ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಳತು-ಹೊಸತು

Last Updated 15 ಡಿಸೆಂಬರ್ 2021, 22:00 IST
ಅಕ್ಷರ ಗಾತ್ರ

ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ |
ಹಳದೆಂದು ನೀನದನು ಕಳೆಯುವೆಯ, ಮರುಳೆ ?||
ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ ? |
ಹಳೆ ಬೇರು ಹೊಸ ತಳಿರು – ಮಂಕುತಿಮ್ಮ || 520||

ಪದ-ಅರ್ಥ: ತಿಳಿವಾವುದಿಳೆಗೆ=ತಿಳಿವು+ಆವುದು+ಇಳೆಗೆ(ಭೂಮಿಗೆ), ಹಳದೆಂದು=ಹಳದು(ಹಳೆಯದು)+ಎಂದು, ತಿಳಿವಿಂಗೆ=ತಿಳಿವಿಗೆ.

ವಾಚ್ಯಾರ್ಥ: ಯುಗಯುಗಗಳಿಂದ ಯಾವ ತಿಳಿವು ಜಗತ್ತಿಗೆ ಬೆಳಕಾಗಿತ್ತೊ, ಅದನ್ನು ಹಳೆಯದೆಂದು ನೀನು ಕಳೆಯುತ್ತೀಯಾ? ನಮ್ಮ ಎಲ್ಲ ಹೊಸ ತಿಳಿವುಗಳಿಗೆ ಅದು ತಳಹದಿಯಲ್ಲವೆ? ಹಳೆ ಬೇರಿದ್ದರೆ ಹೊಸ ಚಿಗುರು ಬಂದೀತು.

ವಿವರಣೆ: ಪ್ರಗತಿ ಎಂದಿದ್ದರೂ ಸದಾ ಚಲನಶೀಲವಾಗಿರುವಂಥದ್ದು. ಪ್ರತಿಕ್ಷಣವೂ ಹಿಂದಿನಿಂದ ಮುಂದಕ್ಕೆ, ಹಳೆಯದರಿಂದ ಹೊಸದಕ್ಕೆ ಅದರ ಗತಿ. ಯಾವುದು ಹೊಸತು, ಯಾವುದು ಹಳೆಯದು? ನಿನ್ನೆ ಹೊಸದಾದದ್ದು ಇಂದು ಹಳತು. ಇಂದಿನ ಹೊಸತು, ನಾಳೆಗೆ ಹಳತು. ಕೆಲವರ ಅಭಿಪ್ರಾಯ, ಹೊಸತು ಮಾತ್ರ ಸತ್ಯ, ಹಳೆಯದೆಲ್ಲ ನಿಷ್ಟ್ರಯೋಜಕ, ಮಿಥ್ಯ. ಮತ್ತೆ ಕೆಲವರು ಹಳೆಯದೆ ಬಂಗಾರ, ಇಂದಿನದು ಕಾಗೆ ಬಂಗಾರ. ಇಂದಿನದಕ್ಕೆ ಸತ್ವ ಇಲ್ಲ, ಎಲ್ಲವೂ ನೆರಳಿಲ್ಲದ ಮರದಂತೆ, ಎನ್ನುತ್ತಾರೆ. ಯಾವುದು ಸರಿ? ಹಳೆಯ ಅಜ್ಜನ ಹೆಗಲ ಮೇಲೆ ಹೊಸ ಮೊಮ್ಮಗನ ಸವಾರಿ. ಹಳೆಯ ಹಿತ್ತಾಳೆಯ ಪಾತ್ರೆಗೆ ಚಮಕಿನ ಕಲಾಯಿ. ಪುರಾತನ ಆಭರಣಗಳನ್ನು ಕರಗಿಸಿ ಹೊಸ ಮಾದರಿಯ ಒಡವೆಗಳು. ಹೊಸ ಹುಮ್ಮಸ್ಸಿನ ಕುದುರೆಗೆ ಹಳೆಯ ಪಳಗಿದ ಲಗಾಮು.

ಹೊಸತು ಎನ್ನುವ ಪದಕ್ಕೆ ವಿರುದ್ಧವಾದದ್ದು ಹಳತು ಎನ್ನುವ ಪದ. ಹೊಸತು ಎಂಬ ಪದದ ಅರ್ಥ ತಿಳಿಯಬೇಕಾದರೆ ಹಳತು ಎಂದರೇನು ಎಂಬುವುದು ಅರ್ಥವಾಗಲೇಬೇಕು. ಸರಿಯಾಗಿ ನೋಡಿದರೆ ಇವೆರಡೂ ಸಾಪೇಕ್ಷ ಪದಗಳೇ. ಒಂದು ಮತ್ತೊಂದಕ್ಕೆ ಆಶ್ರಯ. ಇಂದು ವಿಜ್ಞಾನದ ಜಗತ್ತು ಸೃಷ್ಟಿಸುತ್ತಿರುವ ಬೆರಗಿನ ಪ್ರಪಂಚ ಮೈಮರೆಸುತ್ತದೆ. ಹೊಸ ಹೊಸ ಅನ್ವೇಷಣೆಗಳ ಪ್ರವಾಹದಲ್ಲಿ ಹಿಂದಿನ ನಂಬಿಕೆಗಳು, ಚಿಂತನೆಗಳು ಕೊಚ್ಚಿ ಹೋದಂತೆ ಭಾಸವಾಗುತ್ತಿದೆ. ಹೊಸ ಪ್ರಪಂಚದ ಮೆರುಗನ್ನು ಕಂಡ ತರುಣರಿಗೆ, ಹಳೆಯ ಶಾಸ್ತ್ರಗಳು, ಸಿದ್ಧಾಂತಗಳು ಬರೀ ಮೂಢನಂಬಿಕೆಗಳು, ಬುರುಡೆ ಎನ್ನಿಸುತ್ತವೆ. ಒಂದು ವಿಷಯವನ್ನು ನಾವು ನೆನಪಿಡಬೇಕು.

ವಿಜ್ಞಾನ ಕೂಡ ಪ್ರಕೃತಿಯ ನಿಯಮಕ್ಕೆ ಬದ್ಧವಾದವು. ಅವು ಪ್ರಕೃತಿಯನ್ನು ಮೀರುವವಲ್ಲ. ವಿಜ್ಞಾನ ಮಾಡುವುದೆಲ್ಲ ಪ್ರಕೃತಿಯ ಒಳಗಿರುವ ಗುಣಶಕ್ತಿಗಳನ್ನು ಹೊರಗೆ ತರುವ ಪ್ರಯತ್ನ. ಅದು ಮತ್ತೊಂದು ಪ್ರಕೃತಿಯನ್ನು ಸೃಷ್ಟಿ ಮಾಡುವುದಿಲ್ಲ. ನಾವು ಹಳೆಯದೆಂದು ತಿಳಿಯುವ ಸನಾತನವಾದ ವೇದಗಳು, ಉಪನಿಷತ್ತುಗಳು, ವಚನಗಳು, ಸೃಷ್ಟಿಯ ಉಗಮದ ಬಗ್ಗೆ, ಅದರ ಹಿಂದಿರುವ ಶಕ್ತಿಗಳ ಬಗ್ಗೆ ಚಿಂತನೆ ನೀಡಿವೆ. ಅವು ನಮ್ಮ ಇಂದಿನ ತಿಳಿವಳಿಕೆಗೆ ಆಧಾರವಾಗಿವೆ. ಹೊಸ ವಿಜ್ಞಾನ ಮತ್ತು ಹಳೆಯ ಅಧ್ಯಾತ್ಮಗಳ ನಡುವೆ ವಿರೋಧಕ್ಕೆ ಕಾರಣವಿಲ್ಲ. ಪರಮಾರ್ಥದಲ್ಲಿ ಅಧ್ಯಾತ್ಮ, ವ್ಯವಹಾರದಲ್ಲಿ ವಿಜ್ಞಾನ, ಎರಡೂ ಸಮ್ಮಿಳಿತವಾಗಬೇಕು.

ಅದನ್ನೇ ಕಗ್ಗ ಸುಂದರವಾದ ಉಪಮೆಯೊಂದಿಗೆ ತಿಳಿಸುತ್ತದೆ. ‘ಹಳೆ ಬೇರು, ಹೊಸ ಚಿಗುರು’. ಬೇರು ಹಳೆಯದಾಗಿದ್ದಾಗ ಅದು ಭೂಮಿಯಿಂದ ಸಾರವನ್ನು ಹೀರಿ, ಮರದ ಕೊಂಬೆ ಕೊಂಬೆಗಳಿಗೆ ರವಾನಿಸಿ ಪೋಷಿಸುತ್ತದೆ. ಆಗ ಚಿಗುರು ಮೂಡುತ್ತದೆ. ಚಿಗುರು ಕಣ್ಣಿಗೆ ಕಂಡರೂ, ಕಾಣದಿಹ ಬೇರು ಅದರ ನಳನಳಿಕೆಗೆ ಕಾರಣವಾಗುತ್ತದೆ. ಹಿಂದೆ ಯಾವುದು ಪ್ರಪಂಚದ ಅರಿವಿಗೆ ಬೆಳಕಾಗಿತ್ತೋ, ಯಾವುದು ಇಂದಿನ ತಿಳಿವಳಿಕೆಗೆ ತಳಹದಿಯಾಗಿದೆಯೊ ಅದನ್ನು ಕಳೆಯುವುದು, ಮರೆಯುವುದು ಮೂರ್ಖತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT