ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲನ ಕಾಲಿನ ಹುಲುಗೆಜ್ಜೆ

Last Updated 26 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ |
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ ||
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ |
ಮೇಲೇನು? ಬೀಳೇನು ? – ಮಂಕುತಿಮ್ಮ || 348 ||

ಪದ-ಅರ್ಥ: ಬಾಳಿನೊಳಕಿಚ್ಚು+ಬಾಳಿನ+ಒಳ ಕಿಚ್ಚು(ಬೆಂಕಿ), ದೆಸೆದೆಸೆಗುರಿಯ=ದೆಸೆದೆಸೆಗೆ (ದಿಕ್ಕುದಿಕ್ಕಿಗೆ)+ಉರಿಯ, ಮಣ್ಣನೆರಚುತಿರೆ= ಮಣ್ಣನು+ಎರಚುತಿರೆ.

ವಾಚ್ಯಾರ್ಥ: ಬದುಕಿನಲ್ಲಿಯ ದು:ಖ, ಸಂಕಟಗಳ ಬೆಂಕಿ ತನ್ನ ಉರಿಯನ್ನು ದಿಕ್ಕು ದಿಕ್ಕಿಗೆ ಹರಡಿಸುತ್ತಿರುವಾಗ, ಅದಕ್ಕೆ ಕಾಲನೆಂಬ ತಲೆಕೆಟ್ಟವನು ಮಣ್ಣನ್ನು ತೂರುತ್ತಿರೆ ಜಗದಲ್ಲಿ ಉಳಿದುದೇನು? ಬರೀ ಧೂಳು, ಹೊಗೆ. ಇಂತಹುದರಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದೆಂದು ಹೇಗೆ ಹೇಳುವುದು?

ವಿವರಣೆ: ಇದು ಇಂದಿನ ವಿಶ್ವದ ಪರಿಸ್ಥಿತಿ. ಎಲ್ಲಿ ನೋಡಿದಲ್ಲಿ ಅನಾಹುತದ ತಾಂಡವ ನೃತ್ಯ. ಒಂದು ಸ್ವತ: ಜೀವವಿರದ ವೈರಸ್ ಪ್ರಪಂಚದ ಎಲ್ಲರ ಜೀವಗಳನ್ನು ಹಿಂಡಿಬಿಟ್ಟಿದೆ. ಇದು ಮನುಷ್ಯ ಸೃಷ್ಟಿಯೋ, ನಿಸರ್ಗ ಸೃಷ್ಟಿಯೋ ತಿಳಿಯದು. ಇದರೊಂದಿಗೆ ಹುಚ್ಚು ಹಿಡಿದಂತೆ ಸುರಿದ ಮಳೆಯಿಂದ ಪ್ರವಾಹ. ಜನರೆಲ್ಲ ಕಂಗಾಲು. ಇನ್ನೊಂದೆಡೆಗೆ ಬರಗಾಲದಿಂದ ಬದುಕು
ಬರಡು.

ಇವೆರಡಕ್ಕೆ ನಿಸರ್ಗದಷ್ಟೇ ಮನುಷ್ಯನೂ ಜವಾಬ್ದಾರ. ಅವನ ನಿರ್ಲಕ್ಷತೆಯಿಂದಾಗಿ ಪರಿಸರ ಹಾಳಾಗಿ, ವನ ಮತ್ತು ವನ್ಯ ಸಂಪತ್ತು ಕರಗಿ ಹೋಗುತ್ತಿದೆ, ಋತುಗಳು ಬದಲಾಗುತ್ತಿವೆ. ಇವು ಸಾಲದೆಂಬಂತೆ ಮನೆಯ ಬಾಗಿಲಿಗೆ ಯುದ್ಧ ಬಂದು ನಿಂತಿದೆ. ಇದು ಸಂಪೂರ್ಣವಾಗಿ ಮನುಷ್ಯ ಸೃಷ್ಟಿ. ಇದ್ದ ಮುಷ್ಟಿ ಹಣವನ್ನು, ರೋಗನಿವಾರಣೆಗೆ ಬಳಸುವುದೋ, ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಕೊಡುವುದೋ, ಯುದ್ಧ ರಾಕ್ಷಸನ ಹೊಟ್ಟೆಗೆ ಆಹಾರವಾಗಿ ಯುದ್ಧ ಸಾಮಗ್ರಿಗಳಿಗೆ ಸುರಿಯುವುದೊ ಎಂಬುದು ತಿಳಿಯದೆ ಒದ್ದಾಡುವ ಸರಕಾರಗಳು. ಯಾವುದನ್ನು ಮಾಡಿದರೂ ತೃಪ್ತಿ ಇಲ್ಲ, ಸಮಾಧಾನವಿಲ್ಲ. ಇಂಥ ಪರಿಸ್ಥಿತಿಯನ್ನೇ ಕಗ್ಗ ವಿವರಿಸುತ್ತದೆ. ಬಾಳಿನ ಒಳಕಿಚ್ಚು ದಿಕ್ಕುದಿಕ್ಕಿಗೆ ಹರಡುತ್ತಿದೆ. ಇದು ಕಾಡಿನ ಕಿಚ್ಚಲ್ಲ. ಮನುಷ್ಯರ ಬಾಳಿನ ಒಳಗಿರುವ ಕಿಚ್ಚು. ನಮ್ಮ ಬದುಕಿನಲ್ಲಿ ಉಕ್ಕಿ ಬರುವ ಕೋಪ, ತಾಪ, ಅಸೂಯೆ, ಅಹಂಕಾರ ಮೊದಲಾದ ಗುಣಗಳೇ ಹುಟ್ಟು ಹಾಕಿದ ಈ ಕಿಚ್ಚು ಪ್ರಪಂಚವನ್ನೇ ಸುಡುತ್ತಿದೆ.

ನಮ್ಮೆಲ್ಲ ತಳಮಳಕ್ಕೆ ಈ ಮನುಷ್ಯನ ಹೃದಯದಿಂದ ಬಂದ ಬೆಂಕಿಯೇ ಕಾರಣ. ಈ ಬೆಂಕಿಯನ್ನು ಆರಿಸಲು ಕಾಲ ಮಣ್ಣನ್ನು ಎರಚುತ್ತಿ
ದ್ದಾನೆ. ಆತ ಮಣ್ಣನ್ನು ಎರಚುತ್ತಿದ್ದುದು ನಮ್ಮ ಆಶಯಗಳ ಮೇಲೆ, ನಂಬಿಕೆಗಳ ಮೇಲೆ. ಹಾಗಾದರೆ ಪ್ರಪಂಚದಲ್ಲಿ ಇಂದು ಕಾಣುವುದೇನು? ನಾವು ಸೃಷ್ಟಿಸಿದ ಬೆಂಕಿ ಹಾಗೂ ಕಾಲ ಸುರಿದ ಧೂಳು. ಬೆಂಕಿಯಲ್ಲಿ ನಿಲ್ಲಲಾರೆವು, ಧೂಳು ಕಣ್ಣನ್ನು ಮಬ್ಬು ಮಾಡಿದೆ. ಇಂಥ ಸಂದರ್ಭದಲ್ಲಿ ಒಳತಾವುದು, ಕೆಡಕಾವುದು ? ಇದು ಕೇವಲ ನಿರಾಸೆಯ ಧ್ವನಿಯೆ? ಇಂತಹ ಪ್ರಳಯ ಸಮಾನ ಕಾಲದಲ್ಲೇ ನಾವು ಹೃದಯವಂತಿಕೆಯನ್ನು, ಸುಮಧುರ ಸಂಬಂಧಗಳನ್ನು ಕಟ್ಟಿಕೊಳ್ಳಬೇಕಿದೆ. ಬೇಂದ್ರೆಯವರ ಸಖೀಗೀತದಲ್ಲೊಂದು ಸಾಂತ್ವನದ ಆಶಾಕಿರಣದ ಮಾತಿದೆ.

ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲಗೆಜ್ಜೆ ನಾವಾಗಿರೆ ನನಗೂ ನಿನಗೂ ಅಂಟಿದ ನಂಟಿನ
ಕೊನೆಬಲ್ಲವರಾರು ಕಾಮಾಕ್ಷಿಯೇ !

ಇಡೀ ಜಗತ್ತಿನಲ್ಲಿ ನಡೆದ ರುದ್ರತಾಂಡವ ಝಂಝಾವಾತವನ್ನೇ ನಿರ್ಮಿಸಿತು. ಅಂಥ ಕಾಲನೃತ್ಯದಲ್ಲಿ ನಾವೆಲ್ಲ ಆ ಕಾಲನ ಕಾಲಿನ ಹುಲುಗೆಜ್ಜೆಗಳಿದ್ದ ಹಾಗೆ. ಆದರೆ ಇಂಥ ಭಯಂಕರ ಪರಿಸ್ಥಿತಿಯಲ್ಲೂ ಕವಿ “ನನಗೂ ನಿನಗೂ ಅಂಟಿದ ನಂಟಿದ ಕೊನೆ ಬಲ್ಲವರಾರು” ಎಂದು ತಮ್ಮ ಅಗಲಲಾರದ ಬಂಧವನ್ನು ನೆನಪಿಸಿಕೊಳ್ಳುತ್ತಾರೆ. ಈ ಕಗ್ಗದ ಆಶಯವೂ ಅದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT