ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆಗೆ ಅವಕಾಶಕೊಡದ ಕಲರವ

Last Updated 28 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ತಲೆಯೊಳಗೆ ನೆರೆದಿಹವು ನೂರಾರು ಹಕ್ಕಿಗಳು |
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ||
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹವು |
ನೆಲೆಯೆಲ್ಲಿ ನಿದ್ದೆಗೆಲೊ? – ಮಂಕುತಿಮ್ಮ || 203 ||

ಪದ-ಅರ್ಥ: ನೆರೆದಿಹವು=ಸೇರಿಕೊಂಡಿವೆ, ನೆಲೆ=ಸ್ಥಾನ, ಅವಕಾಶ.
ವಾಚ್ಯಾರ್ಥ: ತಲೆಯಲ್ಲಿ ನೂರಾರು ಹಕ್ಕಿಗಳು ಸೇರಿಕೊಂಡಿವೆ. ಗಿಳಿ, ಗೂಗೆ, ಕಾಗೆ, ಕೋಗಿಲೆ, ಹದ್ದು, ನವಿಲು. ಇಂಥ ಹಕ್ಕಿಗಳು ಸದಾಕಾಲ ಸದ್ದು ಮಾಡುತ್ತಲೇ ಇರುತ್ತವೆ. ಆಗ ನಿದ್ರೆಗೆ ಅವಕಾಶವೆಲ್ಲಿ ?

ವಿವರಣೆ: ಮನುಷ್ಯನ ಬದುಕಿನ ಮೂಲ ಉದ್ದೇಶವೇ ಆನಂದ. ಆನಂದಪ್ರಾಪ್ತಿಗಾಗಿಯೇ ಮಾನವನ ಪ್ರತಿಯೊಂದು ಪ್ರಯತ್ನ ನಡೆಯಬೇಕಾದದ್ದು. ಆನಂದದ ಸಾಧ್ಯತೆಗೆ ಮೊದಲು ಪಡೆಯಬೇಕಾದದ್ದು ಶಾಂತಿ. ಮನಸ್ಸಿನ ಶಾಂತಿ ಸುಲಭವೇ? ಮನದಲ್ಲಿ ಶಾಂತಿ ಮೂಡಬೇಕಾದರೆ ಮನಸ್ಸು ಸ್ಥಿರವಾಗಬೇಕು, ಚಂಚಲತೆಯನ್ನು ಬಿಡಬೇಕು.

‘ಮನವ ನಿಲಿಸುವುದು ಬಲು ಕಷ್ಟ’, ‘ಮನವ ಶೋಧಿಸಬೇಕು ನಿಚ್ಚ’, ಈ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಕೀರ್ತನೆಗಳನ್ನು ದಾಸರು ರಚಿಸಿದ್ದಾರೆ. ಮನಸ್ಸು ಅಷ್ಟು ಕುತೂಹಲಕಾರಿಯೂ ಹೌದು, ಚಂಚಲವೂ ಹೌದು. ಅದಕ್ಕೇ ಅದನ್ನು ಮರ್ಕಟಕ್ಕೆ ಹೋಲಿಸುತ್ತಾರೆ. ಕೋತಿ ಚಂಚಲತೆಯ ಸಂಕೇತ. ಬಸವಣ್ಣನವರಂತೂ ಪ್ರತಿ ಕ್ಷಣದಲ್ಲಿ ಬದಲಾಗುವ ಮನಸ್ಸನ್ನು ಕಂಡು, ಅನುಭವಿಸಿ ಹೇಳುತ್ತಾರೆ
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ !
ಕೂಡಲಸಂಗಮ ದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನೈದದು, ನೋಡಾ.

ದೇಹಸುಖದಾಸೆಗೆ ಭ್ರಮೆಗೊಂಡು ಎಲ್ಲೆಲ್ಲಿಯೋ ಹಾರಾಡಿ, ಕೂಡಲಸಂಗಮದೇವನೆಂಬ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷವನ್ನು ಬಿಟ್ಟು, ಕೋತಿಯಂತೆ ಮನಸ್ಸು ಅಳಿಸಿ ಬಳಲಿಸುತ್ತದೆ.

ಈ ಮನಸ್ಸು ಸ್ಥಿರವಾಗಲು ಶಾಂತವಾದ ವಾತಾವರಣಬೇಕು. ಆದರೆ ನಮ್ಮ ತಲೆಯಲ್ಲಿ ನೂರಾರು ಹಕ್ಕಿಗಳು ನೆರೆದಿವೆ. ಅವುಗಳಲ್ಲಿ ಕೆಲವು ಸುಂದರವಾದ ಗಿಳಿ, ನವಿಲುಗಳಿವೆ, ಅತ್ಯಂತ ಮಧುರವಾಗಿ ಉಲಿಯುವ ಕೋಗಿಲೆಯೂ ಇದೆ. ರಾತ್ರಿಯೆಲ್ಲ ಎಚ್ಚರಿದ್ದು ಎಲ್ಲವನ್ನೂ ಗಮನಿಸುವ ಗೂಗೆ ಇದೆ. ಅಷ್ಟು ಎತ್ತರದಲ್ಲಿ ಹಾರುತ್ತಿದ್ದರೂ ನೆಲದಲ್ಲಿ ಬಿದ್ದಿದ್ದ ಸತ್ತ ಪ್ರಾಣಿಯನ್ನೇ ದಿಟ್ಟಿಸಿ ನೋಡುತ್ತ ಬಂದು ಕಚ್ಚಿ ಒಯ್ಯುವ ಹದ್ದು ಸೇರಿಕೊಂಡಿದೆ. ಅಂದರೆ ಮಧುರವಾದ, ಸುಂದರವಾದ, ಕಷ್ಟಕರವಾದ, ನೋವುಕೊಡುವ, ಎಚ್ಚರಗೊಳಿಸುವ ಎಲ್ಲ ನೆನಪುಗಳು, ಚಿಂತೆಗಳು ಈ ಹಕ್ಕಿಗಳಂತೆ ಮನಸ್ಸಿನಲ್ಲಿ ಕಿಲಕಿಲನೆ, ಗೊರಗೊರನೆ ಕಿರಿಚುತ್ತವೆ, ಕೂಗಿ ಕೋಲಾಹಲವೆನ್ನೆಬ್ಬಿಸುತ್ತವೆ. ಇಂಥ ಸದಾಕಾಲಕ್ಕೆ ಗದ್ದಲವನ್ನುಂಟುಮಾಡುವ ವಾತಾವರಣದಲ್ಲಿ ನಿದ್ರೆ ಸಾಧ್ಯವೇ? ಅಂದರೆ ಶಾಂತಿ ಪಡೆಯುವುದು ಸಾಧ್ಯವೇ?

ಈ ಸರ್ವಕಾಲದ ಕಲರವವನ್ನು ನಿಲ್ಲಿಸಲು ಪ್ರಯತ್ನಮಾಡುವುದೇ ಬಹುದೊಡ್ಡ ಯೋಗ. ಅದಕ್ಕೇ ಯೋಗವನ್ನು ಚಿತ್ತವೃತ್ತಿ ನಿರೋಧ ಎನ್ನುವುದು. ಚಿತ್ತದ ಚಂಚಲತೆಯನ್ನು ನಿರೋಧಿಸಿ, ನಿಗ್ರಹಿಸುವುದೇ ಯೋಗ. ಅದರ ಸಾಧನೆಗೆ ನಮ್ಮ ಪ್ರಯತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT