ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಪರ್ಣಕುಟಿಗಳಲ್ಲಿ ನೆಲೆ

Last Updated 1 ಜುಲೈ 2021, 19:50 IST
ಅಕ್ಷರ ಗಾತ್ರ

ಎಲ್ಲರಿಂದ ಬೀಳ್ಕೊಂಡು, ವೆಸ್ಸಂತರ, ಮಾದ್ರಿ ಹಾಗೂ ಮಕ್ಕಳು ಕಾಡಿನ ದಾರಿಯನ್ನು ಏರತೊಡಗಿದರು. ಗಂಧಮಾದನ ಪರ್ವತದಲ್ಲಿ ಒಂದು ದಿನ ಕಳೆದು, ಮುಂದೆ ಕೇತುಮತಿ ನದಿಯ ದಂಡೆಯಲ್ಲಿ ನಿಂತು, ಸ್ನಾನ ಮಾಡಿ, ಹಣ್ಣುಗಳನ್ನು ತಿಂದು, ಪರ್ವತದ ಶಿಖರದಲ್ಲಿದ್ದ ಆಲದ ಮರವನ್ನು ಸೇರಿದರು. ಮುಚಲಿಂದ ಸರೋವರವನ್ನು ದಾಟಿದ ಮೇಲೆ ಕಾಡು ಬಹಳ ದಟ್ಟವಾಗಿ, ಭಯಂಕರವಾಗಿ ಕಾಣುತ್ತಿತ್ತು.

ಸ್ವಲ್ಪ ಮುಂದೆ ಸಾಗಿದಾಗ, ಚೆತರಾಜ್ಯದ ಪ್ರಜೆಗಳು ತಿಳಿಸಿದಂತೆ ಚೌಕಾದ ಸುಂದರ ಪುಷ್ಕರಣಿ ಕಂಡಿತು. ಇದೇ ಸಮಯದಲ್ಲಿ ದೇವರಾಜ ಶಕ್ರ ತನ್ನ ಧ್ಯಾನದಲ್ಲಿ ಚಿಂತಿಸಿದಾಗ, ವೆಸ್ಸಂತರ ತನ್ನ ಪರಿವಾರ ಸಮೇತ ಹಿಮಾಲಯಕ್ಕೆ ಬರುತ್ತಿರುವುದನ್ನು ತಿಳಿದ. ಅವನಿಗೆ ಅನುಕೂಲ ಮಾಡಿಕೊಡಬೇಕೆಂದುಕೊಂಡು ವಿಶ್ವಕರ್ಮನನ್ನು ಕರೆದ.

‘ಮಿತ್ರ, ನೀನು ತಕ್ಷಣ ಹಿಮಾಲಯದ ವಂಕಪರ್ವತಕ್ಕೆ ಹೋಗು. ಅಲ್ಲಿ ಪುಷ್ಕರಣಿ ತೀರದಲ್ಲಿ ಎರಡು ಸುಂದರವಾದ ಆಶ್ರಮಗಳನ್ನು ನಿರ್ಮಿಸಿ ಬಾ’ ಎಂದು ಅಪ್ಪಣೆ ಕೊಟ್ಟ. ವಿಶ್ವಕರ್ಮ ಪುಷ್ಕರಣಿಯ ಉತ್ತರ ಪೂರ್ವದಲ್ಲಿ ಎರಡು ಪರ್ಣಕುಟಿಗಳನ್ನು ಸಿದ್ಧಪಡಿಸಿದ. ಎರಡೂ ಚಂಕ್ರಮಣ ಕ್ಷೇತ್ರಗಳ ಸುತ್ತ ನಾನಾ ತರಹದ ಹೂವಿನ, ಹಣ್ಣುಗಳ ಗಿಡಗಳನ್ನು ನೆಡಿಸಿದ.ಕದಳೀವನವನ್ನೇ ನಿರ್ಮಿಸಿದ. ಪ್ರವ್ರಜಿತರಿಗೆ ಬೇಕಾಗುವ ಸರ್ವ ಅವಶ್ಯಕತೆಗಳಿಗೆ ಅಲ್ಲಿ ವ್ಯವಸ್ಥೆ ಮಾಡಿದ. ಪರ್ಣಕುಟಿಗಳ ಮುಂದೆ, ಇವು ಪ್ರವ್ರಜಿತರ ಉಪಯೋಗಕ್ಕೆ ಬಂದು ಅಕ್ಷರ ಬರೆಸಿದ. ಕಾಡಿನ ಆ ಭಾಗದಲ್ಲಿದ್ದ ಕಾಡುಪ್ರಾಣಿಗಳನ್ನು,ಉಗ್ರಪಕ್ಷಿಗಳನ್ನು ಅಲ್ಲಿಂದ ದೂರ ಓಡಿಸಿ ಅವು ಮರಳಿ ಬರದಂತೆ ನೋಡಿಕೊಂಡ. ಅಲ್ಲಿ ಪರ್ಣಕುಟಿಗಳು ಇವೆಯೆಂದು ಇವರಿಗೆ ಗೊತ್ತಾಗುವಂತೆ ಕಾಲುದಾರಿಯನ್ನು ಮಾಡಿದ.

ಬೋಧಿಸತ್ವ ವೆಸ್ಸಂತರ ಆ ಮಾರ್ಗವಾಗಿ ನಡೆದುಬಂದಾಗ ಕಾಲುದಾರಿಯನ್ನು ನೋಡಿ, ಬಹುಶಃ ಇದೇ ಪ್ರವ್ರಜಿತರು ಇರಬಹುದಾದ ಜಾಗ ಎಂದು ತಿಳಿದು ಮಾದ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಆಶ್ರಮದ್ವಾರಕ್ಕೆ ಬಂದ. ತಾನೊಬ್ಬನೇ ಆಶ್ರಮದೊಳಗೆ ಹೋಗಿ ಯಾರಾದರೂ ಇದ್ದಾರೆಯೇ ಎಂದು ನೋಡಿದ. ಯಾರೂ ಇರಲಿಲ್ಲ. ಮುಂದೆ ಬರೆದ ಅಕ್ಷರಗಳನ್ನು ನೋಡಿ ಇದು ನಮಗಾಗಿಯೇ ಶಕ್ರ ನಿರ್ಮಿಸಿದ್ದಾನೆ ಎಂದು ತಿಳಿದು ಮನದಲ್ಲಿಯೇ ಅವನಿಗೆ ಗೌರವವನ್ನು ಸೂಚಿಸಿದ.

ನಂತರ ಒಂದು ಪರ್ಣಕುಟಿಯ ಒಳಗೆ ಹೋಗಿ ತನ್ನ ಬಿಲ್ಲು, ಬಾಣಗಳನ್ನು ತೆಗೆದಿರಿಸಿ, ಪುಷ್ಕರಣಿಯಲ್ಲಿ ಸ್ನಾನ ಮಾಡಿ ಋಷಿಗಳ ವೇಷ ಧರಿಸಿದ. ನಂತರ ಒಂದು ದೊಣ್ಣೆಯನ್ನು ಹಿಡಿದುಕೊಂಡು ಎರಡೂ ಪರ್ಣಕುಟಿಗಳ ಪ್ರದಕ್ಷಿಣೆ ಹಾಕಿ, ಪ್ರತ್ಯೇಕ ಬುದ್ಧನಂತೆ ಶಾಂತಭಾವದಿಂದ ಹೆಂಡತಿ ಮಕ್ಕಳ ಬಳಿಗೆ ಬಂದ. ಮಾದ್ರಿ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ಪುಷ್ಕರಿಣಿಯಲ್ಲಿ ಸ್ನಾನ ಮಾಡಿಕೊಂಡು ತಾನೂ ತಪಸ್ವಿನಿಯ ವೇಷಧರಿಸಿ, ಮಕ್ಕಳಿಗೂ ತಪಸ್ವಿಕುಮಾರರ ಬಟ್ಟೆ ತೊಡಿಸಿದಳು. ನಾಲ್ವರೂ ವಂಕಪರ್ವತದ ಪರ್ಣಕುಟಿಯಲ್ಲಿ ತಪಸ್ವೀ ಜೀವನವನ್ನು ನಡೆಸಿದರು.

ಆಗ ಮಾದ್ರಿ, ‘ಪ್ರಭೂ, ನೀವು ಗಡ್ಡೆ, ಗೆಣಸುಗಳನ್ನು ತರುವುದು ಬೇಡ. ನಿಮ್ಮ ಧ್ಯಾನ, ತಪಸ್ಸಿಗೆ ವಿಘ್ನವಾಗುವುದು ಸರಿಯಲ್ಲ. ನಾನೇ ಹಣ್ಣು, ಹಂಪಲಗಳನ್ನು ತರುತ್ತೇನೆ. ಅದಲ್ಲದೆ ನಿಮ್ಮ ತಪಸ್ಸಿಗೆ, ಬ್ರಹ್ಮಚರ್ಯಕ್ಕೆ ಭಂಗಬರದಂತೆ ನಾನು ಮತ್ತು ಮಕ್ಕಳು ಇನ್ನೊಂದು ಪರ್ಣಶಾಲೆಯಲ್ಲಿ ಇರುತ್ತೇವೆ’ ಎಂದಳು. ಆಕೆಯ ಮನೋಧರ್ಮವನ್ನು ವೆಸ್ಸಂತರ ಮೆಚ್ಚಿದ. ತಪಸ್ಸು ಮುಂದುವರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT