ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವ್ಯಾಮೋಹ

Last Updated 25 ಮೇ 2021, 20:48 IST
ಅಕ್ಷರ ಗಾತ್ರ

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||
ಕ್ಷಣಮಾತ್ರಮಾತ್ರಮಾನುಮದು ಕಣ್ಣೀರ ಬರಿಸುವುದು ||
ಗಣಿಸಬೇಡದನು ನೀಂ – ಮಂಕುತಿಮ್ಮ || 421 ||

ಪದ-ಅರ್ಥ: ತನುಭವವ್ಯಾಮೋಹ=ಮಗ ಮೇಲಿನ ಮೋಹ, ಕ್ಷಣಮಾತ್ರಮಾನುಮದು=ಕ್ಷಣಮಾತ್ರಮಾನುಂ(ಒಂದು ಕ್ಷಣ ಮಾತ್ರ)+ಅದು, ಗಣಿಸಬೇಡದನು=ಗಣಿಸಬೇಡ(ಲೆಕ್ಕಿಸಬೇಡ)+ಅದನು.

ವಾಚ್ಯಾರ್ಥ: ಪರಮಜ್ಞಾನಿ ವ್ಯಾಸರನ್ನು ಮಗನ ವ್ಯಾಮೋಹ ಮುಸುಕಿತು. ಈ ವ್ಯಾಮೋಹ ಪ್ರಕೃತಿಯಿಂದ ಸಹಜವಾಗಿ ನಮ್ಮ ಹೃದಯದಾಳದಲ್ಲಿ ನೆಲೆಸಿರುತ್ತದೆ. ಅದು ಕ್ಷಣ ಮಾತ್ರವಾದರೂ ಕಣ್ಣೀರನ್ನು ಬರಿಸುತ್ತದೆ. ಅದನ್ನು ಹೆಚ್ಚು ಗಣಿಸಬೇಡ.

ವಿವರಣೆ: ವ್ಯಾಮೋಹವೆಂದರೆ ಅತಿಯಾದ ಮೋಹ. ಮೋಹವನ್ನು ಬಿಡಬೇಕು ಎಂದು ಹೇಳುವುದು ಬಲು ಸುಲಭ. ಆದರೆ ಬಿಡುವುದು ಬಹಳ ಕಷ್ಟ. ಎಂತೆಂತಹ ಮಹಾಜ್ಞಾನಿಗಳನ್ನು ಈ ಮೋಹ ಬಿಡಲಿಲ್ಲ.

ವೇದವ್ಯಾಸರು ಪ್ರಪಂಚ ಕಂಡ ಅತ್ಯಂತ ಶ್ರೇಷ್ಠ ದಾರ್ಶನಿಕರು. ಕಾಡಿನಂತೆ ಹರಡಿದ್ದ ವೇದವನ್ನು ವಿಭಾಸಿದ್ದರಿಂದ ಅವರಿಗೆ ವೇದವ್ಯಾಸರೆಂಬ ಹೆಸರು ಬಂದಿತು. ಪುರಾಣಗಳ ಪ್ರಕಾರ ಅವರು ವಿಷ್ಣುವಿನ ಒಂದು ಅವತಾರ. ಶೃತಿ, ಸ್ಮೃತಿ, ಪುರಾಣಗಳನ್ನು ಕೊಟ್ಟವರು. ಅಂಥ ಮಹಾಜ್ಞಾನಿಗೆ ಒಬ್ಬನೇ ಪುತ್ರ ಶುಕಾಚಾರ್ಯ. ಆತ ಹುಟ್ಟುವಾಗಲೇ ಪರಮಜ್ಞಾನಿಯಾಗಿದ್ದನಂತೆ. ಆತನಿಗೆ ಜ್ಞಾನದ ಒಳನೋಟಗಳು ದೊರಕಿ ವಿರಾಗಿಯಾದ. ಆ ವಿರಾಗದ ಮನೋಧರ್ಮದಲ್ಲಿ ಮನೆಯನ್ನು ತೊರೆದು ಹೊರಟುಹೋದ. ಪ್ರೀತಿಯ ತಂದೆಯಾದ ವೇದವ್ಯಾಸರಿಗೆ ಮನಸ್ಸು ಕಲಕಿ ಹೋಯಿತು, ಪುತ್ರಮೋಹ ಅವರನ್ನು ಹಿಂಡಿಬಿಟ್ಟಿತು. ವ್ಯಾಸರು ಮಗನನ್ನು ಹುಡುಕಿಕೊಂಡು ಹೊರಟು, ‘ಮಗನೇ ಶುಕ’ ಎಂದು ಕೂಗುತ್ತ ದುಃಖದಿಂದ ಕಾಡೆಲ್ಲ ಅಲೆದರು; ಕಣ್ಣೀರು ಧಾರೆಯಾಯಿತು. ಆಗೊಂದು ಅದ್ಭುತ ನಡೆಯಿತು. ಕಾಡಿನ ಮರಗಿಡಗಳೆಲ್ಲ ಅವರ ಕರೆಯನ್ನು ಕೇಳಿ ತಾವೇ ಮಾರ್ನುಡಿದುವಂತೆ. ಆಗ ವ್ಯಾಸರಿಗೆ ಅರ್ಥವಾಯಿತು. ತನ್ನ ಜ್ಞಾನಿ ಮಗ ನಿಸರ್ಗದ ಒಂದು ಭಾಗವೇ ಆಗಿದ್ದಾನೆ, ಬಯಲಾಗಿದ್ದಾನೆ. ಬಯಲಾದವನಿಗೆ ಮನೆ ಇಲ್ಲ. ಮನೆ ಏಕೆ? ಪ್ರಪಂಚವೇ ಅವನ ಮನೆ. ಅವರ ಮನದ ಮೋಹ ಕರಗಿತು, ಪಿತೃತ್ವ ಸಾರ್ಥಕವಾಯಿತು.

ಅಸಾಮಾನ್ಯ ಜ್ಞಾನಿಗಳಾದ ವೇದವ್ಯಾಸರಿಗೇ ಈ ಮೋಹ ಕಾಡಿದ್ದರೆ ಸಾಮಾನ್ಯರ ಗತಿ ಏನು? ಪ್ರಕೃತಿ ಈ ಮೋಹವನ್ನು ನಮ್ಮ ಹೃದಯದಲ್ಲಿ ನೆಲೆಯಾಗುವಂತೆ ಮಾಡಿದೆ. ಮೋಹ ಸರಿಯಾದ ಪ್ರಮಾಣದಲ್ಲಿದ್ದರೆ ಒಳ್ಳೆಯದು. ಅದು ನಮ್ಮಿಂದ ಕಾರ್ಯಗಳನ್ನು ಮಾಡಿಸುತ್ತದೆ, ಧನಾತ್ಮಕವಾಗಿ ಚಿಂತಿಸುವಂತೆ ಮಾಡುತ್ತದೆ. ಆದರೆ ಈ ಮೋಹ ಹೆಚ್ಚಾದಾಗ ಎಂಥ ಧೃಡಮನಸ್ಸಿನವರ ಕಣ್ಣಲ್ಲೂ ನೀರು ತರಿಸುತ್ತದೆ. ಆದ್ದರಿಂದ ವಿವೇಕಿಗಳಾದವರು ಮೋಹ, ವ್ಯಾಮೋಹವಾಗದಂತೆ ನೋಡಿಕೊಳ್ಳುತ್ತಾರೆ. ಬಂದದ್ದನ್ನು ಸಮಚಿತ್ತತೆಯಿಂದ ಸ್ವೀಕರಿಸುತ್ತಾರೆ.

ಅದಕ್ಕೆ ಕಗ್ಗ ಹೇಳುತ್ತದೆ, ‘ಗಣಿಸಬೇಡದನು ನೀಂ’ ಎಂದರೆ ಮೋಹವನ್ನು ಅತಿಯಾಗಿಸಿಕೊಳ್ಳಬೇಡ. ಅದು ಪ್ರಕೃತಿಸಹಜವಾದರೂ ವಿವೇಕದಿಂದ ನಿಗ್ರಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT