ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಿರ್ಮಾಲ್ಯವಾದ ಬದುಕು

Last Updated 17 ಜನವರಿ 2023, 19:18 IST
ಅಕ್ಷರ ಗಾತ್ರ

ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ |
ನಿರ್ಮಮತೆಗೇರಿ ಕರ್ಮಾತೀತನಪ್ಪೆ ||
ಬ್ರಹ್ಮಪದದಿಂದ ಧರ್ಮಾಧರ್ಮಗಳ ನಿಯಮ |
ನಿರ್ಮಾಲ್ಯವಾಗುವುದು –ಮಂಕುತಿಮ್ಮ || 802 ||

ಪದ-ಅರ್ಥ: ಹರ್ಮ್ಯಾಗ್ರಕೇರಿ=ಹರ್ಮ್ಯಾಗ್ರಕೆ(ಉಪ್ಪರಿಗೆಯತುದಿಗೆ)+ಏರಿ,ಸೋಪಾನದಿನತೀತನಹೆ=ಸೋಪಾನದಿನ್(ಮೆಟ್ಟಿಲುಗಳಿಂದ)+ಅತೀತ(ಮೀರಿದ್ದು)+ಇಹೆ(ಇರುವೆ),ನಿರ್ಮಮತೆಗೇರಿ=ನಿರ್ಮಮತೆ(ಮಮತೆಯನ್ನು ಮೀರಿ)+ಏರಿ, ಕರ್ಮಾತೀತನಪ್ಪೆ=ಕರ್ಮಾತೀತ(ಕರ್ಮವನ್ನುಮೀರಿ)+ಇಪ್ಪೆ(ಇರುವೆ), ಧರ್ಮಾಧರ್ಮಗಳ=ಧರ್ಮ, ಅಧರ್ಮಗಳ, ನಿರ್ಮಾಲ್ಯ=ದೇವರಿಗೆ ಅರ್ಪಿಸಿದ ನಂತರಹಳೆಯದಾದ ಹೂವು.

ವಾಚ್ಯಾರ್ಥ: ಉಪ್ಪರಿಗೆಯ ತುದಿಗೆ ಏರಿದವನು, ಮೆಟ್ಟಿಲುಗಳನ್ನು ಮೀರಿದವನು, ಮಮತೆಯ ಬಂಧನಗಳಿಂದಕಳಚಿಕೊಂಡವನು, ಕರ್ಮಗಳನ್ನು ಮೀರಿದವನು, ಬ್ರಹ್ಮಪದವನ್ನು ತಲುಪಿದವನಿಗೆ ಧರ್ಮ, ಅಧರ್ಮಗಳು ಕೂಡ ನಿರ್ಮಾಲ್ಯವಾಗುತ್ತವೆ.

ವಿವರಣೆ: ನಾವು ಮನೆಯ ಮಾಳಿಗೆಯ ಮೇಲೆ ಹೋಗುವುದು ಹೇಗೆ? ಮೆಟ್ಟಿಲುಗಳನ್ನು ಏರಿಯೇ ತಾನೆ? ಮೆಟ್ಟಿಲುಗಳನ್ನು ಮೀರಿ ಮೇಲೆ ನಡೆದಾಗಲೇ ಮಾಳಿಗೆಯ ದರ್ಶನ. ಮೆಟ್ಟಿಲುಗಳನ್ನು ಏರಲು ಶಕ್ತಿ ಬೇಕು. ಉತ್ಸಾಹ ಬೇಕು ಮತ್ತು ಭಯವಿರದಿರಬೇಕು. ಹೀಗೆಂದರೇನಾಯಿತು? ಮಾಳಿಗೆಯ ತುದಿಯನ್ನೇರಿದವನಿಗೆ ಮೆಟ್ಟಿಲುಗಳ ಭಯವಿಲ್ಲ.ಅಂತೆಯೇ ಬದುಕಿನಲ್ಲಿ ಹಂತಹಂತವಾಗಿ ಜೀವನದಮೆಟ್ಟಿಲುಗಳನ್ನು ಧೈರ್ಯದಿಂದ ಏರಿದವನು ಮಾತ್ರಯಶಸ್ಸಿನ ಎತ್ತರದ ಉಪ್ಪರಿಗೆಯನ್ನು ಕಂಡಾನು. ಅವನಿಗೆ ಈಗಜೀವನದ ಹಲವು ಹಂತಗಳ ಭಯವಿಲ್ಲ. ಆತ ಸೋಪಾನಗಳಿಗೆಆತೀತ. ಮೊದಲನೆಯ ಹಂತ ಧೈರ್ಯ ಮತ್ತುಉತ್ಸಾಹಗಳದ್ದಾದರೆ, ಎರಡನೆಯದು ಮಮಕಾರವನ್ನುಮೀರುವುದು. ಇದು ತುಂಬ ಕಷ್ಟದ್ದು. ಹುಟ್ಟಿದಾಗಿನಿಂದಕೊನೆಯವರೆಗೆ ‘ನಾನು’, ‘ನನ್ನದು’ ಎನ್ನುವ ಮೋಹನಮ್ಮನ್ನು ಬಿಗಿದು ಇಟ್ಟಿರುತ್ತದೆ. ಆ ಹಗ್ಗಗಳ ಬಿಗಿತನಮ್ಮನ್ನು ಮೇಲಕ್ಕೇರಲು ಬಿಡುವುದಿಲ್ಲ. ಅದೇ ಮಮಕಾರಬಂಧನ. ಆದರೆ ಬದುಕಿನಲ್ಲಿ ಒಂದು ಹಂತ ಬರುತ್ತದೆ, ಬರಬೇಕು. ಆಗ ಈ ಪ್ರಪಂಚಕ್ಕೆ ಬರುವಾಗ ಬರಿಗೈಯಿಂದ ಬಂದೆವು,ಹೋಗುವಾಗ ಬರಿಗೈಯಿಂದಲೇ ಹೋಗುತ್ತೇವೆ ಎಂಬ ಅರಿವು ಮೂಡೀತು. ಇಡೀ ಪ್ರಪಂಚ ಪರಮಾತ್ಮನದು. ಇಲ್ಲಿ ನನ್ನದುಎನ್ನುವುದು ಯಾವುದು? ನನ್ನ ಹೆಸರು, ಮನಸ್ಸು, ಬುದ್ಧಿ,ಪ್ರಾಣ ಯಾವವೂ ನನ್ನದಲ್ಲವೆಂದ ಮೇಲೆ ನಮ್ಮಸುತ್ತಮುತ್ತ ಇರುವ, ನಾವು ಗಳಿಸಿದ್ದು ಎಂಬ ಭ್ರಮೆಹುಟ್ಟಿಸುವ ವಸ್ತುಗಳು ನನ್ನವು ಹೇಗಾದಾವು? ಈ ದೃಷ್ಟಿಬಂದಾಗ ವ್ಯಕ್ತಿ ಕರ್ಮಗಳಿಗೆ ಅತೀತವಾಗುತ್ತಾನೆ. ಯಾಕೆಂದರೆತನಗಾಗಿ ಮಾಡದ ಕರ್ಮಗಳೆಲ್ಲ ಒಳ್ಳೆಯ ಕರ್ಮಗಳೇ.ಮೂರನೆಯ ಹಂತ ಆತ್ಮಾನುಭವದ್ದು,ಬ್ರಹ್ಮದರ್ಶನದ್ದು. ಆ ಹಂತ ಮುಟ್ಟಿದ ಜೀವನ್ಮುಕ್ತನಿಗೆಧರ್ಮ, ಅಧರ್ಮಗಳ ಗೋಜೂ ಇಲ್ಲ. ಯಾಕೆಂದರೆ ಅವನುಸಾಧನೆಯ ಸೋಪಾನಗಳನ್ನು ದಾಟಿದವನು,ಮಮಕಾರವನ್ನು ಮೀರಿದವನು, ಬ್ರಹ್ಮಪದವನ್ನು ಕಂಡವನು.ಅವನ ಬದುಕೇ ನಿರ್ಮಾಲ್ಯ. ಅದು ದೇವರಿಗೆ ಅರ್ಪಿಸಿದ ಹೂವು,ದೇವರಿಗೇ ಸೇರಿದ್ದು. ಅವನು ಮಾಡಿದ್ದು, ನಡೆದದ್ದೆಲ್ಲ ಧರ್ಮವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT