ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಬೋಧಿಸತ್ವನ ಪಟ್ಟಾಭಿಷೇಕ

Last Updated 22 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ನಾಗರಿಕರ ಮಾತನ್ನು ಕೇಳಿದ ವೆಸ್ಸಂತರ, ‘ನೀವೇ ಜನಪದದವರು ಮತ್ತು ನಿಗಮದವರು ಧರ್ಮಾನುಸಾರ ರಾಜ್ಯಭಾರ ಮಾಡುತ್ತಿದ್ದ ನನ್ನನ್ನು ದೇಶದಿಂದ ಹೊರಗೆ ಹಾಕುವಂತೆ ಮಹಾರಾಜರ ಮೇಲೆ ಒತ್ತಡ ತಂದಿರಿ. ನಾನು ದೇಶಭ್ರಷ್ಠನಾಗುವಂತೆ ಮಾಡಿದಿರಿ. ಮತ್ತೆ ನನ್ನನ್ನು ಯಾಕೆ ಕರೆಯುತ್ತೀರಿ?’ ಎಂದು ಕೇಳಿದ. ನಾಗರಿಕರು ಉತ್ತರ ನೀಡುವ ಮೊದಲೇ ಮಹಾರಾಜ ಸಂಜಯ ಕಣ್ಣೀರು ಸುರಿಸುತ್ತ, ‘ಮಗೂ ವೆಸ್ಸಂತರ, ಅದು ನಾನು ಮಾಡಿದ ದುಷ್ಕೃತ್ಯ. ಅವರು ಹೇಳಿದ್ದನ್ನು ನಂಬಿ, ಬಂಗಾರದಂಥ ಮಗನನ್ನು ದೇಶದಿಂದ ಹೊರಗೆ ಹಾಕಿ ಭ್ರೂಣಹತ್ಯೆಗೆ ಸಮನಾದ ಪಾಪವನ್ನು ಮಾಡಿದೆ. ಸಿವಿಗಳ ಮಾತು ಕೇಳಿ ನಿರ್ದೋಷಿಯನ್ನು ದೋಷಿಯೆಂದು ತೀರ್ಮಾನಿಸಿ ದೇಶದಿಂದ ಹೊರಗೆ ಕಳುಹಿಸಿದೆ’, ಎಂದ.

ಆಗ ಜಾಲಿಕುಮಾರ, ಹೇಗಾದರೂ ಮಾಡಿ, ತನ್ನ ಪ್ರಾಣಕೊಟ್ಟಾದರೂ ಸರಿಯೆ, ತಂದೆಯ, ತಾಯಿಯ, ತಂಗಿಯ ದುಃಖವನ್ನು ದೂರಮಾಡಲೇಬೇಕೆಂದು ತೀರ್ಮಾನಿಸಿ, ಮಹಾರಾಜ ಸಂಜಯನ ಕೈ ಹಿಡಿದು, ಕಿವಿಯಲ್ಲಿ ಏನೋ ಹೇಳಿದ. ಆಗ ಮುಖದ ಮೇಲೆ ಮುಗುಳ್ನಗೆಯನ್ನು ತಂದುಕೊಂಡ ರಾಜ, ‘ಮಗೂ ವೆಸ್ಸಂತರ, ನನಗೆ ವಯಸ್ಸಾಗಿದೆ. ಇದು ನಾನು ಮೊಮ್ಮಕ್ಕಳೊಂದಿಗೆ ಆಟವಾಡುತ್ತ ಕಳೆಯುವ ಕಾಲ. ರಾಜ್ಯಭಾರ ನನಗೆ ಇನ್ನು ನೀಗದು. ನೀನು ಬಂದು ರಾಜ್ಯಗ್ರಹಣ ಮಾಡಬೇಕು’ ಎಂದು ಕೇಳಿಕೊಂಡ. ಅವರ ಮಾತಿಗೆ ‘ಆಗಲಿ’ ಎಂದು ಬೋಧಿಸತ್ವ ಒಪ್ಪಿಕೊಂಡ. ಅವನೊಂದಿಗೇ ಹುಟ್ಟಿದ ಮತ್ತು ಈಗ ಅಮಾತ್ಯರಾದ ಅರವತ್ತು ಸಾವಿರ ಜನರು, ‘ಮಹಾರಾಜಾ, ಈಗ ಸ್ನಾನದ ಸಮಯವಾಗಿದೆ. ಸ್ನಾನ ಮಾಡಿ ಸನ್ಯಾಸ ತ್ಯಾಗ ಮಾಡಿ’ ಎಂದು ಪ್ರಾರ್ಥಿಸಿದರು.

‘ಸ್ವಲ್ಪ ಸಮಯ ತಡೆದುಕೊಳ್ಳಿ’ ಎಂದು ಅವರಿಗೆ ಹೇಳಿ ವೆಸ್ಸಂತರ, ಪರ್ಣಶಾಲೆಯನ್ನು ಪ್ರವೇಶಮಾಡಿದ. ತನ್ನ ಋಷಿ ವೇಷವನ್ನು ಕಳಚಿ, ಅದನ್ನು ಜೋಪಾನವಾಗಿ ಮಡಿಚಿಟ್ಟ. ಪರ್ಣಕುಟಿಯಿಂದ ಹೊರಗೆ ಬಂದು ಅದಕ್ಕೆ ಮೂರುಬಾರಿ ಪ್ರದಕ್ಷಿಣೆ ಹಾಕಿದ. ‘ಇಲ್ಲಿದ್ದು ನಾನು ಒಂಭತ್ತೂವರೆ ತಿಂಗಳುಗಳ ಕಾಲ ಶೃಮಣಧರ್ಮಪಾಲನೆ ಮಾಡಿದ್ದೇನೆ. ಪಾರಮಿತವನ್ನು ಪೂರ್ಣಗೊಳಿಸುವ ಬಯಕೆಯಿಂದ ಮಕ್ಕಳನ್ನು ಮತ್ತು ಹೆಂಡತಿಯನ್ನು ದಾನಮಾಡಿ ಭೂಮಿಯನ್ನು ನಡುಗಿಸಿದ್ದೇನೆ. ನಿನಗೆ ನನ್ನ ಕೃತಜ್ಞತೆಯ ಪ್ರಣಾಮಗಳು’ ಎಂದು ಹೇಳಿ ದೀರ್ಘದಂಡ ಪ್ರಣಾಮ ಮಾಡಿ ತನ್ನ ಗೌರವವನ್ನು ತೋರಿಸಿದ.

ಅವನು ಹೊರಗೆ ಬಂದ ಮೇಲೆ ನಾಯಿಂದರು ಬಂದು ಕ್ಷೌರ ಕಾರ್ಯಗಳನ್ನು ಮುಗಿಸಿದರು. ನಂತರ ಸುಗಂಧ ತೈಲಗಳಿಂದ ಮೈಯನ್ನು ಉಜ್ಜಿಸಿಕೊಂಡು ಸ್ನಾನ ಮಾಡಿ, ದೇವರಾಜನಂತೆ ಸರ್ವಾಲಂಕಾರ ಭೂಷಿತನಾಗಿ ಹೊರಬಂದ ವೆಸ್ಸಂತರ ಬೋಧಿಸತ್ವ. ಅವನನ್ನು ಅಲ್ಲಿಯೇ ಪುಷ್ಕರಿಣಿ ತೀರದಲ್ಲಿ ವಿಶೇಷ ಆಸನದ ಮೇಲೆ ಕೂಡ್ರಿಸಿ ಪುರೋಹಿತರು ರಾಜ್ಯಾಭಿಷೇಕವನ್ನು ಮಾಡಿದರು. ಆಗ ದೇವತೆಗಳು ಅವನಿಗೆ ಮಹೈಶ್ವರ್ಯವನ್ನು ದಯಪಾಲಿಸಿದರು. ಎಲ್ಲೆಲ್ಲೂ ಸಂತೋಷದಿಂದ ಭೂಮಿ ಕೂಡ ಕಂಪಿಸಿತು. ವಾರಂಗನೆಯರು ಮಂಗಲಘೋಷ ಮಾಡಿದರು. ಎಲ್ಲ ವಾದ್ಯಗಳು ಮೊಳಗಿದವು. ಮಹಾಸಮುದ್ರದ ಗರ್ಭದಲ್ಲಿ ಗುಡುಗಿದಂತೆ ಶಬ್ದವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT