ಗುರುವಾರ , ಫೆಬ್ರವರಿ 27, 2020
19 °C

ಆರೋಗ್ಯದ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಇದೊಂದು ಪುಟ್ಟ ಆದರೆ ಅತ್ಯಂತ ಮನನಯೊಗ್ಯವಾದ ಕಥೆ.

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಕಾಡಿನಲ್ಲಿ ಒಂದು ಬುರುಲಿ ಹಕ್ಕಿಯ ಹೊಟ್ಟೆಯಲ್ಲಿ ಜನಿಸಿದ. ಅಲ್ಲಿಯೇ ಕಾಳು, ಹಣ್ಣು–ಕಾಯಿಗಳನ್ನು ತಿನ್ನುತ್ತ ದೊಡ್ಡ ಪಕ್ಷಿಯಾಗಿ ಬೆಳೆದ.

ಅದೇ ಸಮಯದಲ್ಲಿ ವಾರಾಣಸಿಯಲ್ಲಿ ಒಂದು ಕಾಗೆ ಇತ್ತು. ಅದು ನಗರದಲ್ಲಿ ಹಾರಾಡುತ್ತ ಅವರಿವರು ಚೆಲ್ಲಿದ ಆಹಾರ ಪದಾರ್ಥಗಳನ್ನು, ಸೈನಿಕರು ಬಿಸಾಡಿದ ಮಾಂಸದ ತುಂಡುಗಳನ್ನು ತಿಂದು ಬೆಳೆದಿತ್ತು. ಆದರೆ ಅದಕ್ಕೆ ತೃಪ್ತಿ ಇರಲಿಲ್ಲ. ಒಂದು ಬಾರಿ ಅದಕ್ಕೆ ಇನ್ನೊಂದು ಕಾಡುಪಕ್ಷಿಯ ಗೆಳೆತನವಾಯಿತು. ಆ ಪಕ್ಷಿ ಕಾಡಿನ ಸೌಂದರ್ಯವನ್ನು ಅಲ್ಲಿ ದೊರಕುವ ಆಹಾರಗಳ ಬಗ್ಗೆ ವರ್ಣಿಸಿ ಹೇಳಿತು. ಅದನ್ನು ಕೇಳಿ ಕಾಗೆ ಕಾಡಿಗೆ ಬಂದಿತು. ಅಲ್ಲಿ ಇಲ್ಲಿ ಹಣ್ಣುಗಳನ್ನು ತಿನ್ನುತ್ತ ಬೋಧಿಸತ್ವ ಬುರುಲಿ ಇದ್ದ ಮರದ ಮೇಲೆ ಬಂದು ಕುಳಿತಿತು.

ಬುರುಲಿ ಹಕ್ಕಿ ದಪ್ಪನಾಗಿ ಇದ್ದುದನ್ನು ಕಂಡು ಈ ಹಕ್ಕಿಗೆ ಬಹುಶಃ ಅತ್ಯಂತ ಶ್ರೇಷ್ಠ ಆಹಾರ ದೊರೆಯುತ್ತಿರಬೇಕು, ಅದನ್ನು ಕೇಳಿ ತಿಳಿದು ತಾನೂ ಅಂತಹುದೇ ಆಹಾರವನ್ನು ತಿಂದು ತುಂಬ ಸಂತೋಷವಾಗಿರಬೇಕು ಎಂದು ತೀರ್ಮಾನಿಸಿತು. ಮರುದಿನ ಬುರುಲಿ ಹಕ್ಕಿಯೊಡನೆ ಸ್ನೇಹ ಬೆಳೆಸಿತು. ‘ಅಯ್ಯಾ ಬುರುಲಿ ಹಕ್ಕಿ. ನೀನು ಎಷ್ಟು ಸುಂದರವಾಗಿದ್ದೀ, ಎಷ್ಟು ಆರೋಗ್ಯಕರವಾಗಿದ್ದೀ. ನೀನು ಯಾವ ತರಹದ ಆಹಾರ ತಿನ್ನುತ್ತೀ? ಆ ವಿಶೇಷವಾದ ಆಹಾರ ಎಲ್ಲ ಸಿಗುತ್ತದೆ?’ ಎಂದು ಕೇಳಿತು. ಬುರುಲಿ ಹಕ್ಕಿ, ‘ಅಮ್ಮಾ, ನೀನು ಪಟ್ಟಣದ ಪಕ್ಷಿ, ಹಿರಿಯಳು, ನನಗೆ ಸೋದರತ್ತೆ ಇದ್ದಂತೆ. ನೀನು ಪಟ್ಟಣದಲ್ಲಿಯೇ ಇದ್ದವಳು. ಆದರೂ ಏಕೆ ಹೀಗೆ ಒಣಗಿಕೊಂಡು ಸಣ್ಣಗಿದ್ದೀಯೆ?’ ಎಂದು ಕೇಳಿತು. ಕಾಗೆ ಹೇಳಿತು, ‘ಪಟ್ಟಣದಲ್ಲಿದ್ದಾಗ ಯಾವಾಗಲೂ ಶತ್ರುಗಳ ಮಧ್ಯದಲ್ಲೇ ಇದ್ದಂತೆ ಇರಬೇಕು. ಯಾರು, ಯಾವಾಗ ಕಲ್ಲಿನಿಂದ ಹೊಡೆಯುವರೋ ತಿಳಿಯದು. ಊಟವನ್ನು ಕದ್ದು ಕದ್ದು ತಿನ್ನಬೇಕು. ಹೀಗೆ ಭಯದಲ್ಲಿ, ಅವಸರವಸರವಾಗಿ ತಿನ್ನುವುದರಿಂದ ನಾನು ಯಾವಾಗಲೂ ಉದ್ವಿಗ್ನಳಾಗಿಯೇ ಇರಬೇಕಿತ್ತು. ಬುರುಲಿ, ಈ ಕಾರಣಗಳಿಂದಾಗಿ ನಾನು ಉಂಡ ಆಹಾರ ಮೈಗೆ ಅಂಟದೆ ಹೀಗೆ ಬಡಕಲಾಗಿದ್ದೇನೆ. ಶಕ್ತಿಯಿಂದಲೂ ದುರ್ಬಲಳಾಗಿದ್ದೇನೆ. ಆದರೆ ಬುರುಲಿ, ನೀನು ಎಣ್ಣೆಯಿಲ್ಲದ ಒಣ ಹುಲ್ಲು, ಕಾಳುಗಳನ್ನು ತಿನ್ನುತ್ತೀ. ಆದರೂ ನೀನು ಆರೋಗ್ಯವಾಗಿ, ದಪ್ಪಗಿದ್ದೀಯಲ್ಲ. ಏನು ಕಾರಣ?’.

ಈ ಮಾತನ್ನು ಕೇಳಿ ಬುರುಲಿ ತಾನು ಆರೋಗ್ಯವಿರುವ ಕಾರಣವನ್ನು ಹೇಳಿತು, ‘ಅಮ್ಮಾ ಸೋದರತ್ತೆಯಾದ ಕಾಗೆ, ನನಗೆ ಬಹಳ ಅಪೇಕ್ಷೆಗಳಿಲ್ಲ, ನಾನು ತುಂಬ ಚಿಂತೆ ಮಾಡುವುದಿಲ್ಲ. ಬಹಳ ದೂರ ಹಾರಾಡದೆ ಸಿಕ್ಕ ಪದಾರ್ಥಗಳನ್ನು ತಿಂದು ಸಂತೋಷಪಡುತ್ತೇನೆ. ಯಾರು ಅತಿಯಾಸೆಯಿಲ್ಲದೆ, ಅತಿ ಚಿಂತೆಗಳಿಲ್ಲದೆ, ಸರಿಯಾದ ಪ್ರಮಾಣದಲ್ಲಿ ಊಟವನ್ನು ಮಾಡುತ್ತ, ದೊರೆತದ್ದರಲ್ಲೇ ಸಂತೋಷಪಡುತ್ತಾರೋ ಅವರು ಸದಾ ಆರೋಗ್ಯ ಪೂರ್ಣರಾಗಿರುತ್ತಾರೆ. ನನ್ನ ಆರೋಗ್ಯದ ಗುಟ್ಟು ಇದೇ’.

ಈ ಮಾತು ನಮಗೆ ಇಂದಿಗೂ ಬೋಧಪ್ರದವಾದದ್ದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)