ಶುಕ್ರವಾರ, ಜನವರಿ 27, 2023
27 °C

ಗುರುರಾಜ ಕರಜಗಿ ಅಂಕಣ - ಬೆರಗಿನ ಬೆಳಕು| ಮುಕ್ತಿಯ ಮಾರ್ಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |

ಹಿತವೆಂತು ಜಗಕೆಂದು ಕೇಳುವವರಾರು ? ||
ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |
ಪಥ ಮುಕ್ತಿಗಾಗಳೇ – ಮಂಕುತಿಮ್ಮ || 768 ||

ಪದ-ಅರ್ಥ: ಎನಗೆನುತ=ಎನಗೆ+ಎನುತ, ಕೇಳ್ವವರೆ=ಕೇಳುವವರೆ, ಹಿತವೆಂತು=ಹಿತವು+ಎಂತು,ಪಥ=ದಾರಿ, ಮುಕ್ತಿಗಾಗಳೇ=ಮುಕ್ತಿಗೆ+ಆಗಳೇ.

ವಾಚ್ಯಾರ್ಥ: ಎಲ್ಲರೂ ನನಗೆ ಗತಿಯೇನು ಎಂದು ಕೇಳುವವರೇ. ಜಗತ್ತಿಗೆ ಯಾವುದು ಹಿತ ಎಂದು ಕೇಳುವವರಾರು? ತಮ್ಮ ಬುದ್ಧಿಯನ್ನು ಪ್ರಪಂಚದಲ್ಲಿ ಬಳಸಿ, ಜೀವನವನ್ನು ವಿಸ್ತರಿಸಿದರೆ ಅದೇ ಮುಕ್ತಿಗೆ ದಾರಿ.

ವಿವರಣೆ: ‘ನಾನು’ ಕೇಂದ್ರಿತವಾದ ಬದುಕಿಗೆ ಬರುವ ಪ್ರಶ್ನೆಗಳೆಂದರೆ, ಇದರಿಂದ ನನಗೇನು ಪ್ರಯೋಜನ?
ನನಗೆ ಇದರಿಂದ ತೊಂದರೆಯಾದೀತೇ? ನನ್ನ ಗತಿಯೇನು? ಇಂಥವುಗಳೇ. ಎಲ್ಲರೂ ಹಾಗೆಯೇ ನಾನು, ನನ್ನದು ಎಂದು ಕೇಳುತ್ತ ಹೋದರೆ ಜಗತ್ತಿಗೆ ಯಾವುದು ಒಳ್ಳೆಯದು ಎಂದು ಕೇಳುವವರು ಯಾರು? ನನ್ನ ಮನೆಯ ಕಸವನ್ನು ರಸ್ತೆಗೆ ಹಾಕಿದರಾಯಿತು. ನನ್ನ ಮನೆ ಸ್ವಚ್ಛವಾಯಿತಲ್ಲ, ರಸ್ತೆ ಕೊಳಕಾದರೆ ಆಗಲಿ, ಅದರಿಂದ ನನಗೇನು? ಹೀಗೆ ಎಲ್ಲರೂ ಮಾಡಿದರೆ ಜಗತ್ತು ಕಸದ ಗುಂಡಿಯಾಗುತ್ತದೆ. ‘ನಾನು’ ಎನ್ನುವುದು ವಿಸ್ತರಿಸುತ್ತ ಹೋಗಿ ‘ನಾವು’ ಆದಾಗ ‘ನನ್ನತನ’ ಕರಗುತ್ತದೆ. ಇದು ಕಗ್ಗದ ಆಶಯ. ಸದಾ ಕೊರಗುವ ಶಿಷ್ಯ. ಗುರುಗಳು ಅದನ್ನು ಕಂಡರು. ಅವನನ್ನು ಕರೆದರು. ಅವನಿಂದ ಲೋಟ ನೀರಿನಲ್ಲಿ ಒಂದು ಮುಷ್ಠಿ ಉಪ್ಪು ಹಾಕಿಸಿದರು. ಅದನ್ನು ಕುಡಿ ಎಂದರು. ಒಂದು ಹನಿ ರುಚಿ ನೋಡಿದ ಶಿಷ್ಯ ಮುಖ ಮುರಿದ. “ಗುರುಗಳೇ ನೀರು ತುಂಬ ಉಪ್ಪಾಗಿದೆ. ಕುಡಿಯುವುದು ಅಸಾಧ್ಯ” ಎಂದ. “ಹೌದೇ? ಹಾಗಾದರೆ ನನ್ನೊಡನೆ ಬಾ. ಆದರೆ ಇನ್ನೊಂದು ಮುಷ್ಠಿ ಉಪ್ಪನ್ನು ಕೈಯಲ್ಲಿ ಹಿಡಿದು ತಾ” ಎಂದರು ಗುರುಗಳು. ಅವರು ಹೇಳಿದಂತೆ ಉಪ್ಪನ್ನು ಹಿಡಿದು ಗುರುಗಳನ್ನು ಹಿಂಬಾಲಿಸಿ ನಡೆದ. ಸ್ವಲ್ಪ ದೂರ ನಡೆದ ಮೇಲೆ ಊರ ಕೆರೆ ಬಂದಿತು. ನೀರು ತುಂಬ ತಿಳಿಯಾಗಿತ್ತು. ಗುರುಗಳು ಶಿಷ್ಯನಿಗೆ ಹೇಳಿದರು, “ಮಗೂ, ನಿನ್ನ ಮುಷ್ಠಿಯಲ್ಲಿರುವ ಉಪ್ಪನ್ನು ಕೆರೆಯ ನೀರಿನಲ್ಲಿ ಹಾಕಿ ಕೊಂಚ ಕಲಕು”. ಅಂತೆಯೇ ಮಾಡಿದ. ಮತ್ತೆ ಗುರುಗಳು ಹೇಳಿದರು, “ಈಗ ಒಂದು ಬೊಗಸೆ ಕೆರೆಯ ನೀರನ್ನು ತೆಗೆದುಕೊಂಡು ಕುಡಿ”. ಆತ ಕುಡಿದ. ಗುರುಗಳು ಕೇಳಿದರು, “ನೀರು ತುಂಬ ಉಪ್ಪಾಗಿದೆಯೇ?” “ಇಲ್ಲ ಗುರುಗಳೇ ನೀರು ಸಿಹಿಯಾಗಿದೆ” ಎಂದನಾತ. “ಅಲ್ಪಪ್ಪ, ನೀನು ಒಂದು ಮುಷ್ಠಿ ಉಪ್ಪನ್ನು ಹಾಕಿದ್ದೆಯಲ್ಲ, ನೀರು ಉಪ್ಪಾಗಿರಬೇಕಲ್ಲವೇ?” ಹುಬ್ಬೇರಿಸಿ ಕೇಳಿದರು ಗುರುಗಳು. “ಉಪ್ಪು ಹಾಕಿದ್ದು ಹೌದು. ಆದರೆ ನೀರು ಸಿಹಿಯಾಗಿದೆ” ಎಂದ ಶಿಷ್ಯ ಗುರುಗಳು ಹೇಳಿದರು , “ಉಪ್ಪಿನ ತೀಕ್ಷ್ಣತೆ ಇರುವುದು ಪಾತ್ರೆಯ ಗಾತ್ರದಿಂದ. ಪಾತ್ರೆ ಚಿಕ್ಕದಾದಷ್ಟು ಉಪ್ಪಿನ ತೀವ್ರತೆ ಹೆಚ್ಚು. ಪಾತ್ರೆ ವಿಶಾಲವಾದಂತೆ ಉಪ್ಪು ತನ್ನ ಉಗ್ರತೆಯನ್ನು ಕಳೆದುಕೊಳ್ಳುತ್ತದೆ. ನೀನು ಬರೀ ನಾನು ಎಂದು ಚಿಂತಿಸಿದರೆ ನೋವಿನ, ಕಷ್ಟದ ತೀವ್ರತೆ ಹೆಚ್ಚು, ಮನಸ್ಸು ವಿಶಾಲವಾಗುತ್ತ ವಿಶ್ವವೇ ಆದರೆ ನೋವೇ ಇಲ್ಲ. ‘ನಾನು’ಎನ್ನುವುದು ನೋವನ್ನು ಕೊಡುತ್ತದೆ. ‘ನಾವೆಲ್ಲ’ ಎನ್ನುವುದು ಸಂತೋಷ ನೀಡುತ್ತದೆ, ನೋವೇ ಇಲ್ಲ. ಕಗ್ಗ ಅದನ್ನೇ ಮುಕ್ತಿಯ ಮಾರ್ಗ ಎನ್ನುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು