಕ್ಕೆ ಕಾರಣವಾದವಳಿಗೆ ಏಕೆ ಇಂಥ ವಿಶೇಷ ಮರ್ಯಾದೆ ಎಂದು ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ, “ಭರತನ ತಾಯಿಗೆ ಇದಕ್ಕಿಂತ ಕಡಿಮೆಯ ಸ್ಥಾನ ದೊರಕೀತೇ?” ಆ ಮಾತು ಭರತನ ಪಾತ್ರವನ್ನು ಥಟ್ಟನೇ ಆಕಾಶಕ್ಕೇರಿಸಿಬಿಡುತ್ತದೆ. ಅಣ್ಣನ ಸೇವೆಗೈಯ್ಯತ್ತಲೇ ಮಹಾತ್ಮನಾದವನು ಭರತ. ಅವನ ಬದುಕು ನಮಗೆಆದರ್ಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT