ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಭಯಪಥ

Last Updated 19 ಜನವರಿ 2023, 20:01 IST
ಅಕ್ಷರ ಗಾತ್ರ

ಶುಭವಾವುದಶುಭವಾವುದು ಲೋಕದಲಿ ನೋಡೆ?
ವಿಭಜಿಸಲ್ಕಾಗದನ್ಯೋನ್ಯ ಸಂಬಂಧ ||
ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು |
ಅಭಯಪಥವದು ನಿನಗೆ – ಮಂಕುತಿಮ್ಮ || 804 ||

ಪದ-ಅರ್ಥ: ಶುಭವಾವುದಶುಭವಾವುದು=ಶುಭವು+ಯಾವುದು+ಅಶುಭ ವು+ಯಾವುದು, ವಿಭಜಿಸಲ್ಕಾಗದನ್ಯೋನ್ಯಸಂಬAಧ=ವಿಭಜಿಸಲ್ಕೆ(ವಿಭಜಿಸಲು)+ಆಗದ +ಅನ್ಯೋನ್ಯ+ಸಂಬಂಧ, ಉಭಯವನು=ಎರಡನ್ನು, ಮೀರ್ದ=ಮೀರಿದ, ಸಾಮ್ಯದ=ಅನ್ಯೋನ್ಯತೆಯ, ಅಭಯಪಥವದು=ಅಭಯ(ಭಯವಿಲ್ಲದ)+ಪಥವದು (ಮಾರ್ಗವದು).

ವಾಚ್ಯಾರ್ಥ: ಸರಿಯಾಗಿ ನೋಡಿದರೆ ಜಗತ್ತಿನಲ್ಲಿ ಶುಭ ಯಾವುದು, ಅಶುಭ ಯಾವುದು? ಅವೆರಡಕ್ಕೂ ವಿಭಜಿಸಲಾಗದ ಅನ್ಯೋನ್ಯ ಸಂಬಂಧವಿದೆ. ಇವೆರಡನ್ನೂ ಸಮನ್ವಯಗೊಳಿಸಿದ ನೀತಿಯೊಂದಿದೆ. ಅದೇ ನಿನಗೆ ಅಭಯದ ಹಾದಿ.

ವಿವರಣೆ: ಬದುಕಿನಲ್ಲಿ ಅನೇಕ ಕಾರ್ಯಗಳನ್ನು ಶುಭ ಕಾರ್ಯಗಳು ಮತ್ತು ಅಶುಭಕಾರ್ಯಗಳು ಎಂದು ನಂಬಿಕೊಂಡಿದ್ದೇವೆ. ರಸ್ತೆಯಲ್ಲಿ ಹೋಗುವಾಗ ಬೆಕ್ಕು ಅಡ್ಡಬಂದರೆ ಅಶುಭ ಎನ್ನುತ್ತೇವೆ. ಅದು ನಿಜವಾಗಿಯೂ ಅಶುಭವಾಗುವುದು ನಮಗೋ, ಬೆಕ್ಕಿಗೋ ತಿಳಿಯದು. ನನ್ನ ಗೆಳೆಯನೊಬ್ಬ ಇಂಥದನ್ನು ಬಲವಾಗಿ ನಂಬುವವನು. ಅವನ ಪ್ರಕಾರ ಮನೆಯಿಂದ ಕೆಲಸಕ್ಕೆ ಹೊರಟರೆ, ಎದುರಿಗೆ ಹುಬ್ಬಿನ ನಡುವೆ ಕುಂಕುಮ ಹಚ್ಚಿದ ಹುಡುಗಿ ಎದುರು ಬಂದರೆ ಶುಭವಾಗುತ್ತದೆ. ಅದಕ್ಕೊಂದು ಉಪಾಯ ಮಾಡಿಕೊಂಡಿದ್ದ. ತಾನು ಮನೆಯಿಂದ ಹೊರಡುವ ಮೊದಲು ಪಕ್ಕದ ಮನೆಯಲ್ಲಿದ್ದ ಹುಡುಗಿಗೆ ಫೋನ್ ಮಾಡಿ, “ನಾನು ಹೊರಡ್ತಾ ಇದ್ದೇನೆ, ಬೇಗನೆ ಹಣೆಗೆ ಕುಂಕುಮ ಇಟ್ಟುಕೊಂಡು ಎದುರಿಗೆ ಬಾ” ಎಂದು ಕೂಗಿ ನಂತರ ಹೊರಗೆ ಬಂದು, ಆಕೆಯನ್ನು ಎದುರಿಗೆ ಕಂಡು, ಇಂದು ಶುಭವಾಗುತ್ತದೆ ಎಂದು ಹೋಗುತ್ತಿದ್ದ. ಆ ಭ್ರಮೆ ಬಹಳ ದಿನ ಉಳಿಯಲಿಲ್ಲ. ಶುಭ, ಅಶುಭಗಳೆಲ್ಲ ನಾವು ಮಾಡಿಕೊಂಡ ವಿಂಗಡನೆಗಳು. ದೇಹ ನಮ್ಮದೇ. ಅದರ ಪ್ರತಿಯೊಂದು ಅಣುವಿನಲ್ಲೂ ನಾವೇ. ಆದರೆ ಬಲಗಾಲು ಶುಭ, ಎಡಗಾಲು ಅಶುಭ! ಎಡಗೈ ಅಶುಭ, ಬಲಗೈ ಶುಭ! ಹೀಗೆ ದೇಹದಲ್ಲೇ ಇಷ್ಟು ಭೇದ ಮಾಡುವ ನಾವು ಜಗತ್ತಿನಲ್ಲಿ ಅದೆಷ್ಟು ಭೇದ ಮಾಡುತ್ತೇವಲ್ಲ! ಎಲ್ಲ ದಿನಗಳೂ ಸೂರ್ಯನವೇ. ಆದರೆ, ನಮಗೆ ಕೆಲದಿನಗಳು ಶುಭ ದಿನಗಳು, ಮತ್ತೆ ಕೆಲವು ಅಶುಭದ ದಿನಗಳು. ಆ ದಿನಗಳಲ್ಲೇ ಕೆಲವು ಗಂಟೆಗಳು ಶುಭದ ಗಂಟೆಗಳು ಮತ್ತೆ ಉಳಿದವು ಅಶುಭದ ಕಾಲದ ಸಮಯ.

ಈ ಶುಭ ಮತ್ತು ಅಶುಭಗಳಿಗೆ ಅನ್ಯೋನ್ಯವಾದ ಸಂಬಂಧವಿದೆ. ನಮಗೆ ಈ ಭೇದಗಳು ಕೇವಲ ತೋರಿಕೆ. ತೆರೆಗಳನ್ನು ನೋಡುವವರಿಗೆ ಸಮುದ್ರ ಕಾಣುವುದಿಲ್ಲ. ಸಮುದ್ರವನ್ನು ನೋಡುವವರಿಗೆ ತೆರೆಗಳು ಮಾಯವಾಗುತ್ತವೆ. ಸಂತರು ಮೂಲವಸ್ತುವನ್ನು ಕಂಡರು. ಅದರ ಅಭೇದತೆಯನ್ನು ಅನುಭವಿಸಿದರು. ಶುಭ, ಅಶುಭಗಳೆಲ್ಲ ಮೂಲಸತ್ವದ ವಿಭಿನ್ನ ಮುಖಗಳು, ಒಂದನ್ನು ಬಿಟ್ಟು ಮತ್ತೊಂದಿಲ್ಲ ಎಂಬುದನ್ನು ಅರಿತರು. ಅವರು ವಿಶ್ವದ ಆದಿ ಅಂತ್ಯಗಳಲ್ಲಿ ನೆಲೆಸಿದ ಸತ್ಯವನ್ನು ಕಂಡರು. ಆಗ ಶುಭಾಶುಭಗಳ ಭೇದವೇ ಇಲ್ಲ. ಆ ಮೂಲವನ್ನು ಕಂಡು, ತೋರಿಕೆಯ ಶುಭ ಮತ್ತು ಅಶುಭಗಳನ್ನು ಮನಸ್ಸಿಗೆ ತಂದುಕೊಳ್ಳದೆ ಬದುಕುವುದೇ ಭಯರಹಿತವಾದ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT