ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಜಿತೇಂದ್ರಿಯರು

Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ ? |
ಇತರರೊಳು ವಿಷಪರೀಕ್ಷೆಗೆ ನಿಲುವರಾರು ? ||
ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? |
ಅತಿಚರ್ಚೆ ಸಲದಲ್ಲಿ – ಮಂಕುತಿಮ್ಮ || 381 ||

ಪದ-ಅರ್ಥ: ಅತಿಶಯದದೃಷ್ಟ=ಅತಿಶಯದ+
ಅದೃಷ್ಟ, ಮೃತೇಂದ್ರಿಯನದು=ಮೃತ+ಇಂದ್ರಿಯನದು(ಇಂದ್ರಿಯಗಳೆಲ್ಲ ಸತ್ತು ಹೋದವನು), ಮಿತಕುಕ್ಷಿ=ಮಿತವಾದ ಹೊಟ್ಟೆ, ಮಿತಭುಕ್ತ= ಮಿತವಾಗಿ ಊಟ ಮಾಡುವವನು, ಜಿತೇಂದ್ರಿಯನು=ಇಂದ್ರಿಯಗಳನ್ನು ಗೆದ್ದವನು.

ವಾಚ್ಯಾರ್ಥ

ಹುಟ್ಟಿನಿಂದಲೇ ಇಂದ್ರಿಯಗಳ ಕಾಟವನ್ನು ಕಳೆದುಕೊಂಡವನದು ಅತಿಶಯದ ಅದೃಷ್ಟ. ಹಾಗಿಲ್ಲದವರಲ್ಲಿ ಯಾರಾದರೂ ಬದುಕಿನ ವಿಷ ಪರೀಕ್ಷೆಗೆ ನಿಲ್ಲಬಲ್ಲರೆ? ತಿನ್ನಲಾಗದವನು, ಕಡಿಮೆ ತಿನ್ನುತ್ತಾನೆ. ಮತ್ತೆ ಜಿತೇಂದ್ರಿಯರಾರು? ಇಲ್ಲಿ ಅತಿಯಾದ ಚರ್ಚೆ ಸಲ್ಲದು.

ವಿವರಣೆ

ಒಬ್ಬ ಝೆನ್ ಗುರು ಹುಟ್ಟುತ್ತಲೇ ವೃದ್ಧನಾಗಿದ್ದನಂತೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡು ಬಗೆಯ ವೃದ್ಧರಿದ್ದಾರೆ. ಒಬ್ಬರು ವಯೋವೃದ್ಧರು. ಅವರಿಗೆ ವಯಸ್ಸಿನಿಂದ ವೃದ್ಧತ್ವ ಬಂದಿದೆ. ಅದನ್ನು ಯಾರೂ ತಪ್ಪಿಸುವುದು ಸಾಧ್ಯವಿಲ್ಲ. ದೇಹಕ್ಕೆ ಮುಪ್ಪಾಗಲೇಬೇಕು. ಇನ್ನೊಬ್ಬರು ಜ್ಞಾನವೃದ್ಧರು. ಅವರಿಗೆ ವಯಸ್ಸು ಗಣನೆಗೆ ಬರುವುದಿಲ್ಲ. ಅತ್ಯಂತ ಸಣ್ಣ ವಯಸ್ಸಿಗೇ ಅಪಾರವಾದ ಜ್ಞಾನವನ್ನು ಪಡೆದು ಅದನ್ನು ತಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲ ಹಂಚುತ್ತಾರೆ. ಈ ಝೆನ್ ಗುರು ಅಂತಹ ಜ್ಞಾನವೃದ್ಧ. ಅವನಿಗೆ ಇಂದ್ರಿಯಗಳ ನಿಗ್ರಹದ ಚಿಂತೆಯೇ ಇರಲಿಲ್ಲವಂತೆ. ಯಾಕೆಂದರೆ ಅವನಲ್ಲಿ ಎಲ್ಲ ಇಂದ್ರಿಯಗಳೇ ತಮಗೆ ಸ್ವಭಾವಜನ್ಯವಾದ ಚಟುವಟಿಕೆಗಳನ್ನು ಕಳೆದುಕೊಂಡು ಬಿಟ್ಟಿದ್ದವಂತೆ. ಅರಿಷಡ್ವರ್ಗಗಗಳು ಮಿತ್ರವರ್ಗಗಳಾಗಿದ್ದುವಂತೆ. ಆತನದು ಅತಿಶಯವಾದ ಅದೃಷ್ಟ. ಅವನಿಗೆ ಇಂದ್ರಿಯಗಳ ಕಾಟವೇ ಇಲ್ಲ.

ಆದರೆ ಎಲ್ಲರಿಗೂ ಆ ಭಾಗ್ಯ ದೊರಕುತ್ತದೆಯೇ? ಎಲ್ಲ ಸಾಮಾನ್ಯ ಜನರು ಇಂದ್ರಿಯಗಳು ಒಡ್ಡುವ ಪರೀಕ್ಷೆಗಳಿಗೆ ಎದುರು ನಿಲ್ಲುವುದು ಸಾಧ್ಯವೆ? ಎಲ್ಲರಿಗೂ ವಯಸ್ಸಾದಂತೆ ಇಂದ್ರಿಯಗಳು ಅಶಕ್ತವಾಗುತ್ತ ಹೋಗುತ್ತವೆ. ಅವುಗಳ ಕಾಟ ಕಡಿಮೆಯಾಗುತ್ತ ಬರುತ್ತದೆ. ಕಣ್ಣು ಮಂದವಾದಾಗ ನೋಡುವ ಅಪೇಕ್ಷೆ ಕಡಿಮೆಯಾಗುತ್ತದೆ. ಸಿಹಿ ತಿಂದರೆ ಸಕ್ಕರೆ ರೋಗ, ತುಪ್ಪ ತಿಂದರೆ ಕೊಲೆಸ್ಟರಾಲ್, ಕಡಿಮೆ ತಿಂದರೆ ನಿಶ್ಯಕ್ತಿ. ಈ ಹಂತದಲ್ಲಿ ಮನುಷ್ಯ ನಾಲಿಗೆಯ ಮೇಲೆ ವಿಜಯ ಸಾಧಿಸಿದ್ದಾನೆ ಎನ್ನಲಾಗುತ್ತದೆಯೆ? ಅವನು ತಿನ್ನಲು ಅಶಕ್ತನಾಗಿದ್ದಾನೆ. ಇನ್ನೊಬ್ಬರಿಗೆ ಕಾಮದಾಸೆಯೇ ಇಲ್ಲ. ಅವರಿಗೀಗ ನೂರಾ ಎರಡು ವರ್ಷ ವಯಸ್ಸು. ಅವರು ಕಾಮವನ್ನು ಗೆದ್ದವರೆ? ಕಾಮವನ್ನು ಕಳೆದುಕೊಂಡವರು. ಹೀಗೆ ಇಂದ್ರಿಯಗಳ ಶಕ್ತಿಗಳನ್ನು ಕಳೆದುಕೊಂಡವರನ್ನುಜಿತೇಂದ್ರಿಯರುಎಂದು ಕರೆಯಲಾಗುವುದಿಲ್ಲ. ಅವರು ಮೃತೇಂದ್ರಿಯರು.

ಕಣ್ಣ ಮುಂದೆ ಸಕಲ ಸೌಭಾಗ್ಯಗಳು ನೆರೆ ನಿಂತಿರುವಾಗ, ಸಕಲ ಇಂದ್ರಿಯಗಳು ಬಲಿಷ್ಠವಾಗಿದ್ದಾಗಲೂ ಅವುಗಳ ಕಡೆಗೆ ಕಣ್ಣೆತ್ತಿ ನೋಡದೆ ನಿಗ್ರಹಿಸುವುದು ಜಿತೇಂದ್ರಿಯತ್ವ. ಉಳಿದದ್ದೆಲ್ಲ ಬರೀ ಬೊಗಳೆ. ಈ ವಿಷಯದಲ್ಲಿ ಅತಿಯಾದ ಚರ್ಚೆ ಬೇಕಿಲ್ಲ. ನಿಜವಾದ ಧೀರರು ಅತ್ಯಂತ ಜಾಗ್ರತವಾದ ಇಂದ್ರಿಯಗಳನ್ನಿಟ್ಟುಕೊಂಡು, ಅವುಗಳನ್ನು ಮಿತವಾಗಿ ಬಳಸುತ್ತ, ನಿಗ್ರಹಿಸಿ ಬದುಕು ಸಾಗಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT