ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪೂರ್ಣತೆಯಲ್ಲಿ ಕೊರೆಯಿಲ್ಲ

Last Updated 15 ಜನವರಿ 2023, 23:54 IST
ಅಕ್ಷರ ಗಾತ್ರ

ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ ? ||
ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ ? ||
ಉನ್ನತದ ಶಿಖರದಿಂ ತಿಟ್ಟೇನು ಕುಳಿಯೇನು ? |
ಪೂರ್ಣತೆಗೆ ಸೊಟ್ಟೇನು? – ಮಂಕುತಿಮ್ಮ || 800 ||

ಪದ-ಅರ್ಥ: ಹೊಟ್ಟೆ +ತುಂಬಿರುವಂಗೆ (ತುಂಬಿರುವವನಿಗೆ), ಪುಣ್ಯವೇಂ=ಪುಣ್ಯವೇನು, ತಿಟ್ಟೇನು=ತಿಟ್ಟು(ಎತ್ತರದ ದಿಬ್ಬ)+ಏನು, ಕುಳಿಯೇನು=ಕುಳಿ(ತೆಗ್ಗು)+ಏನು.

ವಾಚ್ಯಾರ್ಥ: ಹೊಟ್ಟೆ ತುಂಬಿದವನಿಗೆ ಹಣ್ಣು, ಕಾಯಿಗಳಿಂದ ಏನು ಪ್ರಯೋಜನ? ಪೂರ್ಣದರ್ನ ವಾದವನಿಗೆ ಪುಣ್ಯವೇನು, ಪಾಪವೇನು? ಎತ್ತರದ ಪರ್ವತದ ಮೇಲೆ ಕುಳಿತವನಿಗೆ ಕೆಳಗಿನ ಭೂಮಿಯಲ್ಲಿ ಕಾಣುವ ತೆಗ್ಗು, ದಿಬ್ಬಗಳಿಂದ ಏನಾದೀತು? ಪೂರ್ಣತೆಗೆ ಯಾವುದೇ ಕೊರತೆ ಇಲ್ಲ.

ವಿವರಣೆ: ಗ್ರೀಸ್ ದೇಶದ ಅಥೆನ್ಸಿನಲ್ಲಿದ್ದ ಸಾಕ್ರೆಟಿಸ್ ಒಬ್ಬ ಪರಮಾನುಭವಿ. ದೊಡ್ಡ ಸಂತ. ಒಂದು ರೀತಿಯಲ್ಲಿ ಆತ ಸರ್ವಜ್ಞ. ಅವನಿಗೆ ಸಾವಿರಾರು ಜನ ಶಿಷ್ಯರು. ಅವರಲ್ಲಿ ಅನೇಕರು ಶ್ರೀಮಂತರು. ಅವರು ತಮ್ಮ ಗುರುವಾದ ಸಾಕ್ರೆಟಿಸ್‌ನಿಗೆ ಏನು ಬೇಕಾದರೂ ಕೊಡಲು ಸಿದ್ಧರಿದ್ದರು. ಆದರೆ ಅದಾವುದೂ ಸಾಕ್ರೆಟಿಸ್‌ನಿಗೆ ಬೇಕಿಲ್ಲ. ಅವನದೊಂದು ಪುಟ್ಟ ಮನೆ. ಮೈಮೇಲೆ ಕನಿಷ್ಠ ಬಟ್ಟೆ. ಅವನದೇ ಆದ ಯಾವ ವಸ್ತುಗಳೂ ಅವನ ಬಳಿಯಲ್ಲಿ ಇರಲಿಲ್ಲ. ಅವನ ಶ್ರೀಮಂತ ಶಿಷ್ಯ ಪ್ಲೇಟೋ ಹೇಳಿದ, “ಗುರುಗಳೇ ತಾವು ಪರಮಜ್ಞಾನಿಗಳು, ಸಾವಿರಾರು ಜನಕ್ಕೆ ಜ್ಞಾನದ ಬೆಳಕು ನೀಡಿದವರು. ತಮ್ಮಿಂದ ನಾವೆಲ್ಲ ಬದುಕನ್ನು ಸಾರ್ಥಕಪಡಿಸಿಕೊಂಡಿದ್ದೇವೆ. ತಾವು ಸುಖವಾಗಿರಲೆಂದು ಒಂದು ಸುಂದರವಾದ ಮನೆಯನ್ನು ಕಟ್ಟಬಯಸಿದ್ದೇನೆ. ಅದನ್ನು ತಮ್ಮ ಪದತಲದಲ್ಲಿ ಅರ್ಪಿಸುತ್ತೇವೆ. ದಯವಿಟ್ಟು ಅವಕಾಶಕೊಡಿ”. ಸಾಕ್ರೆಟಿಸ್ ನಕ್ಕ.

“ಮಿತ್ರ, ನಾನು ಈ ಮರದ ಕೆಳಗೆಯೇ ಕುಳಿತು ಜ್ಞಾನ ಸಂಪಾದನೆ ಮಾಡಿದವ. ನನಗೆ ಇಲ್ಲಿಯೇ ಹಿತ. ನನಗೆ ಮನೆಯೊಂದು ಬಂಧನವಾಗುತ್ತದೆ. ಇಲ್ಲಿ ಬಯಲಲ್ಲಿ ಯಾವುದೂ ಮೇಲಲ್ಲ, ಕೀಳಲ್ಲ. ಎಲ್ಲವೂ ಸುಭಗ, ಸುಂದರ”. ಇದೇ ಪೂರ್ಣತೆಯನ್ನು ಪಡೆದ ಪರಮತೃಪ್ತನ ಲಕ್ಷಣ. ಅವರಿಗೆ ಎಲ್ಲವೂ ಒಂದೇ. ಯಾವುದರ ಅವಶ್ಯಕತೆಯೂ ಇಲ್ಲ. ಇದನ್ನು ವಚನಕಾರ ಜೇಡರ ದಾಸಿಮಯ್ಯ ಹೇಳುವ ರೀತಿ ಅನನ್ಯ. ಕರಿಯನಿತ್ತಡೆ ಒಲ್ಲೆ, ಸಿರಿಯವಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ. ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ. ಕರಿ, ಸಿರಿ, ರಾಜ್ಯಗಳಿಗಿಂತ ಶರಣರ ಒಂದು ಮಾತು ಅಮೂಲ್ಯವೆನ್ನಿಸುತ್ತದೆ. ಪೂರ್ಣದರ್ಶನಿಗೆ.

ಈ ಮಾತುಗಳನ್ನೇ ಕೆಲವು ಉದಾಹರಣೆಗಳೊಂದಿಗೆ ಕಗ್ಗ ತಿಳಿಸುತ್ತದೆ. ಹೊಟ್ಟೆ ತುಂಬಿರುವವನ ಮುಂದೆ ಇಟ್ಟ ಹಣ್ಣೇನು, ಕಾಯೇನು? ಅವನಿಗೆ ಹಸಿವೆಯೇ ಇಲ್ಲ. ಆತ ಏನನ್ನೂ ತಿನ್ನಲಾರ. ಪೂರ್ಣದರ್ಶನವಾದವನಿಗೆ ಯಾವ ಅಂಟೂ ಇಲ್ಲದ್ದರಿಂದ ಪಾಪ, ಪುಣ್ಯಗಳ ಗೊಡವೆ ಇಲ್ಲ. ಆತ ಮಾಡಿದ್ದೆಲ್ಲ ಪುಣ್ಯಕಾರ್ಯವೆ. ಅಂತೆಯೇ ಹಿಮಾಲಯದ ಶಿಖರವನ್ನೇರಿ ಕುಳಿತವನಿಗೆ ಕೆಳಗೆ ಕಾಣುವ ತೆಗ್ಗು-ದಿನ್ನೆಗಳಿಂದ ಏನು ಪ್ರಯೋಜನ. ಅವುಗಳನ್ನೆಲ್ಲ ಆತ ದಾಟಿ ಬಂದಿದ್ದಾನೆ. ಆದ್ದರಿಂದ ಪೂರ್ಣತೆಗೆ ಯಾವ ಕೊರತೆಯೂ ಇಲ್ಲ. ಪೂರ್ಣತ್ವದ ದೃಷ್ಟಿಯಲ್ಲಿ ಯಾವುದೂ ಕೆಡುಕಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT