ಬುಧವಾರ, ಜುಲೈ 28, 2021
29 °C

ಬೆರಗಿನ ಬೆಳಕು | ಕೋಲಾಹಲದ ಲೋಕದಲ್ಲಿ ಪುಣ್ಯದ ಸ್ಮರಣೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ವನ್ಯಮೃಗಗಳ ನಡುವೆ ಗೋವು ಬಂದೇನಹುದು ? |

ಪಣ್ಯವೀಧಿಯಲಿ ತಾತ್ವಿಕನಿಗೇನಹುದು ? ||
ಅನ್ಯಾಯದುನ್ಮತ್ತ ಕೋಲಾಹಲದ ಲೋಕ |
ಪುಣ್ಯವನು ಚಿಂತಿಪುದೆ ? – ಮಂಕುತಿಮ್ಮ
⇒|| 309||

ಪದ-ಅರ್ಥ: ಪಣ್ಯವೀಧಿಯಲಿ=ಪೇಟೆಯ ಬೀದಿಯಲ್ಲಿ, ತಾತ್ವಿಕನಿಗೇನಹುದು=ತಾತ್ವಿಕನಿಗೆ (ತತ್ವಗಳನ್ನು ಪ್ರತಿಪಾದನೆ ಮಾಡುವವನು)+ಏನಹುದು, ಅನ್ಯಾಯದುನ್ಮತ್ತ=ಅನ್ಯಾಯದ+ಉನ್ಮತ್ತ, ಚಿಂತಿಪುದೆ= ಚಿಂತಿಸುವುದೆ.

ವಾಚ್ಯಾರ್ಥ: ಕಾಡುಮೃಗಗಳ ಮಧ್ಯೆ ಒಂದು ಹಸು ಬಂದರೇನಾದೀತು? ಹಣವನ್ನೇ ಮೂಲವಾಗಿಟ್ಟುಕೊಂಡ ಪೇಟೆಯ ಬೀದಿಯಲ್ಲಿ, ತತ್ವ ಪ್ರತಿಪಾದಕ ಏನು ಮಾಡಿಯಾನು? ಅನ್ಯಾಯದಲ್ಲಿ ಉನ್ಮತ್ತವಾದ, ಈ ಕೋಲಾಹಲದ ಲೋಕ ಪ್ರಪಂಚಕ್ಕೆ ಒಳ್ಳೆಯದನ್ನು ಮಾಡುವ ಪುಣ್ಯವನ್ನು ಚಿಂತಿಸುತ್ತದೆಯೆ?

ವಿವರಣೆ: ಕಾಡುಮೃಗಗಳ ಗುಂಪಿನಲ್ಲಿ ಸಾಧುವಾದ ಹಸು ಬಂದರೆ ಏನಾದೀತು? ಕಾಡುಮೃಗಗಳು ಅದರ ಮೇಲೆ ಹಾರಿ ಬಿದ್ದು ಕೊಂದು ಬಿಟ್ಟಾವು ಅಲ್ಲವೆ? ಹಸು ಎಷ್ಟು ಪ್ರಯತ್ನಿಸಿದರೂ ಆ ಕ್ರೂರ ಮೃಗಗಳ ಕ್ರೂರತ್ವವನ್ನು ಕಡಿಮೆ ಮಾಡಿ ಅವುಗಳು ಸಾಧುಪ್ರಾಣಿಗಳಾಗುವಂತೆ ಮಾಡುವುದು ಸಾಧ್ಯವೆ? ಹಿಂದೆ ಒಂದು ಪುಣ್ಯಕೋಟಿ ಗೋವು ಬಂದು ಹೆಬ್ಬುಲಿಯ ಮನ:ಪರಿವರ್ತನೆಯನ್ನು ಮಾಡಿದ ಕತೆ ನಮ್ಮ ನೆನಪಿನಲ್ಲಿದ್ದರೂ ಅಂಥ ನಿದರ್ಶನಗಳು ನಂಬಲೂ ಅಸಾಧ್ಯವಾದ ಅಪರೂಪದ ಪ್ರಸಂಗಗಳು.

ಅದರಂತೆ ತತ್ವ ಪ್ರಸಾರಕನಾದ ಸಾತ್ವಿಕನಿಗೆ ಪೇಟೆಯ ಬೀದಿಯಲ್ಲಿ ಏನು ಕೆಲಸ? ಪೇಟೆಯ ಬೀದಿ ಕಾಂಚಾಣದ ಕುಣಿತಕ್ಕೆ ರಂಗಭೂಮಿ. ಹಣ ಹಾಕಿ ಮತ್ತಷ್ಟು ಹಣ ಹೊರ ತೆಗೆಯುವ ಉಮೇದಿನ ಜನ ಚಿಂತಿಸುವುದು ಹಣವನ್ನು ಮಾತ್ರ. ಪ್ರತಿಕ್ಷಣವೂ ಹಣದ ಕುಣಿತ. ಹೀಗೆ ಹಣದ ಪೂಜೆಯಲ್ಲಿ ಮೈಮರೆತ ಜನರ ಮಧ್ಯೆ ಒಬ್ಬ ತಾತ್ವಿಕ ಏನು ಮಾಡಿಯಾನು? ಅವನ ತತ್ವದ ಮಾತುಗಳನ್ನು ಕೇಳಲು ಯಾರಿಗಾದರೂ ವ್ಯವಧಾನ, ತಾಳ್ಮೆ, ಇಚ್ಛೆ ಇರುವುದು ಸಾಧ್ಯವೆ? ಅವನ ವಿಚಾರಗಳು ಅದೆಷ್ಟೇ ಉದಾತ್ತವಾಗಿದ್ದರೂ, ಆದರ್ಶ ಜೀವನಕ್ಕೆ ಆಧಾರವಾಗಿದ್ದರೂ ಪೇಟೆಯ ಭರಾಟೆಯಲ್ಲಿ ಅವು ಅಲ್ಲಿರುವವರನ್ನು ತಟ್ಟಲಾರವು. ತಾತ್ವಿಕನೇ ಹಣದ ಪೂಜಕನಾಗಿ ಹೊರಬರದಿದ್ದರೆ ಪುಣ್ಯ.

ಇಂದಿನ ಪ್ರಪಂಚವನ್ನು ಗಮನಿಸಿದರೆ ಅಲ್ಲಿ ಅನ್ಯಾಯದ ಉನ್ಮತ್ತತೆ ಕಾಣಿಸುತ್ತದೆ. ಅನ್ಯಾಯಕ್ಕೆ ಮಿತಿಯೇ ಕಾಣುತ್ತಿಲ್ಲ. ಅನ್ಯಾಯ ಮಾಡುವವರಿಗೆ ತಾವು ಮಾಡುತ್ತಿರುವುದು ಅನ್ಯಾಯ ಎನ್ನುವುದೇ ಗೊತ್ತಿಲ್ಲ. ಅದೇ ನ್ಯಾಯ ಎಂದು ಬೊಬ್ಬಿರಿಯುತ್ತಿ
ದ್ದಾರೆ. ಇಂಥ ಕೋಲಾಹಲ, ಅನ್ಯಾಯದಿಂದ ಮೈಮರೆತ ಪ್ರಪಂಚ, ಪುಣ್ಯವನ್ನು, ಒಳ್ಳೆಯ ಚಿಂತನೆಯನ್ನು ಮಾಡೀತೇ?

ಮೇಲ್ನೋಟಕ್ಕೆ ಇದು ನಿರಾಸೆಯನ್ನು ತೋರುವ ಚೌಪದಿ ಎನ್ನಿಸೀತು. ಸ್ವಲ್ಪ ಆಳವಾಗಿ ಚಿಂತಿಸಿದರೆ, ಅಲ್ಲಿ ನಮಗೊಂದು ಮಾರ್ಗದರ್ಶನವಿದೆ. ಅನೇಕ ಕ್ರೂರಮೃಗಗಳ ನಡುವೆ ಒಂದು ಗೋವು ಅಸಹಾಯಕ, ಬರೀ ಹಣದ ಧ್ಯಾನದಲ್ಲಿದ್ದವರ ನಡುವೆ ಒಬ್ಬ ತಾತ್ವಿಕ ಗಣನೆಗೆ ಬರಲಾರ. ಆದರೆ ಸಾವಿರ ಗೋವುಗಳ ನಡುವೆ ಒಂದು ಹುಲಿ ಬಂದರೂ ಈ ಸಂಖ್ಯೆಗೆ ಹೆದರಿ ಓಡಿ ಹೋಗುತ್ತದೆ. ತಾತ್ವಿಕರು ಹೆಚ್ಚಾದಷ್ಟು ಧನಿಕರಿಗೂ ಆ ಕಡೆಗೆ ಮನಸ್ಸು ತಿರುಗುತ್ತದೆ. ಪ್ರಪಂಚದಲ್ಲಿ ಒಳ್ಳೆಯವರ ಸಂಖ್ಯೆ ಹೆಚ್ಚಾದಂತೆ ಕೋಲಾಹಲ, ಅನ್ಯಾಯ ಕಡಿಮೆಯಾದೀತು. ಈಗ ನಮ್ಮೆಲ್ಲರ ಗಮನ, ಶ್ರಮ ಸಾತ್ವಿಕರನ್ನು, ಸಜ್ಜನರನ್ನು, ಒಳ್ಳೆಯ ಚಿಂತಕರ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿರಬೇಕು. ಅವರು ಹೆಚ್ಚಾದಷ್ಟೂ ಪ್ರಪಂಚಕ್ಕೇ ಕ್ಷೇಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು