ಸೋಮವಾರ, ಜೂನ್ 27, 2022
24 °C

ಬೆರಗಿನ ಬೆಳಕು: ಅರ್ಧನಾರೀಶ್ವರಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬರಿಯಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |
ಬೆರಕೆಯೆಲ್ಲರುಮರ್ಧನಾರೀಶನಂತೆ ||

ನರತೆಯಣು ನಾರಿಯಲಿ ನಾರೀತ್ವ ನರನೊಳಣು |
ತಿರಿಚುತಿರುವುದು ಮನವ – ಮಂಕುತಿಮ್ಮ ⇒||413||

ಪದ-ಅರ್ಥ: ಗಂಡೆಂಬುದಿಳೆಯೊಳಗಿಲ್ಲ=
ಗಂಡೆಂಬುದು+ಇಳೆಯೊಳಗೆ (ಭೂಮಿಯಲ್ಲಿ)+ಇಲ್ಲ, ಬೆರಕೆಯೆಲ್ಲರುಮರ್ಧನಾರೀಶನಂತೆ=ಬೆರಕೆಯೆಲ್ಲರುಮ್(ಎಲ್ಲರೂ ಬೆರಕೆಯಾದವರು)+ ಅರ್ಧನಾರೀಶನಂತೆ(ಅರ್ಧನಾರೀಶ್ವರನಂತೆ), ನರತೆಯಣುನರತೆಯ+ಅಣು, ನರನೊಳಣು=
ನರನೊಳು+ಅಣು

ವಾಚ್ಯಾರ್ಥ: ಈ ಪ್ರಪಂಚದಲ್ಲಿ ಕೇವಲ ಹೆಣ್ಣು, ಕೇವಲ ಗಂಡು ಎಂಬುದಿಲ್ಲ. ಎಲ್ಲರೂ ಅರ್ಧನಾರೀಶ್ವರನಂತೆ ಮಿಶ್ರಣದ ಗುಣ ಉಳ್ಳವರೇ. ಪುರುಷನ ಕೆಲವು ಗುಣ ಸ್ತ್ರೀಯರಲಿ, ಸ್ತ್ರೀಯ ಕೆಲಗುಣಗಳು ಪುರುಷನಲ್ಲಿ ಸೇರಿ ಮನಸ್ಸನ್ನು ತಿರುಚಿಬಿಡುತ್ತವೆ.

ವಿವರಣೆ: ಮನುಷ್ಯರಲ್ಲಿ ಗಂಡು ಅಥವಾ ಹೆಣ್ಣು ಎಂಬ ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ದೇಹಶಕ್ತಿ, ಕಾರ್ಯಕ್ಷಮತೆ, ಒಲವುಗಳು ಇವನ್ನೆಲ್ಲ ಗಮನಿಸಿ ಕೆಲವು ಗಂಡಸರ ಗುಣಗಳು, ಕೆಲವು ಹೆಂಗಸರ ಗುಣಗಳು ಎಂದು ಗುರುತಿಸಲಾಗಿದೆ. ಅಶಕ್ತತೆಯನ್ನು ತೋರಿದ ಹುಡುಗನಿಗೆ, ಮೃದುಸ್ವಭಾವದವನಿಗೆ ‘ಹೆಣ್ಯಾ’ ಎಂತಲೋ, ಹೆಂಗರುಳಿನವ ಎಂತಲೋ ಛೇಡಿಸಿ, ಹೆಚ್ಚು ಧೈರ್ಯವಂತೆ, ಒರಟು ಸ್ವಭಾವದವಳನ್ನು ‘ಗಂಡುಬೀರಿ’ ಎಂತಲೋ ಕರೆಯುವುದು ಅಭ್ಯಾಸವಾಗಿದೆ. ಪುರುಷರನ್ನು ಹೊಗಳಿ ಸಿಂಹಕ್ಕೆ, ಸ್ತ್ರೀಯರನ್ನು ಹಂಸೆಗೆ, ನವಿಲಿಗೆ ಹೋಲಿಸುವುದುಂಟು. ಅಂದರೆ ಪುರುಷರಿಗೇ ವಿಶಿಷ್ಠವಾದ ಮತ್ತು ಮಹಿಳೆಯರಿಗೇ ವಿಶೇಷವಾದ ಗುಣಗಳನ್ನು ಆರೋಪಿಸಿಕೊಂಡು ಬಂದಿದ್ದೇವೆ.

ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಪುರುಷರು ಮತ್ತು ಸ್ತ್ರೀಯರಲ್ಲಿ ಸಮಾನವಾದ ಅನೇಕ ಗುಣಗಳಿವೆ. ಅಷ್ಟೇ ಅಲ್ಲ, ಹೆಣ್ಣುಗುಣಗಳು ಗಂಡಸಿನಲ್ಲಿ ಮತ್ತು ಗಂಡು ಗುಣಗಳು ಸ್ತ್ರೀಯರಲ್ಲಿ ಕಾಣುತ್ತವೆ. ಧೈರ್ಯ ಪುರುಷಗುಣ ಎನ್ನುವುದಾದದರೆ, ಝಾನ್ಸಿ ಲಕ್ಷ್ಮೀದೇವಿ, ಕಿತ್ತೂರು ಚೆನ್ನಮ್ಮ, ಕಲ್ಪನಾ ಚಾವ್ಲಾ, ಇವರೆಲ್ಲ ತೋರಿದ ಧೈರ್ಯ ಯಾವ ಪುರುಷನಿಗೆ ಕಡಿಮೆ?

ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ತಾವೇ ತಾಯಿಯಾಗಿ ಮಮತೆಯಿಂದ ಕಾಪಾಡಿದ ಅದೆಷ್ಟು ಪುರುಷರನ್ನು ಪ್ರಪಂಚ ಕಂಡಿಲ್ಲ? ಪರಿಸ್ಥಿತಿ ತಾಯಿಯನ್ನು ತಂದೆಯಂತಾಡಿಸುತ್ತದೆ, ತಂದೆಯನ್ನು ತಾಯಿಯಂತೆ ನಡೆಸುತ್ತದೆ. ಅಧ್ಯಾತ್ಮ ಚಿಂತನೆಯಲ್ಲಂತೂ ಹೆಣ್ಣು, ಗಂಡುಗಳಲ್ಲಿ ವ್ಯತ್ಯಾಸವೇ ಇಲ್ಲ. ಜೇಡರ ದಾಸಿಮಯ್ಯನ ಪ್ರಸಿದ್ಧ ವಚನ ಅದನ್ನೇ ಸಾರುತ್ತದೆ.

ಮೊಲೆ ಮುಡಿ ಬಂದರೆ ಹೆಣ್ಣೆಂಬರು
ಗಡ್ಡ, ಮೀಸೆ ಬಂದರೆ ಗಂಡೆಂಬರು.
ನಡುವೆ ಸುಳಿವ ಆತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ. ಕಾಣಾ ರಾಮನಾಥಾ,

ಬಹಿರಂಗ ನೋಟದಲ್ಲಿ ಬೇರೆ ಎನ್ನಿಸಿದರೂ ಅಂತರಂಗದಲ್ಲಿ ಅವು ಎರಡೂ ಒಂದೇ.

ಈ ಮಾತನ್ನು ಕಗ್ಗ ವಿವರಿಸುತ್ತ, ಮನುಷ್ಯರೆಲ್ಲರೂ ಅರ್ಧನಾರೀಶ್ವರರಂತೆ ಎನ್ನುತ್ತದೆ. ಇದರ ಒಳಾರ್ಥವೆಂದರೆ ಪುರುಷ ಮತ್ತು ಸ್ತ್ರೀ ಅಂಶಗಳು ನಮ್ಮೊಳಗೆ ಸಮಾನವಾಗಿ ವಿಂಗಡಣೆಯಾಗಿವೆ. ಪುರುಷರಲ್ಲಿ ಸ್ತ್ರೀಗೆ ಪ್ರಧಾನವಾದ ಗುಣಗಳು ಅಂತೆಯೇ ಸ್ತ್ರೀಯರಲ್ಲಿ ಪುರುಷ ಪ್ರಧಾನವಾದ ಗುಣಗಳು ಬೆರೆತು ಎರಡೂ ಬೇರೆಲ್ಲವೆನ್ನುವಂತೆ ಮಿಳಿತವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು