ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ‍್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಗುರುರಾಜ ಕರಜಗಿ| ಜೀವನ ಸಾರ್ಥಕ ಎಂದರೇನು?

Last Updated 26 ಏಪ್ರಿಲ್ 2020, 12:22 IST
ಅಕ್ಷರ ಗಾತ್ರ

ಕೊರೊನಾ ಕಾರ್ಮೋಡ ಆವರಿಸಿರುವ ಕತ್ತಲಲ್ಲಿ ಹಾಯ್ ಎನಿಸುವ ಕಿರಣಗಳನ್ನು ಹೊತ್ತು ತರುವ ಬೆಳಕಿಂಡಿ ಇಲ್ಲಿದೆ. ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಂದ ಪ್ರಜಾವಾಣಿ ಓದುಗರಿಗಾಗಿ ‘ಫೇಸ್‌ಬುಕ್‌’ ಲೈವ್ ಉಪನ್ಯಾಸ. ಸಂಜೆ 4ರಿಂದ 5ರ ವರೆಗೂಲೈವ್‌ ವೀಕ್ಷಣೆಗೆ ಇಲ್ಲಿದೆಲಿಂಕ್‌

ಕರಜಗಿ ಮಾತು:

ಜೀವನ ಸಾರ್ಥಕ ಆಗಬೇಕಾದರೆ ಏನು ಮಾಡಬೇಕು? ಜೀವನ ಸಾರ್ಥಕ ಆಗುವುದು ಹೇಗೆ? ಅದಕ್ಕೆ ಮೊದಲು ಜೀವನ ಅಂದರೆ ಏನು? ಜೀವನ ಅಂದರೆ ಬದುಕಿರುವ ತನಕ ಉಸಿರಾಡುವುದು ಅಷ್ಟೇನಾ ಅಥವಾ ಅದಕ್ಕಿಂತ ಬೇರೆ ಏನಾದರೂ ಇದೆಯಾ.ನಮ್ಮ ಹುಟ್ಟು ಅನಿರೀಕ್ಷಿಕ, ಸಾವು ನಿರೀಕ್ಷಿತ, ಅಂದರೆ ಖಚಿತ. ಈ ಅನಿರೀಕ್ಷಿತದಿಂದ ನಿರೀಕ್ಷಿತದವರೆಗಿನ ಅವಧಿ ಇದೆಯಲ್ಲಾ ಅದನ್ನು ನಾವು ಜೀವನ ಅಂತ ಕರೆಯುತ್ತೇವೆ.
ಈ ಜೀವನಕ್ಕೇನಾದರೂ ಅರ್ಥ ಇದೆಯಾ? ಸುಮ್ನೆ ಹೇಗೆ ಸ್ವಲ್ಪ ದಿನ ಇದ್ದು ಹೋಗುವುದಾ ಹೇಗೆ? ಡಿವಿಜಿ ಹೇಳ್ತಾರೆ ಬಹಳ ಮಂದಿ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸಲ್ಲ.ಅವರು ಬಹಳ ಚಂದ ಹೇಳ್ತಾರೆ. ಒಂದು ಹೊತ್ತಿನ ಊಟ ಕೆಲಸ, ಅಂದರೆಜೀತ. ಒಂದು 30*40 ಸೈಟು, ಹೆಂಡ್ತಿ ಮಕ್ಕಳು , ಒಂದು ಮನೆ, ಸಾಯಂಕಾಲ ಧಾರಾವಾಹಿ,ರಾತ್ರಿ ಊಟ ಮಾಡಿ ಮಲ್ಕೊಳ್ಳುವುದು. ಮತ್ತೆ ಮರುದಿನ ಅದೇ ಕೆಲಸ. ಅದಕ್ಕೆ ಶಂಕರಾಚಾರ್ಯರು ಹೇಳಿದರು
ದಿನಮಪಿ ರಜನೀ ಸಾಯಂ ಪ್ರಾತ:
ಶಿಶಿರ ವಸಂತೌ ಪುನರಾಯಾತ: |
ಕಾಲ:ಕ್ರೀಡತಿಗಚ್ಚತ್ಯಾಯ
ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ
ಅದೇ ಕೆಲಸ, ಅದೇ ಬೆಳಗು ಅದೇ ರಾತ್ರಿ ಹೀಗೆ ಗಾಣಕ್ಕೆ ಕಟ್ಟಿದ ಎತ್ತಿನ ಹಾಗೆ ಬದುಕು ಸಾಗ್ತಾ ಇದೆ. ಇಷ್ಟೇನಾ ಜೀವನಾ?
ನಾನೊಂದು ಪುಸ್ತಕ ಓದಿದ್ದೆ. ಸಿಕ್ಕಿದರೆ ದಯವಿಟ್ಟು ಓದಿ. ಐಸಾಕ್ ಅಸಿಮೋವ್ ಅಂತ. ಬಹಳ ದೊಡ್ಡ ವಿಜ್ಞಾನಿ. ವಿಜ್ಞಾನದ ಲೇಖಕರೂ ಹೌದು. ಅವರು ಬರೆದ ಪುಸ್ತಕ - Biographical Encyclopedia of Science and Technology. ಪ್ರತಿಯೊಬ್ಬ ವಿಜ್ಞಾನದ ಮೇಸ್ಟ್ರು, ವಿದ್ಯಾರ್ಥಿಗಳು ಓದಲೇ ಬೇಕಾದ ಪುಸ್ತಕ.

ಅವನು ಏನಂದ ಅಂದರೆ ಇಷ್ಟೊಂದು ಜನ ವಿಜ್ಞಾನಿಗಳು ಆಗುಹೋಗಿದ್ದಾರೆ. ಅವರ ಜೀವನ ಚರಿತ್ರೆ ದಾಖಲೆ ಮಾಡಬೇಕು ಅಂತ ಹುಡುಕಿದ. ಸುಮಾರು 12 ವರ್ಷ ತಪಸ್ಸು ಮಾಡಿದಂತೆ ಹುಡುಕಿದ. ಪುಸ್ತಕ ತಂದ. ಆ ಪುಸ್ತಕದಲ್ಲಿ ಸುಮಾರು 1200 ಜನರ ಜೀವನ ಚರಿತ್ರೆ ಇದೆ. ಅವನು ಹೇಳುತ್ತಾನೆ ಇಷ್ಟಾದರೂ ನನಗೆ ಸಿಗದಂತ ಹಲವಾರು ಸಾಧಕರು ಇರ್ತಾರೆ. ಇಷ್ಟಾದರೂ ಅವನು ಹೇಳ್ತಾನೆ, ಇಷ್ಟೊಂದು ಜನ ಬಂದು ಬಂದು ಹೋಗ್ತಾರಲ್ಲ ಪ್ರಪಂಚದಲ್ಲಿ ಸಾಧಕರ ಸಂಖ್ಯೆ ತುಂಬಾ ಕಡಿಮೆ ಇದೆ. ಬಹುಷಃ 60 ಲಕ್ಷಕ್ಕೆ ಒಬ್ಬ ಮನುಷ್ಯ ತನ್ನ ಹೆಜ್ಜೆ ಗುರುತು ಬಿಟ್ಟು ಹೋಗ್ತಾನೆ . ಉಳಿದವರು ಎಲ್ಲ ಹಾಗೇ ಹೋಗ್ತಾರೆ. ಏನೂ ಸಾಧನೆ ಮಾಡದೆ ಹೋಗ್ತಾರಲ್ಲ. ಯಾಕೆ ಹೀಗಾಯ್ತು? ಅದಕ್ಕೆ ಅವನು ಹೇಳ್ತಾನೆ. ಯಾವುದಾದರೊಂದು ಗುರಿ ಇಟ್ಕೊಂಡು ಬದುಕಿದರೆ ಜೀವನ ಚೆನ್ನಾಗಿರ್ತದೆ ಅಂತ. ಬಹುಷಃ ನಾವು ಗುರಿ ಇಟ್ಕೊಂಡಿಲ್ಲ. ಜೀವನಕ್ಕೊಂದು ಗುರಿ ಇರಬೇಕು, ಒಂದೇ ಒಂದು ಗುರಿ ಇರುವುದಕ್ಕೆ ಸಾಧ್ಯವಾ?

ಕೆಲವರಿಗೆ ಮಧ್ಯಾಹ್ನದ ಊಟ, ಮದುವೆಯಾಗಲು ಒಳ್ಳೆ ಹುಡುಗ/ಹುಡುಗಿ ಸಿಗಬೇಕು ಹೀಗೆ. ಜೀವನಕ್ಕೊಂದು ದೊಡ್ಡ ಗುರಿಗಳಿರುತ್ತವೆ. ಉದಾಹರಣೆಗೆ ತಿರುಪತಿ ಹೋಗ್ತೀವಿ ಅಂತಿಟ್ಟುಕೊಳ್ಳಿ. ಮೊದಲು ಬೆಟ್ಟದ ಪಾದ ಎಂಬುದು ಕಾಣಿಸುತ್ತದೆ. ಮೊದಲು ಕಂಡದ್ದು ಪಾದ, ಆಮೇಲೆ ಕಾಣಿಸಿದ್ದು ಗುಡಿ ಗೋಪುರ. ಗೋಪುರ ಹತ್ತಿರ ಹೋದಾಗ ವಿಮಾನ ಕಾಣಸುತ್ತದೆ. ಇನ್ನೂ ಹತ್ತಿರ ಹೋದಾಗ ಕೊನೆಗೆ ಗರ್ಭಗುಡಿಯಲ್ಲಿ ದೇವರ ವಿಗ್ರಹ ಕಾಣಿಸುತ್ತದೆ. ತಿರುಪತಿಗೆ ಹೋಗುವುದು ನಮ್ಮ ಗುರಿ ಆದರೆ ಅದಕ್ಕಿಂತ ಮುಂಚೆ ಬಸ್‌ಸ್ಟಾಂಡ್, ಆಮೇಲೆ ಪಾದ, ಆಮೇಲೆ ವಿಗ್ರಹ ಮುಂದೆ ನಿಲ್ಲುವುದೇ ನಮ್ಮ ಗುರಿ. ಆದರೆ ವಿಗ್ರಹ ಮುಂದೆ ನಿಂತುಕೊಂಡಾಗ ನಾವು ಕಣ್ಮುಚ್ಚಿಕೊಳ್ಳುತ್ತೇವೆ. ಗುರಿ ಇದ್ದದ್ದು ವಿಗ್ರಹ ನೋಡುವುದು ಮಾತ್ರವಲ್ಲ ವಿಗ್ರಹದ ಹಿಂದಿರುವ ಚೈತನ್ಯ ಯಾವುದು ಅಂತ? ಇದು ಜೀವನದ ಗುರಿ. ಹಿಮಾಲಯ ಹತ್ತಿದಂತೆ ಮೊದಲು ಸಣ್ಣ ಗುಡ್ಡ ಹತ್ತಿ, ಅದು ಎವರೆಸ್ಟ್ ಅಲ್ಲ, ಇನ್ನೊಂದು ಹತ್ತಿ, ಹೀಗೆ ಒಂದೊಂದು ಹತ್ತಿಕೊಂಡು ಹೋಗಬೇಕು. ಎವರೆಸ್ಟ್ ಹತ್ತುವವರು ಸಾವಿರ ಜನ. ಅದರೆ ಸಾಧನೆ ಮಾಡುವವ ಒಬ್ಬನೇ. ಜೀವನದ ಗುರಿಗಳನ್ನು ಹತ್ತಿಕೊಂಡು ಹೋಗಬೇಕು. ಈ ಜೀವನದ ಗುರಿಗಳನ್ನು ಹತ್ತಲು ಸಹಾಯ ಮಾಡುವವರು ಯಾರು?

ಸಹಾಯ ಮಾಡುವವರು ಇಬ್ಬರು. ಒಂದು ಪುಸ್ತಕ, ಇನ್ನೊಬ್ಬರು ಗುರುಗಳು . ಪುಸ್ತಕಗಳು ನಮಗೆ ಜ್ಞಾನ ನೀಡುತ್ತವೆ. ಮಾರ್ಗದರ್ಶನವನ್ನು ನೀಡುತ್ತವೆ. ಇನ್ನೊಬ್ಬರ ಸಾಧನೆಯನ್ನು ಹೇಳುತ್ತವೆ. ಗುರುಗಳು ನಮಗೆ ಹಾದಿ ತೋರಿಸುತ್ತಾರೆ .ಬಹಳ ಹೆಚ್ಚೆಂದರೆ ಅವರು ಏನು ಹೇಳಬೇಕು. ನೋಡಪ್ಪಾ, ಹೀಗೆ ಹೋಗು, ಕೆಲವೊಂದು ಅಡೆತಡೆ ಬರುತ್ತದೆ ಅದನ್ನು ದಾಟಿಕೊಂಡು ಹೋಗು ಎಂದು. ಸಾಮಾನ್ಯ ಒಂದು ಉದಾಹರಣೆ ಅಂದರೆ ನಾವು ಸಣ್ಣವರಿದ್ದಾಗ ಈ ಶಾಪಿಂಗ್ ಮಾಲ್ ಇರಲಿಲ್ಲ. ಅಂಗಡಿಗೆ ಹೋಗಿ ಬೇಕಾದ ವಸ್ತುಗಳನ್ನು ಮಾತ್ರ ತರುತ್ತಿದ್ದೆವು. ಆದರೆ ಶಾಪಿಂಗ್ ಮಾಲ್‌ನಲ್ಲಿ ನಾವು ಆ ವಸ್ತು ಎಲ್ಲಿದೆ ಎಂಬುದನ್ನು ಕೇಳಬಹುದು. ಅದನ್ನೇ ತೆಗೆದುಕೊಳ್ಳಿ ಎಂದು ಅವರು ಹೇಳುವುದಿಲ್ಲ. ಯಾವುದು ತೆಗೆದುಕೊಳ್ಳಬೇಕು ಎಂಬುದು ನಿಮಗೆ ಬಿಟ್ಟಿದ್ದು. ನೀವು ಮನೆಯಿಂದ ಪಟ್ಟಿ ಬರೆದುಕೊಂಡು ಹೋಗಿದ್ದರೂ ಮನೆಗೆ ತರುವ ಸಾಮಾನು ಮೂರು ಪಟ್ಟಿನಷ್ಟಿರುತ್ತದೆ.
ಗುರುಗಳು ಹಾಗೆ ನಿಮಗೆ ಅದು ಅಲ್ಲಿದೆ ಎಂದು ತೋರಿಸುತ್ತಾರೆ. ಆರಿಸಿಕೊಳ್ಳಬೇಕಾದವರು ನಾವೇ. ನಮ್ಮ ಜೀವನಕ್ಕೆ ಗುರಿಗಳನ್ನು ಇಟ್ಟುಕೊಳ್ಳಬೇಕಾದವರು ನಾವೇ. ಅವರು ಮಾರ್ಗದರ್ಶನ ಮಾಡ್ತಾರೆ.
ಎಲ್ಲರಿಗೂ ಉನ್ನತ ಗುರಿ ಇರುವುದಕ್ಕೆ ಸಾಧ್ಯವಾ? ಎಲ್ಲರಿಗೂ ದೊಡ್ಡ ದೊಡ್ಡ ವಿಜ್ಞಾನಿಗಳಾಗಲು ಸಾಧ್ಯವಾ? ಎಲ್ಲರಿಗೂ ಹಾಗೆ ಆಗಲು ಸಾಧ್ಯವಾಗಿಲ್ಲ ಅಂದರೆ ಜೀವನ ವ್ಯರ್ಥವಾ? ಅಲ್ಲ, ಜೀವನದ ಸಾರ್ಥಕತೆ ಮಾತನಾಡಬೇಕು ಎಂದರೆ ಎಲ್ಲರೂ ದೊಡ್ಡವರಾಗಬೇಕೆಂದಿಲ್ಲ. ನಾವು ನಮ್ಮ ಜೀವನದಲ್ಲಿ ಏನು ಮಾಡಬಹುದಾಗಿತ್ತೋ ಅದನ್ನು ನಾವು ಮಾಡಬೇಕು.
ಅದಕ್ಕೊಂದು ಘಟನೆ ಹೇಳಬೇಕು. ಒಂದು ದಿನ ಸಾಯಂಕಾಲ ಡಿವಿಜಿ ಮನೆಗೆ ಹೋದಾಗ ಡಿವಿಜಿ ಅಲ್ಲಿ ಕುಳಿತಿದ್ರು ಒಳಗೆ ಹೋದವರಲ್ಲಿ ಅವರು ಯಾರು ಎಂದು ಕೇಳಿದರು. ಅಲ್ಲಿ ಏನೋ ಸದ್ದಾಯಿತು ರಸ್ತೆ ಮೇಲೆ. ಏನುಸದ್ದು ಎಂದು ಕೇಳಿದಾಗ ಕಿಟಕಿ ತೆರೆದು ನೋಡಿದರೆ ರಸ್ತೆಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಹೆಣ ತೆಗೆದುಕೊಡು ಹೋಗುತ್ತಿದ್ದಾರೆ. ಅದನ್ನು ನೋಡಿ ಡಿವಿಜಿಯವರಿಗೆ ನಿರ್ವಿಕಾರವಾಗಿ ಹೇಳಿದರಂತೆ, ಯಾವುದೋ ಹೆಣ ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿ ಕೂತ್ಕೊಂಡ್ರು. ಆಗ ನೋಡಿದರೆ ಡಿಜಿಜಿ ಕಣ್ಣಲ್ಲಿ ನೀರು.ಯಾಕೆ ಸರ್ ಏನಾಯ್ತು ಎಂದು ಕೇಳಿದಾಗ ಡಿವಿಜಿಯರು ಹೇಳಿದ್ದು ಹೀಗೆ
ಏನೋಪಾ, ಒಂದು ಜೀವ ಭೂಮಿಗೆ ಬಂದಿತ್ತು. ಅದಕ್ಕೆ ಏನು ಆಸೆ ಇತ್ತೋ ಗೊತ್ತಿಲ್ಲ. ಆಸೆ ತೀರ್ತೋ ಗೊತ್ತಿಲ್ಲ .ಭಗವಂತ ಒಂದು ಶಕ್ತಿ ಇಟ್ಟು ಭೂಮಿಗೆ ಕಳಿಸಿದ್ದ ಸಾಧನೆ ಮಾಡಲಿ ಅಂತ. ಸಾಧನೆ ಆಯ್ತೋ ಇಲ್ವೋ. ದೇವರುಒಳ್ಳೇದು ಮಾಡಲಿ.
ನಮ್ಮೊಳಗಿರುವ ಶಕ್ತಿ ಹೊರಗಡೆ ತಂದರೆ ಸಾಕು. ಭಗವಂತ ಕೊಟ್ಟ ಶಕ್ತಿ ಹೊರಗೆ ಬರಬೇಕು. ಒಬ್ಬ ಸಂತ ಇದ್ದ. ಯೆಹೂದಿಯರ ಸಂತ. ಅವನಿಗೆ ವಯಸ್ಸಾಗಿತ್ತು . ಸಾವಿರಾರು ಜನ ಶಿಷ್ಯರಿದ್ದರು. ಒಂದಿನ ಶಿಷ್ಯರು ಹೇಳಿದ್ದರಂತೆ ನಮಗೇನಾದರೂ ಸಂದೇಶ ಕೊಡಿ. ಆತ ಹೇಳಿದನಂತೆ. ನಾನು ಬೇಗ ಸತ್ತು ಹೋಗ್ತೀನಿ. ಸತ್ತು ಹೋದ ನಂತರ ಸಂದೇಶ ಕೊಡ್ತೀನಿ ಅಂದನಂತೆ. ಸತ್ತಮೇಲೆ ಸಂದೇಶ ಹೇಗೆ ಕೊಡ್ತಾರೆ ಅಂತ ಶಿಷ್ಯರು ಯೋಚಿಸಿದ್ದರೂ ಗುರುಗಳಲ್ಲಿ ಕೇಳಲಿಲ್ಲ. ಸ್ವಲ್ವ ದಿನದ ನಂತರ ಗುರುಗಳ ತೀರಿಹೋದರು. ಶಿಷ್ಯರು ಬಂದು ನೋಡ್ತಾರೆ. ಗುರುಗಳನ್ನು ಮಲಗಿಸಿದ್ದಾರೆ. ಮುಷ್ಠಿ ಮುಚ್ಚಿಕೊಂಡು ಎದೆಯ ಮೇಲಿದೆ. ಗುರುಗಳ ಸಂದೇಶಕ್ಕಾಗಿ ಹುಡುಕಿದರು ಏನೂ ಸಿಗಲಿಲ್ಲ. ಒಬ್ಬ ಹೋಗಿ ಗುರುಗಳ ಎಡಮುಷ್ಠಿ ಬಿಚ್ಚಿದ. ಅದರಲ್ಲಿ ಒಂದು ಕಾಗದದಲ್ಲಿ ಬರೆದಿತ್ತು. ನಾನು ಬರೀ ಮಣ್ಣು. ಇದೇನು ಸಂದೇಶ? ಆಮೇಲೆ ಬಲಗಡೆ ಮುಷ್ಟಿ ಬಿಚ್ಚಿದರು. ಅದರಲ್ಲಿಯೂ ಒಂದು ಸಂದೇಶ ಇತ್ತು. ಇಡೀ ಪ್ರಪಂಚ ನನಗಾಗಿ ಸೃಷ್ಟಿಯಾಗಿದೆ ಅಂತ. ಇದೇನು ವಿಚಿತ್ರ? ಶಿಷ್ಯರಿಗೆ ಅರ್ಥ ಆಗಲಿಲ್ಲ. ಆ ಎರಡೂ ಚೂರುಗಳನ್ನು ಜೋಡಿಸಿ ನೋಡಿದರೆ ಅದರ ಹಿಂಭಾಗದಲ್ಲಿ ಬರೆದಿತ್ತು. ನನ್ನ ಎಡಗೈಯಲ್ಲಿದ್ದದ್ದು ವಾಸ್ತವ. ಬಲಗೈಯಲ್ಲಿದ್ದದು ಸಾಧ್ಯತೆ. ನನ್ನಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಬದುಕಿದರೆ ಇಡೀ ಜಗತ್ತು ನನಗಾಗಿದೆ ಎಂಬಂತೆ ಬದುಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT