ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಕಾರ್ಯದಕ್ಷತೆಯ ಮಾದರಿ

Last Updated 6 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ದೊರೆತನದ ಜಟಿಲಗಳ, ಕುಟಿಲಗಳ, ಕಠಿಣಗಳ |‌

ಭರತನುಳಿಸಿದನೆ ರಾಮನ ತೀರ್ಪಿಗೆಂದು ? ||
ಅರಿವಿಗಿಹ ಕರ್ತವ್ಯಭಾರವನು ತಾನರಿತು |
ಧುರವ ಧರಿಸಿದನವನು – ಮಂಕುತಿಮ್ಮ || 709 ||

ಪದ-ಅರ್ಥ: ಜಟಿಲಗಳ=ತೊಡಕುಗಳ,
ಕುಟಿಲಗಳ=ವಕ್ರಗಳನ್ನು, ನೇರವಲ್ಲದ್ದು,
ಭರತನುಳಿಸಿದನೆ=ಭರತನು=ಉಳಿಸಿದನೆ, ಅರಿವಿಗಿಹ=ಅರಿವಿಗೆ (ತಿಳುವಳಿಕೆಗೆ)+ಇಹ(ಇದ್ದ), ಧುರ=ನೊಗ, ರಾಜ್ಯಭಾರ.
ವಾಚ್ಯಾರ್ಥ: ರಾಜ್ಯ ವ್ಯವಹಾರದಲ್ಲಿ ತೋರಿದ ಕಷ್ಟ, ಮೋಸ, ಕಠಿಣ ಸಮಸ್ಯೆಗಳನ್ನು ಭರತ ರಾಮನ ತೀರ್ಪಿಗೆ ಎಂದು ಬಿಟ್ಟುಬಿಟ್ಟನೆ? ತನ್ನ ತಿಳಿವಿಗೆ ತಿಳಿದ ಕರ್ತವ್ಯವನ್ನು ತಾನೇ ಅರಿತುಕೊಂಡು ರಾಜ್ಯದ ಭಾರವನ್ನು ಹೊತ್ತು ನಡೆಸಿದನು.

ವಿವರಣೆ: ಅದೊಂದು ದೊಡ್ಡ ಸಂಸ್ಥೆ. ನಿತ್ಯ ಲಕ್ಷಾಂತರ ರೂಪಾಯಿಗಳ ವ್ಯವಹಾರ. ಅದಕ್ಕೊಬ್ಬ ನಿರ್ದೇಶಕರು. ಅವರು ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ದಕ್ಷತೆಯಿಂದ ಅದನ್ನು ನಡೆಸುತ್ತಿದ್ದರು. ಒಮ್ಮೆ ಅಮೇರಿಕಾದಲ್ಲಿದ್ದ ಮಗಳಿಗೆ ಏನೋ ಸಮಸ್ಯೆಯಾಯಿತು. ಹೇಗೋ ಹೊಂದಿಸಿಕೊಂಡು, ಕೆಲಸಗಳನ್ನು ಹಂಚಿ, ಒಂದು ತಿಂಗಳು ರಜೆಯ ಮೇಲೆ ಅಮೇರಿಕೆಗೆ ಹೋದರು. ಅವರ ಸ್ಥಾನದಲ್ಲಿ ಒಬ್ಬರು ಪ್ರಭಾರ ನಿರ್ದೇಶಕರಾದರು. ನಿರ್ದೇಶಕ ಹುದ್ದೆಯನ್ನು ಖಾಲಿ ಬಿಡುವಂತಿಲ್ಲ. ಅದಕ್ಕಾಗಿ ತಾತ್ಪೂರ್ತಿಕವಾಗಿ ಮತ್ತೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳಲೇಬೇಕು. ಅವರನ್ನು ಪ್ರಭಾರಗಳು ಎನ್ನುತ್ತಾರೆ. ಅವರು ಮೂಲ ನಿರ್ದೇಶಕರ ಅನುಪಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತ, ಅವಶ್ಯಬಿದ್ದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ, ಸಂಸ್ಥೆಯಮೂಲ¯ಆಶಯಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ.

ಈ ಪ್ರಭಾರ ನಿರ್ದೇಶಕರು ಚಿಂತಿಸಿದರು. ತನ್ನ ಕಾರ್ಯ ಕೇವಲ ಒಂದು ತಿಂಗಳಿನದು. ಹೇಗಾದರೂ ಮಾಡಿ ಮುಗಿಸಿದರಾಯಿತು. ಕಷ್ಟದ ತೀರ್ಮಾನಗಳನ್ನು ತೆಗೆದುಕೊಳ್ಳದೆ ಮುಂದೆ ಹಾಕಿದರಾಯಿತು. ಕೆಲವೊಂದು ಬುದ್ಧಿವಂತಿಕೆಯ ವ್ಯವಹಾರಗಳಿರುತ್ತವೆ. ತಾನು ತೆಗೆದುಕೊಂಡ ತೀರ್ಮಾನ ಸರಿಯಾಗದಿದ್ದರೆ ಮುಂದೆ ತಾನೇ ಜನರ ಟೀಕೆಗೆ ಗುರಿಯಾಗಬೇಕಾಗುತ್ತದೆ. ತಾನು ಏಕೆ ಸಮಸ್ಯೆಗಳನ್ನು ತನ್ನ ತಲೆಯ ಮೇಲೆ ಎಳೆದುಕೊಳ್ಳಬೇಕು? ಹೇಗಿದ್ದರೂ ನಿರ್ದೇಶಕರು ಒಂದುತಿಂಗಳಿನ ನಂತರ ಬರುತ್ತಾರಲ್ಲ? ಅವರೇ ಏನಾದರೂ ಮಾಡಿಕೊಳ್ಳಲಿ ಎಂದು ಬಂದ ಸಮಸ್ಯೆಗಳನ್ನೆಲ್ಲ ಪರಿಹಾರ ನೀಡದೆ ಮುಂದೆ ತಳ್ಳುತ್ತ ಬಂದರು. ಒಂದು ತಿಂಗಳಿನ ನಂತರ ಬಂದ ನಿರ್ದೇಶಕರಿಗೆ ಎದೆ ಒಡೆಯಿತು. ಯಾವ ತೀರ್ಮಾನಗಳೂ ಆಗಿಲ್ಲ.
ತೀರ್ಮಾನ ತೆಗೆದುಕೊಳ್ಳದಿರುವುದರಿಂದ ಸಣ್ಣ ಸಮಸ್ಯೆಗಳು ಈಗ ಬಲಿತು ನಿಂತಿವೆ. ಹಣಕಾಸು ಸ್ಥಬ್ಧವಾಗಿದೆ. ಯಾಕಾದರೂ ರಜೆ ಹಾಕಿದೆನೊ ಎನ್ನುವಂತಾಯಿತು ಅವರಿಗೆ. ಇದು ಸಾಮಾನ್ಯ ಪ್ರಭಾರಿಗಳ ವಿಷಯ. ಆದರೆ ಭರತ ತಾನು ರಾಜ್ಯಕ್ಕೆ ಕೇವಲ ಹದಿನಾಲ್ಕು ವರ್ಷ ಮಾತ್ರ ಜವಾಬ್ದಾರಿ ಎಂದು ಗೊತ್ತಿದ್ದರೂ, ರಾಮನ ತೀರ್ಪಿಗೆ ಎಂದು ಯಾವ ವಿಷಯವನ್ನೂ ಬಿಟ್ಟು ಕರ್ತವ್ಯದಿಂದ ನುಣುಚಿಕೊಳ್ಳಲಿಲ್ಲ. ತನ್ನ ತಿಳುವಳಿಕೆಗೆ ಬಂದ ಎಲ್ಲ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಡೆಸಿ, ರಾಜ್ಯಭಾರವನ್ನು ಹೊತ್ತರೂ ರಾಜನಾಗಲಿಲ್ಲ ಭರತ. ಅವನೊಂದು ಕಾರ್ಯದಕ್ಷತೆಗೆಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT