ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಕಡುಯೋಗಿ ಭರತ

Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ |

ಬಿಡನೊಂದನುಂ ರಾಜ್ಯ ತನದಲ್ಲವೆಂದು ||

ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |

ಕಡುಯೋಗಿ ಭರತನಲ? – ಮಂಕುತಿಮ್ಮ || 708 ||
ಪದ-ಅರ್ಥ: ಒಡರಿಸುವನೆಲ್ಲನ್ =ಒಡಲಿಸುವನು
(ನಡೆಸುವನು)+ಎಲ್ಲವನ್, ಬಿಡನೊಂದನುಂ=ಬಿಡನು+ಒಂದನುಂ(ಒಂದನ್ನು), ತನದಲ್ಲವೆಂದು=ತನದು (ತನ್ನದು)+ಅಲ್ಲವೆಂದು.

ವಾಚ್ಯಾರ್ಥ: ಯಾವದೂ ತನ್ನದಲ್ಲವೆಂದು ತಿಳಿದಿದ್ದರೂ ಎಲ್ಲವನ್ನೂ ನಡೆಸಿದ. ರಾಜ್ಯ ತನ್ನದಲ್ಲವೆಂದು ಯಾವ ಕಾರ್ಯವನ್ನೂ ಬಿಡಲಿಲ್ಲ. ಸ್ವತಂತ್ರವಾಗಿ ಕಾರ್ಯಗಳನ್ನು ನಡೆಸಿದರೂ, ಕಾಣದ ಯಜಮಾನನಿಗೆ ವಿಧೇಯತೆಯನ್ನು ಸಲ್ಲಿಸುತ್ತ, ಬದುಕಿನ ಭರತ ಕಡುಯೋಗಿಯಲ್ಲವೆ?

ವಿವರಣೆ: ಶ್ರೀರಾಮನನ್ನು ಮರಳಿ ಅಯೋಧ್ಯೆಗೆ ಕರೆತರಲು ಭರತ ಏನೆಲ್ಲ ಪ್ರಯತ್ನಗಳನ್ನು ಮಾಡಿ ದರೂ ಸಾಧ್ಯವಾಗದಿದ್ದಾಗ, ತಾನು ತಂದಿದ್ದ ಎರಡು ಪಾದುಕೆಗಳನ್ನು ರಾಮನ ಮುಂದಿಟ್ಟು, “ಅಣ್ಣಾ, ಈ ಪಾದುಕೆಗಳ ಮೇಲೆ ಕ್ಷಣಕಾಲ ನಿಂತು, ಇದನ್ನು ನನಗೆ ಅನುಗ್ರಹಿಸು” ಎಂದು ಬೇಡಿದ. ಅವನ
ಆಶಯ ಶ್ರೀರಾಮನಿಗೆ ತಿಳಿದುಹೋಯಿತು. ಭರತ ಹೇಳಿದ. “ಅಣ್ಣಾ, ಈ ಪಾದುಕೆಗಳು ರಾಜ್ಯವನ್ನು ಪಾಲಿಸುತ್ತವೆ. ನಾನು ಅವುಗಳ ಭೃತ್ಯನಾಗಿ ನಡೆದುಕೊಳ್ಳುತ್ತೇನೆ. ಹದಿನಾಲ್ಕು ವರ್ಷಗಳವರೆಗೆ ನಾನು ಜಟಾಧಾರಿಯಾಗಿ, ಫಲಮೂಲಗಳನ್ನೇ ತಿನ್ನುತ್ತ, ನಿನಗಾಗಿ ಕಾದಿರುತ್ತೇನೆ. ನಗರದಲ್ಲಿಯೂ ವಾಸಮಾಡುವುದಿಲ್ಲ. ಹದಿನಾಲ್ಕು ವರ್ಷಗಳ ನಂತರ ನಿನ್ನನ್ನು ಕಾಣದೆ ಹೋದರೆ ಬೆಂಕಿಯಲ್ಲಿ ಬಿದ್ದು ಪ್ರಾಣ ಬಿಡುತ್ತೇನೆ”. ಭರತ, ಶ್ರೀರಾಮನ ಪ್ರತೀಕವಾಗಿದ್ದ ಪಾದುಕೆಗಳಿಗೆ ಭೃತ್ಯನಂತೆ ಕಾರ್ಯನಿರ್ವಾಹಕನಾದದ್ದನ್ನು ವಾಲ್ಮೀಕಿಗಳು ವಿವರಿಸುವ ರೀತಿ ಅನನ್ಯ.

ಯದಾ ಹಿ ಯತ್ ಕಾರ್ಯಮುಪೈತಿ ಕಿಂಚಿತ್ |
ಉಪಾಯನಂ ಚೋಪಹೃತಂ ಮಹಾರ್ಹಮ್ ||
ಸ ಪಾದುಕಾಭ್ಯಾಂ ಪ್ರಥಮಂ ನಿವೇದ್ಯ |
ಚಕಾರ ಪಶ್ಚಾದ್ ಭರತೋ ಯಥಾವತ್ ||

“ಯಾವುದಾದರೂ ವಿಶೇಷವಾದ ರಾಜಕಾರ್ಯ ಪಾಪ್ತವಾದರೆ, ಭರತ ಅದನ್ನು ಪಾದುಕೆಗಳಿಗೆ ಅರಿಕೆ ಮಾಡುತ್ತಿದ್ದ. ಬೆಲೆಬಾಳುವ ಕಪ್ಪಕಾಣಿಕೆಗಳು ಬಂದರೆ ಅವುಗಳನ್ನು ಪಾದುಕೆಗಳೆದುರಿಟ್ಟು ನಿವೇದಿಸುತ್ತಿದ್ದ. ಹೀಗೆ ಭರತ ರಾಜ್ಯಭಾರ ಮಾಡಿದ.

ಭರತನ ಕಾರ್ಯವಿಧಾನ ಅದ್ಭುತವಾದದ್ದು. ರಾಜ್ಯ ತನ್ನದಲ್ಲವೆಂದು ತೀರ್ಮಾನಿಸಿದ ಭರತ, ಕೆಲಸದ ಜವಾಬ್ದಾರಿ ತನ್ನದಲ್ಲವೆನ್ನಲಿಲ್ಲ. ರಾಜ್ಯ ತನಗೆ ದಕ್ಕಿದ್ದಲ್ಲವೆಂದು ತಿಳಿದರೂ ಯಾವ ಕಾರ್ಯವನ್ನೂ ಬಿಡಲಿಲ್ಲ. ರಾಜ್ಯವನ್ನು ನಿಭಾಯಿಸುವಲ್ಲಿ ಸ್ವತಂತ್ರನಾಗಿ ವರ್ತಿಸಬೇಕಾಗುತ್ತದೆ. ಹಾಗಿಲ್ಲದಿದ್ದಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ
ಸ್ವಾತಂತ್ರ್ಯವನ್ನು ವಹಿಸಿದರೂ, ತಾನು ರಾಜನೆಂದು ಭಾವಿಸಿಕೊಂಡ ಪಾದುಕೆಗಳಿಗೆ ವಿಧೇಯತೆಯನ್ನು ಸಲ್ಲಿಸಿದ ಭರತ. ಹೀಗೆ ರಾಜ್ಯ ಸಕಲ ಭಾರವನ್ನು ಹೊತ್ತರೂ, ರಾಜ್ಯ ತನ್ನದಲ್ಲ. ಜವಾಬ್ದಾರಿ ತನ್ನದಾದರೂ ಅದರ ಫಲ ತನ್ನದಲ್ಲ. ಕರ್ತವ್ಯದಲ್ಲಿ ಸ್ವತಂತ್ರ, ಆದರೆ ನಿರ್ಣಯ ಯಜಮಾನನದು ಎಂಬ ವಿಧೇಯತೆ. ಈ ಗುಣಗಳು ಯೋಗಿಗೆಮಾದರಿಯಾಗುವಂತಹವು. ಅದಕ್ಕೇ ಕಗ್ಗ ಭರತನನ್ನು ‘ಕಡುಯೋಗಿ’ ಎಂದು ಕರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT