ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕ್ಷೇತ್ರ ವಾಸ

Last Updated 14 ಜುಲೈ 2022, 19:30 IST
ಅಕ್ಷರ ಗಾತ್ರ

ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ
ಸತ್ರದಲಿ ನೇಮದಿಂದಿರಲಿಕೆಡೆಯುಂಟು
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ ಪಾರು
ಪತ್ಯದವ ಮೆಚ್ಚುವನು – ಮಂಕುತಿಮ್ಮ || 672 ||

ಪದ-ಅರ್ಥ: ಸತ್ರ=ಛತ್ರ, ನೇಮದಿಂದಿರಲಿ

ಕೆಡೆಯುಂಟು=ನೇಮದಿಂದ+ಇರಲಿಕೆ+
ಎಡೆಯುಂಟು
(ಅವಕಾಶವುಂಟು), ಮೂರಾಯ್ತು=ಮೂರು+
ಆಯ್ತು, ಹೊರಡೆನೆ=ಹೊರಡು+ಎನೆ.

ವಾಚ್ಯಾರ್ಥ: ನಾವು ಯಾತ್ರಿಕರು. ಈ ಲೋಕ ದಿವ್ಯಕ್ಷೇತ್ರ. ಇಲ್ಲಿಯ ಛತ್ರದಲ್ಲಿ ನೇಮದಿಂದ ಇರಲು ಅವಕಾಶವಿದೆ. ವಸತಿಯ ಮೂರು ರಾತ್ರಿಗಳು ಮುಗಿದೊಡನೆ ಪಾರುಪತ್ಯದವನ ಸೂಚನೆಯಂತೆ ಹೊರಟುಬಿಟ್ಟರೆ ಆತ ಮೆಚ್ಚುತ್ತಾನೆ.

ವಿವರಣೆ: ಒಂದು ಸ್ಥಳ ದಿವ್ಯಕ್ಷೇತ್ರವಾಗುವುದು ಹೇಗೆ? ಅಲ್ಲಿಯ ಜನರ ಬದುಕಿನ ದಿವ್ಯತೆಯಿಂದ, ಜನಮಾನಸದಿಂದ, ಭುವಿಯ ಪುಣ್ಯದಿಂದ, ಆಗಾಗ ಕಾಲದಲ್ಲಿ ತೂರಿಬರುವ ಮಹಾನ್ ವ್ಯಕ್ತಿಗಳ ಜೀವನ ಸಾಧನೆಯಿಂದ. ಅಲ್ಲೊಂದೆಡೆಗೆ ರಾಮ, ಮತ್ತೊಂದೆಡೆಗೆ ಕೃಷ್ಣ, ಮತ್ತೆ ಬೇರೆಡೆಗೆ ಬುದ್ಧ, ಮಹಾವೀರರು, ಗಾರ್ಗಿ, ಮೈತ್ರೇಯಿಯರು, ಇನ್ನೊಂದು ಸ್ಥಳದಲ್ಲಿ ಏಸೂಕ್ರಿಸ್ತ, ಪ್ರವಾದಿಗಳು, ಮತ್ತೆ ಬೇರೆ ಬೇರೆ ಸ್ಥಳಗಳಲ್ಲಿ ಆಚಾರ್ಯತ್ರಯರು, ಶ್ರೀರಾಮಕೃಷ್ಣ, ಝರತುಷ್ಟ, ಲಾವೋತ್ಸೆ, ಬಸವಣ್ಣ, ಮೀರಾ, ದಾಸರು ಇವರೆಲ್ಲ ನೆಲೆನಿಂತು ತಮ್ಮ ಬದುಕಿನ ಸುಗಂಧವನ್ನು ಹರಡಿದ್ದು ಈ ನೆಲದಲ್ಲಿ. ಅದಕ್ಕೇ ಈ ಲೋಕ ಒಂದು ದಿವ್ಯಕ್ಷೇತ್ರವೂ ಹೌದು, ತೀರ್ಥಕ್ಷೇತ್ರವೂ ಹೌದು.

ಇನ್ನೊಂದು ವಿಷಯ. ಮೇಲೆ ಹೇಳಿದ ಯಾವ ದಿವ್ಯಚೇತನಗಳೂ ಇಂದು ದೇಹದಿಂದ ಇಲ್ಲ, ಅವರೆಲ್ಲ ಒಂದು ಕಾಲಕ್ಕೆ ಸಂದು, ತಮ್ಮ ಕರ್ತವ್ಯಗಳನ್ನು ಮುಗಿಸಿ ಮರೆಯಾದವರು. ಹಾಗೆಂದರೆ, ಈ ದಿವ್ಯಲೋಕದಲ್ಲಿ ಯಾರೂ, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಶಾಶ್ವತವಾಗಿ ಇರುವಂತಿಲ್ಲ. ಆದ್ದರಿಂದ ಇದೊಂದು ಛತ್ರ ಇದ್ದ ಹಾಗೆ. ಇಲ್ಲಿ ಜನ ಬಂದು ನಿಯಮಿತ ಅವಧಿಗೆ ಇದ್ದು ಹೋಗಬಹುದು. ಆದರೆ ಯಾವುದನ್ನೂ ನನ್ನದು ಎನ್ನುವಂತಿಲ್ಲ. ಇರುವಷ್ಟು ಕಾಲ ಛತ್ರದ ವಸ್ತುಗಳನ್ನು ಬಳಸಬಹುದು. ಅವುಗಳನ್ನು ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಈ ಛತ್ರದಲ್ಲಿ ಬದುಕಿದಾಗ ಅಲ್ಲಿಯ ನಿಯಮಗಳಂತೆ ವಾಸಿಸಬೇಕು. ಅದು ಕೇವಲ ಮೂರು ದಿನದ ವಾಸವಾದ್ದರಿಂದ, ನಮಗೆ ಕೊಟ್ಟ ವಸ್ತುಗಳನ್ನು ಸರಿಯಾಗಿ, ಜತನದಿಂದ ಬಳಸಬೇಕು. ಅಲ್ಲಿಯ ಜನರೊಂದಿಗೆ ಸಜ್ಜನಿಕೆಯಿಂದ ವ್ಯವಹರಿಸಬೇಕು. ಸ್ಥಳವನ್ನು, ಸುತ್ತಲಿನ ಜನರ ಮನಸ್ಸನ್ನು ಕೊಳಕು ಮಾಡಬಾರದು. ಹೀಗೆ ಬದುಕಿದರೆ ಮಾತ್ರ ಅಲ್ಲಿಯ ಯಜಮಾನ ನಿಮ್ಮನ್ನು ಇರಗೊಡುತ್ತಾನೆ. ಅದಲ್ಲದೆ, ನಮಗೆ ಗೊತ್ತು ಮಾಡಿದ ಅವಧಿ ಮುಗಿದ ತಕ್ಷಣ, ಯಜಮಾನ ಸೂಚನೆ ಕೊಟ್ಟ ಕೂಡಲೆ ತಕರಾರು ಮಾಡದೆ, ಕೊಸರಾಡದೆ ಛತ್ರವನ್ನು ಖಾಲಿಮಾಡಿ ಹೊರಡಬೇಕು.

ಕಗ್ಗ ಇಂತಹ ಸುಂದರ ಪ್ರತಿಮೆಯೊಂದಿಗೆ ಮನುಷ್ಯನ ಬದುಕು ಪ್ರಪಂಚದಲ್ಲಿ ಹೇಗಿರಬೇಕು ಎಂಬುದನ್ನು ತಿಳಿಸುತ್ತದೆ. ಪ್ರಪಂಚ ಯಾರದೂ ಅಲ್ಲ. ನಾವಿಲ್ಲಿ ಯಾತ್ರಿಕರಂತೆ ಒಂದಷ್ಟು ದಿನ ಬಂದು ಇದ್ದು ಹೋಗುತ್ತೇವೆ. ಆದರೆ ಇರುವಾಗ ಸಂಸ್ಕಾರಗಳನ್ನು ಪಡೆದು, ಸುಸಂಸ್ಕೃತರಾಗಿ, ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳುತ್ತ, ಪ್ರಪಂಚಕ್ಕೂ ಕೊಡುಗೆಯನ್ನು ಕೊಡುತ್ತ ಬದುಕಿ, ಜೀವಿತಾವಧಿ ಮುಗಿದೊಡನೆ, ಕೊರಗದೆ, ನಗುನಗುತ್ತ ತೆರಳಿದರೆ, ಈ ಜಗದ ಪಾರುಪತ್ಯದಾರ, ಭಗವಂತ, ಮೆಚ್ಚುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT