ಈಶ್ವರನ ದ್ವಂದ್ವರೂಪಗಳು

7

ಈಶ್ವರನ ದ್ವಂದ್ವರೂಪಗಳು

ಗುರುರಾಜ ಕರಜಗಿ
Published:
Updated:

ಎರಡುಮಿರಬಹುದು ದಿಟ, ಶಿವರುದ್ರನೆಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು |
ಒರುವನಾಡುವುದೆಂತು ? – ಮಂಕುತಿಮ್ಮ ||29||

ಪದ-ಅರ್ಥ: ಎರಡುಮಿರಬಹುದು=ಎರಡು+ಇರಬಹುದು, ದಿಟ=ಸತ್ಯ, ವೇಣು=ಕೊಳಲು, ಬೆರಳ್ಗಳೆರಡಾನುಮಿರೆ=ಬೆರಳ್ಗಳು(ಬೆರಳುಗಳು)+ಎರಡಾನುಂ(ಎರಡಾದರೂ)+ಇರೆÉ, ಒರುವ=ಒಬ್ಬನೇ

ವಾಚ್ಯಾರ್ಥ: ಇವೆರಡೂ ಸತ್ಯವೇ ಇರಬಹುದು. ಯಾಕೆಂದರೆ ಭಗವಂತ ಶಿವನೂ ಹೌದು, ರುದ್ರನೂ ಹೌದು. ಒಂದು ಕೈಯಲ್ಲಿ ಕರ್ಣಾನಂದಕರವಾದ ಕೊಳಲಿದೆ. ಮತ್ತೊಂದು ಕೈಯಲ್ಲಿ ರಣಸೂಚಕವಾದ ಶಂಖವಿದೆ. ಎರಡು ಬೆರಳುಗಳಿದ್ದರೆ ತಾನೇ ಚಿಟಿಕೆಯಾಗುವುದು? ಒಬ್ಬನೇ ಆಡುವುದು ಹೇಗೆ?

ವಿವರಣೆ: ಇದು ಆಧ್ಯಾತ್ಮಿಕ ಸತ್ಯವನ್ನು ಅತ್ಯಂತ ಸೂಚ್ಯವಾಗಿ ತಿಳಿಸುವ ಚೌಪದಿ. ಇಡೀ ಪ್ರಪಂಚವೇ ದ್ವಂದ್ವದಲ್ಲಿರುವಂತೆ ತೋರುತ್ತದೆ. ಪ್ರತಿಯೊಂದರಲ್ಲೂ ವೈರುಧ್ಯ ಕಾಣುತ್ತದೆ. ಭಗವಂತನೆ ಶಿವರುದ್ರನಲ್ಲವೇ? ಶಿವ ಎಂದರೆ ಶಾಂತನಾಗಿರುವವನು, ಮಂಗಳಕರವಾಗಿರುವವನು. ರುದ್ರ ಎಂದರೆ ಭೀಕರನಾಗಿರುವವನು, ಕ್ರೋಧಿಯಾಗಿರುವವನು. ಎರಡೂ ಅವನೇ. ಶಾಂತವಾಗಿ ಲಾಸ್ಯ ಮಾಡುವವನೇ ಕ್ಷಣಾರ್ಧದಲ್ಲಿ ತಾಂಡವ ನ್ಯತ್ಯಮಾಡಬಲ್ಲ. ಇದನ್ನೇ ಎಷ್ಟು ಸುಂದರವಾಗಿ ಡಿ.ವಿ.ಜಿ ಹೇಳುತ್ತಾರೆ. ಆ ಬೊಮ್ಮನ ಒಂದು ಕೈಯಲ್ಲಿ ಕೊಳಲಿದೆ, ಮತ್ತೊಂದರಲ್ಲಿ ಶಂಖವಿದೆ. ಕೊಳಲು ಮನಸ್ಸಿಗೆ ಶಾಂತಿಯನ್ನು, ಮುದವನ್ನು ನೀಡುವ ಚೇತೊಹಾರಿಯಾದ ವಾದ್ಯದ ಸಂಕೇತವಾದರೆ ಶಂಖ ಯುದ್ಧ ಪ್ರಾರಂಭಕ್ಕೆ ಕರೆಕೊಡುವ ರಣೋನ್ಮಾದದ ಕರ್ಕಶತೆಯ ಸಂಕೇತ. ಒಂದು ಸತ್ಯವೆಂದರೆ ಎರಡೂ ಇರುವುದು ಒಬ್ಬನ ಕೈಯಲ್ಲಿಯೇ. ಎರಡು ಬೆರಳುಗಳಿದ್ದಾಗ ಮಾತ್ರ ಚಿಟಿಕೆಯನ್ನು ಮಾಡಬಹದು. ಆದರೆ ಒಬ್ಬನೇ ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆಯನ್ನು ಈ ಕಗ್ಗ ಕೇಳುತ್ತದೆ. ಇದು ಕೇವಲ ಪ್ರಶ್ನೆ ಮಾತ್ರವಲ್ಲ ಆಶ್ಚರ್ಯದ ಗೌರವದ ಉದ್ಗಾರ! ಈ ಭಗವಂತ ಒಬ್ಬನೇ ಹೇಗೆ ಇದನ್ನೆಲ್ಲ ಮಾಡಬಲ್ಲ? ಒಬ್ಬನೇ ಹೀಗೆ ಪರಸ್ಪರ ವಿರೋಧವಾದ ಗುಣಗಳನ್ನು ಹೇಗೆ ತೋರಬಲ್ಲ ಎಂಬ ಅಚ್ಚರಿ!

ಇದನ್ನು ಭಗವದ್ಗೀತೆ ತುಂಬ ಸುಂದರವಾಗಿ ವಿವರಿಸುತ್ತದೆ.

‘ಸುಖಂ ದು:ಖಂ ಭವೋಭಾವೋ ಭಯಂ ಚ ಅಭಯಮೇವ ಚ |’ –10ನೇ ಅಧ್ಯಾಯ.
ನನ್ನ ದೆಸೆಯಿಂದಲೇ ಸುಖ, ದು:ಖ, ಹುಟ್ಟು, ಸಾವು, ಆಗುವುದು, ಆಗದಿರುವುದು, ಸೇರುವುದು, ಬೇರ್ಪಡುವುದು, ಭಯ, ಅಭಯ – ಇವೆಲ್ಲ ನನ್ನ ಪ್ರಭಾವದಿಂದಲೇ ಆಗುವಂತಹವು.

‘ಅಹಂ ಸರ್ವಸ್ಯ ಪ್ರಭವೋ ಮತ್ತ: ಸರ್ವ ಪ್ರವರ್ತತೇ |’
ಈ ಎಲ್ಲವುಗಳಿಗೂ ನಾನೇ ಪ್ರಭು. ಎಲ್ಲ ನಡೆಯುವುದು ನನ್ನಿಂದಲೇ. ‘ಸರ್ವಸ್ಯ’ ಎಂದರೆ ಅದರಲ್ಲಿ ನಾವು ಯಾವುದನ್ನು ಒಳ್ಳೆಯದು ಎನ್ನುತ್ತೇವೋ, ಯಾವುದನ್ನು ಕೆಟ್ಟದ್ದು ಎನ್ನುತ್ತೇವೋ ಅವೆಲ್ಲ ಸೇರಿವೆ. ಸೃಷ್ಟಿಯಲ್ಲಿಯೇ ಈ ದ್ವಂದ್ವವಿದೆ. ಸರಿ ತಪ್ಪುಗಳೆರಡೂ ಬೆರಕೆಯಾಗಿವೆ – ಇಷ್ಟ, ಅನಿಷ್ಟಗಳ ಬೆರಕೆ, ಹಿತ ಅಹಿತಗಳ ಬೆರಕೆ, ತಥ್ಯಮಿಥ್ಯೆಗಳ ಬೆರಕೆ. ಇವೆಲ್ಲ ಚೇಷ್ಟೆಗಳೇ, ಲೀಲೆಗಳೇ. ಒಂದು ತಿಳುವಳಿಕೆಯ ಮಾತೆಂದರೆ ಅವು ಕಣ್ಣಿಗೆ ಬೇರಾಗಿ ಕಂಡರೂ ಅವುಗಳ ಹಿಂದಿರುವ ಚೈತನ್ಯ ಈಶ್ವರನೇ. ಅವನ ಲೀಲೆಗಳೇ ಈ ತೋರಿಕೆಯ ದ್ವಂದ್ವರೂಪಗಳು.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !