ಶನಿವಾರ, ಜುಲೈ 31, 2021
27 °C

ಬೆರಗಿನ ಬೆಳಕು: ಚಿತ್ತ ಶೋಧನೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ಕಾಶಿರಾಜ್ಯವನ್ನು ಆಳುತ್ತಿದ್ದಾಗ ನಗರದಿಂದ ಸ್ವಲ್ಪ ದೂರದ ಹಳ್ಳಿಯಲ್ಲಿ ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಜೊತೆಗೆ ಹೊಲಕ್ಕೆ ಹೋಗುತ್ತಿದ್ದರು. ಹೋಗುವಾಗ ತಮ್ಮ ತಮ್ಮ ತಾಮ್ರದ ಪಾತ್ರೆಗಳಲ್ಲಿ ಕುಡಿಯುವ ನೀರನ್ನು ಒಯ್ಯುತ್ತಿದ್ದರು. ಕೆಲಸದ ನಡುವೆ ದಣಿವಾದಾಗ ತಮ್ಮ ಪಾತ್ರೆಯಲ್ಲಿನ ನೀರು ಕುಡಿಯುತ್ತಿದ್ದರು.

ಒಂದು ದಿನ ಒಬ್ಬ ಬಾಯಾರಿದಾಗ ನೀರು ಕುಡಿಯಲು ಬಂದ. ತನ್ನ ಪಾತ್ರೆ ಖಾಲಿಯಾದರೆ ಏನು ಮಾಡುವುದು ಎಂದುಕೊಂಡು, ತನ್ನ ಸ್ನೇಹಿತನ ಪಾತ್ರೆಯಲ್ಲಿಯ ನೀರು ಕುಡಿದ. ಸಾಯಂಕಾಲ ಮನೆಗೆ ಬಂದು, ಇಂದು ನನ್ನಿಂದೇನಾದರೂ ತಪ್ಪಾಯಿತೆ ಎಂದು ಯೋಚಿಸಿದ. ತಕ್ಷಣ ತಾನು ಸ್ನೇಹಿತನ ನೀರನ್ನು ಕದ್ದು ಕುಡಿದದ್ದು ನೆನಪಾಗಿ ಅವನಲ್ಲಿ ಸಂವೇಗ ಉಂಟಾಯಿತು. ಛೇ! ಒಂದು ಗುಟುಗು ನೀರಿಗೆ ಆಸೆ ಪಡುವ ಈ ಮನಸ್ಸನ್ನು ನಿಗ್ರಹ ಮಾಡುತ್ತೇನೆ ಎಂದು ಆಳವಾಗಿ ಯೋಚಿಸುತ್ತಿದ್ದಂತೆ ಅವನಲ್ಲಿ ಪ್ರತ್ಯೇಕ ಬೋಧಿಜ್ಞಾನ ಉತ್ಪನ್ನವಾಯಿತು. ಅಲ್ಲಿಗೆ ಬಂದ ಗೆಳೆಯನಿಗೆ ಹೇಳಿದ, ‘ನಾನು ಈಗ ಪ್ರತ್ಯೇಕ ಬುದ್ಧನಾಗಿದ್ದೇನೆ. ನಾನಿನ್ನು ಮನೆಗೆ ಬರಲಾರೆ’. ‘ಪ್ರತ್ಯೇಕ ಬುದ್ಧರು ಹೀಗಿರುತ್ತಾರೆಯೆ? ಅವರು ತಲೆಯಲ್ಲಿ ಎರಡು ಅಂಗುಲ ಕೂದಲು, ಕಾವಿ ವಸ್ತ್ರ ಧರಿಸಿರುತ್ತಾರೆ, ಹೆಗಲ ಮೇಲೆ ಮಣ್ಣಿನ ಪಾತ್ರೆ ಹೊತ್ತಿರುತ್ತಾರೆ ಮತ್ತು ಅವರು ಇರುವುದು ನಂದಮೂಲ ಪರ್ವತದಲ್ಲಿ’ ಎಂದ ಸ್ನೇಹಿತ. ಮೊದಲಿನವ ‘ಹೌದೇ’ ಎಂದು ತಲೆ ಮುಟ್ಟಿಕೊಂಡ. ಕ್ಷಣ ಮಾತ್ರದಲ್ಲಿ ಅವನಿಗೆ ಪ್ರತ್ಯೇಕ ಬುದ್ಧನ ಸರ್ವಲಕ್ಷಣಗಳೂ ಬಂದವು. ಆತ ಆಕಾಶಮಾರ್ಗವಾಗಿ ನಂದಮೂಲ ಪರ್ವತಕ್ಕೆ ಹೋಗಿಬಿಟ್ಟ.

ಮತ್ತೊಂದು ಹಳ್ಳಿಯಲ್ಲಿ ಒಬ್ಬ ಗೃಹಸ್ಥ ತನ್ನ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ. ಆಗ ಒಬ್ಬ ಪುರುಷ ತನ್ನ ಪತ್ನಿಯೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ. ಆ ಸುಂದರ ಸ್ತ್ರೀಯನ್ನು ಕಂಡು ಗೃಹಸ್ಥನ ಮನಸ್ಸು ವಿಚಲಿತವಾಯಿತು. ಪರಪತ್ನಿಯನ್ನು ಕಂಡೊಡನೆ ಹೀಗಾಗುವುದಾದರೆ ಈ ಲೋಭ ಮುಂದೆ ನನ್ನನ್ನು ನರಕಕ್ಕೆ ಹಾಕಿಬಿಡುತ್ತದೆ. ಅದನ್ನು ತಡೆಯಬೇಕು ಎಂದು ಚಿಂತಿಸುತ್ತಿದ್ದಂತೆ ಅವನಲ್ಲಿ ವಿದರ್ಶನ ಭಾವ ಹೆಚ್ಚಿತು. ತಕ್ಷಣವೇ ಅವನಿಗೆ ಪ್ರತ್ಯೇಕ ಬೋಧಿ ಜ್ಞಾನ ಲಭಿಸಿ ಆಕಾಶಮಾರ್ಗವಾಗಿ ನಂದಮೂಲ ಪರ್ವತ ಸೇರಿದ.

ಇನ್ನೊಬ್ಬ ನಗರ ಪ್ರಮುಖ, ಉತ್ಸವಗಳಲ್ಲಿ ಜನ ಮದ್ಯ ಕುಡಿಯದಂತೆ ನೋಡಿಕೊಳ್ಳುತ್ತ, ಮದ್ಯದ ಮಾರಾಟವನ್ನು ನಿಲ್ಲಿಸುತ್ತಿದ್ದ. ಕೆಲವು ಹಿರಿಯರು ಬಂದು, ‘ಹಿಂದೆ ನಾವೆಲ್ಲರೂ ಉತ್ಸವದಲ್ಲಿ ಕುಡಿದು ಸಂತೋಷಪಡುತ್ತಿದ್ದೆವು. ನೀವದನ್ನು ನಿಲ್ಲಿಸಿದ್ದೀರಿ. ದಯವಿಟ್ಟು ಈ ನಿಯಮವನ್ನು ಸಡಲಿಸಿ’ ಎಂದು ಕೇಳಿದರು. ಆತ ಒಪ್ಪಿ ಮದ್ಯ ಮಾರಾಟವನ್ನು ಪ್ರಾರಂಭಿಸಿದ. ಎರಡು ದಿನಗಳಲ್ಲಿ ಮಿತಿಮೀರಿ ಮದ್ಯ ಕುಡಿದ ಜನರು ತಮ್ಮ ತಮ್ಮೊಳಗೆ ಹೊಡೆದಾಡಿಕೊಂಡರು. ಆ ಕೊಳಕು, ಆ ಹಿಂಸೆ, ಆ ಮನೆಗಳಲ್ಲಿ ಹೆಣ್ಣುಮಕ್ಕಳ ಸಂಕಟವನ್ನು ಕಂಡು ಪ್ರಮುಖ ‘ನಾನು ಪಾಪ ಮಾಡಿದೆ. ಆ ಮನೆಗಳ ಶಾಪ ನನಗೆ ತಟ್ಟುತ್ತದೆ’ ಎನ್ನುತ್ತಿದ್ದಂತೆ ಮನಸ್ಸು ಚಿಂತಿತವಾಗಿ ವಿದರ್ಶನ ಭಾವ ಬಲಿಯಿತು. ಅವನೂ ಪ್ರತ್ಯೇಕ ಬೋಧಿಯಾಗಿ ನಂದಮೂಲಕ್ಕೆ ಬಂದು ಸೇರಿದ.

ಯಾಕೆ ಹೀಗೆ ಆಯಿತು ಎಂದು ಕೇಳಿದಾಗ ಬೋಧಿಸತ್ವ ಹೇಳಿದ, ‘ದೇಹದ ಮೈಲಿಗೆಯನ್ನು ಸುಲಭವಾಗಿ ಕಳೆಯಬಹುದು. ಆದರೆ ಚಿತ್ತ ಮೈಲಿಗೆಯ ಬಗ್ಗೆ ಬಹಳ ಎಚ್ಚರವಿರಬೇಕು. ಕೊಂಚ ಮೈಲಿಗೆಯಾದರೂ ತಿಳಿದವರು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಮತ್ತು ಆ ಮೈಲಿಗೆಯ ಕಾರ್ಯದಿಂದ ದೂರ ಹೋಗಲೇಬೇಕು’.

ಮಾನವ ಶೋಧಿಸಬೇಕು ನಿಚ್ಚ,
ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ ||

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು