ಗುರುವಾರ , ಏಪ್ರಿಲ್ 2, 2020
19 °C

ದಯೆ-ಧರ್ಮ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಒಲ್ಲೆನೆನುವರದಾರ್ ಅಹಿಂಸೆತತ್ತ÷್ವದ ಸೊಬಗ? |
ಸಲ್ಲಿಸುವೆನಾ ವ್ರತವನೆನಲೊಂದು ತೊಡಕು ||
ಹುಲ್ಲೆಯನು ತಿನುವ ಹುಲಿಯೊಣಹುಲ್ಲನೊಣಲಹುದೆ |
ಎಲ್ಲಿ ಸೃಷ್ಟಿಯಲಿ ದಯೆ ? – ಮಂಕುತಿಮ್ಮ || ೨೪೪ ||

ಪದ-ಅರ್ಥ: ಒಲ್ಲೆನೆನುವರದಾರ್= ಒಲ್ಲೆ + ಎನ್ನುವರು + ಅದಾರು, ಹುಲ್ಲೆ = ಜಿಂಕೆ, ಹುಲಿಯೊಣಹುಲ್ಲನುಣಲಹುದೆ = ಹುಲಿ + ಒಣಹುಲ್ಲನು+ಉಣಲಹುದೆ

ವಾಚ್ಯಾರ್ಥ: ಅಹಿಂಸೆ ತತ್ವದ ಸೊಗಸನ್ನು ಬೇಡ ಎನ್ನುವರಾರು? ಆ ವೃತವನ್ನೇ ನಾನು ಸಲ್ಲಿಸುತ್ತೇನೆ ಎನ್ನಲು ತೊಡಕೊಂದಿದೆ. ತನ್ನ ಆಹಾರಕ್ಕೆ ಜಿಂಕೆಯನ್ನು ತಿನ್ನುವ ಹುಲಿ ಹುಲ್ಲು ತಿಂದು ಜೀವಿಸಬಹುದೆ? ಸೃಷ್ಟಿಯಲ್ಲಿ ದಯೆ ಎಲ್ಲಿದೆ?

ವಿವರಣೆ: ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಬರುವ ಪ್ರಶ್ನೆಯನ್ನು ಈ ಕಗ್ಗದಲ್ಲಿ ಕೇಳಲಾಗಿದೆ. ಅಹಿಂಸೆಯ ತತ್ವ ಕೇಳುವುದಕ್ಕೇನೋ ಚೆನ್ನಾಗಿದೆ, ಆದರೆ ಅದನ್ನು ಪಾಲಿಸುವುದು ಸಾಧ್ಯವೇ? ಎಲ್ಲ ವಿಷಯಗಳಲ್ಲಿ ದಯೆ, ಕರುಣೆ ತಕ್ಕುದೇ? ಹುಲಿ ಎಂದಿಗೂ ಹುಲ್ಲು ತಿನ್ನಲಾರದು. ಅಹಿಂಸೆ ತತ್ವವನ್ನು ಪಾಲಿಸುವುದಕ್ಕೆ ಅದು ಜಿಂಕೆ ಮತ್ತಿತರ ಪ್ರಾಣಿಗಳನ್ನು ಕೊಲ್ಲದೆ ಹುಲ್ಲು ತಿಂದು ಜೀವಿಸೀತೇ? ಹೀಗಾಗಿ ಸೃಷ್ಟಿಯಲ್ಲಿಯೇ ದಯೆ ಇಲ್ಲ, ಅದನ್ನು ನಾವು ಪಾಲಿಸುವುದಕ್ಕೆ ಆಗುತ್ತದೆಯೇ ಎನ್ನುವುದು ಪ್ರಶ್ನೆ. ಈ ಪ್ರಶ್ನೆ ಹಿಂಸೆಯನ್ನು ಪ್ರತಿಪಾದಿಸುವುದಕ್ಕಲ್ಲ, ಬದಲಾಗಿ ಧರ್ಮ ಮತ್ತು ಹಿಂಸೆಗಳ ನಡುವಿನ ಸಂಬAಧಗಳ ಜಿಜ್ಞಾಸೆಯನ್ನು ಮುಂದುಮಾಡುತ್ತದೆ.

ಹಿಂಸೆ ಹೇಗೆ ಮನೋವಿಕಾರವೋ, ಕರುಣೆಯೂ ಹಾಗೆಯೇ ಮನೋವಿಕಾರ. ಅದು ಅಂತರಂಗದಿಂದ ಬರುವಂಥದ್ದು. ಅದಕ್ಕೆ ಹೊರಗಣ ಪ್ರೇರಣೆ ಬೇಕಿಲ್ಲ. ನಾವೀಗ ಆಧುನಿಕ ಯುಗದವರು, ಬುದ್ಧಿಪ್ರಧಾನವಾದವರೆಂದು ಭಾವಿಸುವವರು. ನಮ್ಮ ಕರುಣಾರಸ ಹೀಗೆ ಹರಿಯುತ್ತಿದೆ.

ಶತ್ರುಗಳು ನಮ್ಮ ಮೇಲೆ ದಾಳಿ ಮಾಡಿ ನಮ್ಮವರನ್ನು ಕೊಚ್ಚಿ ಹಾಕಲಿ, ನಾವು ಮಾತ್ರ ಸಂಧಾನದ ಭಾಷಣ ಮಾಡುತ್ತಲೇ ಇರೋಣ. ಅತ್ಯಾಚಾರಿಗಳು, ಕೊಲೆಪಾತಕಿಗಳಿಗೆ ಮರಣದಂಡನೆ ಬೇಡ, ದಂಡನೆಯೇ ಬೇಡ. ಪಾಪ! ಅವರು ಸುಧಾರಣೆಯಾಗಬಾರದೇ? ಬೇಕಾದರೆ ಇನ್ನೊಂದೆರಡು ಇಂಥ ಅಪರಾಧಗಳನ್ನು ಮಾಡಲಿ, ಶಿಕ್ಷೆ ಮಾತ್ರ ಬೇಡ. ಪೋಲೀಸರು ಕಳ್ಳರಿಗೆ ದಂಡಿಸಿ ಹಿಂಸೆ ಕೊಡುವುದೇಕೆ? ಕರುಣೆಯಿಂದ ಕಂಡು ಊಟ, ಉಪಚಾರ ಮಾಡಿ ಅವರ ಮನಸ್ಸನ್ನು ಬದಲಾಯಿಸಬಾರದೆ?

ಈ ವಾದ ಕರುಣೆ, ದಯೆದ್ದು ಅಲ್ಲ. ಅಹಿಂಸೆ ತತ್ವದ ಮೂಲವಾದ ಕರುಣೆಯಲ್ಲಿ ಎರಡು ಬಗೆ. ಒಂದು ಪ್ರಾಕೃತ ಕರುಣೆ ಮತ್ತೊಂದು ಅಪ್ರಾಕೃತ ಕರುಣೆ. ಮನುಷ್ಯ, ಮೃಗ, ಪಕ್ಷಿಗಳು ತಮ್ಮ ಮಕ್ಕಳನ್ನು ಪ್ರೀತಿಸುವುದು, ತಮ್ಮ ಆಹಾರವನ್ನು ಸಂಪಾದಿಸಿಕೊಳ್ಳುವುದು ಪ್ರಾಕೃತ ಕರುಣೆ. ಅವುಗಳನ್ನು ಬಿಡಲಾಗುವುದಿಲ್ಲ. ಅಂತೆಯೇ ಕಾಡು ಪ್ರಾಣಿಗಳು ತಮ್ಮ ಬದುಕಿಗೆ ಅವು ಬೇರೆ ಮೃಗಗಳನ್ನು ಬೇಟೆಯಾಡುವುದು ಸ್ವಾಭಾವಿಕ. ಆದರೆ ವಿಚಾರವಿಲ್ಲದ, ವಿವೇಕರಹಿತವಾದ ಕರುಣೆ ಅಪ್ರಾಕೃತವಾದದ್ದು. ಕರುಣೆ ದೊಡ್ಡದು ನಿಜ. ಆದರೆ ಧರ್ಮ ಅದಕ್ಕಿಂತ ದೊಡ್ಡದು. ದಯೆ-ಸ್ವಭಾವಸಿದ್ಧವಾದದ್ದು, ಧರ್ಮ ವಿವೇಕ ಸಿದ್ಧವಾದದ್ದು. ಅದ್ದರಿಂದ ಕರುಣೆಯ ಭಾವ ಮನದಲ್ಲಿ ಹುಟ್ಟಿದಾಗ ಅದನ್ನು ಧರ್ಮದ ಬೆಳಕಿನಲ್ಲಿ ಪರೀಕ್ಷಿಸಿ ಪ್ರಯೋಗಿಸುವುದು ಅವಶ್ಯ.

ಕಗ್ಗ ಕೇಳುವ ಮಾತು, ಹುಲಿ ಹುಲ್ಲು ತಿನ್ನಬಹುದೇ ಅಹಿಂಸೆ ತತ್ವಕ್ಕಾಗಿ, ಎನ್ನುವಲ್ಲಿ ಅದು, ಹುಲಿಯು ತನ್ನ ಬದುಕಿಗೆ ಮಾಡಲೇಬೇಕಾದ ಅನಿವಾರ್ಯವಾದ ಹಿಂಸೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆ. ಆದರೆ ನಾವು ಅನಾವಶ್ಯಕವಾಗಿ, ನಮ್ಮ ಸುಖಕ್ಕೋಸ್ಕರ ಮತ್ತೊಬ್ಬರನ್ನು ನೋಯಿಸುವ ಕಾರ್ಯ ಮಾತ್ರ ಖಂಡಿತವಾಗಿಯೂ ಹಿಂಸೆ. ಆ ಹಿಂಸೆ ಬೇಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)