ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪುರಾತನ-ಅರ್ವಾಚೀನ ಸಮನ್ವಯ

Last Updated 14 ಡಿಸೆಂಬರ್ 2021, 21:41 IST
ಅಕ್ಷರ ಗಾತ್ರ

ಪ್ರಾಲೇಯ ಗಿರಿಗುಹೆಯ ಗಂಗೆ ವೇದ ಪುರಾಣ |
ಕಾಳಿಂದಿ ಶೋಣೆ ಪೌರುಷ ಬುದ್ಧಿಯುಕ್ತಿ ||
ಮೂಲ ಸ್ವತಸಿದ್ಧ ಸಂವಿದಾಪಗೆಗಿಂತು |
ಕಾಲದುಪನದಿ ನೆರವು – ಮಂಕುತಿಮ್ಮ ||519||

ಪದ-ಅರ್ಥ: ಪ್ರಾಲೇಯಗಿರಿಗುಹೆಯ=ಪ್ರಾಲೇಯ(ಹಿಮ)+ಗಿರಿ(ಪರ್ವತ)+ಗುಹೆಯ, ಕಾಳಿಂದಿ=ಯಮುನೆ, ಶೋಣೆ=ಶೋಣಾ ನದಿ, ಸಂವಿದಾಪಗೆಗಿಂತು=ಸಂವಿತ್(ಜ್ಞಾನ)+ಆಪಗೆ(ನದಿ)+ಇಂತು, ಕಾಲದುಪನದಿ=ಕಾಲದ+ಉಪನದಿ, ನೆರವು=ಸಹಾಯ

ವಾಚ್ಯಾರ್ಥ: ವೇದ, ಪುರಾಣಗಳು ಹಿಮಾಲಯದ ಗುಹೆಯಿಂದ ಬರುವ ಜ್ಞಾನ ಗಂಗೆಯಿದ್ದಂತೆ. ಯಮುನೆ, ಶೋಣಾನದಿಗಳು ಪೌರುಷ, ಬುದ್ಧಿ, ಯುಕ್ತಿಗಳು. ಮೂಲದಲ್ಲಿ ಸಿದ್ಧವಾದ ಸಮ್ಯಕ್ ಜ್ಞಾನಗಂಗೆಗೆ ಆಯಾ ಕಾಲದ ಬುದ್ಧಿ, ಯುಕ್ತಿಗಳು ಉಪನದಿಯಂತೆ ಬಂದು ನೆರವಾಗಬೇಕು.

ವಿವರಣೆ: ಹಿಮಾಲಯದ ಉನ್ನತ ಪ್ರದೇಶದ ಗಂಗೋತ್ರಿಯಲ್ಲಿ ಗಂಗೆಯ ಉಗಮ. ವರ್ಷದ ಆರೇಳು ತಿಂಗಳುಗಳ ಕಾಲ ಹಿಮದಿಂದಲೇ ಕೂಡಿದ ಈ ಪ್ರದೇಶದಿಂದಲೇ ನಮಗೆ ಪರಮಪವಿತ್ರವಾದ ಗಂಗಾನದಿ ಹೊರಡುವುದು. ಅದು ಆಗ ಭಾಗೀರಥಿ. ಮುಂದೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರಿ ಗಂಗೆಯಾಗುತ್ತದೆ. ಮುಂದೆ ಹರಿಯುತ್ತ ಕೆಳಗಿಳಿದು ಬರುತ್ತಿದ್ದಂತೆ ಸರಸ್ಪತಿ, ದೌಳಿಗಂಗಾ, ನಂದಾಕಿನಿ, ಪಿಂಡಾರ ನದಿಗಳನ್ನು ಎಡಬದಿಯಲ್ಲಿ ಹಾಗೂ ಮಂದಾಕಿನಿಯನ್ನು ಬಲಬದಿಯಲ್ಲಿ ಸೇರಿಸಿಕೊಂಡು ಸಮೃದ್ಧವಾಗಿ ಹರಿಯುತ್ತದೆ. ಮುಂದೆ ಉತ್ತರ ಪ್ರದೇಶದಲ್ಲಿ ಪ್ರವಹಿಸುವಾಗ ಶೋಣಾ ನದಿ ಮತ್ತು ಪ್ರಯಾಗದಲ್ಲಿ ಯಮುನೆಯನ್ನು ಸೇರಿ ವಿಸ್ತಾರವಾಗುತ್ತದೆ.

ಮೂಲನದಿ ಗಂಗೆಯೇ. ಆದರೆ ಉಪನದಿಗಳು ಸೇರಿ ಅದು ಬಲವತ್ತರವಾಗುತ್ತದೆ. ಈ ವಾಸ್ತವ ಡಿ.ವಿ.ಜಿ.ಯವರ ಚಿಂತನೆಯನ್ನು ಕೆಣಕಿದೆ. ಈ ಕಗ್ಗದ ಮೂಲಕ ನಮಗೆ ಅವರು ತಿಳಿಸುವ ಸಂದೇಶ ತುಂಬ ಆಳದ್ದು. ಹಿಮಾಲಯದ ಉನ್ನತ ಸ್ಥಾನದಿಂದ ಬಂದ ಗಂಗೆಯಂತೆ, ನಮ್ಮ ಋಷಿ-ಮುನಿಗಳು ಕಂಡರಿಸಿದ ವೇದ ಪುರಾಣಗಳು ಜ್ಞಾನಮೂಲಗಳು. ಪ್ರಯಾಣ ಸಾಗಿದಂತೆ ಗಂಗೆ ಅನೇಕ ಉಪನದಿಗಳನ್ನು ಸೇರಿಸಿಕೊಂಡಂತೆ, ಜ್ಞಾನಮೂಲಗಳಿಗೆ ಆಯಾ ಕಾಲದ ಪೌರುಷ, ಬುದ್ಧಿ, ಯುಕ್ತಿಗಳು ಸೇರಿಕೊಳ್ಳುತ್ತವೆ. ಅವು ಜ್ಞಾನವನ್ನು ಬಲಪಡಿಸುತ್ತವೆ. ಇಲ್ಲೊಂದು ಎಚ್ಚರವೂ ಇದೆ. ಸೇರಿಕೊಂಡ ಉಪನದಿಗಳು ತಮ್ಮ ಕಲ್ಮಷವನ್ನು ತಂದು ತುಂಬಿ ನದಿಯನ್ನು ಮಲಿನ ಮಾಡುವಂತೆ, ಸರಿಯಿಲ್ಲದ ಬುದ್ಧಿ, ಯುಕ್ತಿಗಳು ಮೂಲಜ್ಞಾನವನ್ನು ಅಶುದ್ಧಗೊಳಿಸುತ್ತವೆ.

ಗಂಗೋತ್ರಿಯಲ್ಲಿ ನೀರು ಅತ್ಯಂತ ಪರಿಶುದ್ಧವಾಗಿರುವಂತೆ ಜ್ಞಾನವೂ ಮೂಲದಲ್ಲಿ ಶುದ್ಧವಾಗಿಯೇ ಇರುತ್ತದೆ. ಆದರೆ ಹಾಗೆ ಉಳಿಯುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಆಯಾ ಕಾಲದ ಅವಶ್ಯಕತೆಗೆ ಅನುಗುಣವಾಗಿ, ಅಂದಂದಿನ ಬುದ್ಧಿ, ಪೌರುಷ, ಶಕ್ತಿಗಳನ್ನು ಬಳಸಿಕೊಂಡು, ನವೀನತೆಯನ್ನು ಪಡೆಯಬೇಕು. ನವ್ಯತೆಯೇ ಜೀವನ, ಹಳಸಿಕೆಯೆ ಸಾವು. ಪುರಾತನವಾದ, ಆರ್ಷೇಯ ಜ್ಞಾನ ಕಾಲಕ್ಕೆ ತಕ್ಕಂತೆ ಹೊಸ ಹೊಸ ಜೀವಕಾಂತಿಗಳನ್ನು ಸೇರಿಸಿಕೊಂಡು, ಪ್ರಕೃತ ಲೋಕದ ಜೀವನವನ್ನು ಸಶಕ್ತಗೊಳಿಸುವುದು ಅವಶ್ಯವಾದ ಕಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT