ಶನಿವಾರ, ಆಗಸ್ಟ್ 13, 2022
24 °C

ಎತ್ತರದ ನೋಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸತ್ಯಾನುಭವವೆಲ್ಲರಿಗಮೊಂದೆಂತಹುದು ? |
ಬೆಟ್ಟದಡಿಯೊಳಗೊಬ್ಬ; ಕೋಡಬಳಿಯೊಬ್ಬ ||
ಎತ್ತರದ ದೃಶ್ಯ ಕಣಿವೆಯೊಳಿಹನಿಗಾದೀತೆ ? |
ನೇತ್ರದಂದದೆ ನೋಟ – ಮಂಕುತಿಮ್ಮ || 333 ||

ಪದ-ಅರ್ಥ: ಸತ್ಯಾನುಭವವೆಲ್ಲರಿಗಮೊಂದೆಂತಹುದು=ಸತ್ಯಾನುಭವ+ಎಲ್ಲರಿಗೂ+ಒಂದೆ+ಎಂತಹುದು, ಕೋಡಬಳಿಯೊಬ್ಬ=ಕೋಡಬಳಿ(ಶಿಖರದ ಹತ್ತಿರ)+ ಒಬ್ಬ, ಕಣಿವೆಯೊಳಿಹನಿಗಾದೀತೆ=ಕಣಿವೆಯೊಳು+ಇಹನಿಗೆ(ಇರುವವನಿಗೆ)+ಆದೀತೆ, ನೇತ್ರದಂದದೆ=ಕಣ್ಣು ಕಂಡ ಹಾಗೆ.
ವಾಚ್ಯಾರ್ಥ: ಸತ್ಯದ ಅನುಭವ ಎಲ್ಲರಿಗೂ ಒಂದೇ ರೀತಿ ಆದೀತೆ ? ಬೆಟ್ಟದ ಬುಡದಲ್ಲಿರುವವನೊಬ್ಬ, ಶಿಖರದ ಮೇಲೆ ನಿಂತಿರುವವನೊಬ್ಬ. ಶಿಖರದಿಂದ ಕಂಡ ನೋಟ ಕಣಿವೆಯಲ್ಲಿದ್ದವನಿಗೆ ಆದೀತೆ? ಕಣ್ಣು ಕಂಡಷ್ಟೇ ದೃಶ್ಯ.

ವಿವರಣೆ: ಸತ್ಯದ ಅನುಭವ ಎಲ್ಲರಿಗೂ ಒಂದೇ ಆಗಿರುವುದು ಸಾಧ್ಯವೆ? ಈ ಕಗ್ಗದಲ್ಲಿ ಮುಂದೆ ನೀಡುವ ಪ್ರಸಂಗವನ್ನು ಎರಡು ಹಂತದಲ್ಲಿ ಕಾಣಬಹುದು. ಮೊದಲನೆಯದು ದೃಷ್ಟಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯ ಕಣಿವೆಯಲ್ಲಿದ್ದಾನೆ, ಮತ್ತೊಬ್ಬ ಬೆಟ್ಟದ ಶಿಖರ ಪ್ರದೇಶದಲ್ಲಿದ್ದಾನೆ. ಎತ್ತರದಲ್ಲಿದ್ದವನಿಗೆ ವಿಶಾಲವಾದ ಭೂಪ್ರದೇಶ ಕಂಡೀತು. ಅವನ ದೃಷ್ಟಿ ವಿಸ್ತಾರವಾದದ್ದು. ಕಣಿವೆಯಲ್ಲಿರುವವನಿಗೆ ಕಾಣುವುದು ತೀರಾ ಸ್ವಲ್ಪ. ಅದೇ ಅವನಿಗೆ ದಕ್ಕಿದ್ದು. ಇವರಿಬ್ಬರ ದೃಷ್ಟಿ ವೈಶಾಲತೆ ಬೇರೆಯೇ ಆದದ್ದು. ಇದನ್ನೇ ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ಇದು ದೃಷ್ಟಿಯದಲ್ಲ, ಸತ್ಯದ ಬಗೆಗಿನದು. ಸತ್ಯ ಒಂದೇ ಆಗಿದ್ದರೆ ಎಲ್ಲರಿಗೂ ಅದೇ ಕಾಣಬೇಕಿತ್ತಲ್ಲ? ಬೇರೆ ಬೇರೆ ಮತಗಳು, ಬೇರೆ ಜನರು ಒಂದೇ ಸತ್ಯವನ್ನು ಭಿನ್ನವಾಗಿ ಕಾಣುವುದು ಏಕೆ? ಅದು ಅವರ ಬುದ್ಧಿ, ಮನಸ್ಸಿನ ಸಿದ್ಧತೆ, ಸಂಸ್ಕಾರಗಳಲ್ಲಿದ್ದ ವ್ಯತ್ಯಾಸ. ಇದು ಸಾಧನಗಳಲ್ಲಿರುವ ವ್ಯತ್ಯಾಸವೇ ಹೊರತು ಸತ್ಯದ್ದಲ್ಲ.

ಮಹಾತ್ಮ ಗಾಂಧೀಜಿಯವರು 1939 ರಲ್ಲೊ 1945 ರಲ್ಲೋ ಯಾವುದೋ ವಿಷಯದ ಬಗ್ಗೆ ಮಾತನಾಡಿದ್ದನ್ನು ಈಗ 2020 ರಲ್ಲಿ ಚರ್ಚೆ ಮಾಡುತ್ತ ಆಗ ಗಾಂಧೀಜಿ ಹೇಳಿದ್ದು ಸತ್ಯವಲ್ಲ ಎಂದು ವಾದ ಮಾಡುವುದನ್ನು ಕೇಳಿದ್ದೇವೆ. ಈ ಭಿನ್ನತೆ ಕಂಡದ್ದಕ್ಕೆ ಅನೇಕ ಕಾರಣಗಳು. ಅಂದು ಗಾಂಧೀಜಿಯವರಿಗೆ ಎದುರಾದ ಪ್ರಸಂಗಗಳು, ಅವರ ಜೀವನಾನುಭವ, ಅಂದಿನ ರಾಜಕೀಯ ಒತ್ತಡಗಳು ಅವರಾಡಿದ ಮಾತಿಗೆ ಕಾರಣಗಳಾಗಿ ದ್ದವು. ಇಂದಿನವರೆಗೆ ಸುಮಾರು ಎಪ್ಪತ್ತೈದು ವರ್ಷಗಳ ಅಂತರದ ಅವಕಾಶವಿದೆ. ಅಂದಿನ ಒತ್ತಡ ಇಂದಿಲ್ಲ, ಬಹುಶಃ ಜೀವನಾನುಭವ, ರಾಜಕೀಯ ಪಟುತ್ವವೂ ಅಷ್ಟಿಲ್ಲದೆ ಹೋಗಿರಬಹುದು.

ದೇಶದ ಪ್ರಧಾನಮಂತ್ರಿಗಳು ಸತ್ಯವೆಂದು ಹೇಳಿದ ವಿಷಯವೊಂದು ಸಾಮಾನ್ಯ ಪ್ರಜೆಗೆ ಅಸತ್ಯವೆಂದು ತೋರಬಹುದು. ಇದಕ್ಕೆ ಸಾಧನಗಳ ವ್ಯತ್ಯಾಸ ಕಾರಣ. ಪ್ರಧಾನಮಂತ್ರಿಯವರಿಗೆ ದೊರೆತ ಮಾಹಿತಿಗಳು, ಅವಕಾಶಗಳು, ವಾಸ್ತವ ಚಿತ್ರಣ, ಮತ್ತು ಅವರಿಗೆ ಸಲಹೆಗಳನ್ನು ನೀಡುವ ಪರಿಣತರ ಪಡೆ, ಸಾಮಾನ್ಯರಿಗೆ ಇರುವ ಸಾಧ್ಯತೆ ಇಲ್ಲ. ಆದ್ದರಿಂದ ಪ್ರಧಾನಮಂತ್ರಿಯವರ ಸ್ಥಾನದ ಎತ್ತರದ, ವಿಸ್ತಾರದ ನೋಟ ಇವರಿಗಿಲ್ಲ. ಅದೇ ಸತ್ಯವನ್ನು ಬೇರೆಯಾಗಿ ತೋರಿದ್ದು.

ಕಗ್ಗ ಹೇಳುವ ಮಾತು ತುಂಬ ಮಾರ್ಮಿಕ ವಾದದ್ದು, “ನೇತ್ರದಂದದೆ ನೋಟ”. ನಮ್ಮ ದೈಹಿಕ ಕಣ್ಣು ಕಂಡಷ್ಟೇ ನೋಟ ಅಥವಾ ನಮ್ಮ ಅನುಭವದ, ದರ್ಶನದ ಆಂತರ್ಯದ ಕಣ್ಣು ಕಂಡಷ್ಟು ನಮ್ಮ ನೋಟ. ನಮ್ಮ ನೋಟ ವಿಸ್ತಾರವಾಗಬೇಕಾದರೆ ನಾವು ನೈತಿಕವಾಗಿ, ಅಧ್ಯಾತ್ಮಿಕವಾಗಿ ಬೆಳೆಯಬೇಕು. ಬೆಳೆದಷ್ಟು ದೂರದ, ವಿಸ್ತಾರದ ನೋಟ, ಆಳವಾದ ಸತ್ಯದ ಅರ್ಥವಾದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು