ಶನಿವಾರ, ಫೆಬ್ರವರಿ 4, 2023
28 °C

ಬೆರಗಿನ ಬೆಳಕು: ಮುಕ್ತಿಯ ಗುಟ್ಟು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬ್ರಹ್ಮಾನುಸಂಧಾನ ಲೋಕಸಂಧಾನದಲಿ |
ಬ್ರಹ್ಮದರ್ಶನವೆಲ್ಲ ಜೀವರೂಪದಲಿ ||
ಬ್ರಹ್ಮಾನುಭವ ದೇಹಕರಣಾನುಭವಗಳಲಿ |
ಮರ್ಮವಿದು ಮುಕ್ತಿಗೆಲೊ – ಮಂಕುತಿಮ್ಮ || 753 ||

ಪದ-ಅರ್ಥ: ಬ್ರಹ್ಮಾನುಸಂಧಾನ=ಬ್ರಹ್ಮನ+ಅನುಸಂಧಾನ (ಪರಿಶೀಲನೆ, ಧ್ಯಾನ), ಲೋಕಸಂಧಾನದಲಿ=ಲೋಕ+ಸಂಧಾನದಲಿ(ಸೇರುವಿಕೆಯಲ್ಲಿ), ಬ್ರಹ್ಮಾನುಭವ=ಬ್ರಹ್ಮನ+ಅನುಭವ, ದೇಹಕರಣಾನುಭವಗಳಲಿ=ದೇಹ+ಕರಣ(ಇಂದ್ರಿಯ)+ಅನುಭವಗಳಲಿ, ಮರ್ಮ=ಗುಟ್ಟು.

ವಾಚ್ಯಾರ್ಥ: ಬ್ರಹ್ಮವಸ್ತುವಿನ ಧ್ಯಾನ, ಲೋಕ ವ್ಯವಹಾರಗಳಲ್ಲಿ, ಬ್ರಹ್ಮದರ್ಶನವು ಸಕಲ ಜೀವಗಳಲ್ಲಿ, ಬ್ರಹ್ಮನ ಅನುಭವ ನಮಗೆ ದೊರಕುವುದು ನಮ್ಮ ದೇಹ, ಇಂದ್ರಿಯಗಳ ಅನುಭವಗಳಲ್ಲೇ. ಮುಕ್ತಿಗೆ ಇದೇ ಗುಟ್ಟು.

ವಿವರಣೆ: ಬ್ರಹ್ಮವಸ್ತುವನ್ನು ಎಲ್ಲಿ ಹುಡುಕುವುದು? ಅದರ ಅನುಸಂಧಾನವನ್ನು ದೇವಸ್ಥಾನಗಳಲ್ಲಿ, ಚರ್ಚುಗಳಲ್ಲಿ, ಮಸೀದಿಗಳಲ್ಲಿ ಮಾಡಬಹುದೆ? ದೇವರಿರುವುದು ಅಲ್ಲಿ ಮಾತ್ರವೆ? ನಿಸರ್ಗದಲ್ಲಿ ಭಗವಂತನಿಲ್ಲವೆ? ಜೀವಸಂಕುಲದಲ್ಲಿ ದೇವನನ್ನು ಕಾಣಲಾರೆವೆ? ಭಗವಂತ ಅನಿಕೇತ. ಅವನಿಗೆ ಮನೆಯಿಲ್ಲ. ಅಂದರೆ ಅವನಿಗೆ ಒಂದು ಮನೆ ಎಂಬುದಿಲ್ಲ. ನಾವು ಕಣ್ಣಾಡಿಸಿದಲ್ಲೆಲ್ಲ ಅವನ ಬೆರಳ ಮುದ್ರೆ ಕಾಣುತ್ತವೆ. ಅಣು ರೇಣು ತೃಣಕಾಷ್ಠಗಳಲ್ಲಿ ಭಗವಂತನಿದ್ದಾನೆಂದು ಶಾಸ್ತ್ರಗಳು  ಸಾರುತ್ತವೆ. ಆದ್ದರಿಂದ ಭಗವಂತನ ಧ್ಯಾನ ಮಾಡಬೇಕಾದರೆ ಲೋಕದ ಪ್ರತಿಯೊಂದು ವಸ್ತುಗಳಲ್ಲಿ ಅವನನ್ನು ಕಾಣಲು ಪ್ರಯತ್ನಿಸಬೇಕು. ಪುಟ್ಟ ಹುಡುಗನೊಬ್ಬ ದೇವನನ್ನು ಬೆಟ್ಟದ ಮೇಲಿನ ಗುಡಿಯಲ್ಲಿ ಕಾಣಲು ಮನೆಯಿಂದ ಹೊರಟ. ದಾರಿಗೆ ಬೇಕೆಂದು ಆಹಾರ ಕಟ್ಟಿಕೊಂಡಿದ್ದಾನೆ. ಸುಮಾರು ದಾರಿ ನಡೆದ. ಆಯಾಸವಾದಾಗ ಮರದ ಕೆಳಗೆ ಕುಳಿತು ಊಟ ಮಾಡಲು ಯೋಚಿಸಿದ. ಹಿಂದೆ ಯಾರೋ ನರಳಿದಂತಾಯಿತು. ತಿರುಗಿ ನೋಡಿದರೆ ವೃದ್ಧೆಯೊಬ್ಬಳು ನೆಲದಲ್ಲಿ ಮಲಗಿ ಹೊರಳುತ್ತಿದ್ದಾಳೆ.

ಹಸಿವಿನಿಂದ ಕಂಗಾಲಾಗಿದ್ದಾಳೆ. ಹುಡುಗನ ಮನ ಕರಗಿತು. ಆಕೆಯನ್ನು ಎಬ್ಬಿಸಿದ. ತಾನು ತಂದ ಊಟವನ್ನು ಆಕೆಗೆ ಕೊಟ್ಟು ಉಪಚರಿಸಿದ. ಸ್ವಲ್ಪ ಹೊತ್ತಿಗೆ ಆಕೆ ಗೆಲುವಾದಳು. ಹುಡುಗನನ್ನು ನೋಡಿ ಪ್ರೀತಿಯಿಂದ ಗಲ್ಲ ಸವರಿ ನಕ್ಕಳು. ಹುಡುಗ ಗುಡಿಗೆ ಹೋಗದೆ ಮನೆಗೆ ಮರಳಿ ತಾಯಿಗೆ ಹೇಳಿದ,

“ಅಮ್ಮಾ, ನನಗೆ ದೇವರು ದಾರಿಯಲ್ಲೇ ಸಿಕ್ಕ. ಆದರೆ ಆತ ಮುದುಕಿಯ ರೂಪದಲ್ಲಿದ್ದ. ಆಕೆಯ ನಗು, ಪ್ರೀತಿ ಎಷ್ಟುಸುಂದರ ಗೊತ್ತೇ? ಮುದುಕಿ ತನ್ನ ಮೊಮ್ಮಗಳಿಗೆಹೇಳಿದಳು, “ಇಂದು ದೇವರು ಮಗುವಿನ ರೂಪದಲ್ಲಿ ಬಂದುಕಾಪಾಡಿದ. ಅವನ ನಗು ಏನು ಚಂದ ಗೊತ್ತೇ? ಥೇಟ್ ಆತ ಬಾಲಕೃಷ್ಣನೇ?” ಇಬ್ಬರೂ ಮತ್ತೊಬ್ಬರಲ್ಲಿ ಭಗವಂತನನ್ನು ಕಂಡಿದ್ದರು. ಇದೇ ಜೀವರೂಪದಲ್ಲಿ ಭಗವಂತನನ್ನು ಕಾಣುವುದು. ಇನ್ನು ನಮಗೆ ಪರಸತ್ವದ ಅನುಭವವಾಗುವುದು ಹೇಗೆ? ನಮಗೆ ಪ್ರತಿಯೊಂದು ಅನುಭವವೂ ನಮ್ಮ ದೇಹದಿಂದಲೇ ದಕ್ಕಬೇಕು. ಆ ದೇಹಕ್ಕೆ ಅನುಭವಗಳನ್ನು ತಂದು ತುಂಬುವುವು, ನಮ್ಮ ಇಂದ್ರಿಯಗಳು. ಅದಕ್ಕೇ ಕಗ್ಗ ತಿಳಿಸುತ್ತದೆ, ಬ್ರಹ್ಮದ ಅನುಭವ ನಮಗೆ ದೊರಕುವುದು ನಮ್ಮ ದೇಹ ಮತ್ತು ಕರಣಗಳಿಂದಲೇ. ಇದೇ ಬಿಡುಗಡೆಯ, ಮುಕ್ತಿಯ ಗುಟ್ಟು. ಹಾಗೆಂದರೆ, ಬ್ರಹ್ಮವಸ್ತುವನ್ನು ಪ್ರಪಂಚದ ಪ್ರತಿಯೊಂದು ವಸ್ತುವಿನಲ್ಲಿ, ಬ್ರಹ್ಮದರ್ಶನವನ್ನು ಪ್ರತಿಯೊಂದು ಜೀವದಲ್ಲಿ ಮತ್ತು ಬ್ರಹ್ಮದ ಅನುಭವವನ್ನು ನಮ್ಮ ಇಂದ್ರಿಯಗಳಿಂದಲೇ ಪಡೆಯುತ್ತೇವೆಂಬ ತಿಳುವಳಿಕೆಯೇ ಮುಕ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು