ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬ್ರಹ್ಮನ ಉದ್ಯಾನವನ

Last Updated 19 ಜುಲೈ 2020, 19:31 IST
ಅಕ್ಷರ ಗಾತ್ರ

ಕರ್ಮಋಣಶೇಷಂಗಳುಳಿಯದಿರೆ ಬಿತ್ತಾಗಿ |

ಜನ್ಮಜನ್ಮಾಂತರದ ಮರಗಳೇಳದಿರೆ ||
ಬ್ರಹ್ಮನುದ್ಯಾನವನ ಶಾಶ್ವತದೊಳಿಹುದೆಂತು ? |
ಮರ್ಮವಿದು ಸೃಷ್ಟಿಯಲಿ - ಮಂಕುತಿಮ್ಮ || 314 ||

ಪದ-ಅರ್ಥ: ಕರ್ಮಋಣಶೇಷಂಗಳು
ಳಿಯದಿರೆ=ಕರ್ಮ, ಋಣಶೇಷಗಳು+
ಉಳಿಯದಿರೆ, ಬ್ರಹ್ಮನುದ್ಯಾನವನ=ಬ್ರಹ್ಮನ+
ಉದ್ಯಾನವನ, ಶಾಶ್ವತದೊಳಿಹುದೆಂತು=
ಶಾಶ್ವತದೊಳು+ಇಹುದೆಂತು, ಮರ್ಮ=ತಂತ್ರ.

ವಾಚ್ಯಾರ್ಥ: ಈ ಪ್ರಪಂಚ ಬ್ರಹ್ಮನ ಉದ್ಯಾನವನ. ಅದು ಶಾಶ್ವತವಾದದ್ದು. ಮನುಷ್ಯರ ಕರ್ಮ, ಋಣಶೇಷಗಳು ಬೀಜದಂತೆ ಉಳಿದು ಜನ್ಮಜನ್ಮಾಂತರದಲ್ಲಿ ಮರಗಳಂತೆ ಏಳದಿದ್ದರೆ ಉದ್ಯಾನವನ ಹೇಗೆ ಶಾಶ್ವತವಾದೀತು? ಇದೇ ಸೃಷ್ಟಿಯ ಮರ್ಮ.

ವಿವರಣೆ: ಈ ಕಗ್ಗ ಹಿಂದಿನ ಎರಡು ಕಗ್ಗಗಳಲ್ಲಿ ಎತ್ತಿದ ಪ್ರಶ್ನೆಗೆ ತಾನೇ ಒಂದು ರೀತಿಯ ಸಮಾಧಾನದ ಉತ್ತರ ಪಡೆದುಕೊಡಂತಿದೆ.

ಹಿಂದಿನ ಕಗ್ಗಗಳಲ್ಲಿ, ಭಗವಂತ ಆಯಾ ಜನ್ಮಗಳಲ್ಲಿ ಮಾಡಿದ ಕರ್ಮಗಳಿಗೆ ಆಗಲೇ ಫಲ ನೀಡಿ ಮುಗಿಸಿಬಿಟ್ಟಿದ್ದರೆ ಜನ್ಮ ಜನ್ಮಾಂತರಗಳಿಗೆ ಅವುಗಳನ್ನು ಸಾಗಿಸುವ ತೊಂದರೆ ಇರುತ್ತಿರಲಿಲ್ಲ. ಯಾಕೆ ಅವನು ಹಾಗೆ ಮಾಡಲಿಲ್ಲ ಎಂಬುದು ಪ್ರಶ್ನೆ. ಈ ಕಗ್ಗದಲ್ಲಿ ಅದಕ್ಕೊಂದು ಸಮಾಧಾನ. ಈ ಪ್ರಪಂಚ ಇದೆಯಲ್ಲ, ಇದೊಂದು ಬ್ರಹ್ಮನ ಉದ್ಯಾನವನ. ಅವನು ಮಿರಮಿಸುವ, ಆಟವಾಡುವ ನೆಚ್ಚಿನ ಸ್ಥಳ. ಬ್ರಹ್ಮ ಶಾಶ್ವತ ಎಂದುಕೊಳ್ಳುವುದಾದರೆ ಅವನ ಉದ್ಯಾನವನವೂ ಶಾಶ್ವತವೇ ಆಗಬೇಕಲ್ಲವೇ? ಒಂದು ವೇಳೆ ಜೀವಿಗಳಿಗೆ, ಅವನ ಕರ್ಮಫಲಗಳನ್ನು ಆಗಿಂದಾಗ್ಗೆಯೇ ಕೊಟ್ಟು ಮುಗಿಸಿಬಿಟ್ಟರೆ, ಅವರುಗಳಿಗೆ ಮುಂದಿನ ಜನ್ಮದ ಅವಕಾಶವೇ ಇಲ್ಲ. ಎಲ್ಲರೂ ಹೀಗೆಯೇ ತಮ್ಮ ಮತ್ತು ಪ್ರಪಂಚದ ನಂಟನ್ನು ಕಡಿದುಕೊಳ್ಳುತ್ತ ಹೋದರೆ, ಪ್ರಪಂಚದಲ್ಲಿ ಉಳಿಯುವವರು ಯಾರು?

ಈ ಕಗ್ಗ ಅದನ್ನೇ ಸುಂದರವಾಗಿ ವಿವರಿಸುತ್ತದೆ. ಜೀವಿಗಳ ಕರ್ಮ, ಋಣಶೇಷಗಳು ಬೀಜ ಇದ್ದ ಹಾಗೆ. ಬೀಜಗಳಿದ್ದರೆ ಮರು ಬಿತ್ತನೆಯಾಗುತ್ತದೆ, ಬೆಳೆ ಬರುತ್ತದೆ. ಅವುಗಳಿಂದ ಮತ್ತೆ ಹೊಸ ಬೀಜ, ಮತ್ತೆ ಅವುಗಳಿಂದ ಹೊಸ ಬೆಳೆ. ಹೀಗೆಯೇ ಕೃಷಿ ಶಾಶ್ವತವಾಗುತ್ತ ಹೋಗುತ್ತದೆ. ಒಂದು ವೇಳೆ ಎಲ್ಲ ಬೀಜಗಳು ಮುಗಿದೇ ಹೋದರೆ ಕೃಷಿಯೇ ನಿಂತು ಹೋಗುತ್ತದಲ್ಲ! ಅದಕ್ಕೆಂದೇ ಭಗವಂತ ಋಣಶೇಷಗಳನ್ನು ಬೀಜಗಳಂತೆ ಉಳಿಸಿಕೊಂಡು ಅವುಗಳಿಂದ ಜನ್ಮಜನ್ಮಾಂತರದ ಮರಗಳನ್ನಾಗಿ ಮಾಡುತ್ತಾನೆ. ಎಲ್ಲಿಯವರೆಗೂ ಜನ್ಮಗಳಿವೆಯೋ, ಅಲ್ಲಿಯವರೆಗೆ ಕರ್ಮ ತಪ್ಪುವುದಿಲ್ಲ ಅಂತೆಯೇ ಕರ್ಮಫಲ ಕೂಡ ತಪ್ಪದು. ಹೀಗೆಯೇ ನಡೆಯುವುದರಿಂದ ಬ್ರಹ್ಮನ ಉದ್ಯಾನವನ ಶಾಶ್ವತವಾಗಿ ಉಳಿದುಬಿಡುತ್ತದೆ. ಅದನ್ನು ಹಾಗೆ ಶಾಶ್ವತವಾಗಿ ಉಳಿಸಿಕೊಳ್ಳುವುದಕ್ಕಾಗಿಯೇ ಬ್ರಹ್ಮ ಈ ತಂತ್ರ ಮಾಡಿರಬೇಕು ಎಂಬ ಸಮಾಧಾನದ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT