ಸೋಮವಾರ, ಜುಲೈ 4, 2022
21 °C

ಬೆರಗಿನ ಬೆಳಕು: ಹೆಂಡತಿಯ ದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೋಧಿಸತ್ವ ಮಾದ್ರಿಗೆ ಹೇಳಿದ, ‘ಮಾದ್ರಿ, ನಿನ್ನ ಮನೋಧೈರ್ಯ ನನಗೆ ಆಶ್ಚರ್ಯ ತಂದಿದೆ. ಮಕ್ಕಳನ್ನು ಕಾಣದೆ ಕಂಗಾಲಾಗಿ ಓಡಾಡಿದ ನೀನು ಇಷ್ಟು ಸುಲಭವಾಗಿ ಅನುಮೋದನೆ ಮಾಡಿದ್ದು ಅದ್ಭುತ. ನಾನು ಮನಸ್ಸನ್ನು ಗಟ್ಟಿಮಾಡಿಕೊಂಡು ಮಕ್ಕಳನ್ನು ದಾನಕೊಟ್ಟಾಗ ಅನೇಕ ಅದ್ಭುತಗಳಾದವು. ಭೂಮಿ ನಡುಗಿತು, ಗಿರಿಗಳು ಹೊಯ್ದಾಡಿದವು. ಆ ಶಬ್ದ ಮೂರು ಲೋಕಗಳವರೆಗೆ ಹಬ್ಬಿತು. ಆಗಲೂ ನನಗೆ ಇಷ್ಟು ಆಶ್ಚರ್ಯವಾಗಿರಲಿಲ್ಲ’. ಮಾದ್ರಿದೇವಿ ಹೇಳಿದಳು, ‘ಆರ್ಯ, ಹಾಗೆ ಅದದ್ದು ಯಾಕೆ ಗೊತ್ತೇ? ಆಗ ಎರಡೂ ನಾರದ-ಪರ್ವತದ ದೇವತೆಗಳು ನಿನ್ನ ದಾನದ ಅನುಮೋದನೆಯನ್ನು ಮಾಡಿದರು. ಇಂದ್ರ, ಬ್ರಹ್ಮ, ಪ್ರಜಾಪತಿ, ಸೋಮ, ಯಮ ಹಾಗೂ ಕುಬೇರರು ಕೂಡ ದಾನದ ಅನುಮೋದನೆ ಮಾಡಿದರು. ಅವರೆಲ್ಲರ ಅನುಮೋದನೆ ನಿನಗೆ ದೊರೆತಿದೆ. ನನ್ನ ಅನುಮೋದನೆ ದೊಡ್ಡದಲ್ಲ’ ಎನ್ನುತ್ತ ಶ್ರೇಷ್ಠದೇವಿ, ಯಶಸ್ವಿನಿ, ರಾಜಪುತ್ರಿ ಮಾದ್ರಿ, ವೆಸ್ಸಂತರ ಮಾಡಿದ ಶ್ರೇಷ್ಠ ದಾನವನ್ನು ಅನುಮೋದನೆ ಮಾಡಿದಳು.

ಅವರು ಹೀಗೆ ಮಾತನಾಡುತ್ತಿರುವಾಗ, ಸ್ವರ್ಗದಲ್ಲಿದ್ದ ಶಕ್ರ ಇದನ್ನು ಗಮನಿಸಿದ. ‘ವೆಸ್ಸಂತರ ರಾಜ ತನ್ನ ಮಕ್ಕಳನ್ನೇ ಬ್ರಾಹ್ಮಣನೊಬ್ಬನಿಗೆ ದಾನಮಾಡಿ ಭೂಮಿಯನ್ನೇ ನಡುಗಿಸಿಬಿಟ್ಟ. ಯಾರಾದರೂ ಇನ್ನೊಬ್ಬ ದುರಾಸೆಯುಳ್ಳ ಹೀನ ಪುರುಷ ಅವನ ಬಳಿಗೆ ಹೋಗಿ ಸಕಲ ಲಕ್ಷಣಗಳನ್ನು ಹೊಂದಿದ ಸುಂದರಿ ಮಾದ್ರಿಯನ್ನು ಅವನಿಂದ ಬೇಡಿಬಿಟ್ಟಾನು. ಅವನಿಂದ ದಾನಪಡೆದು, ಮಾದ್ರಿಯನ್ನು ಕರೆದುಕೊಂಡು ಹೋಗಿ, ವೆಸ್ಸಂತರನನ್ನು ಏಕಾಂಗಿಯಾಗಿ ಮಾಡಿಬಿಟ್ಟಾನು’ ಎಂದು ಯೋಚಿಸಿದ. ರಾಜನನ್ನು ಏಕಾಂಗಿಯಾಗಿ, ಅಸಹಾಯಕನಾಗಿ ಮಾಡುವುದು ಸರಿಯಲ್ಲ ಎಂದು ತೀರ್ಮಾನಿಸಿದ. ಶಕ್ರ ತಾನು ಬ್ರಾಹ್ಮಣನ ವೇಷಧರಿಸಿ ವೆಸ್ಸಂತರನ ಬಳಿಗೆ ಹೋಗಿ ಅವನಿಂದ ಮಾದ್ರಿಯನ್ನು ದಾನವಾಗಿ ಪಡೆದು, ಅವನ ದಾನದ ಪಾರಮಿತವನ್ನು ಶಿಖರಕ್ಕೇರಿಸಿ, ಅವನನ್ನು ಸರ್ವಶ್ರೇಷ್ಠ ದಾನಿಯನ್ನಾಗಿ ಮಾಡಿ, ನಂತರ ಆಕೆಯನ್ನು ಆತನಿಗೇ ಹಿಂತಿರುಗಿಸಿ ಬರುತ್ತೇನೆ ಎಂದು ಯೋಜಿಸಿ, ಸೂರ್ಯೋದಯದ ಸಮಯಕ್ಕೆ ಸರಿಯಾಗಿ ವೆಸ್ಸಂತರನ ಆಶ್ರಮಕ್ಕೆ ಬಂದ. ಅವನನ್ನು ನೋಡಿದೊಡನೆ ವೆಸ್ಸಂತರ, ‘ಇದೇನು ಆಶ್ಚರ್ಯ! ಈ ಕಾಡಿನಲ್ಲಿ ವಾಸಿಸುತ್ತ ಏಳು ತಿಂಗಳುಗಳು ಕಳೆದು ಹೋದವು. ಇದುವರೆಗೂ ಒಬ್ಬ ಮನುಷ್ಯನ ದರ್ಶನವೂ ಆಗಿರಲಿಲ್ಲ.

ಈಗ ಒಂದು ವಾರದಲ್ಲಿ, ಎರಡನೆಯ ಬಾರಿಗೆ ಜಿಂಕೆ ಚರ್ಮ ಧರಿಸಿದ, ಬಂಗಾರದ ಬಣ್ಣದ ಬ್ರಾಹ್ಮಣನ ದರ್ಶನವಾಗುತ್ತಿದೆ’ ಎಂದುಕೊಂಡ. ಮುಂದೆ ಬಂದ ಮುದುಕ ಬ್ರಾಹ್ಮಣ ಹೇಳಿದ, ‘ಮಹಾರಾಜಾ, ನಾನು ತುಂಬ ಮುದುಕನಾಗಿದ್ದೇನೆ. ನನಗೆ ಸಹಾಯ ಮತ್ತು ಸೇವೆ ಮಾಡುವವರು ಯಾರೂ ಇಲ್ಲ. ಅದಕ್ಕೆ ನಿನ್ನ ಪ್ರಿಯ ಹೆಂಡತಿ ಮಾದ್ರಿಯನ್ನು ಬೇಡಲು ಬಂದಿದ್ದೇನೆ. ಆಕೆಯನ್ನು ನನಗೆ ಕೊಡು’ ಎಂದು ಬೇಡಿದ. ಬೋಧಿಸತ್ವ ಮಾತನಾಡುವ ಮೊದಲೇ ಮುದಿಬ್ರಾಹ್ಮಣ ಮತ್ತೆ ಕೇಳಿಕೊಂಡ, ‘ಮಹಾರಾಜಾ, ನೀನು ಒಂದು ಸರ್ವಕಾಲದಲ್ಲೂ ತುಂಬಿದ ನದಿ ಇದ್ದಂತೆ. ಅದು ಎಂದಿಗೂ ಕ್ಷೀಣಿಸುವುದಿಲ್ಲ. ನೀನು ದಾನದಲ್ಲಿ ಬಹುದೊಡ್ಡ ಹೆಸರು ಮಾಡಿದವನು. ನಾನು ಬೇಡಿದಂತೆ ನಿನ್ನ ಪತ್ನಿಯನ್ನು ನನಗೆ ದಾನವಾಗಿ ಕೊಡು’. ‘ಹೇ ಬ್ರಾಹ್ಮಣ, ದಾನ ನೀಡುವುದಕ್ಕೆ ನನಗೆ ದುಃಖವಿಲ್ಲ. ಇಗೋ, ಆಕೆಯನ್ನು ದಾನವಾಗಿ ಕೊಟ್ಟುಬಿಟ್ಟೆ’ ಎಂದು ಬೋಧಿಸತ್ವ ಕಮಂಡಲುವಿನಲ್ಲಿದ್ದ ನೀರನ್ನು ಹಾಕಿ ಹೇಳಿಬಿಟ್ಟ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು