ಭಾನುವಾರ, ಜನವರಿ 24, 2021
27 °C

ಬೆರಗಿನ ಬೆಳಕು: ಮನವೆಂಬ ಬುನಾದಿ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಗುರುರಾಜ ಕರಜಗಿ

ಮನೆಯ ತೊರೆದೊಡಲೇಂ ವನಗುಹೆಯ ಸಾರಲೇಂ? |
ತನುವನುಗ್ರವೃತಗಳಿಂದೆ ದಂಡಿಸಲೇಂ? ||
ಬಿನದಗಳನರಸಿ ನೀನೂರೂರೊಳಲೆದೊಡೇಂ ? |
ಮನವ ತೊರೆದಿರಲಹುದೆ ? – ಮಂಕುತಿಮ್ಮ ||373 ||

ಪದ-ಅರ್ಥ: ತನುವನುಗ್ರವೃತಗಳಿಂದೆ=ತನುವನು(ದೇಹವನ್ನು)+ಉಗ್ರ+ವೃತಗಳಿಂದೆ, ಬಿನದಗಳನರಸಿ=ಬಿನದಗಳ(ವಿನೋದಗಳ)+
ಅರಸಿ, ನೀನೂರೂರೊಳಲೆದೊಡೇಂ=ನೀನು+ಊರೂರೊಳು+ಅಲೆದೊಡೆ+ಏಂ(ಏನು), ತೊರೆದಿರಲಹುದೆ=ತೊರೆದಿರಲು
(ಬಿಟ್ಟಿರಲು)+ಅಹುದೆ(ಸಾಧ್ಯವೆ).

ವಾಚ್ಯಾರ್ಥ: ಮನೆಯನ್ನು ಬಿಟ್ಟು, ಕಾಡಿನಲ್ಲಿ ಗುಹೆಯನ್ನು ಸೇರಿ, ದೇಹವನ್ನು ಉಗ್ರವಾದ ವೃತಗಳಿಂದ ದಂಡಿಸಿದರೆ ಏನಾಗುತ್ತದೆ? ವಿನೋದಗಳನ್ನು ಹುಡುಕಿಕೊಂಡು ಊರೂರುಗಳನ್ನು ಸುತ್ತಿದರೇನಾದೀತು? ಮನಸ್ಸನ್ನು ಬಿಟ್ಟಿರಲಾದೀತೇ?

ವಿವರಣೆ: ಅಮೆರಿಕದ ತತ್ವಜ್ಞಾನಿ ಹೆವ್ರಿ ಡೇವಿಡ್ ಥೊರೋ ನೆನಪುಗಳನ್ನು ಆತ್ಮದೊಡನೆಯ ನಂಟು ಎನ್ನುತ್ತಾನೆ. ಅತ್ಯಂತ ಆಪ್ತವಾದ ನೆನಪುಗಳು ಕಾಲಕಳೆದಂತೆ ಒಂದಷ್ಟು ಮಾಸಬಹುದು, ಆದರೆ ಅಳಿಸಿ ಹೋಗಲಾರವು. ಮನೆಯನ್ನು, ಆತ್ಮೀಯರನ್ನು ತೊರೆದು ಅದೆಷ್ಟು ದೂರ ಹೋದರೂ ನೆನಪು ಮರೆಯಾದೀತೇ? ದೂರ ಹೋದಷ್ಟು ಮನೆಯ, ಮನೆಯವರ, ಹಿಂದಿನ ಘಟನೆಗಳ ಸೆಳೆತ ಹೆಚ್ಚಾಗುತ್ತ ಹೋಗುತ್ತದೆ.

ರಾಮ ಅಯೋಧ್ಯೆಯಿಂದ ದೂರ ಹೋದಷ್ಟು ಅಯೋಧ್ಯೆಯ ನೆನಪು ಕಾಡುತ್ತದೆ. ತಾಯಿ ಹಾಗೂ ಮಾತೃಭೂಮಿಗಳು ಸ್ವರ್ಗಕ್ಕಿಂತ ಅಧಿಕವೆಂಬ ನಿಶ್ಚಯಕ್ಕೆ ಬರುತ್ತಾನೆ. ಸೀತೆಯನ್ನು ಕಳೆದುಕೊಂಡ ಮೇಲೆ ಮರ್ಯಾದಾ ಪುರುಷೋತ್ತಮ, ಅತ್ಯಂತ ಸಂಯಮಿಯಾದ ರಾಮಚಂದ್ರ ಸೀತೆಯನ್ನು ನೆನಸಿಕೊಂಡು, ತನ್ನ ಮತ್ತು ಆಕೆಯ ಸಂಪರ್ಕದ ಅನೇಕ ನೆನಪುಗಳನ್ನು ಕೆದಕಿ, ಕೆದಕಿ ಮತ್ತಷ್ಟು ಗಾಯಮಾಡಿಕೊಳ್ಳುತ್ತಾನೆ.

ಜಗದ್ದೋದ್ಧಾರನಾದ, ನಿರ್ಮೋಹಿಯಾದ ಶ್ರೀಕೃಷ್ಣ, ದ್ವಾರಕೆಯಲ್ಲಿ ಕುಳಿತು ಬೃಂದಾವನದ ಗೋಪಿಯರನ್ನು ನೆನೆಸಿಕೊಳ್ಳುತ್ತಾನೆ. ಅವರ ನಿಷ್ಕಲ್ಮಷವಾದ ಪ್ರೀತಿಯನ್ನು ನೆನೆದಾಗ ಅವನ ಕಣ್ಣುಗಳಲ್ಲಿ ಒರತೆ ಉಕ್ಕುತ್ತದೆ. ರಾಜಮಾತೆಯಾದ ಕುಂತಿಗೆ, ಅರಮನೆಯ ಅತ್ಯಂತ ಸುಕೋಮಲಾದ ಹಾಸಿಗೆಯ ಮೇಲೆ ಕಣ್ಮುಚ್ಚಿ ಮಲಗಿದಾಗ, ತಾನು, ಪುಟ್ಟ, ಅಮಾಯಕವಾದ ಮಗುವನ್ನು ಗಂಗೆಯ ತೆರೆಗಳ ತೂಗುಯ್ಯಾಲೆಗಳಲ್ಲಿ ತೇಲಿ ಬಿಟ್ಟದ್ದು ಮರೆಯಲಾಗುವುದಿಲ್ಲ. ಅರ್ಧಶತಮಾನದ ನಂತರವೂ ಅದು ಆಕೆಯನ್ನು ಕಾಡುತ್ತದೆ.

ಕಗ್ಗ ಈ ಮಾತನ್ನು ವಿಶದಪಡಿಸುತ್ತದೆ. ಬೇಜಾರಿನಿಂದಲೋ, ದುಃಖದಿಂದಲೋ, ಬೇರೆ ಕೆಲಸಕ್ಕಾಗಿಯೋ ಮನೆಯನ್ನು ತೊರೆದು ಹೋದವರಿಗೆ, ಮನೆಯಲ್ಲಾದ ಪ್ರಸಂಗಗಳ ನೆನಪುಗಳು ಮರೆತು ಹೋಗುತ್ತವೆಯೇ? ಕಾಡಿನಲ್ಲಿ, ಗುಹೆಯಲ್ಲಿ ಮೂಗು ಹಿಡಿದುಕೊಂಡು ಕುಳಿತರೆ ದೇಹವನ್ನು ನಿಗ್ರಹಿಸಬಹುದು, ಆದರೆ ಮನಸ್ಸು? ಎಷ್ಟೇ ಉಗ್ರ ತಪಸ್ಸು, ವೃತಗಳನ್ನು ಮಾಡಿದರೂ ಮನದ ಪರದೆಯ ಮೇಲಿನ ನೆನಪುಗಳನ್ನು ಅಳಿಸುವುದು ಅಸಾಧ್ಯ. ಮತ್ತೆ ಕೆಲವರು ಮನದ ನೋವನ್ನು, ನೆನಪುಗಳನ್ನು ಮರೆಯಲು ಯಾವುಯಾವುದೋ ಹವ್ಯಾಸಗಳನ್ನು ಹಚ್ಚಿಕೊಳ್ಳುತ್ತಾರೆ. ಕೆಲವರು ಕ್ಲಬ್‌ಗಳನ್ನು ಸೇರಿ ಇಸ್ಪೀಟಿನಲ್ಲಿ ಮೈಮರೆತರೆ ಕೆಲವರು ಮದ್ಯಕ್ಕೆ ಶರಣಾಗತರಾಗುತ್ತಾರೆ. ಪಾರ್ವತಿಯ ನೆನಪನ್ನು ಮರೆಯಲು ದೇವದಾಸ ಅದೆಷ್ಟು ಕುಡಿದರೂ ಆತನನ್ನು ದಟ್ಟವಾಗಿ ಬೆನ್ನತ್ತಿದುದು ಪಾರ್ವತಿಯ ನೆನಪೇ.

ಮನಸ್ಸನ್ನು, ನೆನಪುಗಳನ್ನು ಬಿಡುವುದಸಾಧ್ಯ. ನೆನಪುಗಳೇ ಬದುಕು. ನೆನಪಿಲ್ಲದಿದ್ದರೆ ಬದುಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.