ಬುಧವಾರ, ಸೆಪ್ಟೆಂಬರ್ 23, 2020
27 °C

ಬೆರಗಿನ ಬೆಳಕು | ಎರಡು ದೃಷ್ಟಿಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಜೀವನದ ಪರಿಪೂರ್ಣದರ್ಶನವದೊಂದಿಹುದು |
ಭೂಮ್ಯೋಮ ವಿಸ್ತರದ ಮಿತಿಯ ಮರ‍್ದುದದು ||
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ |
ಭಾವಿಸಾ ಚಿತ್ರವನು – ಮಂಕುತಿಮ್ಮ || 321 ||

ಪದ-ಅರ್ಥ: ಪರಿಪೂರ್ಣದರ್ಶನವ
ದೊಂದಿಹುದು=ಪರಿಪೂರ್ಣ+ದರ್ಶನ+
ಅದೊಂದು+ಇಹುದು, ಭೂಮ್ಯೋಮ+
ಭೂ(ಭೂಮಿ)+ವ್ಯೋಮ(ಆಕಾಶ), ವಿಸ್ತರದ=ವಿಶಾಲತೆಯ, ಮರ‍್ದುದದು=ಮೀರಿದ್ದು.

ವಾಚ್ಯಾರ್ಥ: ನಮ್ಮ ಬದುಕಿನ ಪರಿಪೂರ್ಣ ದರ್ಶನವೊಂದು ಬೇರೆ ಇದೆ. ಅದು ಭೂಮಿ, ಆಕಾಶಗಳ ವಿಸ್ತಾರವನ್ನು ಮೀರಿದ್ದು, ಅಲ್ಲಿ ದೇವತೆಗಳು, ಮನುಷ್ಯರು, ಪಶು-ಪಕ್ಷಿಗಳು, ವೃಕ್ಷಗಳು ನರ್ತಿಸುತ್ತವೆ. ಆ ಚಿತ್ರವನ್ನು ಊಹಿಸಿಕೊ.

ವಿವರಣೆ: ನಮಗೆ ಎರಡು ತರಹದ ದರ್ಶನಗಳಿವೆ. ಒಂದು, ಇಂದ್ರಿಯಗಳಿಂದ ಆಗುವಂಥದ್ದು. ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ, ಚರ್ಮದಿಂದ ಸ್ಪರ್ಶಿಸಿ, ನಾಲಿಗೆಯಿಂದ ರುಚಿ ನೋಡಿ, ಮೂಗಿನಿಂದ ವಾಸನೆ ಪಡೆದು ಬಂದಂತಹ ದರ್ಶನ. ಅದು ನಮ್ಮ ಕಣ್ಣಿಗೇ ಕಾಣುವಂಥದ್ದು. ಇದೇ ನಿಜವಾದ ದರ್ಶನವೇ? ಕಂಡದ್ದೇ ಸತ್ಯವೇ? ಇಂದ್ರಿಯಗಳು ತಂದು ತಂದು ಸುರುವಿದ್ದನ್ನು ಮನಸ್ಸು ಹಿಡಿದುಕೊಳ್ಳುತ್ತದೆ. ಅದನ್ನು ತನಗೆ ತಿಳಿದಂತೆ ಚಿಂತಿಸಿದ್ದನ್ನು ಬುದ್ಧಿ ಬೆಳೆಸಿಕೊಂಡು ಕೆಲಸ ಮಾಡುತ್ತದೆ. ಇದು ತುಂಬ ದುರ್ಬಲವಾದದ್ದು. ಯಾಕೆಂದರೆ ಎಷ್ಟೋ ಬಾರಿ ಮನಸ್ಸು ಹೇಳಿದಂತೆ ಇಂದ್ರಿಯಗಳು ನಡೆಯುತ್ತವೆ. ಮನಸ್ಸು ಕಲುಷಿತವಾಗಿದ್ದರೆ ಇಂದ್ರಿಯಗಳು ತರುವ ದರ್ಶನ ಕೂಡ ಅಸ್ಪಷ್ಟ ಹಾಗೂ ದುರ್ಬಲ. ಅದರಿಂದ ದೊರೆತದ್ದು ಪೂರ್ಣಜ್ಞಾನವಲ್ಲ.

ಬುದ್ಧಿಗೆ ದೊರಕಿದ್ದೆಲ್ಲ ಅನುಭವಗ್ರಾಹ್ಯವಲ್ಲ. ಬುದ್ಧಿಯು ಸ್ವತಂತ್ರವಾಗಿ ಗ್ರಹಿಸಿದ ತತ್ವ ನಿಧಾನವಾಗಿ ಮನಸ್ಸಿಗಿಳಿಯಬೇಕು; ಮನಸ್ಸಿನಿಂದ ಇಂದ್ರಿಯಗಳ ಅನುಸಂಧಾನ ಮಾಡಬೇಕು. ಆಗ ದೊರಕುವುದು ಶುದ್ಧ ಅನುಭವ, ಆ ಸ್ಪಷ್ಟ ಅನುಭವವೇ ಪೂರ್ಣಜ್ಞಾನ.

ಹೃದಯ ನಮ್ಮ ಅನುಭವಗಳ ಗಮ್ಯಸ್ಥಾನ. ಮನಸ್ಸು, ಬುದ್ಧಿಗಳೆರಡೂ ಸಮನ್ವಯದಿಂದ ಕೆಲಸ ಮಾಡಿದಾಗ ಅದು ಹೃದಯದಲ್ಲಿ ಅನುಭವವಾಗುತ್ತದೆ.

ನಮ್ಮ ಬರಿಗಣ್ಣಿಗೆ ಕಾಣುವ ಪ್ರಪಂಚಕ್ಕಿಂತ ಅನುಭವಪ್ರಧಾನವಾದ ಹೃದಯದಿಂದ ಕಾಣುವ ಪ್ರಪಂಚ ಬೇರೆಯೇ. ಆ ದೃಷ್ಟಿಯನ್ನು ಪಡೆಯಲು ನಾವು ಅರ್ಜುನನಂತೆ ಮನ್ಯಸೇ ಯದಿ ತಚ್ಛಕ್ಯಂ ಮಯಾ ದೃಷ್ಟಿಮಿತಿ ಪ್ರಭೊ ಎಂದು ಬೇಡಬೇಕು. ಅವನಿಗೆ ಕೂಡ ಭಗವಂತ ವಿಶೇಷ ದೃಷ್ಟಿಯನ್ನೇ ನೀಡಬೇಕಾಯಿತು. ತನ್ನ ಬರಿಗಣ್ಣಿನಿಂದ ನೋಡಿದ ವಿಶ್ವಕ್ಕೂ, ದಿವ್ಯಚಕ್ಷುವಿನಿಂದ ನೋಡಿದ ವಿಶ್ವಕ್ಕೂ ಅಜಗಜಾಂತರ ವ್ಯತ್ಯಾಸ. ಅದು ಪ್ರಪಂಚದಲ್ಲಿ ಜೀವನದ ಪರಿಪೂರ್ಣದರ್ಶನ. ಅಂಥ ದರ್ಶನದ ಬಗ್ಗೆ ಕಗ್ಗ ತಿಳಿ ಹೇಳುತ್ತದೆ. ಪರಿಪೂರ್ಣದರ್ಶನದಿಂದ ಪ್ರಪಂಚವನ್ನು ಕಂಡರೆ ಅಲ್ಲಿ ಭೂಮಿ, ಆಕಾಶ, ಇವು ಯಾವುದರ ಮಿತಿಗಳೂ ಇಲ್ಲ. ಅರ್ಜುನ ಅನುಭವಿಸಿದ್ದೂ ಅದೇ. ಆ ವಿಶ್ವದಲ್ಲಿ ಸಹಸ್ರಸೂರ್ಯರು ಹೊಳೆದಂಥ ಪ್ರಭೆ ಇದೆ. ಎಲ್ಲ ದಿಕ್ಕುಗಳಲ್ಲಿ ತುಂಬಿದ ವಿಶ್ವಚೈತನ್ಯ. ಅಲ್ಲಿ ಎಲ್ಲ ಸಜೀವ, ನಿರ್ಜೀವ ವಸ್ತುಗಳು ಬಂದು ಬಂದು ಹೋಗುತ್ತಿವೆ. ಎಲ್ಲವೂ ಒಂದರಿಂದಲೇ ಬಂದು ಅದರಲ್ಲಿಯೇ ಲಯವಾಗಿ ಹೋಗುತ್ತಿವೆ. ಅರ್ಜುನ ತನ್ನ ಬರಿಗಣ್ಣಿನಿಂದ ಕಂಡದ್ದು ಶ್ರೀ ಕೃಷ್ಣನ ಮಾನುಷಾಕೃತಿಯ ಮನಮೋಹಕ ರೂಪ. ಆದರೆ ದಿವ್ಯದೃಷ್ಟಿಯಿಂದ ಕಂಡದ್ದು ವಿಶ್ವರೂಪವನ್ನು, ಲಯರೂಪವನ್ನು, ದಿವ್ಯರೂಪವನ್ನು. ಇದೇ ಸಾಮಾನ್ಯದೃಷ್ಟಿಗೂ, ಅನುಭವದ ದೃಷ್ಟಿಗೂ ಇರುವ ವ್ಯತ್ಯಾಸ. ಕಗ್ಗ ಹಾಗೆ ಅನುಭವದ ದೃಷ್ಟಿಯಿಂದ ಪ್ರಪಂಚವನ್ನು ಭಾವಿಸಲು ಕೇಳುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.