ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪ್ರಾರ್ಥನೆ

Last Updated 3 ಜನವರಿ 2023, 19:45 IST
ಅಕ್ಷರ ಗಾತ್ರ

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||
ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು|
ತೀಶನನು ಬೇಡುತಿರೊ – ಮಂಕುತಿಮ್ಮ ||792

ಪದ-ಅರ್ಥ: ಕ್ಲೇಶದ=ಕಷ್ಟಗಳ, ಪರೀಕ್ಷೆಗಳಿಗೆನ್ನ=ಪರೀಕ್ಷೆಗಳಿಗೆ+ಎನ್ನ, ಪಾತಕಸ್ಮೃತಿಯ=ಪಾಪದ ನೆನಪುಗಳ, ಎನ್ನುತೀಶನನು=ಎನ್ನುತ+ಈಶನನು

ವಾಚ್ಯಾರ್ಥ: ನನಗೆ ಆಸೆಗಳನ್ನು ತೋರಿಸಿ ಮನಸ್ಸನ್ನು ಕೆಣಕದಿರು, ಅವುಗಳ ಪಾಶ ನನ್ನನ್ನು ಬಿಗಿಯದಿರಲಿ, ಕಷ್ಟದ ಪರೀಕ್ಷೆಗಳಿಗೆ ನನ್ನನ್ನು ಎಳೆಯದಿರು, ಬೇಸರ ತರುವ, ಹಿಂದೆ ಮಾಡಿದ ಪಾತಕಗಳ ನೆನಪುಗಳಿಂದ ಚುಚ್ಚದಿರು ಎಂದು ಈಶ್ವರನನ್ನು ಬೇಡುತ್ತಿರು.
ವಿವರಣೆ: ಮನುಷ್ಯನಿಗೆ ಅನೇಕ ಭೌತಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಕೊರತೆಗಳಿರುತ್ತವೆ. ಕೊರತೆಗಳನ್ನು ತುಂಬಿಕೊಳ್ಳಲು ಮನುಷ್ಯನ ಬಯಕೆಗಳು ಪ್ರಾರ್ಥನೆಯ ರೂಪದಲ್ಲಿ ಪ್ರಕಟವಾಗುತ್ತವೆ. ಭಗವದ್ ಸಹಾಯವನ್ನು ಬಯಸುವುದೆ ಪ್ರಾರ್ಥನೆ. ಆಗ ಹೃದಯಾಂತರಾಳದಿಂದ ಕೂಗು ಹೊರಹೊಮ್ಮುತ್ತದೆ. ದಿವ್ಯ ಸಹಾಯಕ್ಕಾಗಿ ಹೃದಯ ಕೂಗಿ ಕರೆಯುತ್ತದೆ. ಈ ಹೃದಯ ಸ್ಪಂದನವೇ, ದಿವ್ಯ ಆರ್ತನಾದವೇ ಪ್ರಾರ್ಥನೆ. ಈ ಪ್ರಾರ್ಥನೆಯಲ್ಲಿ ಏನಿರಬೇಕು ಎಂಬುದನ್ನು ಕಗ್ಗ ಹೇಳುತ್ತದೆ. ಭಗವಂತನನ್ನು ಬೇಡುವುದೇ ಆದರೆ, ಮೊದಲು ಆಸೆಗಳ ನಿಗ್ರಹವನ್ನೇ ಕೇಳಬೇಕು. ಆಸೆಗಳೇ ಮನುಷ್ಯನನ್ನು ದಿಕ್ಕು ದಿಕ್ಕಿಗೆ ಸೆಳೆಯುವುವು. ಪ್ರತಿಯೊಂದು ಆಸೆಯೂ ಒಂದು ಹಗ್ಗವಿದ್ದಂತೆ. ಆಸೆಗಳು ಹೆಚ್ಚಾದಂತೆ ಹಗ್ಗಗಳೂ ಹೆಚ್ಚು. ಈ ವಿಪರೀತವಾದ ಹಗ್ಗಗಳು ನಮ್ಮನ್ನು ಸುತ್ತಿ, ಕಟ್ಟಿಹಾಕುತ್ತವೆ, ಉಸಿರುಕಟ್ಟಿಸುತ್ತವೆ. ಹಾಗೆ ಆಗದಿರಬೇಕಾದರೆ ಆಸೆಗಳು ಕಡಿಮೆಯಾಗಬೇಕು. ಪ್ರಪಂಚದ ವೈಭವದ ಮೆರಗು ಹೊಸ ಹೊಸ ಆಕರ್ಷಣೆಗಳನ್ನು ಹುಟ್ಟು ಹಾಕಿ ಆಸೆಗಳನ್ನು ವೃದ್ಧಿಸುವುದರಿಂದ ಆ ಆಸೆಗಳನ್ನು ಕಡಿಮೆ ಮಾಡಲು ಭಗವಂತನನ್ನೇ ಪ್ರಾರ್ಥಿಸಬೇಕು. ಮತ್ತೊಂದು ಬಿನ್ನಹವೆಂದರೆ ನಮ್ಮನ್ನು ಕಷ್ಟದ ಪರೀಕ್ಷೆಗಳಿಗೆ ದಯವಿಟ್ಟು ಸಿಲುಕಿಸಬೇಡ ಎಂಬುದು. ಕೆಲವು ಪರೀಕ್ಷೆಗಳು ಅನಪೇಕ್ಷಿತವಾಗಿ, ಅನಿವಾರ್ಯವಾಗಿ ಬರುತ್ತವೆ.ಅವುಗಳಲ್ಲಿ ನಮ್ಮ ಪಾತ್ರವೇನೂ ಇಲ್ಲದಿದ್ದರೂ ನಮಗೆ ಉರುಳಾಗಿ ಕಾಡುತ್ತವೆ. ದೌಪದಿಯ ವಸ್ತ್ರಾಪಹರಣ ಪರೀಕ್ಷೆ, ಸೀತೆಯ ಅಗ್ನಿಪರೀಕ್ಷೆ, ಹರಿಶ್ಚಂದ್ರನ ಸತ್ಯ ಪರೀಕ್ಷೆ, ಅಂಬರೀಷನ ಸತ್ವ ಪರೀಕ್ಷೆ ಇವೆಲ್ಲ ಕೆಲವು ಉದಾಹರಣೆಗಳು. ಅವರೆಲ್ಲ ಸಾತ್ವಿಕರು, ಆದರೆ ಪರೀಕ್ಷೆಯಲ್ಲಿ ಒದ್ದಾಡಿದವರು. ಅಂಥ ಪರೀಕ್ಷೆಗಳನ್ನು ನೀಡದಿರು ಎಂದು ಈಶ್ವರನನ್ನು ಬೇಡಬೇಕು. ಪ್ರಪಂಚದಲ್ಲಿ ಬದುಕಿದಾಗ ಯಾವು ಯಾವುದೋ ಆಕರ್ಷಣೆಗೆ ಸಿಕ್ಕು ತಪ್ಪು ಮಾಡುವ ಸಂದರ್ಭಗಳು ಬರುತ್ತವೆ. ಕೆಲವು ತಿಳಿದೋ, ಕೆಲವನ್ನು ತಿಳಿಯದೆಯೋ ತಪ್ಪು ಮಾಡುತ್ತೇವೆ. ಆ ಪಾಪಪ್ರಜ್ಞೆ ಬದುಕಿನುದ್ದಕ್ಕೂ ನಮ್ಮನ್ನು ಚುಚ್ಚುತ್ತಲೇ ಇರುತ್ತದೆ. ಆ ಪಾಪಪ್ರಜ್ಞೆಯ ಮುಳ್ಳು ಸದಾಕಾಲ ಚುಚ್ಚದಂತೆ ಮಾಡು ಎಂಬುದೊಂದು ಪ್ರಾರ್ಥನೆ. ಹಾಗೆಂದರೆ ಪಾಪಪ್ರಜ್ಞೆ ಬೇಡವೇ? ಅದಕ್ಕಾಗಿ ಪ್ರಾಯಶ್ಚಿತ್ತ ಬೇಕು, ಮತ್ತೊಮ್ಮೆ ಅಂತಹ ಪಾಪ ಮಾಡದಿರುವಂತೆ ಮನಸ್ಸನ್ನು ಧೃಡಪಡಿಸಿಕೊಳ್ಳಬೇಕು. ಅದಕ್ಕೆ ಈಶ್ವರನ ಸತತ ಸ್ಮರಣೆ ಸಾಧನವಾದೀತು. ಆದ್ದರಿಂದ ಆ ಶಾಶ್ವತವಾದ ಸ್ಮರಣೆಯನ್ನು ಕೊಡು ಎಂದು ಈಶ್ವರನನ್ನು ಬೇಡುವುದೇ ನಮ್ಮ ಪ್ರಾರ್ಥನೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT