ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಸ್ವಾಮಿ ಭಕ್ತಿ

Last Updated 7 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |

ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸ್ವತ್ಪದಾಶೆಯ ನೀಗಿ – ಮಂಕುತಿಮ್ಮ || 710 ||

ಪದ-ಅರ್ಥ: ಸೇವೆಗೆಯ್ದವಂ=ಸೇವೆಯನ್ನು ಮಾಡಿದವನು, ನೀನಾ=ನೀನು+ಆ, ನಯವನನುಕರಿಸೊ=ನಯವನು(ನೀತಿಯನ್ನು)+ಅನುಕರಿಸೊ, ಸ್ವತ್ಪದಾಶೆಯ=ಸ್ವತ್ಪದ (ತನ್ನದೆಂಬ ಭಾವದ)+ಆಶೆಯ, ನೀಗಿ=ಕಳೆದುಕೊಂಡು.

ವಾಚ್ಯಾರ್ಥ: ಕಣ್ಣಮುಂದಿಲ್ಲದ ಸ್ವಾಮಿಯಾದ ರಾಮನನ್ನು ಸದಾ ನೆನೆಯುತ್ತಾ ಸತ್ಯವಾದ ಭಕ್ತಿಯ ಸೇವೆಯನ್ನು ಮಾಡಿದವನು ಭರತ. ನಿತ್ಯದ ಬದುಕಿನಲ್ಲಿ, ಸ್ವಂತದ್ದೆಂಬ ಭಾವದ
ಆಸೆಯನ್ನು ಕಳೆದುಕೊಂಡು, ನೀನು ಅದೇ ನೀತಿಯನ್ನು ಅನುಸರಿಸು.

ವಿವರಣೆ: ರಾಮಾಯಣದಲ್ಲಿ ಸ್ವಾಮಿಭಕ್ತಿಯ ಅನೇಕ ಉದಾಹರಣೆಗಳು ದೊರೆಯುತ್ತವೆ. ರಾವಣನಲ್ಲಿಯ ಹೆದರಿಕೆ, ಭಕ್ತಿಗಳ ಮಿಶ್ರಣದಿಂದ ಮಾರೀಚ, ಚಿನ್ನದ ಜಿಂಕೆಯಾಗಿ ಪ್ರಾಣ ಕಳೆದುಕೊಂಡದ್ದು ಒಂದಾದರೆ, ತನ್ನ ಒಡತಿಗೆ, ಅನ್ಯಾಯವಾಗಬಾರದೆಂಬ ಒಂದೇ ಕಾರಣಕ್ಕೆ ತನಗೆ ಉಚಿತವೆನ್ನಿಸಿದ ಸಲಹೆಯನ್ನು ಕೊಟ್ಟು. ರಾಮಾಯಣದ ದಾರುಣ ಪ್ರಸಂಗಕ್ಕೆ ಕಾರಣವಾದ ಮಂಥರೆಯದೂ ಸ್ವಾಮಿಭಕ್ತಿಯೇ. ಲಕ್ಷ್ಮಣನ ಸ್ವಾಮಿಭಕ್ತಿ ಮತ್ತೊಂದು. ಅದು ಅವನನ್ನು ಸದಾ ಕಾಲ ರಾಮನ ನೆರಳಾಗಿಯೇ ಇರುವಂತೆ ನೋಡಿಕೊಂಡಿತು. ಸುಗ್ರೀವನಿಗೆ ಹನುಮಂತನದೂ ಸ್ವಾಮಿಭಕ್ತಿ. ಆದರೆ ಆಂಜನೇಯನ ಸ್ವಾಮಿನಿಷ್ಠೆ ಶ್ರೀರಾಮನಲ್ಲಿ ಅತ್ಯದ್ಭುತ ಹಂತವನ್ನು ತಲುಪಿತು.

ಶಬರಿಯದೂ ಸ್ವಾಮಿನಿಷ್ಠೆಯೇ. ರಾಮನಿಗಾಗಿ ಬದುಕೆಲ್ಲ ಕಾದವಳು ಶಬರಿ. ಭರತನದೊಂದು ವಿಶೇಷ. ಆತನೂ ಅಣ್ಣನೊಡನೆ ಕಾಡಿಗೆ ಹೋಗಲು, ರಾಜ್ಯತ್ಯಾಗಮಾಡಲು ಮನಸ್ಸಿದ್ದವನೆ. ಆದರೆ ಅವನು ಆಗ ಇರಲಿಲ್ಲ. ಆದರೆ ಅಣ್ಣನ ಆಜ್ಞೆಯಂತೆ, ತಾಯಂದಿರ ಆರೈಕೆಗೆ, ದೇಶದ ರಕ್ಷಣೆಗೆ ನಿಲ್ಲಲೇಬೇಕಾಯಿತು. ಮನಸ್ಸಿಲ್ಲದಿದ್ದರೂ ರಾಜ್ಯವನ್ನು ನಡೆಸಬೇಕಾಯಿತು. ಕಾಡಿನಲ್ಲಿ, ಜನವಸತಿಯಿಂದ, ಭೋಗ, ಭಾಗ್ಯಗಳಿಂದ ದೂರವಾಗಿದ್ದಾಗ ಸನ್ಯಾಸಿಯ ಬದುಕು ಸಹಜವಾದೀತು. ಯಾಕೆಂದರೆ ಅಲ್ಲಿ ಬೇರೆ ಆಕರ್ಷಣೆಗಳಿಗೆ ದಾರಿಯಿಲ್ಲ. ಆದರೆ ಎಲ್ಲ ಹೊಳಪು, ಚಮತ್ಕಾರಗಳ ನಡುವೆಯೇ ಇದ್ದು ಧರ್ಮವನ್ನು ಪಾಲಿಸುವುದು ನಿಜಕ್ಕೂ ಸಾಹಸದ ಕೆಲಸ.

ಭರತ ಈಗ ಚಕ್ರವರ್ತಿಯಾಗಿದ್ದಾನೆ. ಆಯೋಧ್ಯೆ ಅವನ ರಾಜಧಾನಿ. ಆದರೆ ಭರತ ನಗರವನ್ನು ಪ್ರವೇಶಿಸದೆ ನಂದೀಗ್ರಾಮದಲ್ಲೇ ಉಳಿದು, ಅಧಿಕಾರ, ಯೌವನ, ಹಣ ಇವೆಲ್ಲವುಗಳನ್ನು ಹೊಂದಿಯೂ, ಸನ್ಯಾಸಿಯಂತೆ ಬದುಕಿದ್ದೊಂದು ಮಹತ್ತರ ಸಾಧನೆ. ರಾಮ ಹತ್ತಿರದಲ್ಲೂ ಇಲ್ಲ, ಹದಿನಾಲ್ಕು ವರ್ಷ ಮರಳಿ ಬರುವಂತಿಲ್ಲ ಎಂಬುದು ಗೊತ್ತಿದ್ದರೂ, ಸದಾ ಅವನ ಸ್ಮರಣೆಯಲ್ಲೇ, ಭಕ್ತಿಯಿಂದ ರಾಜಕಾರ್ಯವನ್ನು ಸೇವೆಯೆಂಬಂತೆ ಮಾಡಿದವನು ಭರತ.

ಕಗ್ಗ, ನಮಗೆ ಭರತನ ಬದುಕು ಮಾದರಿಯಾಗಲಿ ಎಂದು ಆಶಿಸುತ್ತದೆ. ಭಗವಂತ ನಮ್ಮಸ್ವಾಮಿ, ನಮ್ಮ ಕರ್ತೃ. ಅವನು ನಮ್ಮನ್ನು ಕಾರ್ಯಮಾಡುವಂತೆ ಭೂಮಿಗೆ ಕಳುಹಿಸಿದ್ದಾನೆ. ಅವನನ್ನು ಒಂದು ಕ್ಷಣವೂ ಮರೆಯದೆ, ಸ್ಮರಿಸುತ್ತ, ನಮಗೆ ಒದಗಿ ಬಂದ ಕಾರ್ಯಗಳನ್ನು ನಿರ್ವಂಚನೆಯಿಂದ, ಸ್ವ್ವಾರ್ಥತ್ಯಾಗದಿಂದ ಮಾಡುವುದೇ ನಾವು ಅವನಿಗೆ ತೋರಬಹುದಾದ ಭಕ್ತಿಯ ಸೇವೆ. ಅದೇ ನಮ್ಮ ಸ್ವಾಮಿಭಕ್ತಿಯ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT