ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮನದ ಹದ

Last Updated 20 ಜನವರಿ 2021, 2:38 IST
ಅಕ್ಷರ ಗಾತ್ರ

ಕುದಿ ಹೆಚ್ಚೆ ವೆಗಟಹುದು; ಕಡಿಮೆಯಿರೆ ಹಸಿನಾತ |
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||
ಅದರವೊಲೆ ಮನದ ಹದ, ಅದನೆಚ್ಚರದಿ ನೋಡು|
ಬದುಕು ಸೊಗ ಹದದಿಂದ – ಮಂಕುತಿಮ್ಮ


ಪದ-ಅರ್ಥ: ವೆಗಟು=ಕಮಟು ವಾಸನೆ, ಸೀದ ವಾಸನೆ, ಕದಡಲೊಡೆವುದು=ಕದಡಲು(ಕಲಕಿದಾಗ)+ಒಡೆವುದು, ಸೂಕ್ಷ್ಮವದರ=ಸೂಕ್ಷ್ಮ_ಅದರ, ಅದರವೊಲೆ=ಅದರಂತೆ.

ವಾಚ್ಯಾರ್ಥ: ಹಾಲನ್ನು ಕಾಯಿಸುವಾಗ ಕುದಿ ಹೆಚ್ಚಾದರೆ ಸೀದ ವಾಸನೆ ಬರುತ್ತದೆ. ಕಡಿಮೆ ಕಾಯಿಸಿದರೆ ಹಾಲಿನ ಹಸಿ ವಾಸನೆ ಉಳಿಯುತ್ತದೆ. ಬೇರೆ ಯಾವುದೋ ಸೌಟನ್ನು ಹಾಕಿ ಕದಡಿದರೆ ಹಾಲು ಒಡೆದು ಹೋಗುತ್ತದೆ. ಅದರ ಹದ ಸೂಕ್ಷ್ಮ. ಅದರಂತೆಯೆ ಮನಸ್ಸಿನ ಹದ. ಅದನ್ನು ಎಚ್ಚರದಿಂದ ನೋಡಿಕೊಂಡು ಬದುಕನ್ನು ಸೊಗಸಾಗಿಡಬೇಕು.

ವಿವರಣೆ: ಅರ್ನೆಸ್ಟ್ ಹೆಮಿಂಗ್ಪೇ ಅಮೆರಿಕದ ಬರಹಗಾರ ಮತ್ತು ಪತ್ರಕರ್ತ. ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವೀ ಲೇಖಕ. ಬದುಕಿನ ಸಾಹಸಶೀಲತೆ, ಧನಾತ್ಮಕ ಚಿಂತನೆಗಳಿಗಾಗಿ ಹೆಸರಾದವು ಅವನ ಬರಹಗಳು. ಅವನ ‘ಓಲ್ಡ್‌ ಮ್ಯಾನ್ ಆ್ಯಂಡ್ ದ ಸೀ’ ಕಾದಂಬರಿಗೆ 1954ರ ನೋಬೆಲ್ ಪಾರಿತೋಷಕ ಬಂದಿತು. ಅವನು ಒಂದನೆಯ ಮಹಾಯುದ್ಧದಲ್ಲಿ ಆ್ಯಂಬುಲೆನ್ಸ್ ದಳವನ್ನು ಸೇರಿ, ಯುದ್ಧದ ವರದಿಗಾರನಾಗಿ ಧೈರ್ಯವನ್ನು ಪ್ರದರ್ಶಿಸಿದ ವ್ಯಕ್ತಿ. ಸಹಸ್ರಾರು ಜನರಿಗೆ ಪ್ರೇರಣೆಯನ್ನು ನೀಡಿದ, ಆಶಾವಾದವನ್ನು ಬೋಧಿಸಿದ ಹೆಮಿಂಗ್ಪೇ 1961 ಜುಲೈ ಎರಡರಂದು ಆತ್ಮಹತ್ಯೆ ಮಾಡಿಕೊಂಡ. ಅಷ್ಟು ಪ್ರೇರಕನಾಗಿದ್ದ ಮನುಷ್ಯ, ಸ್ಪೂರ್ತಿದಾಯಕವಾಗಿದ್ದ ವ್ಯಕ್ತಿ ಏಕೆ ಹೀಗೆ ಜೀವನವನ್ನು ಅಂತ್ಯಗೊಳಿಸಿದ? ಹಾಗಾದರೆ ಅವನು ಬರೆದದ್ದೆಲ್ಲ ನಾಟಕವೆ? ಇರಲಿಕ್ಕಿಲ್ಲ. ಅಷ್ಟು ದೀರ್ಘವಾಗಿ ನಾಟಕ ಮಾಡಲು ಸಾಧ್ಯವಿಲ್ಲ. ಅಂದರೆ ಯಾವುದೋ ಒಂದು ಕ್ಷಣದಲ್ಲಿ, ಮನಸ್ಸಿಗೆ ನಿರಾಸೆ ಕವಿದು, ಆತ್ಮವಿಶ್ವಾಸ ಕುಸಿದು ಹೋಯಿತೇ? ಇರಬಹುದು. ಮನಸ್ಸು ಹೀಗೆಯೇ ಎಂದು ಹೇಳುವುದು ಬಹಳ ಕಷ್ಟ. ಯಾವಾಗ ಅದು ಉನ್ಮತ್ತತೆಯನ್ನು ಮುಟ್ಟೀತು, ಯಾವಾಗ ಕುಸಿದು ಪಾತಾಳ ಸೇರೀತು ಎಂಬುದನ್ನು ಹೇಳುವುದು ಅಸಾಧ್ಯ. ಜಗತ್ತನ್ನೇ ಗೆಲ್ಲಲು ಹೊರಟ ಮಹಾತ್ವಾಕಾಂಕ್ಷಿ ಹಿಟ್ಲರ್, ತಾನು ಸೋಲುತ್ತೇನೆ ಎಂಬುದು ಖಚಿತವಾದಾಗ ಒಂದು ಗಳಿಗೆಯಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಂಡು, ತಲೆಗೆ ಗುಂಡಿಟ್ಟುಕೊಂಡು ಸಾವನ್ನಪ್ಪಿದ್ದು ಮನಸ್ಸಿನ ಆ ಸ್ಥಿತಿಯಲ್ಲಿಯೇ. ಬುದ್ಧಿವಂತ ತರುಣನೊಬ್ಬ ಚಲನಚಿತ್ರವೆಂಬ ಮಾಯಾಲೋಕವನ್ನು ಸೇರಿ ತನಗಿದ್ದ ಪ್ರತಿಭೆಯಿಂದ ಜನರ ಮೆಚ್ಚಿಗೆಯನ್ನು, ಕಲ್ಪನೆಗೂ ಮೀರಿದ ಹಣವನ್ನು ಪಡೆದು, ತನ್ನ ಸುತ್ತ ಹಬ್ಬಿದ ನೊರೆಯ ವಾತಾವರಣವನ್ನೇ ನಿಜವೆಂದು ನಂಬಿ, ತೇಲಾಡಿ, ಯಾವುದೋ ಒಂದು ಕ್ಷಣದಲ್ಲಿ ಇದೆಲ್ಲ ಗಾಳಿಗೋಪುರವೆಂದು ತಿಳಿದು, ಅರಳಬೇಕಾಗಿದ್ದ ಬಾಳನ್ನು ತಣ್ಣಗಾಗಿಸಿದ್ದು, ಇಂಥ ಕುಸಿದ ಕ್ಷಣಗಳಲ್ಲೇ ಅಲ್ಲವೆ? ಎಂದರೆ ಮನುಷ್ಯನನ್ನು ಸಾಧನೆಯ ಉತ್ತುಂಗಕ್ಕೆ ಕರೆದೊಯ್ಯುವುದೂ ಈ ಮನಸ್ಸೇ, ಅವನನ್ನು ನಿರಾಸೆಯ ಪ್ರಪಾತಕ್ಕೆ ಕೆಡವಿ ದಿಕ್ಕುಗೆಡಿಸುವುದೂ ಈ ಮನಸ್ಸೇ.

ಅದಕ್ಕೆ ಈ ಕಗ್ಗ ಮನಸ್ಸನ್ನು ಹಾಲಿಗೆ ಹೋಲಿಸುತ್ತದೆ. ಅದೂ ಮನಸ್ಸಿನ ಹಾಗೆಯೇ ತುಂಬ ಸೂಕ್ಷ್ಮ. ಹೆಚ್ಚು ಕಾಯಿಸಿದರೆ ಹೊತ್ತಿದ ವಾಸನೆ, ಕಡಿಮೆ ಕಾಯಿಸಿದರೆ ಹಸೀ ಹಾಲಿನ ವಾಸನೆ. ಯಾವುದಾದರೂ ಸ್ವಲ್ಪ ಸ್ವಚ್ಛವಿಲ್ಲದ ಸೌಟು ಹಾಕಿ ಕದಡಿದರೆ ಒಡೆದು ಹೋಗುತ್ತದೆ. ಅಂತೆಯೇ ಮನಸ್ಸಿನ ಹದ. ಮನಸ್ಸನ್ನು ವಿಪರೀತ ಕುದಿಸುವುದು ಸರಿಯಿಲ್ಲ. ಅದನ್ನು ಹೇಗೆಂದರೆ ಹಾಗೆ ಬಿಡುವುದೂ ತಪ್ಪು. ಕೆಟ್ಟ, ಋಣಾತ್ಮಕ ಚಿಂತನೆಗಳೆಂಬ ಸೌಟು ಹಾಕಿ ಕದಡಿದರೆ ಮನಸ್ಸು ಒಡೆದು ಹೋದೀತು. ಅದಕ್ಕೆ ಈ ಮನಸ್ಸನ್ನು ತುಂಬ ಎಚ್ಚರದಿಂದ ನೋಡಿಕೊಳ್ಳಬೇಕು. ಎಲ್ಲಿಯವರೆಗೂ ಮನಸ್ಸು ಹದವಾಗಿರುತ್ತದೆಯೋ ಅಲ್ಲಿಯವರೆಗೆ ಬದುಕು ಸೊಗಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT