ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ರಸ, ತರ್ಕಗಳ ಐಕ್ಯತೆ

Last Updated 21 ಸೆಪ್ಟೆಂಬರ್ 2021, 22:14 IST
ಅಕ್ಷರ ಗಾತ್ರ

ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ |
ಪದ ಚರ್ಚೆ ಮತವಿಚಾರಕೆ ತಕ್ಕ ಭಾಷೆ ||
ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು |
ಬದುಕು ರಸತರ್ಕೈಕ್ಯ – ಮಂಕುತಿಮ್ಮ || 463 ||

ಪದ-ಅರ್ಥ: ಹೃದಯಕೊಪ್ಪುವ= ಹೃದಯಕ್ಕೆ+ ಒಪ್ಪುವ, ಮತಿ= ಅಭಿಪ್ರಾಯ, ಯುಕ್ತ= ಸರಿಯಾದದ್ದು, ಮತಿ= ಬುದ್ಧಿ, ರಸತರ್ಕೈಕ್ಯ= ರಸ+ ತರ್ಕ+ ಐಕ್ಯ.

ವಾಚ್ಯಾರ್ಥ: ಹೃದಯಕ್ಕೆ ಒಪ್ಪುವ ಭಾಷೆಗಳು ಸಂಗೀತ, ಕಲೆಗಳು. ಬುದ್ಧಿಗೆ ಅವಶ್ಯವಾಗಿರುವವು ತರ್ಕ ಮತ್ತು ಅದಕ್ಕೆ ಸಹಾಯಕವಾಗುವ ಭಾಷೆ. ಹೀಗೆ ಹೃದಯ ಮತ್ತು ಬುದ್ಧಿಗಳು ಹೊಂದಾಣಿಕೆಯಿರುವ ಸತಿ ಪತಿಗಳಂತಿದ್ದರೆ ಯುಕ್ತ. ಬದುಕು ರಸ ಮತ್ತು ತರ್ಕಗಳ ಏಕತೆಯಿಂದ ಸುಂದರವಾದದ್ದು.

ವಿವರಣೆ: ನಮ್ಮಲ್ಲಿ ಮೂಡುವ, ಮೂಡಿ ಮರೆಯಾಗುವ ಎಲ್ಲ ಭಾವಗಳಿಗೆ ತಾಳಬದ್ಧವಾಗಿ, ಲಯಬದ್ಧವಾಗಿ ತುಡಿಯುವ ಏಕೈಕ ಅಂಗ ಹೃದಯ. ಸಂತಸದ ಕ್ಷಣಗಳಲ್ಲಿ ತುಟಿಯ ಮೇಲೆ ನಸು ನಗು ತರಲು, ಬೇಸರವಾದಾಗ ಹಣೆಗೆ ನಿರಿಗೆ ತರಲು, ನಾಳಗಳಲ್ಲಿ ಹರಿಯುವ ರಕ್ತದ ವೇಗವನ್ನು ನಿಯಂತ್ರಿಸಲು, ಹೃದಯ ನಿರಂತರ ಮಿಡಿಯುತ್ತಲೇ ಇರುತ್ತದೆ. ಆ ಹೃದಯದೊಂದಿಗೆ ಸಂವಾದ ಮಾಡಲು ಭಾಷೆಯೊಂದು ಬೇಕು. ಆ ಭಾಷೆಯೇ ಕಲೆ. ತರ್ಕಕ್ಕೆ ಒಲಿಯದ ಹೃದಯ ಕಲೆಗೆ ಮಣಿಯುತ್ತದೆ. ಆ ಕಲೆ ಯಾವ ರೂಪದಲ್ಲೇ ಇರಬಹುದು. ಅದು ಕಾವ್ಯವಾಗಬಹುದು, ಸಂಗೀತವಾಗಬಹುದು, ನಾಟ್ಯವಾಗಬಹುದು, ಚಿತ್ರವಾಗಬಹುದು, ನಿಸರ್ಗದ ಅದ್ಭುತ ದೃಶ್ಯಗಳಾಗಬಹುದು. ಕೊನೆಗೆ ಮನುಷ್ಯರಲ್ಲಿಆಗಾಗ ಕಾಣುವ ಉದಾತ್ತನಡವಳಿಕೆಗಳಿರಬಹುದು. ಇವೆಲ್ಲಕ್ಕೂ ಹೃದಯ ಪ್ರತಿಸ್ಪಂದಿಸುತ್ತದೆ.

ಅತ್ಯಂತ ಸುಂದರವಾದ ಸಂಗೀತವನ್ನು ಕೇಳಿದಾಗ ಕಣ್ಣು ಮುಚ್ಚುತ್ತವೆ, ತಲೆ ತೊನೆಯುತ್ತದೆ, ಕಾಲು ತಾಳ ಹಾಕುತ್ತದೆ. ಅದು ಹೃದಯದ ಭಾಷೆ. ಅಂತೆಯೇ ಅತ್ಯಂತ ಮಹೋಹರವಾದ ಮೊನಾಲಿಸಾ ಚಿತ್ರವನ್ನೋ, ಬೇಲೂರಿನ ಶಿಲ್ಪಗಳನ್ನೋ, ಡಾ ಪದ್ಮಾ ಸುಬ್ರಹ್ಮಣ್ಯಂರವರ ಅಭಿನಯ ಪ್ರಧಾನ ನೃತ್ಯವನ್ನು ಕಂಡಾಗಲೋ, ಹಿಮಾಲಯದ ಶಿಖರಗಳನ್ನು ನೋಡಿದಾಗಲೋ, ಕಾವ್ಯಗಳಲ್ಲಿ, ಸಿನಿಮಾಗಳಲ್ಲಿ ತ್ಯಾಗದ, ಕರುಣೆಯ ಸನ್ನಿವೇಶಗಳನ್ನೋ ಆಸ್ವಾದಿಸಿದಾಗ ಹೃದಯ ತೃಪ್ತವಾಗುತ್ತದೆ. ಕಣ್ಣಂಚಿನಲ್ಲಿ ನೀರು ಒಸರುತ್ತದೆ. ಅದು ಹೃದಯ ಸ್ಪಂದಿಸಿದ ಹೆಗ್ಗುರುತು.

ಹೃದಯ ಮನುಷ್ಯನ ಬದುಕಿನ ಒಂದು ನೆಲೆಯಾದರೆ, ಬುದ್ಧಿ ಮತ್ತೊಂದು ನೆಲೆ. ಅದೂ ಬದುಕಿಗೆ ಅವಶ್ಯಕ. ಅದರ ಭಾಷೆಯೇ ಬೇರೆ. ಅದು ತರ್ಕ. ತರ್ಕ ಯಾವಾಗಲೂ ರುಜುವಾತನ್ನು ಬೇಡುತ್ತದೆ. ಅದಕ್ಕಾಗಿ ವಾದಗಳನ್ನುಮಾಡುತ್ತದೆ. ಆ ವಾದವನ್ನು ಸಮರ್ಥವಾಗಿ ಮಂಡಿಸುವುದಕ್ಕೆ ಅಕ್ಷರದ ಭಾಷೆ ಬೇಕು. ಅದು ದೊರೆಯುವುದು ಶಾಸ್ತ್ರಗಳ ಅಭ್ಯಾಸದಿಂದ. ತರ್ಕಕ್ಕೆ ನಾಲ್ಕು ಅಂಗಗಳು. 1. ಆಲೋಚನೆ ಮಾಡುವವ, 2.ಆಲೋಚಿಸುವ ವಿಷಯ, 3.ಆಲೋಚಿಸುವ ರೀತಿ ಮತ್ತು 4. ಆಲೋಚನೆಯ ಸತ್ಯತೆ. ಈ ನಾಲ್ಕೂ ಅಂಗಗಳನ್ನು ಸಮನ್ವಯಿಸಲು ಶಾಸ್ತ್ರಾಧ್ಯಯನ ಮಾಡಬೇಕು, ಪ್ರತಿವಾದಿಗಳ ಚಿಂತನೆಗಳನ್ನು ಖಂಡಿಸಲು ಸಮರ್ಥವಾದ ಭಾಷೆ ಬೇಕು.

ಕಲೆ ಹೃದಯದ ಭಾಷೆಯಾದರೆ ಶಾಸ್ತ್ರ ಬುದ್ಧಿಯ ಭಾಷೆ. ನಮಗೆ ಎರಡೂ ಬೇಕು. ಕಗ್ಗ ಹೇಳುತ್ತದೆ, ಬುದ್ಧಿ ಹೃದಯಗಳೆರಡೂ ಅನ್ಯೋನ್ಯವಾದ ದಂಪತಿಗಳ ಹಾಗೆ ಪರಸ್ಪರ ಸಹಯೋಗ, ಸಹಕಾರಗಳಿಂದ ನಡೆಯಬೇಕು. ಸುಂದರವಾದ ಬದುಕಿಗೆ ‘ರಸ’ ಮತ್ತು ‘ತರ್ಕ’ಗಳು ಒಂದಾಗಬೇಕು, ಐಕ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT