ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬಿಡುಗಡೆಯ ಕಾಲ

Last Updated 6 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಅವನ ಪಟ್ಟ ಮಹಿಷಿ ಗರ್ಭ ಧರಿಸಿ, ನವಮಾಸಗಳನ್ನು ಕಳೆದು ಪುತ್ರನಿಗೆ ಜನ್ಮವಿತ್ತಳು. ಆಕೆಯ ಹಿಂದಿನ ಜನ್ಮದಲ್ಲಿ ಸವತಿಯಾಗಿದ್ದವಳಿಗೆ ಈಕೆಯ ಮೇಲೆ ಕೋಪವಿತ್ತು. ಆಕೆ ಯಕ್ಷಿಣಿಯಾಗಿ ಈಕೆಯ ಮಕ್ಕಳನ್ನು ತಿಂದುಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಳು. ಅದರಂತೆ ಪುತ್ರ ಜನನವಾದ ತಕ್ಷಣ ಆಕೆ ಅರಮನೆಯನ್ನು ಪ್ರವೇಶಿಸಿ ಮಗುವನ್ನೆತ್ತಿಕೊಂಡು ಹೊರಗೆ ಓಡಿ ಹೋಗಿ ತಿಂದು ಹಾಕಿದಳು. ಎಲ್ಲರು ಹೌಹಾರಿದರು, ಆದರೆ ಏನೂ ಮಾಡಲಾಗಲಿಲ್ಲ. ಎರಡನೆಯ ಬಾರಿಯೂ ಹಾಗೆಯೇ ಆಯಿತು. ಮೂರನೆಯ ಬಾರಿ ಬೋಧಿಸತ್ವ ಆಕೆಯ ಗರ್ಭದಲ್ಲಿಳಿದ. ರಾಜ ಜ್ಞಾನಿಗಳನ್ನು ಕರೆಸಿ ಮಗುವನ್ನು ಉಳಿಸಲು ಏನು ಮಾಡಬೇಕು ಎಂದು ಕೇಳಿದಾಗ ಅವರು ಮಗುವನ್ನು ಲೋಹದ ಮನೆಯಲ್ಲಿ ಹದಿನಾರು ವರ್ಷ ಬೆಳೆಸಬೇಕು, ಯಾಕೆಂದರೆ ಯಕ್ಷಿಣಿ ಲೋಹಗೃಹವನ್ನು ಪ್ರವೇಶಿಸುವುದು ಸಾಧ್ಯವಿಲ್ಲ ಎಂದರು.

ರಾಜ ಒಂದು ದೊಡ್ಡ ಲೋಹದ ಮನೆಯನ್ನು ನಿರ್ಮಿಸಿದ. ಹೆರಿಗೆ ಹತ್ತಿರಕ್ಕೆ ಬಂದಾಗ ರಾಣಿಯನ್ನು ಅದರೊಳಗೆ ಕರೆದೊಯ್ದ. ಮಗು ಹುಟ್ಟಿದ ಮೇಲೆ ಅವನಿಗೆ ಏನೂ ಕೊರತೆಯಾಗದಂತೆ ಆದರೆ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಂಡ. ಅವನಿಗೆ ಲೋಹ ಗೃಹಕುಮಾರ ಎಂದು ಹೆಸರಿಟ್ಟರು. ರಾಜಕುಮಾರ ತುಂಬ ಚೆನ್ನಾಗಿ ಬೆಳೆದ. ಅವನಿಗೆ ಹದಿನಾರು ವರ್ಷ ವಯಸ್ಸಾದಾಗ ಅಮಾತ್ಯರು ಹೇಳಿದರು, ‘ಮಹಾರಾಜ, ಈಗ ರಾಜಕುಮಾರ ಶಕ್ತಿಶಾಲಿಯಾಗಿದ್ದಾನೆ. ಸಹಸ್ರ ಯಕ್ಷಿಣಿಯರನ್ನು ಎದುರಿಸಬಲ್ಲ’. ರಾಜನಿಗೆ ಬಹಳ ಸಂತೋಷವಾಯಿತು. ತನ್ನ ಪ್ರಜೆಗಳಿಗೆ ರಾಜಕುಮಾರನನ್ನು ಪರಿಚಯಿಸುವುದಕ್ಕಾಗಿ ಒಂದು ಮೆರವಣಿಗೆಯನ್ನು ಆಯೋಜಿಸಿದ. ಇಡೀ ನಗರವನ್ನು ಅಲಂಕಾರ ಮಾಡಿ, ರಾಜಕುಮಾರನನ್ನು ಅಲಂಕೃತ ಆನೆಯ ಮೇಲೆ ಕೂಡಿಸಿ ಕರೆತಂದ. ಬೋಧಿಸತ್ವನಿಗೆ ಇದೇ ಮೊದಲ ನಗರ ದರ್ಶನ. ಆತನಿಗೆ ಎಲ್ಲವೂ ಆಶ್ಚರ್ಯ. ಸುಂದರವಾದ ಬೌದ್ಧ ವಿಹಾರಗಳು, ಪುಷ್ಕರಿಣಿಗಳು, ತೋಟಗಳು, ಹೂವು ಹಣ್ಣುಗಳು, ಅಷ್ಟೊಂದು ತರಹದ ಜನರು ಇವರನ್ನೆಲ್ಲ ನೋಡಿ ಬೆರಗಾದ. ತಾನು ಇದುವರೆಗೂ ಇವುಗಳನ್ನೆಲ್ಲ ನೋಡಲೇ ಇಲ್ಲವಲ್ಲ ಎಂದು ಕೊರಗಿದ. ಅಮಾತ್ಯರನ್ನು ಕೇಳಿದ, ‘ನಾನು ಯಾವ ತಪ್ಪು ಮಾಡಿದೆ ಎಂದು ನನ್ನ ತಂದೆ ನನ್ನನ್ನು ಹದಿನಾರು ವರ್ಷಗಳವರೆಗೆ ಕಾರಾಗೃಹದಲ್ಲಿಟ್ಟರು?’. ಅವರು ಹೇಳಿದರು, ‘ರಾಜಕುಮಾರ, ಇದರಲ್ಲಿ ನಿನ್ನ ತಪ್ಪೇನೂ ಇಲ್ಲ. ನಿನ್ನ ಭದ್ರತೆಗಾಗಿಯೇ ಈ ವ್ಯವಸ್ಥೆಯನ್ನು ಮಾಡಲಾಗಿದೆ’.

ಮೆರವಣಿಗೆ ಮುಗಿದು ಅರಮನೆಗೆ ಬಂದ ಮೇಲೆ ರಾಜ, ಕುಮಾರನನ್ನು ಕರೆದು ಅವನಿಗೆ ರಾಜ್ಯಾಭಿಷೇಕ ಮಾಡುವ ವಿಷಯವನ್ನು ಪ್ರಸ್ತಾಪಿಸಿದ. ರಾಜಕುಮಾರ ಹೇಳಿದ, ‘ಮಹಾರಾಜಾ, ನನಗೆ ರಾಜಪದವಿ ಬೇಡ. ನಾನು ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೋಗಿ ಬಿಡುತ್ತೇನೆ’. ರಾಜ, ‘ಮಗೂ ನೀನೊಬ್ಬನೇ ನನಗೆ ಮಗ. ಇಡೀ ರಾಜ್ಯದ ಸಂಪತ್ತು, ಅಧಿಕಾರ ನಿನ್ನದೇ. ಅದನ್ನು ಅನುಭವಿಸು’ ಎಂದ. ಬೋಧಿಸತ್ವ ಹೇಳಿದ ಮಾತು ಮನನೀಯ, ‘ಅಪ್ಪಾ, ತಾಯಿಯ ಗರ್ಭವಾಸದಿಂದ ಹೊರ ಬರಲು ಒಂಭತ್ತು ತಿಂಗಳು ಕಾಯ್ದೆ, ಲೋಹ ಮಂದಿರದಿಂದ ಹೊರಗೆ ಬರಲು ಹದಿನಾರು ವರ್ಷ ಕಾಯ್ದೆ. ಇನ್ನು ಈ ಸಂಸಾರಬಂಧನದಿಂದ ಪಾರಾಗಲು ಇನ್ನೆಷ್ಟು ವರ್ಷ ಕಾಯಲಿ? ಅದಕ್ಕೇ ಅಧಿಕಾರದ ಮತ್ತು ತಲೆಗೆ ಹತ್ತುವ ಮೊದಲೇ ಪಾರಾಗಿಬಿಡುತ್ತೇನೆ’. ಹೀಗೆ ಹೇಳಿ ತಕ್ಷಣವೇ ಹಿಮಾಲಯಕ್ಕೆ ಹೋಗಿ ಪ್ರವ್ರಜಿತನಾದ.

ಬೋಧಿಸತ್ವನಿಗೇ ಅಷ್ಟು ಕಾಲ ಬೇಕಾದರೆ ನಮಗೆಷ್ಟು ಕಾಲಬೇಕೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT