7

ನಾಯಕತ್ವದ ಮುಖ್ಯ ಲಕ್ಷಣ

ಗುರುರಾಜ ಕರಜಗಿ
Published:
Updated:

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ಒಬ್ಬ ವ್ಯಾಪಾರಿಯಾಗಿ ಹುಟ್ಟಿದ. ಪ್ರಾಪ್ತವಯಸ್ಕನಾದ ಮೇಲೆ ತಾನೇ ಐನೂರು ಬಂಡಿಗಳಲ್ಲಿ ಸಾಮಾನುಗಳನ್ನು ಹೇರಿಕೊಂಡು ಬೇರೆ ಪ್ರದೇಶಗಳಲ್ಲಿ ಸಂಚರಿಸುತ್ತ ವ್ಯಾಪಾರ ಮಾಡುತ್ತಿದ್ದ.

ಒಂದು ಬಾರಿ ತನ್ನೆಲ್ಲ ಬಂಡಿಗಳನ್ನು ಪರಿವಾರದೊಂದಿಗೆ ಕರೆದುಕೊಂಡು ದೂರದ ಪ್ರದೇಶಕ್ಕೆ ನಡೆದ. ದಾರಿಯಲ್ಲಿ ಅರವತ್ತು ಯೋಜನದ ಮರುಭೂಮಿ. ಅಲ್ಲಿಯ ಮರಳು ಬಹುಸೂಕ್ಷ್ಮ. ಬೆಳಗಿನಿಂದಲೇ ಕಾದು ಬೆಂಕಿಯಂತೆ ಸುಡುತ್ತಿತ್ತು. ಅದಕ್ಕೆ ವ್ಯಾಪಾರಿಗಳೆಲ್ಲ ಹಗಲಿನಲ್ಲಿ ಪ್ರವಾಸಮಾಡದೇ ವಿಶ್ರಾಂತಿ ಪಡೆದು ರಾತ್ರಿಯ ತಂಪಿನಲ್ಲಿ ಮುಂದೆ ನಡೆಯುತ್ತಿದ್ದರು. ಹೀಗೆ ಮರುಭೂಮಿಯಲ್ಲಿ, ಅದರಲ್ಲೂ ರಾತ್ರಿಯ ಪಯಣ ಸಮುದ್ರ ಪಯಣದಂತೆಯೇ, ದಿಕ್ಕೇ ತಿಳಿಯದಂತಾಗುತ್ತಿತ್ತು. ಒಬ್ಬ ನಾಯಕ ನಕ್ಷತ್ರಗಳನ್ನು ನೋಡಿ ಮಾರ್ಗದರ್ಶನ ಮಾಡುತ್ತಿದ್ದ.

ಬೋಧಿಸತ್ವನ ತಂಡ ಇದೇ ರೀತಿ ಪ್ರಯಾಣ ಮಾಡಿ ಐವತ್ತೊಂಭತ್ತು ಯೋಜನಗಳನ್ನು ದಾಟಿತು. ಇನ್ನು ಉಳಿದದ್ದು ಒಂದೇ ಯೋಜನ. ಅದನ್ನು ಈ ರಾತ್ರಿ ದಾಟಿ ಬಿಡುತ್ತೇವೆ ಎಂಬ ನಂಬಿಕೆಯಲ್ಲಿ ಊಟ ಮಾಡಿ ಉಳಿದ ಸೌದೆ, ನೀರು ಎಲ್ಲವನ್ನೂ ಅಲ್ಲಿಯೇ ಬಿಸಾಡಿ ಬಂಡಿಗಳಲ್ಲಿ ಹೊರಟರು. ಬೋಧಿಸತ್ವ ಮುಂದಿನ ಬಂಡಿಯಲ್ಲಿ ಮಲಗಿದ್ದು ನಕ್ಷತ್ರಗಳನ್ನು ನೋಡುತ್ತ ಚಾಲಕನಿಗೆ ಮಾರ್ಗದರ್ಶನ ಮಾಡುತ್ತಿದ್ದ. ಆಯಾಸದಿಂದಲೋ, ತಂಪಾದ ಗಾಳಿಯಿಂದಲೋ ನಿದ್ರೆ ಬಂದುಬಿಟ್ಟಿತು. ಚಾಲಕನೂ ತೂಕಡಿಸಿದ. ಎತ್ತುಗಳು ತಿಳಿಯದೆ ಮರಳಿ ಬಂದ ದಾರಿಯಲ್ಲೇ ನಡೆದುಬಿಟ್ಟವು. ಬೋಧಿಸತ್ವನಿಗೆ ಎಚ್ಚರವಾಗುವಾಗ ಅರುಣೋದಯವಾಗಿತ್ತು. ಎಲ್ಲರೂ ಎದ್ದು ನೋಡಿದರೆ ತಾವು ನಿನ್ನೆ ಬಿಟ್ಟ ಬಿಡಾರಕ್ಕೇ ಮರಳಿ ಬಂದದ್ದು ಗೊತ್ತಾಗಿ ಗಾಬರಿಯಾಯಿತು. ಕುಡಿಯಲು ಒಂದು ಹನಿ ನೀರಿಲ್ಲ, ದನಗಳು ದಣಿದಿವೆ. ಇನ್ನು ನಾವೆಲ್ಲ ಸಾಯುವುದು ಖಚಿತ ಎಂದು ಕುಸಿದು ಕುಳಿತರು.

ಬೋಧಿಸತ್ವ ಯೋಚಿಸಿದ. ನಾನು ಈಗ ಧೈರ್ಯ ಕಳೆದುಕೊಂಡರೆ ತಂಡವೇ ನಾಶವಾಗುವುದು. ಅವನು ಅತ್ತಿತ್ತ ಅಡ್ಡಾಡುವಾಗ ಒಂದೆಡೆಗೆ ಹಸಿರು ಗರಿಕೆ ಇರುವುದನ್ನು ಕಂಡ. ಹಾಗಾದರೆ ಕೆಳಗೆ ನೀರಿರಬೇಕು ಎಂದು ಒಂದಿಬ್ಬರು ಗಟ್ಟಿಯಾಗಿದ್ದ ಜೊತೆಗಾರರನ್ನು ಕರೆದು ತಾನೂ ಅಗೆಯಲಾರಂಭಿಸಿದ. ಸುಮಾರು ಹತ್ತು ಅಡಿಯಷ್ಟು ಅಗೆದಾಗ ಕಲ್ಲಿನ ಬಂಡೆ ಹತ್ತಿತು. ಎಲ್ಲರಿಗೂ ನಿರಾಸೆಯಾಯಿತು. ಇನ್ನು ನೀರು ಸಿಗುವುದು ಕನಸೇ ಎಂದುಕೊಂಡರು. ಆದರೆ ಬೋಧಿಸತ್ವ ಕೆಳಗಿಳಿದು ಕಲ್ಲಿಗೆ ಕಿವಿಗೊಟ್ಟು ಆಲಿಸಿದ. ಜುಳುಜುಳನೆ ನೀರು ಹರಿಯುವ ಸದ್ದು ಕೇಳಿಸಿತು. ತನ್ನ ಜೊತೆಗಾರನಿಗೆ ಹೇಳಿದ, ‘ನೀನು ಹೆದರಿದರೆ ನಾವೆಲ್ಲರೂ ನಾಶವಾಗುತ್ತೇವೆ. ನೀನು ಕೆಳಗಿಳಿದು ಸುತ್ತಿಗೆಯಿಂದ ಈ ಕಲ್ಲನ್ನು ಒಡೆದುಬಿಡು’. ಇವನ ಮಾತಿನಿಂದ ಪ್ರೇರಿತನಾಗಿ ಆತ ಕಲ್ಲಿನ ಮೇಲೆ ಹತ್ತಾರು ಪೆಟ್ಟು ಹಾಕಿದ. ಮತ್ತೊಂದು ಹೊಡೆತಕ್ಕೆ ಕಲ್ಲು ಒಡೆದು ತಾಳೆ ಮರದ ಗಾತ್ರದ ನೀರು ಮೇಲಕ್ಕೆ ಚಿಮ್ಮಿತು. ಎಲ್ಲರೂ ನೀರು ಕುಡಿದು, ಸ್ನಾನ ಮಾಡಿ, ಅಡುಗೆ ಮಾಡಿಕೊಂಡು ವಿಶ್ರಾಂತಿ ಪಡೆದರು. ರಾತ್ರಿ ಹೊರಡುವ ಮುನ್ನ ಮುಂದೆ ಬರುವವರಿಗೆ ಅನುಕೂಲವಾಗಲೆಂದು ನೀರಿನ ಹೊಂಡದ ಬಳಿ ಧ್ವಜವನ್ನು ನೆಟ್ಟು ಪ್ರಯಾಣ ಬೆಳೆಸಿ ಅಪೇಕ್ಷಿತ ಸ್ಥಳವನ್ನು ತಲುಪಿದರು. ವ್ಯಾಪಾರದಿಂದ ನಾಲ್ಕು ಪಟ್ಟು ಹಣ ಸಂಪಾದಿಸಿ ಸಂತೋಷದಿಂದ ಮನೆಗೆ ಮರಳಿದರು.

ನಾವು ಕೈಕೊಂಡ ಯಾವುದೇ ಕಾರ್ಯದಲ್ಲಿ ಅನಿರೀಕ್ಷಿತವಾದ ಅಡೆತಡೆಗಳು ಬರುತ್ತವೆ, ನಮ್ಮನ್ನು ಕಂಗಾಲು ಮಾಡುತ್ತವೆ. ಬಹಳಷ್ಟು ಜನ ಹೆದರಿಕೆಯಿಂದ, ನಿರಾಸೆಯಿಂದ ಕುಸಿಯುತ್ತಾರೆ. ಆದರೆ ನಿಜವಾದ ನಾಯಕತ್ವದ ಗುಣ ಇರುವವರು ಆ ಸಂಕಷ್ಟದ ಸ್ಥಿತಿಯಲ್ಲೇ ಅತ್ಯುತ್ತಮವಾದ ಪರಿಹಾರವನ್ನು ಹುಡುಕುತ್ತಾರೆ.

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !