ಸೋಮವಾರ, ಅಕ್ಟೋಬರ್ 18, 2021
25 °C

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಮುಗಿದ ಜಾತಕ ಕಥೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಷ್ಟು ಜನರಿಗೆ ಒಂದು ಕಾಡುಪ್ರಾಣಿಯೂ, ಪಕ್ಷಿಯೂ ತೊಂದರೆ ಕೊಟ್ಟಿರಲಿಲ್ಲ. ಅದಕ್ಕೆ ಬೋಧಿಸತ್ವನ ತಪಸ್ಸಿನ ಸಾಧನೆ ಕಾರಣವಾಗಿತ್ತು. ಅಲ್ಲಿಯವರೆಗೆ ರಾಜ ಸಂಜಯ ಸಂತೋಷವಾಗಿದ್ದ. ಆನೆಯನ್ನೇರಿ ಬಂದ ಮಗ-ಸೊಸೆಯರನ್ನು ಕಂಡು ರಾಜ ಸೇನಾಪತಿಯನ್ನು ಕೇಳಿದ, ‘ನನ್ನ ಮಗ ಹೋಗುವ ಮಾರ್ಗ ಅಲಂಕೃತವಾಗಿದೆಯಾ?’. ‘ಹೌದು ಪ್ರಭೂ, ಎಲ್ಲವೂ ಸಿದ್ಧವಾಗಿದೆ. ಈಗ ಹೊರಡುವ ಸಮಯ ಬಂದಿದೆ’ ಎಂದ ಸೇನಾಪತಿ. ಎಲ್ಲರೂ ಹೊರಟರು. ವಂಕಗಿರಿಯಿಂದ ಜೆತುತ್ತರ ನಗರದ ವರೆಗಿನ ಅರವತ್ತು ಯೋಜನದ ರಾಜಮಾರ್ಗ ಅಲಂಕೃತವಾಗಿತ್ತು. ಎಲ್ಲೆಲ್ಲಿಯೂ ಸಿಂಗಾರವಾಗಿತ್ತು, ಹೂವು ಹಾಸಲ್ಪಟ್ಟಿತ್ತು. ಮುಂದೆ ಗಜಾರೋಹಿಗಳು, ರಥಿಕರು, ಕುದುರೆ ಸವಾರರು, ಕಾಲಾಳುಗಳು ಮುಂದೆ ನಡೆದರು. ನಂತರ ಸಿವಿಗಳ ರಾಜ ಸಂಜಯ, ರಾಣಿ ಪುಸತಿದೇವಿ, ವೆಸ್ಸಂತರ ಬೋಧಿಸತ್ವ, ರಾಜಕುಮಾರಿ ಮಾದ್ರಿದೇವಿ ತಮ್ಮ ಮಕ್ಕಳೊಂದಿಗೆ ಹೊರಟರು. ಅವರ ಹಿಂದೆ ಕಿರೀಟಧಾರಿಗಳು, ಚರ್ಮಧಾರಿಗಳು, ಖಡ್ಗ
ಧಾರಿಗಳು, ಕವಚಧಾರಿಗಳು, ಅಸಂಖ್ಯ ಯೋಧರು ನಡೆದರು. ವೆಸ್ಸಂತರ ಕಾಡಿನಿಂದ ಹೊರಟ ಮೇಲೆ ಎಲ್ಲ ಕಾಡು ಪ್ರಾಣಿಗಳು, ಪಕ್ಷಿಗಳು ಒಂದೆಡೆಗೆ ಸೇರಿ ದುಃಖಿಸಿದವು. ಮುಂದೆ ಯಾವ ಪ್ರಾಣಿಯೂ, ಮಧುರಸ್ವರದಲ್ಲಿ ಕೂಗಲಿಲ್ಲ, ಯಾವ ಪಕ್ಷಿಯೂ ಸಂತೋಷದಿಂದ ಹಾಡಲಿಲ್ಲ. ಅರವತ್ತು ಯೋಜನದ ಮಾರ್ಗವನ್ನು ಎರಡು ತಿಂಗಳುಗಳ ಮೆರವಣಿಗೆಯಲ್ಲಿ ಮುಗಿಸಿ ರಾಜ ಜೆತುತ್ತರ ನಗರಕ್ಕೆ ಬಂದ.

ಅಲಂಕೃತವಾದ ನಗರ ಪ್ರವೇಶಮಾಡಿ ಅರಮನೆಯನ್ನು ಸೇರಿದ. ವೆಸ್ಸಂತರನ ಆಗಮನದಿಂದ ಜನಪದವಾಸಿಗಳು, ನಿಗಮವಾಸಿಗಳು ಸಂತೋಷಪಟ್ಟರು. ಇನ್ನು ಮುಂದೆ ವೆಸ್ಸಂತರನ ಆಜ್ಞೆ ಪ್ರಚಲಿತವಾಗುತ್ತದೆ ಎಂದು ಘೋಷಣೆಯಾಯಿತು, ಕೈದಿಗಳ ಬಿಡುಗಡೆಯಾಯಿತು. ಅರಮನೆಯಲ್ಲಿ ವ್ಯವಸ್ಥಿತವಾದ ರಾಜ ವೆಸ್ಸಂತರ ಬ್ರಾಹ್ಮೀ ಮುಹೂರ್ತದಲ್ಲಿ ಯೋಚನೆ ಮಾಡಿದ. ‘ದಾನ ಮಾಡುವುದು ನನಗೆ ಹುಟ್ಟಿನಿಂದಲೇ ಬಂದದ್ದು. ಈಗ ನಾನು ರಾಜನಾಗಿ ಬಂದಿದ್ದೇನೆ. ರಾತ್ರಿ ಕಳೆದ ಮೇಲೆ ನಾನು ಬಂದ ಸುದ್ದಿ ರಾಜ್ಯದಲ್ಲೆಲ್ಲ ತಿಳಿಯುತ್ತದೆ. ಆಗ ಯಾಚಕರು ಬರುತ್ತಾರೆ. ಅವರಿಗೆ ಏನು ದಾನ ಮಾಡಲಿ?’. ಅದೇ ಸಮಯದಲ್ಲಿ ಶಕ್ರನ ಆಸನ ಬಿಸಿಯಾಯಿತು. ಆತ ಧ್ಯಾನದಲ್ಲಿ ವೆಸ್ಸಂತರನ ಆಲೋಚನೆಯನ್ನು ತಿಳಿದ. ಆಮೇಲೆ ರಾಜಭವನದ ಪಶ್ಚಿಮ ಮತ್ತು ಪೂರ್ವದ ಕಡೆಗೆ ಸೊಂಟದವರೆಗೆ ಸಪ್ತರತ್ನಗಳ ಮಳೆಯನ್ನು ಸುರಿಸಿದ. ಇಡೀ ಜೆತುತ್ತರ ನಗರದಲ್ಲಿ ಮೊಳಕಾಲಿನವರೆಗೆ ಬಂಗಾರದ, ರತ್ನಗಳ ಮಳೆಯಾಯಿತು. ಮಾರನೆಯ ದಿನ ಬೋಧಿಸತ್ವ ಅವರವರ ಮನೆಗಳ ಪೂರ್ವದಲ್ಲಿ, ಪಶ್ಚಿಮದಲ್ಲಿ ಬಿದ್ದ ಸಂಪತ್ತೆಲ್ಲ ಅವರದೇ ಎಂದು ಘೋಷಣೆ ಮಾಡಿದ. ಉಳಿದ ಧನರಾಶಿಯನ್ನು ಭಂಡಾರದಲ್ಲಿ ತುಂಬಿಸಿ, ದಾನಸ್ಥಾಪನೆ ಮಾಡಿದ. ಮುಂದೆ ದಾನ ಕೇಳುವ ಯಾರೂ ಉಳಿಯಲಿಲ್ಲ.

ಬುದ್ಧಿವಂತ, ಧೀಮಂತ ಬೋಧಿಸತ್ವ ಅನೇಕ ವರ್ಷ ದಾನ ಮಾಡುತ್ತ, ಧರ್ಮದಿಂದ ರಾಜ್ಯಪಾಲನೆ ಮಾಡುತ್ತ ಬದುಕಿ, ದೇಹದಿಂದ ಬಿಡುಗಡೆಯಾದ ಮೇಲೆ ಮತ್ತೆ ಸ್ವರ್ಗ ಸೇರಿದ. ಕೊನೆಗೆ ಬುದ್ಧ ಹೇಳಿದ, ‘ನನಗೆ ತೊಂದರೆಕೊಟ್ಟ ಮುದುಕ ಬ್ರಾಹ್ಮಣ ದೇವದತ್ತ, ಅಮಿತ್ತತಾಪನ ಚಿಂಚಾಮಾಣವಿಕೆ, ಜೆತುಪುತ್ರ ಚೆನ್ನ, ಅಚ್ಯುತ ತಪಸ್ವಿ ಸಾರಿಪುತ್ತ, ಸಂಜಯ ಶುದ್ಧೋದನ ಮಹಾರಾಜ, ಪುಸತಿದೇವಿ ಮಹಾಮಾಯೆ, ಮಾದ್ರಿದೇವಿ ರಾಹುಲಮಾತೆ. ಜಾಲಿಕುಮಾರ ರಾಹುಲ, ಕೃಷ್ಣಾಜಿನ ಉತ್ಪಲವಣೆರ್, ಉಳಿದ ಪರಿಷತ್ತು ಬುದ್ಧ ಪರಿಷತ್ತು, ವೆಸ್ಸಂತರ ಮಹಾರಾಜ ನಾನೇ’.

ಇಲ್ಲಿಗೆ ಬುದ್ಧನ ಜಾತಕ ಕಥೆಗಳು ಮುಕ್ತಾಯವಾದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.