ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸಾರ್ವಭೌಮ ಗುಣಗಳು

Last Updated 14 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ |
ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ |
ನಿರ್ಮಮತ್ವವೆ ಮುಕುಟ – ಮಂಕುತಿಮ್ಮ || 756 ||

ಪದ-ಅರ್ಥ: ಸಾರ್ವಭೌಮತೆ=ಮುಖ್ಯವಾದದ್ದು, ಹಿರಿತನ, ಮೊದಲಿನದೆರಡನೆಯದು=ಮೊದಲಿನದು+ಎರಡನೆಯದು,ಮತಿಯೋಜೆ=ಮತಿಯ+ಓಜೆ(ತೀಕ್ಷ್ಣತೆ, ಶಕ್ತಿ),ಮೂರನೆಯದದುವೆ=ಮೂರನೆಯದು+ಅದುವೆ, ನಿರ್ಮಮತ್ವವೆ=ಮಮಕಾರರಹಿತವಾದದ್ದು, ಮುಕುಟ=ಕಿರೀಟ.

ವಾಚ್ಯಾರ್ಥ: ಗುಣಗಳ ರಾಜ್ಯದಲ್ಲಿ ನಾಲ್ಕು ಗುಣ ಪ್ರಮುಖವಾದವುಗಳು. ಮೊದಲನೆಯದು ಧೈರ್ಯ, ಎರಡನೆಯದು ಬುದ್ಧಿಶಕ್ತಿ. ಸರ್ವರಲ್ಲಿ ದಯೆ ಮೂರನೆಯದು. ಅದುವೇ ನೀತಿಯ ಮೂಲ. ಇವಕ್ಕೆಲ್ಲ ಕಿರೀಟಪ್ರಾಯವಾಗಿರುವುದು ಮಮಕಾರರಹಿತವಾಗಿರುವುದು.

ವಿವರಣೆ: ನಮ್ಮದೊಂದು ಸೀಮಿತವಾದ ಬದುಕು. ಸಹಸ್ರಾರು ವರ್ಷಗಳಿಂದ ಹರಿದು ಬರುತ್ತಿರುವ ಜೀವಪ್ರವಾಹದಲ್ಲಿ ನಮ್ಮದೊಂದು ಹನಿ. ಈ ಹನಿ ಹಾಗೆಯೇ ವ್ಯರ್ಥವಾಗಿ ಹರಿದು ಹೋಗಿ ಅದು ಇದ್ದದ್ದರ ಲಕ್ಷಣವೂ ಇಲ್ಲದಂತೆ ಅನಾಮಧೇಯವಾಗಿ ಕಳೆದು ಹೋಗಬೇಕೇ? ಅಥವಾ ಆ ಹನಿ ಸಾರ್ಥಕವಾಗಿ ಹರಿದು ಮಾರ್ಗದರ್ಶಕವಾಗಬೇಕೇ? ಯಾವ ಬಗೆಯ ಜೀವನ ನಡೆಸಿದರೆ, ಯಾವ ಗುಣಗಳನ್ನು ಹೊಂದಿದರೆ ಆ ಸಾರ್ಥಕತೆ ಬಂದೀತು? ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಚಿಂತನಾಪರವಾದ ವ್ಯಕ್ತಿಯನ್ನು ಕಾಡುತ್ತವೆ.ಈ ಕಗ್ಗ ಇಂಥ ಬದುಕಿಗೆ ಅತ್ಯಂತ ಮುಖ್ಯವೆನ್ನಿಸಿದ ನಾಲ್ಕುಗುಣಗಳನ್ನು ತಿಳಿಸುತ್ತದೆ. ಇವು ಗುಣಗಳ ರಾಜ್ಯದಲ್ಲಿ ಪ್ರಮುಖವಾದವುಗಳು ಎನ್ನುತ್ತದೆ. ಅವುಗಳಲ್ಲಿ ಮೊದಲನೆಯದು ಧೈರ್ಯ.

ನೀತಿಶತಕ ಮೂರು ತರಹದ ವ್ಯಕ್ತಿಗಳನ್ನು ಗುರುತಿಸುತ್ತದೆ. ಅಧಮರು ಮುಂದೆತೊಂದರೆಗಳು ಬಂದಾವೇನೋ ಎಂಬ ಚಿಂತೆಯಿಂದ ಕೆಲಸವನ್ನು ಪ್ರಾರಂಭಿಸುವುದೇ ಇಲ್ಲ. ಮಧ್ಯಮರು ಕೆಲಸವನ್ನು ಆರಂಭಿಸಿ, ಸ್ವಲ್ಪ ವಿಘ್ನಗಳು ಬಂದರೂ ಹೆದರಿ ಹಿಂದೆ ಸರಿಯುತ್ತಾರೆ. ಉತ್ತಮರು ಆತಂಕಗಳು ಬಂದರೂ ಧೃತಿಗೆಡದೆ ಮುಂದೆ ಸಾಗಿ ಅವುಗಳನ್ನು ದಾಟಿ ಯಶಸ್ಸು ಪಡೆಯುತ್ತಾರೆ. ಎಲ್ಲ ಸಾಧನೆಗಳಿಗೂ ಮೂಲ ಈ ಧೈರ್ಯ.

ಎರಡನೆಯ ಅವಶ್ಯಗುಣ ನಿಶಿತವಾದ ಬುದ್ಧಿಶಕ್ತಿ. ಯಾವುದು ಸರಿ,ಯಾವುದು ತಪ್ಪು ಎಂಬುದನ್ನು ತಿಳಿಯುವುದು ವಿವೇಕ.ಪರಿಕಲ್ಪನೆಗಳನ್ನು ರೂಪಿಸುವ, ಉಳಿಸಿಕೊಳ್ಳುವ, ಗ್ರಹಿಸುವ,ನಿರ್ಣಯಿಸುವ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವೇ ಬುದ್ಧಿಶಕ್ತಿ. ಈನಿಶಿತವಾದ ಬುದ್ಧಿಶಕ್ತಿ ನಮ್ಮೆಲ್ಲ ತೀರ್ಮಾನಗಳಿಗೆ ತಳಪಾಯ.

ಮೂರನೆಯ ಆದರ್ಶಗುಣ ಸರ್ವಪ್ರಾಣಿಗಳಲ್ಲಿ ದಯೆ.ದಯೆಯಿಲ್ಲದ ಧರ್ಮವಿಲ್ಲ ಎಂದರು ಶರಣರು. ದಯಾಗುಣಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ, ಎಲ್ಲರನ್ನುಒಂದುಗೂಡಿಸಿ ಭಿನ್ನತೆಯನ್ನು ಕಳೆಯುತ್ತದೆ. ಇವೆಲ್ಲಅಗತ್ಯವಾದ ಗುಣಗಳಿಗೆ ಕಿರೀಟಪ್ರಾಯವಾದದ್ದು ನಿರ್ಮಮತೆ.ಪ್ರತಿಯೊಂದರಲ್ಲೂ ನಾನು, ನನ್ನದು ಎಂಬ ಮಮಕಾರ,ಸಿದ್ಧಿಯ ಶಿಖರವನ್ನು ಮರೆಮಾಚಿಬಿಡುತ್ತದೆ. ಭಗವದ್ಗೀತೆಇದನ್ನು ಒತ್ತಿ ಹೇಳುತ್ತದೆ. ಯಾವ ಮನುಷ್ಯ ಅತಿಯಾದಕಾಮನೆಗಳನ್ನು ತೊರೆದು, ಅಹಂಕಾರವನ್ನು ಕಳೆದುಕೊಂಡು, ಬಂಧಿಸುವ ಮಮಕಾರದಿಂದ ಬಿಡುಗಡೆ ಹೊಂದುತ್ತಾನೋ, ಅವನು ಮಾತ್ರ ಶಾಂತಿಯನ್ನು ಪಡೆಯುತ್ತಾನೆ. ಅವನಿಗೆ ಮಾತ್ರ ಬ್ರಹ್ಮಾನಂದದ ಶಾಂತಿ. ಅದಕ್ಕೇ ಇದು ಸರ್ವಗುಣಗಳಿಗೆ ಹಿರಿದಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT